- ವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಮಕ್ಕಳು ತಬ್ಬಲಿ
- ಯಾರಿಂದಲೂ ಸರಿಪಡಿಸಲಾಗದ ಮಹಾ ಹಾನಿ
- ಕೋವಿಡ್ ಅನಾಥ ಮಕ್ಕಳಿಗೆ ಯಾರು ಆಸರೆ?
ಬೆಂಗಳೂರು (ಜೂ. 11): ಭಾರತಲ್ಲಿ ಈವರೆಗೆ ಕೊರೋನಾದಿಂದಾಗಿ ಪಾಲಕರನ್ನು ಕಳೆದುಕೊಂಡು 9,346 ಮಕ್ಕಳು ತಬ್ಬಲಿಗಳಾಗಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಜಗತ್ತಿನಾದ್ಯಂತ ಈ ತಬ್ಬಲಿಗಳ ಸಂಖ್ಯೆ ಲಕ್ಷ ದಾಟುತ್ತದೆ. ವಾತ್ಸಲ್ಯಪೂರಕ ಆಪ್ತ ಆಸರೆಗಾಗಿನ ಆ ಎಲ್ಲ ತಬ್ಬಲಿಗಳ ಆರ್ತನಾದಕ್ಕೆ ಎಲ್ಲೂ ಉತ್ತರ ಸಿಗುತ್ತಿಲ್ಲ.
‘ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋುಣ ತೀರಿತಿಂದು...’
ಪುಣ್ಯಕೋಟಿಯ ಈ ಹಾಡನ್ನು ತುಸು ‘ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ ಈ ದುಷ್ಟಕೊರೋನಾ’ ಎಂದು ಬದಲಿಸಿದರೆ ಹಾಡಿನ ಭಾವಕ್ಕಾಗಲಿ, ಕೊರೋನಾ ಸೋಂಕಿಗಾಗಲಿ ಬಹುಶಃ ಅಪಾರ್ಥ ಆಗಲಿಕ್ಕಿಲ್ಲ.
ಕೊರೋನಾ ತಂದಿಟ್ಟಸಂಕಷ್ಟಊಹೆಗೂ ನಿಲುಕುತ್ತಿಲ್ಲ. ಇಡೀ ಜಗತ್ತನ್ನೇ ತಲ್ಲಣಿಸುವಂತೆ ಮಾಡಿದೆ. ನಿನ್ನೆ ಇದ್ದವರು ಇಂದಿಲ್ಲ, ಇಂದಿದ್ದವರು ನಾಳೆ ಸಿಗುವ ಭರವಸೆ ಇಲ್ಲ. ಈಗಿರುವುದಷ್ಟೇ ಸತ್ಯ, ಮುಂದೇನಾಗುತ್ತೊ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ಸೋಂಕಿನ ಹಾಲಾಹಲ ಇಡೀ ಜಗತ್ತನ್ನೇ ಆವರಿಸಿ, ಜೀವಗಳನ್ನು ಹುರಿದು ಮುಕ್ಕುತ್ತಿದೆ.
ಒಂದು ಕಡೆ ತಾತ್ಕಾಲಿಕ ಆರ್ಥಿಕ ಸಂಕಷ್ಟ, ಮತ್ತೊಂದೆಡೆ ದೀರ್ಘಕಾಲೀನ ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಎರಡರ ಮಧ್ಯೆ ಪಾಲಕರನ್ನು ಕಳೆದುಕೊಂಡ ತಬ್ಬಲಿ ಮಕ್ಕಳ ಸಮಸ್ಯೆ ಮಾತ್ರ ಯಾರಿಂದಲೂ, ಯಾವುದರಿಂದಲೂ ತುಂಬಲಾರದ ಮಹಾ ಹಾನಿ ಎನಿಸಿದೆ.
