ಮಂಡ್ಯ ಮೈಷುಗರ್ ಕಂಪೆನಿ: ಕಬ್ಬು ಕಟಾವಿಗೆ ಕೊಟ್ಟಿದ್ದ 2 ಕೋಟಿ ರೂ ಎತ್ಕೊಂಡೋದ ಬಳ್ಳಾರಿ ಕಾರ್ಮಿಕರು!

By Kannadaprabha News  |  First Published Aug 16, 2024, 12:58 PM IST

ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಕಟಾವಿಗೆ ಮುಂಗಡವಾಗಿ ನೀಡಿದ 2 ಕೋಟಿ ರು. ಹಣವನ್ನು ಬಳ್ಳಾರಿ, ಬಿಜಾಪುರ ಕಾರ್ಮಿಕರು ಎತ್ತಿಕೊಂಡು ಹೋಗಿದ್ದಾರೆ.   ಹಣ ತೆಗೆದುಕೊಂಡು ಹೋದ ಯಾವ ಕಾರ್ಮಿಕರೂ ಬರುತ್ತಿಲ್ಲ. ಮೈಷುಗರ್‌ ಎಂಡಿ ಡಾ.ಎಚ್‌.ಎಲ್‌.ನಾಗರಾಜು ಸ್ಫೋಟಕ ಹೇಳಿಕೆ


ಮಂಡ್ಯ (ಆ.16): ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಕಟಾವಿಗೆ ಮುಂಗಡವಾಗಿ ನೀಡಿದ 2 ಕೋಟಿ ರು. ಹಣವನ್ನು ಬಳ್ಳಾರಿ, ಬಿಜಾಪುರ ಕಾರ್ಮಿಕರು ಎತ್ತಿಕೊಂಡು ಹೋಗಿದ್ದಾರೆ. ಹಣ ಪಡೆದುಕೊಂಡು ಹೋದ ಯಾವ ಕಾರ್ಮಿಕರೂ ಕಬ್ಬು ಕಟಾವು ಮಾಡಲು ಬರುತ್ತಿಲ್ಲ. ಕಾರ್ಮಿಕರನ್ನು ಕರೆತಂದಿದ್ದ ಮೇಸ್ತ್ರಿ ಕೂಡ ಬರುತ್ತಿಲ್ಲ. ನನ್ನ ಹೊಟ್ಟೆ ಉರಿಯುತ್ತಿದೆ ಎಂದು ಮೈಷುಗರ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎಲ್‌.ನಾಗರಾಜು ಸ್ಫೋಟಕ ಹೇಳಿಕೆ ನೀಡಿದರು. ಕಬ್ಬು ಕಡಿಯುವುದಕ್ಕೆ ಬಳ್ಳಾರಿ, ಬಿಜಾಪುರದಿಂದ ಕಾರ್ಮಿಕರನ್ನು ಕರೆದುಕೊಂಡು ಮೇಸ್ತ್ರಿ ಬಂದಿದ್ದ. ಅವರ ಮೇಲೆ ನಂಬಿಕೆ ಇಟ್ಟು ಮುಂಗಡವಾಗಿ 2 ಕೋಟಿ ರು. ನೀಡಿದೆ. ಅದನ್ನು ತೆಗೆದುಕೊಂಡು ಹೋದವರು ಈಗ ಕಟಾವಿಗೆ ಬರುತ್ತಿಲ್ಲ. ಅವರಿಗೆ ನೀಡಿರುವ ಹಣವನ್ನು ವಾಪಸ್‌ ಪಡೆಯುವುದಕ್ಕೂ ಆಗುತ್ತಿಲ್ಲ ಎಂದಿದ್ದಾರೆ.

