ಸಂಡೂರಿನ ಲಂಬಾಣಿ ಮಹಿಳೆಯರ 1000 ಕಸೂತಿ ಕಲೆಯ ಪ್ರದರ್ಶನವು ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ಗೆ ಪಾತ್ರವಾಗಿದೆ. ಹಂಪಿಯ ಜಿ-20 ಶೃಂಗಸಭೆಯ ಕಾರ್ಯಕಾರಿ ಸಭೆಯಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.
ವಿಜಯನಗರ/ಹಂಪಿ (ಜು.10): ರಾಜ್ಯದಲ್ಲಿ ಕಾಡಿನ ವಾಸಿಗಳೆಂದೇ ಕರೆಯುತ್ತಿದ್ದ ಲಂಬಾಣಿ ಸಮುದಾಯದ ಮಹಿಳೆಯರು ಆಧುನಿಕ ಜಗತ್ತಿನಲ್ಲಿಯೂ ತಮ್ಮ ಜೀವನ ಶೈಲಿ, ಉಡುಪುಗಳ ಧರಿಸುವ ಸಂಸ್ಕೃತಿ ಹಾಗೂ ಕಸೂತಿ ಕಲೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಇನ್ನು ಸಂಡೂರಿನ ಲಂಬಾಣಿ ಮಹಿಳೆಯರು ಸಿದ್ಧಪಡಿಸಿದ ಕಸೂತಿ ಕಲೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗಿನ್ನಿಸ್ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಭಾರತೀಯ ಸಂಸ್ಕೃತಿ, ಕಲೆ ಪರಂಪರೆಯು ದೇಶಿ ಜನರನ್ನು ಅಷ್ಟೇ ಅಲ್ಲದೇ ವಿದೇಶಿ ಜನರನ್ನು ಆಕರ್ಷಿಸುತ್ತದೆ. ಇದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಇಲ್ಲಿಯ ಲಂಬಾಣಿ ಕಸೂತಿ ಸಾಕ್ಷಿಯಾಗಿದೆ. ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಲಿದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಆಧುನಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳಿಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಸಾಕ್ಷಿಯಾಗಿದೆ.
undefined
ಕರ್ನಾಟಕ ಲಂಬಾಣಿ ಕಸೂತಿ ಕಲೆಗೆ ಗಿನ್ನಿಸ್ ದಾಖಲೆ: ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಸಭೆ
1000 ಕಸೂತಿ ಕಲೆಗಳ ಪ್ರದರ್ಶನ: ವಿಶ್ವವಿಖ್ಯಾತ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ನಡೆದ ಜಿ 20 ಸಭೆಯಲ್ಲಿ ಗಿನ್ನಿಸ್ ಬುಕ್ ಆಪ್ ರೆಕಾರ್ಡ್ ನ ಅಧಿಕೃತ ತೀರ್ಪುಗಾರ ರಿಷಿನಾಥ್ ಲಂಬಾಣಿ ಕಸೂತಿ ಕಲೆಗೆ ಗಿನ್ನಿಸ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ನೀಡಿದ್ರು. ಈ ಮೂಲಕ ಕಸೂತಿ ಕಲೆಗೆ ಜಾಗತಿಕ ಮನ್ನಣೆ ಸಿಕ್ಕಿದಂತಾಗಿದೆ. ಸಂಡೂರಿನ ಲಂಬಾಣಿ ಕಲಾ ಕೇಂದ್ರದ 450ಕ್ಕೂ ಹೆಚ್ಚು ಮಹಿಳೆಯರು 1755 ವಿವಿಧ ರಚನಾ ಕ್ರಮವುಳ್ಳ ಹಸ್ತದಿಂದ ರಚಿಸಿದ ಕಸೂತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಈ ಹಿಂದಿನ ಗಿನ್ನೆಸ್ ದಾಖಲೆಯಲ್ಲಿ 1000 ಕಸೂತಿ ಕಲೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
ಸಂಡೂರಿನಲ್ಲಿ ಕಲಾಕೇಂದ್ರ ನಡೆಸುವ ಮಹಿಳೆಯರು: ಲಂಬಾಣಿ ಕಸೂತಿ ಕಲೆಯೂ 1988 ರಲ್ಲಿ ಸಂಡೂರಿನಲ್ಲಿ ಕೇವಲ 5 ಲಂಬಾಣಿ ಮಹಿಳೆಯರಿಂದ ಆರಂಭವಾಗಿತ್ತು. ಆದ್ರೇ ಆದೇ ಲಂಬಾಣಿ ಕುಶಲ ಕಲಾ ಕೇಂದ್ರ ಇಂದು 600 ಕುಶಲ ಕಸೂತಿ ಕಲೆ ಕಲಿತ ಮಹಿಳೆಯರಿಂದ ನಡೆಸಲ್ಪಡುತ್ತಿದೆ. ಪಾರಂಪರಿಕವಾಗಿ ಮನೆಗಳು ಹಾಗೂ ತಾಂಡಗಳಿಗೆ ಸೀಮಿತವಾಗಿದ್ದ ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿ.ಐ.(ಗ್ಲೋಬಲ್ ಇಂಡಿಕೇಷನ್) ಟ್ಯಾಗ್ ಪಡೆಯುವಲ್ಲಿ ಸಂಡೂರಿನ ಕಲಾ ಕೇಂದ್ರ ಯಶಸ್ವಿಯಾಗಿದೆ. ವಿವಿಧ ರೀತಿಯ 29 ಕಲಾತ್ಮಕ ಕಸೂತಿಗಳನ್ನು ಇಲ್ಲಿ ಮಾಡಲಾಗುತ್ತಿದೆ. ಈ ಕೇಂದ್ರಕ್ಕೆ ಈಗಾಗಲೇ ರಾಷ್ಟ್ರ ಮಟ್ಟದ ಪ್ರಶಸ್ತಿ, ಯುನಸ್ಕೋ ಮನ್ನಣೆ ಹಾಗೂ ಕಮಲಾದೇವಿ ಛಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ. ಈಗ ಹಂಪಿಯಲ್ಲಿ ಜಿ-20 ಶೃಂಗ ಸಭೆಯಲ್ಲಿ ಗಿನ್ನಿಸ್ ದಾಖಲೆಯು ಮುಡಿಗೇರಿದೆ.