ಅತ್ತರೆ ರಮಿಸುವವರಿಲ್ಲ
ಈ ಮಹಾಮಾರಿ ಕೋವಿಡ್ ಸಣ್ಣ ವಯಸ್ಸಿನ ಯುವಕರು, ಮದುವೆಯಾದ ನವ ಜೋಡಿ, ಭಾರೀ ಶ್ರೀಮಂತರು, ಉನ್ನತ ಹುದ್ದೆಯಲ್ಲಿ ಇದ್ದವರು ಎನ್ನುವ ಯಾವುದೇ ಬೇಧವಿಲ್ಲದೇ ಎಲ್ಲರನ್ನೂ ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದೆ. ಜಗತ್ತೆನ್ನುವುದು ಸಾವಿನ ಮನೆಯಂತಾಗಿದೆ. ಉರಿವ ಚಿತೆಗಳೂ ದಣಿದಿವೆ, ಹುಗಿಯಲು ನೆಲವೇ ಸಿಗದಂತಾಗಿ ತುಂಬಿ ಹರಿವ ನದಿಗಳಲ್ಲಿ ತೇಲುತ್ತಿವೆ ವೈಭವದಿಂದ ಮೆರೆದವರ ಶವಗಳು. ಮುಂದೆ ಇದೆಲ್ಲ ಒಂದು ಕೆಟ್ಟಕನಸೆಂದು ಜಗತ್ತು ಮರೆತುಬಿಡಬಹುದು. ಆದರೆ, ಮರೆಯಲಾಗದ ದುರಂತವೆಂದರೆ ಮಕ್ಕಳ ತಬ್ಬಲಿತನ! ಹೆತ್ತ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಮುಂದೇನು ಎನ್ನುವ ಯೋಚನೆಯಲ್ಲಿ ಕಂಗಾಲಾಗಿ ಕುಳಿತಿವೆ. ಅತ್ತರೆ ರಮಿಸುವರಿಲ್ಲ, ಹೊತ್ತು ಹೊತ್ತಿಗೆ ತುತ್ತು ನೀಡುವರಿಲ್ಲ, ಆಸರೆಯೇ ಇಲ್ಲದೇ ಬೀದಿಗೊಡ್ಡಿದ ದೀಪವಾಗಿದ್ದಾರೆ ಆ ಮುದ್ದು ಮಕ್ಕಳು.
ಕೊರೋನಾ ನಿಯಂತ್ರಣಕ್ಕೆ ಜಾರಿ ಮಾಡಿರುವ ಲಾಕ್‌ಡೌನ್‌ನಿಂದ ಸಾಕಷ್ಟುಆರ್ಥಿಕ ನಷ್ಟವಾಗಿರಬಹುದು, ಕೋಟ್ಯಂತರ ಜನರ ಬದುಕು ಬೀದಿಗೆ ಬಂದಿರಬಹುದು. ಇವತ್ತಲ್ಲ ನಾಳೆ ಇದು ಸುಧಾರಿಸುತ್ತದೆ, ಜನ ಜೀವನ ಸಹಜ ಸ್ಥಿತಿಗೆ ಬಂದೇ ಬರುತ್ತದೆ. ಆದರೆ, ಈ ಮಹಾಮಾರಿ ಕೊರೋನಾದಿಂದ ತಮ್ಮವರನ್ನು ಕಳೆದುಕೊಂಡವರ ಕಷ್ಟಮಾತ್ರ ಕರಗುವುದಿಲ್ಲ. ಜಗತ್ತಿನಾದ್ಯಂತ ಲಕ್ಷಾಂತರ ಮಕ್ಕಳು ಅನಾಥರಾಗಿದ್ದಾರೆ. ಇನ್ನೂ ಆಗುತ್ತಲೇ ಇದ್ದಾರೆ. ಇದು ಹಲವು ರಾಷ್ಟ್ರಗಳನ್ನು ಕಂಗೆಡಿಸಿದೆ. ಈ ಮಕ್ಕಳಿಗೀಗ ಯಾರು ದಿಕ್ಕು?
ಸರ್ಕಾರವೂ ವ್ಯವಸ್ಥೆ ಮಾಡಿಲ್ಲ
ಕೋವಿಡ್ ಮೂರನೇ ಅಲೆ ಎದುರಿಸಲು ಕರ್ನಾಟಕ ಸರ್ಕಾರ ಪ್ರತಿ ಜಿಲ್ಲೆಗಳಲ್ಲಿ ಈಗಲೇ ‘ಪಿಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್’ ತೆರೆಯುತ್ತಿದೆ. ಅದೇ ಕೋವಿಡ್ ಸೋಂಕಿಗೆ ಬಲಿಯಾದವರ ‘ತಬ್ಬಲಿ’ ಮಕ್ಕಳಿಗೆ ಸೂಕ್ತ ಮತ್ತು ಬದುಕಿನ ಬಗ್ಗೆ ಆತ್ಮವಿಶ್ವಾಸ ತುಂಬಬಲ್ಲ ಆಸರೆ ಕಲ್ಪಿಸಿಲ್ಲ. ಸರ್ಕಾರ ಒಂದಷ್ಟುವ್ಯವಸ್ಥೆಗಳನ್ನು ಮಾಡಿದ್ದಾಗಿ ಹೇಳಿದೆ. ಅವೆಲ್ಲ ‘ಸರ್ಕಾರಿ ಬಾಲ ಮಂದಿರ’ ಮಾದರಿಯಲ್ಲಿವೆ ಅಷ್ಟೇ.
ಹಿಂದೆ ಬಾಲಾಪರಾಧಿ ಮಕ್ಕಳನ್ನು ತಾತ್ಕಾಲಿಕವಾಗಿ ಸಲುಹಲು ಸ್ಥಾಪಿಸಿದ ‘ರಿಮ್ಯಾಂಡ್ ಹೋಂ’ಗಳ ಹೆಸರನ್ನು ಬದಲಾಯಿಸಿ ‘ಸರ್ಕಾರಿ ಬಾಲ ಮಂದಿರ’ ಎಂದು ಕರೆಯಲಾಗುತ್ತದೆ. ಯಾವುದೇ ತಪ್ಪು ಮಾಡದೇ ತಬ್ಬಲಿಯಾಗಿರುವ ಈ ಮಕ್ಕಳನ್ನೂ ಅಲ್ಲಿ ಇರಿಸುವುದು ಎಷ್ಟುಸರಿ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನ್ಯೂಕ್ಲಿಯರ್ ಕುಟುಂಬ
‘ಆರ ಮೊಲೆಯಾ ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನ್ನಗೆ ಹಿತವರು..?’
ಇಂಥ ಪ್ರಶ್ನೆ ಕೇಳುತ್ತಿದ್ದಾರೆ ಈ ತಬ್ಬಲಿ ಮಕ್ಕಳು. ಈ ತಬ್ಬಲಿಗಳಿಗೆ ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅಜ್ಜಿಯರೂ ಇಲ್ಲ ನ್ಯೂಕ್ಲಿಯರ್ ಕುಟುಂಬದಲ್ಲಿನ ಒಂಟಿ ಜೀವಿಗಳು ಇವು. ಚಿಕ್ಕ ಕುಟುಂಬದ ಹಾಸು ಹೊದಿಕೆಯಾಗಿದ್ದ ಅಪ್ಪ-ಅಮ್ಮ ಕೋವಿಡ್‌ಗೆ ಬಲಿಯಾದ ಬಳಿಕ ಆಸರೆ ಕಳೆದುಕೊಂಡಿವೆ.
ಏಷ್ಯಾ ಖಂಡದಲ್ಲಿ ಪುರಾತನ ಕಾಲದಿಂದ ಚಾಲ್ತಿಯಲ್ಲಿದ್ದ ‘ಅವಿಭಕ್ತ ಕುಟುಂಬ’, ‘ಕೂಡು ಕುಟುಂಬ’ಗಳು ಇಂದು ಛಿದ್ರವಾಗಿವೆ. ಅವೆಲ್ಲ ವಿಭಕ್ತ ಕುಟುಂಬಗಳಾಗಿದ್ದವು. ಇದೀಗ ಮುಂದುವರೆದ ರಾಷ್ಟ್ರಗಳಂತೆ ಭಾರತದಲ್ಲೂ ‘ತಂದೆ-ತಾಯಿ-ಮಗು’ ಇದ್ದ ನ್ಯೂಕ್ಲಿಯರ್ ಕುಟುಂಬಗಳಾಗಿ ಮಾರ್ಪಟ್ಟಿದ್ದರಿಂದ ಅವಿಭಕ್ತ ಕುಟುಂಬದಲ್ಲಿ ಹಿಂದೆ ಮಕ್ಕಳಿಗೆ ಸಿಗುತ್ತಿದ್ದ ರಕ್ಷಣೆ ಇಂದು ಇಲ್ಲದಾಗಿದೆ. ಹಾಗಾಗಿ ತಬ್ಬಲಿತನ ಅತ್ಯಂತ ಭೀಕರವಾಗಿದೆ.
ಮುಂದುವರೆದ ರಾಷ್ಟ್ರಗಳಲ್ಲಿ ಸಹಜವೆಂಬಂತಿದ್ದ ಈ ನ್ಯೂಕ್ಲಿಯರ್ ಕುಟುಂಬಗಳು ಈ ಕೊರೋನಾ ಸಂದರ್ಭದಲ್ಲಿ ಅತಿಭಯಾನಕತೆ ಸೃಷ್ಟಿಸಿವೆ. ತಬ್ಬಲಿ ಮಕ್ಕಳ ರಕ್ಷಣೆ ವಿಷಯದಲ್ಲಿ ಆಯಾ ಸರ್ಕಾರಗಳು ತೀವ್ರ ಚಿಂತೆಗೀಡಾಗಿವೆ. ಒಂದು ಪೀಳಿಗೆಯೇ ಮಾನವೀಯ ಸಾಂತ್ವನದಿಂದ ವಂಚಿತವಾಗಲಿದೆ ಎನ್ನುವುದು ಆ ರಾಷ್ಟ್ರಗಳ ಆತಂಕ.
ಕೆಲವು ಮಾದರಿಗಳು
‘ಈ ನಿರ್ವಾತದ ಮಧ್ಯೆ ಭಾರತದಲ್ಲಿ ತಬ್ಬಲಿಗಳಿಗೆ ಮಾತೃ ಹೃದಯದ ಆರೈಕೆ ಮಾಡಬಲ್ಲ ಹಲವು ನಿದರ್ಶನಗಳಿವೆ. ಅದೇ ಭಾರತದ ನಿಜವಾದ ಶಕ್ತಿ. ಸರ್ಕಾರಗಳು ಇಂಥವನ್ನು ಕಣ್ತೆರೆದು ನೋಡಿ ತನ್ನ ನೀತಿ, ನಿರೂಪಣೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ತಬ್ಬಲಿಗಳಲ್ಲಿ ಬದುಕಿನ ಬಗ್ಗೆ ಧೈರ್ಯ, ವಿಶ್ವಾಸ ತುಂಬುವುದು ಅಗತ್ಯವಿದೆ’ ಎನ್ನುತ್ತಾರೆ ವಿಶ್ರಾಂತ ಐಎಎಸ್ ಅಕಾರಿ ಚಿರಂಜೀವಿ ಸಿಂಗ್.
ಮಕ್ಕಳ ಕ್ಷೇತ್ರದಲ್ಲಿ ಹಲವು ದಶಕದಿಂದ ಸೇವೆ ಸಲ್ಲಿಸುತ್ತಿರುವ ಧಾರವಾಡದ ವೈದ್ಯ ಡಾ.ಸಂಜೀವ ಕುಲಕರ್ಣಿ ಅವರು ‘ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಡಾ.ಜಿ.ಎಸ್.ಜಯದೇವ ಅವರು ಬೆಂಗಳೂರಿನಲ್ಲಿ ಒಂದು ಅನಾಥಾಲಯ ನಡೆಸುತ್ತಿದ್ದಾರೆ. ಅದರಂತೆ ಮಕ್ಕಳನ್ನು ಮಮತೆಯಿಂದ ಪಾಲನೆ ಮಾಡುವ ಸಂಸ್ಥೆ ಜಗತ್ತಿನಲ್ಲಿ ಮತ್ತೊಂದಿಲ್ಲ ಅನಿಸುತ್ತಿದೆ. ಅದರ ಮಾದರಿಗಳನ್ನು ಅಳವಡಿಸಿಕೊಂಡು ಸರ್ಕಾರ ಈ ತಬ್ಬಲಿಗಳ ಆರೈಕೆ ಮಾಡಿದರೆ ಸೂಕ್ತ’ ಎನ್ನುವ ಸಲಹೆ ನೀಡುತ್ತಾರೆ.
ಲಕ್ಷ ಲಕ್ಷ ಮಕ್ಕಳು ಅನಾಥ
ದೊಡ್ಡಣ್ಣ ಅಮೆರಿಕ ಈ ಕೊರೋನಾ ಸಂಕಟ ಎದುರಿಸುವಲ್ಲೂ ತನ್ನ ದೊಡ್ಡ ಸ್ಥಾನ ಉಳಿಸಿಕೊಂಡಿದೆ. ಅಲ್ಲಿನ ಸರಿಸುಮಾರು 6 ಲಕ್ಷ ಜನ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅದರಿಂದ ಅಲ್ಲಿನ ಎಷ್ಟೋ ಮಕ್ಕಳು ತಮ್ಮ ತಂದೆಯನ್ನೋ, ತಾಯಿಯನ್ನೋ ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳಂತೂ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಅಲ್ಲಿನ ‘ಜಾಮ್ ಪೀಡಿಯಾಟ್ರಿಕ್ ಸಂಸ್ಥೆ’ ಈ ಬಗ್ಗೆ ಒಂದು ಸರ್ವೇ ಮಾಡಿದ್ದು, ಈವರೆಗೆ ಕೊರೋನಾದಿಂದಾಗಿ ಅನಾಥರಾದ ಮಕ್ಕಳ ಸಂಖ್ಯೆ ಬರೋಬ್ಬರಿ 45 ಸಾವಿರ! ಒಂದೇ ದೇಶದಲ್ಲಿ ಇಷ್ಟುಸಂಖ್ಯೆಯ ಮಕ್ಕಳು ಅನಾಥರಾಗಿದ್ದಾರೆ ಅಂದ್ರೆ ಇನ್ನು ವಿಶ್ವದಲ್ಲಿ ಅದೆಷ್ಟುಲಕ್ಷ ಮಕ್ಕಳು ತಬ್ಬಲಿ ಆಗಿರಬೇಡ? 6 ಲಕ್ಷ ಸಾವು ಕಂಡ ಅಮೆರಿಕದಲ್ಲಿ 45,000 ಮಕ್ಕಳು ಅನಾಥ ಎಂದರೆ, 35 ಲಕ್ಷಕ್ಕೂ ಹೆಚ್ಚು ಸಾವನ್ನು ನೋಡಿರುವ ವಿಶ್ವದಲ್ಲಿ ಅದೆಷ್ಟುಮಕ್ಕಳು ಅನಾಥ ಆಗಿರಬೇಡ? ಊಹೆಗೂ ನಿಲುಕದ ದುರಂತವಿದು.
9346 ಮಕ್ಕಳು ತಬ್ಬಲಿ
ಮಹಾಮಾರಿ ಕೊರೋನಾ ಸೋಂಕಿನಿಂದ ಪಾಲಕರು ಅಸುನೀಗಿ ಭಾರತದಲ್ಲಿ 9,346 ಮಕ್ಕಳು ತಬ್ಬಲಿಯಾಗಿರುವ ಕುರಿತಂತೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ (ಎನ್‌ಸಿಪಿಸಿಆರ್) ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಪ್ರಮಾಣ ಪತ್ರ ಸಲ್ಲಿಸಿದೆ. ‘ಬಾಲ ಸ್ವರಾಜ್ ಸಂಸ್ಥೆ’ 2020 ಮಾಚ್‌ರ್‍ನಿಂದ 2021 ಮೇ ವರೆಗೆ ನಡೆಸಿದ ಸಮೀಕ್ಷಾ ವರದಿಯಂತೆ ಕರ್ನಾಟಕದ 36 ಮಕ್ಕಳೂ ಸೇರಿದಂತೆ ದೇಶದಲ್ಲಿ 9,346 ಮಕ್ಕಳು ಅನಾಥರಾಗಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡವರು 1,742. ಒಬ್ಬ ಹೆತ್ತವರನ್ನು ಕಳೆದುಕೊಂಡವರು-7,464. ತಂದೆ-ತಾಯಿ ಇದ್ದೂ ಒಂಟಿಯಾದವರು-140 ಮಕ್ಕಳು ಎಂದು ಗುರುತಿಸಲಾಗಿದೆ.
ಎನ್‌ಸಿಪಿಸಿಆರ್ ಶಿಫಾರಸು
ಈ ಅನಾಥ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರಕ್ಕೆ ನೀಡಬಹುದಾದ ಪ್ರಮುಖ ಆರು ಶಿಫಾರಸುಗಳನ್ನೂ ಸಹ ಎನ್‌ಸಿಪಿಸಿಆರ್ ನ್ಯಾಯಾಲಯದ ಮುಂದಿಟ್ಟಿದೆ. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ಮಕ್ಕಳ ರಕ್ಷಣೆಗಾಗಿ ಕೆಲವು ಮಾರ್ಗಸೂಚಿಗಳನ್ನು ಆಯಾ ರಾಜ್ಯಗಳಿಗೆ ಕಳುಹಿಸಿದೆ.
ಅದರಲ್ಲಿ ಇಂಥ ಮಕ್ಕಳ ರಕ್ಷಣೆ ಹೊಣೆಯನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ವಹಿಸಿದೆ. ಇಂಥ ಅನಾಥ ಮಕ್ಕಳನ್ನು ಗುರುತಿಸುವುದು, ಇವರಿಗೆ ಆಶ್ರಯ ನೀಡಬಲ್ಲ ವಿಶ್ವಾಸಿಕ ಸಂಬಂಧಿಗಳನ್ನು ಗುರುತಿಸುವುದು, ದತ್ತು ಪ್ರಕ್ರಿಯೆಯನ್ನು ಚುರುಕುಗೊಳಿಸುವುದು, ಮಕ್ಕಳ ಆರೈಕೆ ಕೇಂದ್ರ ತೆರೆಯುವುದು ಮತ್ತು ಆ ಕೇಂದ್ರಗಳಿಗೆ ಆಪ್ತ ಸಮಾಲೋಚಕರನ್ನು ನೇಮಿಸುವುದು, ಮಕ್ಕಳ ಶಿಕ್ಷಣದ ಹೊರೆಯನ್ನು ಹೊರುವುದು ಇತ್ಯಾದಿ ಮಾರ್ಗಸೂಚಿಯಲ್ಲಿವೆ.
ಎಲ್ಲೆಲ್ಲಿ ಏನೇನು ಅಭಯ?
