ದರ ಹೆಚ್ಚಿರುವ ಕಾರಣ ತೇವಾಂಶ ಇರುವ ಈರುಳ್ಳಿಯನ್ನೂ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸರಬರಾಜು ಆಗುತ್ತಿರುವಂತೆ ಕಂಡುಬರುತ್ತಿದೆ. ಆದರೆ, ವಾಸ್ತವವಾಗಿ ರಾಜ್ಯದಲ್ಲಿ ಹೆಚ್ಚು ಈರುಳ್ಳಿ ಇಲ್ಲ. ಮಳೆಯಿಂದ ನಾಶವಾಗಿವೆ. ಮುಂದಿನ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಬರುವುದಿಲ್ಲ. ಸಹಜವಾಗಿ ದರ ಮತ್ತಷ್ಟು ಹೆಚ್ಚಲಿದೆ.
ಬೆಂಗಳೂರು(ಅ.09): ದಿನದಿಂದ ದಿನಕ್ಕೆ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಒಂದು ಲಕ್ಷ ಚೀಲಕ್ಕೂ ಅಧಿಕ ಈರುಳ್ಳಿ ಪೂರೈಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹75- 80ಕ್ಕೆ ಮಾರಾಟವಾಗಿದೆ. ಬೆಲೆ ಮತ್ತಷ್ಟು ಹೆಚ್ಚುವ ಆತಂಕ ಗ್ರಾಹಕರನ್ನು ಕಾಡುತ್ತಿದೆ.
ದರ ಏರಿಕೆಯಲ್ಲಿ ಸ್ಪರ್ಧೆಗೆ ಬಿದ್ದಂತಿರುವ ತರಕಾರಿಗಳು ದಿನೇ ದಿನೇ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಮಹಾರಾಷ್ಟ್ರದಿಂದಲೇ ಈರುಳ್ಳಿ ಹೊತ್ತು ತಂದ 500ಕ್ಕೂ ಹೆಚ್ಚು ಲಾರಿಗಳು ಸೇರಿ ಒಟ್ಟಾರೆ 980 ಲಾರಿಗಳು ನಗರಕ್ಕೆ ಬಂದಿವೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ 95,783, ದಾಸನಪುರ ಮಾರುಕಟ್ಟೆಗೆ 4,427 ಚೀಲ ಈರುಳ್ಳಿ ತಂದಿದ್ದವು. ಸಗಟು ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಹಳೆ ಈರುಳ್ಳಿ ಕ್ವಿಂಟಲ್‌ಗೆ ಬರೋಬ್ಬರಿ ₹5200ವರೆಗೆ ಗರಿಷ್ಠ ದರಕ್ಕೆ ಹರಾಜಾಯಿತು. ಕನಿಷ್ಠ ದರವೇ ₹3500.
ಕೇವಲ 15 ದಿನದಲ್ಲಿ ಮತ್ತೆ 400ಕ್ಕೆ ತಲುಪಿದ ಬೆಳ್ಳುಳ್ಳಿ ಬೆಲೆ!
ಕರ್ನಾಟಕದ ಹೊಸ ಈರುಳ್ಳಿಗೂ ಉತ್ತಮ ದರವಿದ್ದು, ಒಂದೇ ದಿನ ಇಟ್ಟು ಖರ್ಚು ಮಾಡಬೇಕಾದಂತಹ ಮೂರನೇ ದರ್ಜೆ ಈರುಳ್ಳಿಗೂ ಕ್ವಿಂಟಲ್‌ಗೆ ₹2800 ಯಿಂದ ಉತ್ತಮ ಗುಣಮಟ್ಟದ ಈರುಳ್ಳಿಗೆ ಗರಿಷ್ಠ ₹4000 ದರವಿತ್ತು. ಇದರ ಪರಿಣಾಮ ಒಂದೆರಡು ದಿನಗಳಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕಂಡುಬರಲಿದ್ದು, ದರ ಇನ್ನಷ್ಟು ಹೆಚ್ಚಲಿದೆ ಎಂದು ವರ್ತಕರು ಹೇಳಿದ್ದಾರೆ.
ದರ ಹೆಚ್ಚಿರುವ ಕಾರಣ ತೇವಾಂಶ ಇರುವ ಈರುಳ್ಳಿಯನ್ನೂ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸರಬರಾಜು ಆಗುತ್ತಿರುವಂತೆ ಕಂಡುಬರುತ್ತಿದೆ. ಆದರೆ, ವಾಸ್ತವವಾಗಿ ರಾಜ್ಯದಲ್ಲಿ ಹೆಚ್ಚು ಈರುಳ್ಳಿ ಇಲ್ಲ. ಮಳೆಯಿಂದ ನಾಶವಾಗಿವೆ. ಮುಂದಿನ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಬರುವುದಿಲ್ಲ. ಸಹಜವಾಗಿ ದರ ಮತ್ತಷ್ಟು ಹೆಚ್ಚಲಿದೆ ಎಂದು ವರ್ತಕರು ಹೇಳಿದರು.