ಲಂಬಾಣಿ ಕಸೂತಿಗೆ ಉದ್ದಿಮೆ ರೂಪ: ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಉದ್ದೇಶದಂತೆ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಆರ್ಥಿಕತೆಯ ಪ್ರಚಾರ ಮಾಡುವ ನಿಟ್ಟಿನಲ್ಲಿ ಲಂಬಾಣಿ ಕಸೂತಿ ವಸ್ತು ಪ್ರದರ್ಶನವನ್ನು ಹಂಪಿಯಲ್ಲಿ ಏರ್ಪಡಿಸಲಾಗಿತ್ತು. ಲಂಬಾಣಿ ಕಸೂತಿಗೆ ಉದ್ದಿಮೆ ರೂಪ ನೀಡಿ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಈ ಸಂದರ್ಭದಲ್ಲಿ ಹೇಳಿದರು.
ಹಂಪಿ ವಿಜಯನಗರ ಸುವರ್ಣಯುಗ ಕಂಡ ಸಾಮ್ರಾಜ್ಯವಾಗಿ ಇತಿಹಾಸದಲ್ಲಿ ದಾಖಲಾಗಿದೆ. 15-16ನೇ ಶತಮಾನದ ಬಹುದೊಡ್ಡ ಪುರಾತನ ಶಿಲ್ಪಕಲೆ, ವಾಸ್ತುಶಿಲ್ಪದಲ್ಲಿ ಜ್ಞಾನ ತಂತ್ರಜ್ಞಾನ ಇತ್ತು. ಸಾಮ್ರಾಜ್ಯ ಶ್ರೀಮಂತವಾಗಿರಲು ಆಳುವವರಲ್ಲಿ ಮತ್ತು ಪ್ರಜೆಗಳಲ್ಲಿ ಅಷ್ಟೇ ಪ್ರಾಮಾಣಿಕತೆ ಇತ್ತು. ದೇಶ-ವಿದೇಶಗಳ ಇತಿಹಾಸಕಾರರು ಸಹ ಇದರ ಕುರಿತು ಉಲ್ಲೇಖಿಸಿದ್ದಾರೆ. ಹಂಪಿಯ ಸ್ಮಾರಕಗಳು ಇಂದಿಗೂ ಆ ವೈಭವನ್ನು ಸಾರುತ್ತಿವೆ ಎಂದು ಕೇಂದ್ರ ಸಚಿವ ಪಲ್ಹಾದ್ ಜೋಶಿ ಸ್ಮರಿಸಿದರು.
ಇನ್ಮುಂದೆ ಐತಿಹಾಸಿಕ ಹಂಪಿಯ ಕಲ್ಲಿನ ತೇರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಆಗಲ್ಲ: ಕಾರಣವೇನು ಗೊತ್ತಾ?
ಲಂಬಾಣಿ ನೃತ್ಯದ ಮೂಲಕ ಜಿ-20 ಪ್ರತಿನಿಧಿಗಳಿಗೆ ಸಾಂಪ್ರದಾಯಿಕ ಸ್ವಾಗತ: ವಸ್ತು ಪ್ರದರ್ಶನಕ್ಕಾಗಿ ಹಂಪಿಯ ಎದುರು ಬಸವಣ್ಣ ವೇದಿಕೆ ಬಳಿ ಆಯೋಜಿಸಿದ್ದ ಮಳಿಗೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳಿಗೆ ಲಂಬಾಣಿ ನೃತ್ಯದ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ವಸ್ತು ಪ್ರದರ್ಶನ ಸ್ಥಳಕ್ಕೆ ಪ್ರತಿನಿಧಿಗಳು ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಲಂಬಾಣಿ ಮಹಿಳೆಯರು ತಲೆ ಮೇಲೆ ಮಣ್ಣಿನ ಹೂಕುಂಡ ಹೊತ್ತು ತಮಟೆ ವಾದನಕ್ಕೆ ಹೆಜ್ಜೆ ಹಾಕುತ್ತಾ ಸ್ವಾಗತ ಕೋರಿದರು. ಅತ್ಯುನ್ನತ ಪ್ರತಿನಿಧಿಗಳಿಗೆ ಲಂಬಾಣಿ ಮಹಿಳೆಯರ ಸಾಂಪದ್ರಾಯಿಕ ತೊಡುಗೆ, ನೃತ್ಯ ಗಮನಸೆಳೆದವು.