ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಕೃತ್ಯ ನಡೆದ ಸ್ಥಳ (ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣ) ಮಂಡ್ಯದ ಆಲೆಮನೆಯನ್ನು ಪೊಲೀಸ್ ಇಲಾಖೆಯಾಗಲೀ ಅಥವಾ ಆರೋಗ್ಯ ಇಲಾಖೆಯಾಗಲೀ ಸೀಜ್ ಮಾಡಿಲ್ಲ.
ಮಂಡ್ಯ (ಡಿ.16): ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಕೃತ್ಯ ನಡೆದ ಸ್ಥಳ (ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣ) ಮಂಡ್ಯದ ಆಲೆಮನೆಯನ್ನು ಪೊಲೀಸ್ ಇಲಾಖೆಯಾಗಲೀ ಅಥವಾ ಆರೋಗ್ಯ ಇಲಾಖೆಯಾಗಲೀ ಸೀಜ್ ಮಾಡಿಲ್ಲ. ಈ ಬಗ್ಗೆ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದ ಹುಳ್ಳೇನಹಳ್ಳಿ ಸಮೀಪದ ಆಲೆಮನೆಯಲ್ಲಿ ನಡೆಯುತ್ತಿತ್ತು ಎನ್ನಲಾದ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣದ ಸ್ಥಳಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ. ಆದರೆ, ಈವರೆಗೂ ಆಲೆಮನೆ ಯತಾಪ್ರಕಾರ ನಡೆಯುತ್ತಿದೆ. ಮುಖ್ಯವಾಗಿ ಸರ್ಕಾರ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾದರೆ, ಕೂಡಲೇ ಸ್ಥಳವನ್ನು ಮಹಜರ್ ಮಾಡಿ ಸರ್ಕಾರದ ಸೀಲ್ ಹಾಕಬೇಕಿತ್ತು. ಆದರೆ, ಈ ಜಾಗದಲ್ಲಿ ಏನೂ ಕ್ರಮ ಆಗಿಲ್ಲ. ಎಲ್ಲ ಸಾಕ್ಷಿಗಳು ನಾಶವಾಗಿವೆ. ಮುಖ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಯಾವುದೇ ಸಾಕ್ಷ್ಯಗಳು ಇಲ್ಲಿ ಸಿಗುತ್ತಿಲ್ಲ ಎಂದು ತಿಳಿಸಿದರು.
ಭ್ರೂಣಲಿಂಗಪತ್ತೆ, ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ಕೃತ್ಯಕ್ಕೆ ಬಳಸಿರುವ ಯಾವುದೇ ವಸ್ತು ಇಲ್ಲಿ ಇಲ್ಲ, ಎಲ್ಲಾ ಕ್ಲೀನ್ ಮಾಡಿದ್ದಾರೆ. ವೈದ್ಯರು ವರ್ಷಕ್ಕೆ 600-700 ಭ್ರೂಣ ಹತ್ಯೆ ಮಾಡ್ತಿದ್ದರು. ಈ ದಂಧೆಯಿಂದ ಕೋಟಿ ಕೋಟಿ ಹಣ ಸಂಪಾದಿಸಿದ್ದಾರೆ. ವ್ಯವಸ್ಥಿತವಾದ ಜಾಲದ ಇದರ ಹಿಂದೆ ಕೆಲಸ ಮಾಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಲಿಂಗಾನುಪಾತ ಹೆಚ್ಚಾಗಿದೆ. 20 ವರ್ಷ ಕಳೆದರೆ 60-70 ಲಕ್ಷ ಹೆಣ್ಣು ಮಕ್ಕಳು ಕಡಿಮೆ ಆಗ್ತಾರೆ. ಅಧಿಕಾರಿಗಳು ನಾನು ಬಂದಿದ್ದೇನೆ ಎಂದು ಬಂದಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲ ಸಿಐಡಿ ತನಿಖೆ ಮಾಡ್ತಾರೆ ಅಂತಾರೆ.
ಸರ್ಕಾರದಿಂದ ಯಾವುದೇ ಕಠಿಣ ಕ್ರಮವಾಗಿಲ್ಲ: ರಾಜ್ಯಾದ್ಯಂತ ಸುದ್ದಿಯಾದ್ರು ಆಲೆಮನೆ ಸೀಜ್ ಆಗಿಲ್ಲ. ಹೀಗಾದ್ರೆ ಜನಗಳಿಗೆ ಹೇಗೆ ನಂಬಿಕೆ ಬರುತ್ತದೆ. ಸರ್ಕಾರದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ತೀವಿ ಅಂತಾರೆ. ಕ್ರಮ ಆಗಿದ್ರೆ ಹೊಸಕೋಟೆಯಲ್ಲಿ ಯಾಕೆ ನಡೆಯುತ್ತಿತ್ತು? ಸರ್ಕಾರದ ಕೇರ್ ಲೆಸ್ ಇಂದ ಘಟನೆ ನಡೆದಿದೆ. ಕೃತ್ಯ ಬೆಳಕಿಗೆ ಬಂದ ಮೇಲೆ ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ. ಸಿಐಡಿ ಅಧಿಕಾರಿಗಳು ಯಾವ ಊರು ಅಂತ ನನ್ನ ಕೇಳ್ತಾರೆ. ಆರೋಗ್ಯ ಇಲಾಖೆಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಾರೆ. ಅಧಿಕಾರಿಗಳು, ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡ್ತೀನಿ. ಮುಚ್ಚಿರುವ ಆಲೆಮನೆಯಲ್ಲಿ ಕೃತ್ಯ ನಡೆಯುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರು. ಆದರೆ, ಇಲ್ಲಿ ಎಲ್ಲವೂ ಯಥಾಸ್ಥಿತಿಯಿದೆ ಎಂದು ಅಶೋಕ್ ಹೇಳಿದರು.
ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಹೆಚ್‌ಒ) ಹಾಗೂ ಪೊಲೀಸರಿಗೆ ತರಾಟೆ ತೆಗೆದುಕೊಂಡು ವಿಪಕ್ಷ ನಾಯಕ ಆರ್. ಅಶೋಕ್ ಅವರು, ಆಲೆಮನೆ ಮಾಲೀಕ ಎಲ್ಲಿ ಎಂದು ಕೇಳಿದ್ದಾರೆ. ಇಲ್ಲೇ ಇದ್ದಾನೆ ಎಂದು ಡಿಹೆಚ್‌ಓ ಡಾ.ಮೋಹನ್ ಹೇಳಿದ್ದಾರೆ. ಆಲೆಮನೆ ಯಾಕೆ ಸೀಜ್ ಮಾಡಿಲ್ಲ? ಇದುವರೆಗೂ ಸೀಜ್ ಮಾಡಿಲ್ಲ ಅಂದ್ರೆ ನೀವು ಶಾಮೀಲಾಗಿದ್ದೀರ? ನೀವೆಲ್ಲರೂ ಶಾಮೀಲಾಗಿದ್ದೀರ ಎಂದು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಜನ ಕೇಳ್ತಿದ್ದಾರೆ ನೀವು ಯಾಕೆ ಇನ್ನೂ ಸೀಜ್ ಮಾಡಿಲ್ಲ ಅಂತಾ? ಪೊಲೀಸರು, ಅರೋಗ್ಯ ಇಲಾಖೆ ಅಧಿಕಾರಿಗಳು ಏನ್ ಮಾಡ್ತಿದ್ದೀರಾ ಎಂದು ಕೇಳಿದರು.