ನಗರದಲ್ಲಿ ಕಬ್ಬು ಕಡಿಯುವ ಸಂಸ್ಕೃತಿ ಬೆಳೆಸಿ, ಮೈಷುಗರ್‌ ಕಾರ್ಖಾನೆ ಉಳಿಸಿ ಕಾರ್ಯಕ್ರಮದಲ್ಲಿ ಅಚ್ಚರಿಯ ಹೇಳಿಕೆ ನೀಡಿರುವ ಅವರು, ಕಬ್ಬು ಕಡಿಯುವುದಕ್ಕೆ ಬಳ್ಳಾರಿ, ಬಿಜಾಪುರದಿಂದ ಕಾರ್ಮಿಕರನ್ನು ಕರೆದುಕೊಂಡು ಮೇಸ್ತ್ರಿ ಬಂದಿದ್ದ. ಅವರ ಮೇಲೆ ನಂಬಿಕೆ ಇಟ್ಟು ಮುಂಗಡವಾಗಿ 2 ಕೋಟಿ ರು. ನೀಡಿದೆ. ಅದನ್ನು ತೆಗೆದುಕೊಂಡು ಹೋದವರು ಈಗ ಕಟಾವಿಗೆ ಬರುತ್ತಿಲ್ಲ. ಅವರಿಗೆ ನೀಡಿರುವ ಹಣವನ್ನು ವಾಪಸ್‌ ಪಡೆಯುವುದಕ್ಕೂ ಆಗುತ್ತಿಲ್ಲ. ಆ ದುಡ್ಡು ನಮ್ಮದಲ್ಲ. ರೈತರ ಹಣ. ಶ್ರಮ ಪಟ್ಟು ರೈತ ಕಬ್ಬು ತಂದು ಕಾರ್ಖಾನೆಗೆ ಹಾಕಿದ್ದ ಹಣ ಅದು. ರೈತರಿಗೆ ಬಂದ ಹಣವನ್ನು ಯಾರಿಗೊ ಕೊಟ್ಟು ಕಳೆಯುತ್ತಿರುವ ಬಗ್ಗೆ ಬೇಸರ ಇದೆ ಎಂದು ನೋವಿನಿಂದ ನುಡಿದರು.

Tap to resize

Latest Videos

undefined

ನಿತ್ಯ ನೋವು ಅನುಭವಿಸುತ್ತಿರುವೆ: ಮೈಷುಗರ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕನಾಗಿ ಪ್ರತಿ ನಿತ್ಯ ನನಗೆ ಅದೇ ಯೋಚನೆಯಾಗಿದೆ. ಉತ್ತಮವಾಗಿ ಕೆಲಸ ಮಾಡುತ್ತಾನೆಂಬ ನಂಬಿಕೆ ಮೇಲೆ ನನ್ನ ಮೇಲೆ ವಿಶ್ವಾಸವಿಟ್ಟು ಎಂಡಿ ಮಾಡಿದ್ದಾರೆ. ಆದರೆ, ಆ ಕುರ್ಚಿಯಲ್ಲಿ ಕುಳಿತು ವೈಯಕ್ತಿಕವಾಗಿ ನಿತ್ಯ ನೋವು ಅನುಭವಿಸುತ್ತಿದ್ದೇನೆ. ಕಬ್ಬು ಕಡಿಸಲು ಆಳುಗಳನ್ನು ಕಳುಹಿಸುವಂತೆ ರೈತರು ನಿತ್ಯ ಕರೆ ಮಾಡುತ್ತಿದ್ದಾರೆ. ಅವರಿಗೆ ಉತ್ತರ ನೀಡಲಾಗುತ್ತಿಲ್ಲ. 15 ತಿಂಗಳ ಕಬ್ಬು ಕಟಾವಿಗೆ ಬಂದರೂ ಕಬ್ಬು ಕಡಿದಿಲ್ಲ. ಹಣ ಪಡೆದುಕೊಂಡು ಹೋದ ಕಾರ್ಮಿಕರೂ ಬರುತ್ತಿಲ್ಲ. ಜಿಲ್ಲೆಯ ಅಧಿಕಾರಿಯಾಗಿ ಇದು ನನಗೆ ನೋವು ತಂದಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯುವಕರು ಕಷ್ಟಪಡುತ್ತಿಲ್ಲ: ಜಿಲ್ಲೆಯಲ್ಲಿರುವ ನಮ್ಮ ಯುವಕರನ್ನು ಕಬ್ಬು ಕಡಿಯುವ ಸಂಸ್ಕೃತಿಯ ಕಡೆಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಇತ್ತೀಚಿನ ಯುವಕರು ಯಾರೂ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ಯುವಕರೇ ಕಬ್ಬು ಕಡಿಯುವುದಕ್ಕೆ ಟೊಂಕಕಟ್ಟಿ ನಿಂತರೆ ಕಾರ್ಖಾನೆಗೆ ಅಗತ್ಯವಿರುವಷ್ಟು ಕಬ್ಬನ್ನು ಕಡಿದು ಸಕಾಲದಲ್ಲಿ ಪೂರೈಸಿಕೊಳ್ಳಬಹುದು. ಬೇರೆ ಜಿಲ್ಲೆಯವರನ್ನು ಅವಲಂಬಿಸುವ ಅವಶ್ಯಕತೆ ಇರುವುದಿಲ್ಲ. ಕಬ್ಬು ಕಟಾವಿಗೆ ಪ್ರತಿ ಗ್ರಾಮದಲ್ಲಿ ಕನಿಷ್ಠ 50 ಜನರ ತಂಡ ಕಟ್ಟುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಯುವಕರು ಕಷ್ಟ ಪಟ್ಟರೆ ಒಂದು ಟನ್ ಕಬ್ಬಿಗೆ 700 ರು. ಉಳಿಯುತ್ತದೆ. ಕಬ್ಬು ಕಡಿಯುವ ಕಾರ್ಯಕ್ಕೆ ಯುವಕರು ಮುಂದಾದರೆ ರೈತಾಪಿ ವರ್ಗವನ್ನ ಉನ್ನತೀಕರಣ ಮಾಡಲು ಸಾಧ್ಯವಿದೆ. ಎಂದರು.ಮಂಡ್ಯ ಜಿಲ್ಲೆ ಶೇ.90 ರಷ್ಟು ರೈತರ ಜಿಲ್ಲೆಯಾಗಿದೆ. ಕಾರ್ಖಾನೆ ಪೂಜೆ ದಿನ ಮೊದಲಿಗೆ 25 ಮಂದಿ ಗುತ್ತಿಗೆದಾರರು ಬಂದರು. ಕಬ್ಬು ಕಡಿಯೋದಕ್ಕೆ ಕಾರ್ಮಿಕರು ಸಿಗುತ್ತಾರೆ. 4 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯಬಹುದು. ಕಾರ್ಖಾನೆಗೆ ಯಶಸ್ಸು ತರಬಹುದು ಎಂದುಕೊಂಡಿದ್ದೆ. ಕೃಷಿಕರು ಇರುವ ಜಿಲ್ಲೆಯಲ್ಲಿ ಈ ರೀತಿಯ ಪರಿಸ್ಥಿತಿ ಇರುವುದು ಶೋಚನೀಯ ಎನಿಸಿದೆ ಎಂದು ವಿಷಾದಿಸಿದರು.

