ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ದಿಂದ ಇಂದಿನಿಂದ ಪ್ರತಿ ಲೀಟರ್ ಹಾಲು ಮತ್ತು ಮೊಸರು ದರವನ್ನು ೨ ರೂ. ಹೆಚ್ಚಳ ಮಾಡಿದ್ದರೂ ಹೋಟೆಲ್‌ಗಳಲ್ಲಿ ಗ್ರಾಹಕರು ಸೇವಿಸುವ ಹಾಲು, ಟೀ, ಕಾಫಿಗಳ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು (ನ.24): ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ದಿಂದ ಇಂದಿನಿಂದ ಪ್ರತಿ ಲೀಟರ್ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿದ್ದರೂ ಹೋಟೆಲ್‌ಗಳಲ್ಲಿ ಗ್ರಾಹಕರು ಸೇವಿಸುವ ಹಾಲು, ಟೀ, ಕಾಫಿಗಳ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಸ್ಪಷ್ಟನೆ ಕೊಟ್ಟಿದ್ದಾರೆ.
ಈಗಾಗಲೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆ ಆಗಿದ್ದರೂ, ಹೋಟೆಲ್ ಉದ್ಯಮದಾರರು ಗ್ರಾಹಕರಿಗೆ ಹೊರೆ ಆಗದ ರೀತಿಯಲ್ಲಿ ತಿಂಡಿ, ಊಟ, ಕಾಫಿ ಮತ್ತು ಚಹಾ ನೀಡಲಾಗುತ್ತಿದೆ. ಇತ್ತೀಚೆಗೆ ಹೋಟೆಲ್ ಉದ್ಯಮಗಳಿಗೆ ಅಗತ್ಯವಾಗಿರುವ ಹಾಲಿನ ದರ ಹೆಚ್ಚಳದ ಮುನ್ಸೂಚನೆ ಇದ್ದಾಗಲೂ ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಬಿಸಿ ಪಾನೀಯಗಳ ದರ ಹೆಚ್ಚಳ ಮಾಡದಿರಲು ನಿರ್ಧಾರ ಮಾಡಲಾಗಿತ್ತು. ಈ ಮೂಲಕ ಗ್ರಾಹಕ ಸ್ನೇಹಿಯಾಗಿ ನಡೆದುಕೊಳ್ಳಲು ತೀರ್ಮಾನಿಸಿದ್ದೆವು. ಇಂದಿನಿಂದ ಕೆಎಂಎಫ್ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿದ್ದು, ಎಲ್ಲ ಗ್ರಾಹಕರಿಗೂ ಹೊರೆಯಾಗುವಂತೆ ಮಾಡಿದೆ. ಆದರೆ, ಈಗ ದರ ಹೆಚ್ಚಳವಾದರೂ ಹೋಟೆಲ್‌ಗಳಲ್ಲಿ ತಿಂಡಿ, ಕಾಫಿ, ಚಹಾ ಸೇರಿ ಯಾವುದೇ ಬೆಲೆಗಳನ್ನು ಹೆಚ್ಚಳ ಮಾಡಲು ತೀರ್ಮಾನ ಕೂಗೊಂಡಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
Nandini Milk Price Hike: ನಂದಿನಿ ಹಾಲು, ಮೊಸರು ದರ ₹2 ಹೆಚ್ಚಳ: ನಾಳೆಯಿಂದಲೇ ಜಾರಿ
ಕಾದು ನೋಡಲು ತೀರ್ಮಾನ: ಈ ಹಿಂದೆ ಗ್ಯಾಸ್, ತರಕಾರಿ, ದಿನಸಿ ಸಾಮಗ್ರಿಗಳು ಹೆಚ್ಚಳ ಆಗಿದ್ದರೂ ಗ್ರಾಹಕರಿಗೆ ಹೊರೆ ಆಗದ ರೀತಿಯಲ್ಲಿಯೇ ದರವನ್ನು ನಿಗದಿ ಮಾಡಿಕೊಂಡು ಉದ್ದಿಮೆ ನಡೆಸಲಾಗುತ್ತಿದೆ. ಆದರೆ, ಈಗಷ್ಟೇ ಹಾಲು ಮತ್ತು ಮೊಸರಿನ ದರ ಹೆಚ್ಚಳವಾಗಿದೆ. ಹೀಗಾಗಿ, ಉದ್ಯಮದಲ್ಲಿ ಯಾವ ರೀತಿಯ ಪ್ರಭಾವ ಬೀಳಲಿದೆ ಎಂಬುದನ್ನು ಕಾದು ನೋಡುತ್ತೇವೆ. ಕೆಲವು ದಿನಗಳ ನಂತರ ಹೋಟೆಲ್ ಮಾಲೀಕರೊಂದಿಗೆ ಸಭೆಯನ್ನು ನಡೆಸಿ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ದಿಢೀರನೆ ಗ್ರಾಹಕರಿಗೆ ಹೆಚ್ಚಿನ ಹೊರೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಲೆ ಹೆಚ್ಚಳಕ್ಕೆ ಗ್ರಾಹಕರ ಸಹಮತ : ದೇಶದ ಇತರೆ ರಾಜ್ಯಗಳಲ್ಲಿ ಕೆಎಂಎಫ್‌ನ ನಂದಿನಿ ಹಾಲಿಗಿಂತಲೂ ದರ ಹೆಚ್ಚಾಗಿದೆ. ಜತೆಗೆ, ಈಗ ದರ ಹೆಚ್ಚಳ ಮಾಡಿರುವುದರಿಂದ ಬರುವ ಹಣವನ್ನು ನೇರವಾಗಿ ರೈತರಿಗೆ ಕೊಡಲಾಗುತ್ತದೆ. ಇದರಲ್ಲಿ ಮಹಾಮಂಡಳದ ಅಭಿವೃದ್ಧಿ ಕಾರ್ಯಗಳಿಗೆ ಬಳಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜನರು ಹಾಲಿನ ದರ ಹೆಚ್ಚಳಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ರೈತರು ಕೂಡ ಪಶುಸಂಗೋಪನೆಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದ್ದು, ಆದಾಯ ಕಡಿಮೆಯಾಗುತ್ತಿದೆ ಎಂಬ ಕೊರಗು ಕೂಡ ಇದರಿಂದ ದೂರವಾಗಬಹುದು ಎಂಬ ನಿರೀಕ್ಷೆ ಮೂಡಿದೆ.