ಅಮೆರಿಕ ಅನಾಥರಾದ ಮಕ್ಕಳನ್ನು ಕಾಪಾಡುವುದಕ್ಕೆ ಅರ್ಹ ದಂಪತಿಗಳಿಗೆ ದತ್ತು ಸ್ವೀಕರಿಸಲು ಕರೆ ನೀಡಿದೆ. ಇನ್ನುಳಿದ ಮಕ್ಕಳಿಗೆ ಓದಿಸುವ ಜವಾಬ್ದಾರಿಯನ್ನು ಹೊತ್ತಿದೆ. ಪೋಷಕರ ಕಳೆದುಕೊಂಡ ಆಘಾತದಿಂದ ಮಕ್ಕಳು ಹೊರಬರದಿದ್ದರೆ ಕಲಿಕಾ ಸಾಮರ್ಥ್ಯ ಕುಸಿಯಲಿದೆ. ಶಾಲೆಗಳು ಮತ್ತು ಖಾಸಗಿ ಮಾನಸಿಕ ಸಲಹೆಗಾರರು ಇಂಥ ಮಕ್ಕಳ ನೆರಗೆ ನಿಲ್ಲುವಂತೆ ಅಮೆರಿಕ ಸರ್ಕಾರ ಎನ್‌ಜಿಒಗಳಿಗೆ ಕರೆ ನೀಡಿದೆ
ಆಂಧ್ರಪ್ರದೇಶ ಸರ್ಕಾರ ತಬ್ಬಲಿ ಮಕ್ಕಳ ಹೆಸರಲ್ಲಿ 10 ಲಕ್ಷ ರು. ಠೇವಣಿ ಇಡುತ್ತಿದೆ. ಅದರಿಂದ ಬರುವ ಮಾಸಿಕ ಬಡ್ಡಿಯನ್ನು ಆ ಮಗುವಿನ ಪಾಲನೆ ಮಾಡುವವರಿಗೆ ಕೊಡಲು ನಿರ್ಧರಿಸಿದೆ. ಮಧ್ಯಪ್ರದೇಶ ಸರ್ಕಾರ ‘ಮುಖ್ಯಮಂತ್ರಿ ಕೋವಿಡ್ ಜನ್ ಕಲ್ಯಾಣ್ ಯೋಜನೆ’ ಅಡಿಯಲ್ಲಿ ಈ ಮಕ್ಕಳಿಗೆ 1500 ರು. ಪಿಂಚಣಿ ಘೋಷಿಸಿದೆ. ಅಲ್ಲದೆ ಉನ್ನತ ಶಿಕ್ಷಣ ಪೂರೈಸುವವರೆಗೂ ವೆಚ್ಚ ಭರಿಸುವುದಾಗಿ ಹೇಳಿದೆ. ಕರ್ನಾಟಕ ಸರ್ಕಾರ ಇಂತಹ ಅನಾಥ ಮಕ್ಕಳಿಗಾಗಿ ರೆಸಿಡೆನ್ಷಿಯಲ್ ಸ್ಕೂಲ್ ಮೀಸಲಿಡುತ್ತಿದೆ. ಮಕ್ಕಳ ಪಾಲನಾ ಕೇಂದ್ರ, ವಿಶೇಷ ದತ್ತು ಸಂಸ್ಥೆಗಳನ್ನು ಗೊತ್ತು ಮಾಡುತ್ತಿದೆ. ಆ ಮಕ್ಕಳ ಪುನರ್ವಸತಿಗೆ ‘1098’ ಸಹಾಯವಾಣಿ ತೆರೆದಿದೆ. ಹಿರಿಯ ಐಎಎಸ್ ಅಧಿಕಾರಿ ಮೋಹನ್ ರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಇಂಥ ಮಕ್ಕಳಿಗೆ ಕೌಟುಂಬಿಕ ವಾತಾವರಣ ಒದಗಿಸಲು ಮುಂದಾಗಿದೆ.
- ಮಲ್ಲಿಕಾರ್ಜುನ ಸಿದ್ದಣ್ಣವರ, ಹುಬ್ಬಳ್ಳಿ