ಮೂರು ತಿಂಗಳಷ್ಟೇ ಕಬ್ಬು ಕಟಾವು: ಜಿಲ್ಲೆಯ ಜನರನ್ನ ನೋಡಿ ಕುವೆಂಪು ಅವರು ನೇಗಿಲಯೋಗಿ ಗೀತೆ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ದುಡಿಯುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಿದೆ. ಪ್ರತಿ ಗ್ರಾಮದಲ್ಲಿ ನಮ್ಮ ಕಬ್ಬನ್ನು ನಾವೇ ಕಡಿದು ಕಾರ್ಖಾನೆಗೆ ತರಬೇಕು. ಯುವಕರು ಮನಸ್ಸು ಮಾಡಿದರೆ ನಿತ್ಯ 2.5 ಟನ್ ಕಬ್ಬು ಕಡಿಯಬಹುದು. ಮೂರು ತಿಂಗಳ ಮಾತ್ರ ಕಬ್ಬು ಕಡಿಯುವ ಕೆಲಸ ಇರುತ್ತದೆ. 4 ಸಾವಿರ ಕುಟುಂಬ ಮೈಷುಗರ್ ಕಾರ್ಖಾನೆ ಮೇಲೆ ಅವಲಂಬಿಸಿವೆ. 10 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯಲು ಯೋಜನೆ ರೂಪಿಸಲಾಗಿದೆ. ಹಾಗಾಗಿ ಕಬ್ಬು ಕಡಿಯುವ ಸಂಸ್ಕೃತಿ ಬೆಳೆಸಿ ಮೈಶುಗರ್ ಕಾರ್ಖಾನೆ ಉಳಿಸಿ ಧ್ಯೇಯವನ್ನಿಟ್ಟುಕೊಂಡು ಮುನ್ನಡೆದರೆ ಕಾರ್ಖಾನೆ ಆರ್ಥಿಕ ಮಟ್ಟ ಹೆಚ್ಚುತ್ತದೆ ಎಂದು ನುಡಿದರು.

click me!