Vijayapura: ಮಟನ್‌ ಪೀಸ್‌ನಲ್ಲಿ ವಿಷ ಹಾಕಿ 20ಕ್ಕೂ ಹೆಚ್ಚು ಬೀದಿನಾಯಿಗಳ ದಾರುಣ ಹತ್ಯೆ!

By Santosh NaikFirst Published Dec 2, 2023, 7:31 PM IST
Highlights

ವಿಜಯಪುರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದಕ್ಕೆ, ಶನಿವಾರ 20ಕ್ಕೂ ಅಧಿಕ ಶ್ವಾನಗಳಿಗೆ ವಿಷ ಉಣಿಸಿ ಹತ್ಯೆ ಮಾಡಲಾಗಿದೆ. ಮಾಂಸಾಹಾರವನ್ನು ತಿಂದಿದ್ದ ಶ್ವಾನಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದು ಸಾವು ಕಂಡಿರುವ ದಾರುಣ ಘಟನೆ ನಡೆದಿದೆ.
 

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಡಿ.2): ಇತ್ತೀಚೆಗೆ ಜಿಲ್ಲೆಯಲ್ಲಿ ಶ್ವಾನಗಳ ದಾಳಿ ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಮನಿಸಿದ ವ್ಯಕ್ತಿಗಳು, ನಗರದಲ್ಲಿ 20ಕ್ಕೂ ಅಧಿಕ ಶ್ವಾನಗಳಿಗೆ ವಿಷ ಉಣಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಡಿಕಮಾನ್  ಬಳಿ ಶಾಲಾ ಬಾಲಕರ ಮೇಲೆ ಇತ್ತೀಚೆಗೆ ಈ ಶ್ವಾನಗಳು ದಾಳಿ ಮಾಡಿದ್ದವು. ನವೆಂಬರ್ 27 ರಂದು ಮೂವರು ಬಾಲಕರ ಮೇಲೆ ದಾಳಿ ಮಾಡಿದ್ದ ಸುದ್ದಿ ವೈರಲ್‌ ಆಗಿತ್ತು. ಈ ವಿಷಯ ತಿಳಿದು ನಾಯಿ ಹಿಡಿಯಲು ಒಆಲಿಕೆ ಅಧಿಕಾರಿಗಳು ಕಾರ್ಯಚಾರಣೆ ಮಾಡಿದ್ದರು. ಆದರೆ, ಶ್ವಾನಗಳು ಸೆರೆಸಿಗುವ ಮುನ್ನವೇ ಅದಕ್ಕೆ ವಿಷವುಣಿಸಿ ಹತ್ಯೆ ಮಾಡಲಾಗಿದೆ. ನಾಯಿ ಹಾವಳಿಗೆ ಹೆದರಿ ಸ್ಥಳೀಯ ಜನರೇ ವಿಷ ಹಾಕಿದ್ರಾ? ಅಥವಾ ಪಾಲಿಕೆ ಸಿಬ್ಬಂದಿಯಿಂದ ಕೃತ್ಯವಾ? ಎಂಬ ಅನುಮಾನ ಎಲ್ಲರಲ್ಲಿ ಮೂಡಿದೆ. ಈಗಾಗಲೇ ಸಾವನ್ನಪ್ಪಿದ್ದ 20ಕ್ಕೂ ಅಧಿಕ ಶ್ವಾನಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದು ಸಾವು ಕಂಡಿದೆ. ಇನ್ನೂ ಕೆಲ ಶ್ವಾನಗಳಿಗೆ ಸ್ಥಳೀಯರ ಯುವಕರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಬಡಿ ಕಮಾನ್ ಏರಿಯಾದ ಜಮೀನು ಬಳಿ ಈ ಶ್ವಾನಗಳು ಒದ್ದಾಡಿ ಒದ್ದಾಡಿ ಮೃತಪಟ್ಟಿವೆ.

ಮಟನ್‌ ಪೀಸ್‌ನಲ್ಲಿ ವಿಷವಿಟ್ಟು ನಾಯಿಗಳ ಹತ್ಯೆ ಮಾಡಲಾಗಿದೆ. ಕೆಲ‌ದಿನಗಳ ಹಿಂದೆ ಬಡಿ ಕಮಾನ್ ಏರಿಯಾದ ಬಾಗಾಯತ್ ಗಲ್ಲಿ, ಜಾಮಿಯಾ ಮಸೀದಿ, ಆಸಾರ್ ಗಲ್ಲಿ, ದೌಲತ್ ಕೋಟೆ ಗಲ್ಲಿಗಳಲ್ಲಿ ನಾಯಿಗಳು ಹಾವಳಿ ಇಟ್ಟಿದ್ದವು. ನಾಯಿಗಳ ಹಾವಳಿ ಶುರುವಾದ ಬಳಿಕ ಪಾಲಿಕೆ ಶ್ವಾನಗಳ ಹಿಡಿಯು  ಕಾರ್ಯಾಚರಣೆ ಶುರು ಮಾಡಿತ್ತು 50ಕ್ಕೂ ಅಧಿಕ ಶ್ವಾನಗಳನ್ನು ಪಾಲಿಕೆ ಹಿಡಿಯಲು ಯಶಸ್ವಿಯಾಗಿತ್ತು. ಇದರ ನಡುವೆ ದುಷ್ಕರ್ಮಿಗಳು ಈ ಶ್ವಾನಗಳಿಗೆ ವಿಷವಿಟ್ಟು ಹತ್ಯೆ ಮಾಡಿದ್ದಾರೆ. ಅಷ್ಟಕ್ಕು ಶ್ವಾನಗಳಿಗೆ ವಿಷ ಹಾಕಿದ್ದು ಯಾರು? ಪಾಲಿಕೆ ಸಿಬ್ಬಂದಿಯಾ? ಸ್ಥಳೀಯರಾ? ಎನ್ನುವ ಪ್ರಶ್ನೆ ಎಲ್ಲರಲ್ಲಿದೆ.

ಬೀದಿ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ವಿಜಯಪುರದ ಜನತೆ..!

ಮಾಂಸಾಹಾರವೆಂದು ಖುಷಿಯಿಂದಲೇ ತಿಂದಿದ್ದ ಶ್ವಾನಗಳು ಕೆಲ ಹೊತ್ತಿನಲ್ಲಿಯೇ ಒದ್ದಾಡಲು ಶುರು ಮಾಡಿವೆ. ಸ್ಥಳೀಯ ಯುವಕರು ಈ ಶ್ವಾನಗಳನ್ನು ರಕ್ಷಣೆ ಮಾಡುವ ವೇಳೆಗೆ 20ಕ್ಕೂ ಅಧಿಕ ಶ್ವಾನಗಳು ಸಾವು ಕಂಡಿವೆ ಎಂದು ಹೇಳಲಾಗಿದೆ. ಮೂಕ ಪ್ರಾಣಿಗಳ ಸಾವಿಗೆ ಕೆಲ ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

click me!