ಮಹದಾಯಿ: 4 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ

By Kannadaprabha News  |  First Published Dec 30, 2022, 2:46 PM IST

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಯ ಜನರಿಗೆ ಅನುಕೂಲ, 3.09 ಟಿಎಂಸಿ ನೀರು ಲಭ್ಯ


ಹುಬ್ಬಳ್ಳಿ(ಡಿ.30): ಮಹದಾಯಿ ಪಶ್ಚಿಮಘಟ್ಟದ 30ಕ್ಕೂ ಹೆಚ್ಚು ತೊರೆ, ಹಳ್ಳಗಳಿಂದ ಮೈದುಂಬುವ ನದಿ. ಪಶ್ಚಿಮಾಭಿಮುಖವಾಗಿ ಹರಿಯುವ ಅಂತರ್‌ರಾಜ್ಯ ನದಿಯೂ ಹೌದು. ಇದರ ಮೂಲ ಕರ್ನಾಟಕದ ಖಾನಾಪುರ ತಾಲೂಕಿನ ದೇಗಾಂ ಗ್ರಾಮ. ಅರಬ್ಬೀ ಸಮುದ್ರ ಸೇರುವ ಮುನ್ನ ಕರ್ನಾಟಕದಲ್ಲಿ 35 ಕಿ.ಮೀ. ಮತ್ತು ಗೋವಾದಲ್ಲಿ 82 ಕಿ.ಮೀ. ಹರಿಯುತ್ತದೆ. ಕರ್ನಾಟಕದ ಜನ ಇದನ್ನು ಮಹಾತಾಯಿ (ಮಹದಾಯಿ) ಎಂದು ಕರೆದರೆ, ಗೋವನ್ನರು ಮಾಂಡೋವಿ ಎನ್ನುತ್ತಾರೆ. 2032 ಚ.ಕಿ.ಮೀ.ನಷ್ಟು ಜಲಾನಯನ ಪ್ರದೇಶ ಹೊಂದಿದ್ದು, ಕರ್ನಾಟಕದಲ್ಲಿ 375 ಚ.ಕಿ.ಮೀ. ಪ್ರದೇಶ ಇದೆ.

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆ ವ್ಯಾಪ್ತಿಯ ‘ಮಲಪ್ರಭಾ ನೀರಾವರಿ ಅಚ್ಚುಕಟ್ಟು ಪ್ರದೇಶ’ ವ್ಯಾಪ್ತಿಯ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕಿದ್ದ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ರೇಣುಕಾ ಸಾಗರ ಡ್ಯಾಂ ಈವರೆಗೆ ಭರ್ತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಚ್‌.ಕೆ.ಪಾಟೀಲ್‌ ಅವರು ಬಾದಾಮಿ ಶಾಸಕ ಬಿ.ಎಂ.ಹೊರಕೇರಿ ಅವರು ಕೊಟ್ಟಿದ್ದ ಸಲಹೆ ಆಧರಿಸಿ ‘ಕಳಸಾ-ಬಂಡೂರಿ ತಿರುವು ಯೋಜನೆ’ ರೂಪಿಸಿದರು.

Tap to resize

Latest Videos

ಕಳಸಾ ಬಂಡೂರಿ ಯೋಜನೆ ಡಿಪಿಆರ್ ಆಗೋದೆ ಇಲ್ಲ ಎನ್ನುತ್ತಿದ್ದವರಿಗೆ ಬಿಜೆಪಿ ಸರ್ಕಾರ ಉತ್ತರ ನೀಡಿದೆ: ಪ್ರಲ್ಹಾದ್ ಜೋಶಿ

ಮಹದಾಯಿ ಉಪ ನದಿಗಳಾದ ಕಳಸಾ ಮತ್ತು ಬಂಡೂರಿ ನಾಲೆಗಳನ್ನು ಪೂರ್ವಕ್ಕೆ ತಿರುಗಿಸಿ ಅವುಗಳಲ್ಲಿನ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಯ ಉಗಮ ಸ್ಥಾನಕ್ಕೆ ಸೇರಿಸುವ 100 ಕೋಟಿ ವೆಚ್ಚದ ಯೋಜನೆ ಇದು. ಅದಕ್ಕೆ ಅಂದಿನ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಗೋವಾ ಸರ್ಕಾರದ ಆಕ್ಷೇಪಕ್ಕೆ ಮಣಿದ ಕೇಂದ್ರ ಸರ್ಕಾರ ತಾನು ನೀಡಿದ್ದ ಅನುಮತಿ ರದ್ದುಗೊಳಿಸಿದಾಗ ನರಗುಂದ, ನವಲಗುಂದ ರೈತರು ಹೋರಾಟ ಆರಂಭಿಸಿದರು. ಅದು ಉತ್ತರ ಕರ್ನಾಟಕದಲ್ಲಿ ಜನಾಂದೋಲನವಾಗಿ ಮಾರ್ಪಟ್ಟಿತು. ರೈತರ ಈ ಹೋರಾಟಕ್ಕೆ ಈವರೆಗೆ 12 ಜನ ಬಲಿಯಾಗಿದ್ದಾರೆ. ಈ ಮಧ್ಯೆ, ಮಹದಾಯಿ ವಿವಾದಕ್ಕೆ ಸಂಬಂಧಿಸಿ ರಚಿತವಾದ ನ್ಯಾಯಾಧಿಕರಣ ತೀರ್ಪು ನೀಡಿದ್ದು ಅದರಂತೆ 13.5 ಟಿಎಂಸಿ ನೀರು ಬಳಸಿಕೊಳ್ಳಲು ಕರ್ನಾಟಕಕ್ಕೆ ಅನುಮತಿ ಸಿಕ್ಕಿದ್ದರೂ ಈಗ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದು ಕೇವಲ 3.09 ಟಿಎಂಸಿಗೆ ಮಾತ್ರ. ಕಳಸಾ ಮತ್ತು ಹಳತಾರ ಹಳ್ಳಗಳಿಂದ 1.72 ಟಿಎಂಸಿ ನೀರನ್ನು ಮಲಪ್ರಭೆಗೆ ತಿರುಗಿಸಿಕೊಳ್ಳಬೇಕು. ಬಂಡೂರಾ ಹಳ್ಳದಿಂದ 2.18 ಟಿಎಂಸಿ ನೀರು ಪಡೆಯಲು ಅವಕಾಶ ಸಿಕ್ಕಿದೆ.

ಅನುಕೂಲ ಏನು?

ಸದ್ಯ ಕುಡಿಯುವ ನೀರಿನ ಯೋಜನೆಗೆ 3.09 ಟಿಎಂಸಿ ನೀರು ಬಳಕೆಗೆ ಅವಕಾಶ ಸಿಕ್ಕಿದ್ದರಿಂದ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಯ 11 ತಾಲೂಕುಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಮತ್ತು 36 ಹಳ್ಳಿಗಳ ಕುಡಿಯುವ ನೀರಿನ ಬವಣೆಗೆ ಪರಿಹಾರ ಸಿಕ್ಕಂತಾಗಿದೆ. ಅಲ್ಲದೆ ಮಲಪ್ರಭಾ ನದಿಗೆ ವರ್ಷದಲ್ಲಿ ಆರೇಳು ತಿಂಗಳು ನೀರು ಹರಿಯುವುದರಿಂದ ನದಿ ಪಾತ್ರದ ನೀರಾವರಿಗೆ ಅನುಕೂಲವಾಗಲಿದೆ. ಅದರಂತೆ ಮಲಪ್ರಭಾ ನೀರಾವರಿ ಅಚ್ಚುಕಟ್ಟು ಪ್ರದೇಶದ ಭೂಮಿಗೂ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನೀಗಲಿದೆ.

ಮುಂದೇನು?

ಹೊಸ ಡಿಪಿಆರ್‌ಗೆ ಅನುಮೋದನೆ ಸಿಕ್ಕಿರುವುದು ಒಂದರ್ಥದಲ್ಲಿ ಅಲ್ಪಮಟ್ಟಿನ ಜಯ. ಇನ್ನುಳಿದ 10 ಟಿಎಂಸಿ ನೀರು ಬಳಸಿಕೊಳ್ಳಲು ಮತ್ತೊಂದು ಹೋರಾಟವೇ ಬೇಕೆನಿಸುತ್ತಿದೆ. ಮಹದಾಯಿ ನ್ಯಾಯಾಧಿಕರಣ ತೀರ್ಪು ನೀಡಿದ್ದರೂ ಹೋರಾಟ ನಡೆಸುವುದು ಕನ್ನಡಿಗರ ಪಾಲಿಗೆ ಅನಿವಾರ್ಯ. ಇಂದು ಕರ್ನಾಟಕ, ಗೋವಾ, ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದು, ಹೆಚ್ಚು ಕಿರಿಕಿರಿ ಇಲ್ಲದೆ ಒಂದು ಹಂತಕ್ಕೆ ಬಂದಿದೆ. ರಾಜಕೀಯ ಇಚ್ಛಾಶಕ್ತಿ ಇಲ್ಲಿ ಕೆಲಸ ಮಾಡಿದೆ. ಮುಂದೆ ಹೇಗೋ ಏನೋ ಎನ್ನುವುದು ಈಗಲೇ ಹೇಳುವುದು ಕಷ್ಟ. ಅಲ್ಲದೆ, ಕರ್ನಾಟಕದ ನ್ಯಾಯಯುತ ಬೇಡಿಕೆ 36.558 ಟಿಎಂಸಿ. ಇದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಮಹದಾಯಿ, ಮಲಪ್ರಭಾ ಪಾತ್ರದ ರೈತರು ಹೋರಾಟ ಮಾಡುವ ಅನಿವಾರ್ಯವಿದೆ.

click me!