ಕರ್ನಾಟಕದಲ್ಲಿ ಮಳೆ ಕೊರತೆ: ಬರ ತಾಲೂಕು ಘೋಷಣೆ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಿಷ್ಟು

Published : Sep 01, 2023, 10:49 AM IST
ಕರ್ನಾಟಕದಲ್ಲಿ ಮಳೆ ಕೊರತೆ: ಬರ ತಾಲೂಕು ಘೋಷಣೆ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಿಷ್ಟು

ಸಾರಾಂಶ

ಹವಾಮಾನ ಮುನ್ಸೂಚನೆಯಂತೆ ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ಈ ತಿಂಗಳು ಶೇ.99ರಷ್ಟು ಮಳೆ ಕೊರತೆಯಾಗಿದೆ. 130 ತಾಲೂಕಿನಲ್ಲಿ ಬರ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ: ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ

ಬೆಂಗಳೂರು(ಸೆ.01):  ‘ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾದ ಬೆಳೆಹಾನಿ ಆಗಿದೆ. ಸೆಪ್ಟೆಂಬರ್‌ 4ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ರಾಜ್ಯದಲ್ಲಿನ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ. ತುಸು ಹೆಚ್ಚು ಕಡಿಮೆಯಾದರೂ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಬರ ಪ್ರದೇಶಗಳ ಪಟ್ಟಿ ಘೋಷಿಸುತ್ತೇವೆ’ ಎಂದು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಹೇಳಿದ್ದಾರೆ. ಅಲ್ಲದೆ, ಬರಗಾಲ ಘೋಷಣೆ ಮಾಡಿ ರೈತರಿಗೆ ಪರಿಹಾರ ಒದಗಿಸಿದರೂ, ಬೆಳೆ ವಿಮೆ ದೊರೆತರೂ ಮಳೆ ಅಭಾವದಿಂದ ರೈತ ವರ್ಗ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹವಾಮಾನ ಮುನ್ಸೂಚನೆಯಂತೆ ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ಈ ತಿಂಗಳು ಶೇ.99ರಷ್ಟು ಮಳೆ ಕೊರತೆಯಾಗಿದೆ. 130 ತಾಲೂಕಿನಲ್ಲಿ ಬರ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶೇ.32ರಷ್ಟು ಮಳೆ ಕೊರತೆ: ಈ ವರ್ಷದ ಆಗಸ್ಟ್‌ನದ್ದು 122 ವರ್ಷಗಳಲ್ಲೇ ಭೀಕರವೆನಿಸಿದ ಬರ!

ಸೆಪ್ಟೆಂಬರ್‌ ಮೊದಲ ವಾರದಲ್ಲೇ ಘೋಷಣೆ:

ಸರ್ಕಾರದ ಸೂಚನೆ ಮೇರೆಗೆ ತೀವ್ರ ಬರಪೀಡಿತ ತಾಲ್ಲೂಕುಗಳ ಆಯ್ದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಬೆಳೆ ಪರಿಸ್ಥಿತಿಯ ಸಮೀಕ್ಷೆ ಪೂರ್ಣಗೊಂಡಿದೆ. ಆ.30ರಂದು ವರದಿಯೂ ಸಲ್ಲಿಕೆಯಾಗಿದೆ. ಇವೆಲ್ಲಾ ಮಾನದಂಡಗಳ ಆಧಾರದ ಮೇಲೆ ಸೆ.4ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಬರ ತಾಲೂಕುಗಳ ಘೋಷಣೆ ಮಾಡಲಾಗುವುದು. ತುಸು ಹೆಚ್ಚು ಕಡಿಮೆ ಆದರೂ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಬರ ತಾಲೂಕುಗಳ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

‘ಮಳೆ ಅಭಾವದಿಂದ ಬರ ಘೋಷಣೆಯಾಗಿರುವ ಪ್ರದೇಶಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ನಿರ್ವಹಣೆಗೆ ಬೇಕಾದ ನೆರವು ನೀಡುತ್ತವೆ. ಬೆಳೆ ಹಾನಿಗೆ ವಿಮಾ ಪರಿಹಾರವೂ ಸಿಗಲಿದೆ. ಆದರೆ ಮಳೆ ಅಭಾವವು ಆರ್ಥಿಕ ಸಂಕಷ್ಟದ ಜತೆಗೆ ರೈತರ ನೆಮ್ಮದಿ ಹಾಳು ಮಾಡುತ್ತದೆ. ಹೀಗಾಗಿ ಮಳೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

10 ದಿನಗಳಲ್ಲಿ ಬೆಳೆ ಹಾನಿ ಮಾಹಿತಿ:

ಮಳೆ ಅಭಾವದ ನಡುವೆಯೂ ರಾಜ್ಯದ ಬಹುತೇಕ ಕಡೆ ಶೇ.70ರಿಂದ 80ರಷ್ಟುಬಿತ್ತನೆಯಾಗಿದೆ. ಹಾವೇರಿಯಲ್ಲಿ ಶೇ.85ರಷ್ಟುಬಿತ್ತನೆ ಮಾಡಲಾಗಿದೆ. ಆದರೆ, ಸತತ ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಹೀಗೆ ಹಾನಿಗೊಳಗಾದ ಬೆಳೆಯ ಪ್ರಮಾಣ ಎಷ್ಟುಎಂದು ತಕ್ಷಣಕ್ಕೆ ಹೇಳಲು ಆಗುವುದಿಲ್ಲ. ಸಮೀಕ್ಷೆ ಜತೆಗೆ ಮತ್ತಿತರ ಪ್ರಕ್ರಿಯೆಗಳ ನಂತರ ಮಾತ್ರ ಅದು ತಿಳಿಯಲಿದೆ. ಹೀಗಾಗಿ ಬರ ಘೋಷಣೆಯಾದ ಒಂದು ವಾರದಲ್ಲಿ ಆ ಮಾಹಿತಿ ಬರಲಿದೆ ಎಂದು ಹೇಳಿದರು.

ಬೆಳೆ ವಿಮೆ ವ್ಯಾಪ್ತಿಗೆ 15.31 ಲಕ್ಷ ಹೆಕ್ಟೇರ್‌:

ರಾಜ್ಯ ಮತ್ತು ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರ ಘೋಷಣೆಯಾಗುವುದರಿಂದ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳದ ರೈತರಿಗೂ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ. ಪ್ರಸಕ್ತ ಸಾಲಿಗೆ 16.23 ಲಕ್ಷ ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದು, 15.31 ಲಕ್ಷ ಹೆಕ್ಟೇರ್‌ ಬೆಳೆವಿಮೆ ವ್ಯಾಪ್ತಿಗೆ ಒಳಪಟ್ಟಿದೆ. 2022-23ನೇ ಸಾಲಿನಲ್ಲಿ 12.64 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡು 1,114.17 ಕೋಟಿ ರೂ. ಪರಿಹಾರ ಪಡೆದುಕೊಂಡಿದ್ದರು ಎಂದು ಮಾಹಿತಿ ನೀಡಿದರು.

ಹೂಳು ತೆಗೆಯಲು ಪ್ರತ್ಯೇಕ ಯೋಜನೆ:

ಜಲಾಶಯಗಳಲ್ಲಿ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಹೂಳು ತೆಗೆದು ಸಂಗ್ರಹ ಸಾಮರ್ಥ್ಯ ವೃದ್ಧಿಸಿದರೆ ಮಳೆ ಅಭಾವ ಉಂಟಾದಾಗ ಇದು ನೆರವಿಗೆ ಬರುತ್ತದೆ. ಹೀಗಾಗಿ ಜಲಾಶಯಗಳಲ್ಲಿರುವ ಹೂಳು ತೆಗೆಯುವ ಅಗತ್ಯವಿದೆ. ಹಾಗಾಗಿ, ಪ್ರಸ್ತುತ ವರ್ಷ ಹೂಳು ತೆಗೆಯುವಷ್ಟರಲ್ಲಿ ಮಳೆಗಾಲ ಶುರುವಾಯಿತು. ಹೀಗಾಗಿ ಮುಂಬರುವ ದಿನಗಳಲ್ಲಿ ಹೂಳು ತೆಗೆಯಲು ಯೋಜನೆ ರೂಪಿಸಲಾಗುವುದು ಎಂದರು.
ಈ ವೇಳೆ ಪ್ರೆಸ್‌ಕ್ಲಬ್‌ ಅಧ್ಯಕ್ಷರಾದ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಹಾಜರಿದ್ದರು.

ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಿಸಿ: ಬಿಎಸ್‌ವೈ, ಬೊಮ್ಮಾಯಿ ಆಗ್ರಹ

ತಿಂಗಳಲ್ಲಿ ಬೆಲೆ ಆಯೋಗ

ರಾಜ್ಯ ಕೃಷಿ ಬೆಲೆ ಆಯೋಗ ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇದರಿಂದ ಮಾರುಕಟ್ಟೆಬೆಲೆ ಏರಿಳಿತದ ಮುನ್ಸೂಚನೆ, ರೈತರಿಗೆ ಸಕಾಲದಲ್ಲಿ ಬೆಂಬಲ ಬೆಲೆ ಘೋಷಣೆಯಂತಹ ಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಚೆಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಲಾಂತರಿ ಸಾಸಿವೆ ಪ್ರಯೋಗವಿಲ್ಲ

ಕುಲಾಂತರಿ ಸಾಸಿವೆ ಪ್ರಯೋಗದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ. ಕುಲಾಂತರಿ ಸಾಸಿವೆ ವಿಚಾರದಲ್ಲಿ ವಿಜ್ಞಾನಿಗಳಿಂದ ನಕಾರಾತ್ಮಕ ವರದಿಗಳು ಬಂದಿವೆ. ಈ ಪ್ರಯೋಗದಿಂದ ಹಾನಿಯಾಗುವಂತಹ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯೋಗ ಮಾಡುವ ಆಲೋಚನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು