-ಎಂ.ಅಫ್ರೋಜ್ ಖಾನ್
ರಾಮನಗರ (ಜೂ.13) ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಜಿಲ್ಲೆಯ ಪ್ರವಾಸಿ ತಾಣಗಳು ಚೇತರಿಕೆ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಕೂಗಳತೆ ದೂರದಲ್ಲಿರುವ ರೇಷ್ಮೆನಾಡು ರಾಮನಗರ ಜಿಲ್ಲೆ ಸಿಲ್‌್ಕ-ಮಿಲ್‌್ಕಗೆ ಮಾತ್ರವಲ್ಲದೆ ಪ್ರವಾಸಕ್ಕೂ ಹೇಳಿ ಮಾಡಿಸಿದ ತಾಣ. ಎರಡು ಅಥವಾ ಒಂದು ದಿನದ ಪ್ರವಾಸಿ ಸಕ್ಯೂರ್ಟ್ಗೆ ಸೂಕ್ತವಾಗಿದೆ.
ಮಂಗಳೂರು: ಮಹಿಳಾ ‘ಶಕ್ತಿ’ ಯೋಜನೆ: ಮೊದಲ ದಿನ 5454 ಮಹಿಳೆಯರ ಪ್ರಯಾಣ!
ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯಾವುದೇ ಷರತ್ತುಗಳಿಲ್ಲದೆ ಪ್ರಯಾಣಿಸಬಹುದಾಗಿದೆ. ಜಿಲ್ಲೆಯಲ್ಲಿ ಸಾಕಷ್ಟುಪ್ರವಾಸಿ ಆಕರ್ಷಣೆಗಳಿದ್ದು, ಅವುಗಳಿಗೆ ಸುರಕ್ಷಿತವಾಗಿ ಪ್ರವಾಸ ಮಾಡಬಹುದಾಗಿದೆ. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ತಾಣ, ಜಲ ಪ್ರದೇಶಗಳು, ಬಂಡೆಗಳ ಅದ್ಭುತ ತಾಣಗಳು ಸೇರಿದಂತೆ ಅನೇಕ ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.
ನಷ್ಟಕ್ಕಿಂತ ಲಾಭವೇ ಹೆಚ್ಚು :
ಮಹಿಳಾ ಸಂಘ ಸಂಸ್ಥೆಗಳ ಸದಸ್ಯರು ವಾರಾಂತ್ಯದಲ್ಲಿ ಪ್ರವಾಸ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದು ಸತ್ಯ ಕೂಡ. ಮಹಿಳಾ ಮಣಿಗಳು ವಾರಾಂತ್ಯದಲ್ಲಿ ಪ್ರವಾಸಕ್ಕೆ ಯೋಜನೆ ಮಾಡಬಹುದು. ಆದರೆ, ಪ್ರತಿ ವಾರವೂ ಪ್ರವಾಸ ಹೋಗಲು ಸಾಧ್ಯವಿಲ್ಲ. ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ಪ್ರವಾಸ ಮಾಡಬಹುದು. ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗಬಹುದು. ಆದರೆ, ಬಸ್‌ನಲ್ಲಿ ಉಚಿತ ಎನ್ನುವ ಕಾರಣಕ್ಕೆ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಹೋಗುವ ಮಹಿಳೆಯರು ದೇವಸ್ಥಾನದ ಹುಂಡಿಗೆ ಹಣ ಹಾಕುತ್ತಾರೆ. ಹರಕೆಗಳನ್ನು ತೀರಿಸುತ್ತಾರೆ. ಇನ್ನು ಹೋಟೆಲ… ಉದ್ಯಮ ಹೆಚ್ಚಿನ ಲಾಭದತ್ತ ಮುನ್ನುಗ್ಗುತ್ತದೆ. ಇದರಿಂದಲೂ ಸರ್ಕಾರಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ. ಜನರು ಮನೆಯಿಂದ ಹೊರಗೆ ಬಂದಷ್ಟೂಸರ್ಕಾರಗಳಿಂದ ಒಂದಲ್ಲ ಒಂದು ಮೂಲದಿಂದ ಲಾಭ ಬರುತ್ತದೆಯೇ ಹೊರತು ನಷ್ಟಆಗುವುದಿಲ್ಲ.
ಇನ್ನು ಕೆಲವು ಕುಟುಂಬದಲ್ಲಿ ಮಹಿಳೆಯರು ಮಾತ್ರ ಪ್ರವಾಸ ಹೋಗುವುದಕ್ಕೆ ಸಾಧ್ಯವಿಲ್ಲ. ಪ್ರವಾಸದಲ್ಲಿ ಇಡೀ ಕುಟುಂಬವೇ ಹಾಜರಿರುತ್ತದೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಇದ್ದರೂ ಪುರುಷರು ಬಸ್ ಚಾಜ್‌ರ್ ಕೊಡಲೇಬೇಕು. ಈ ರೀತಿ ಜನರು ಪ್ರವಾಸಕ್ಕೆ ಹೊರಟರೆ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಸರ್ಕಾರಕ್ಕೆ ಹಣ ತೆರಿಗೆ ರೂಪದಲ್ಲಿ ಹರಿದು ಬರುತ್ತದೆ.
60 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ:
ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿನ ಪ್ರಮುಖವಾದ 30 ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 2022ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 60.08 ಲಕ್ಷ ದೇಶಿ, 961 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 2023ರಲ್ಲಿ ಜನವರಿಯಿಂದ ಮೇ ಅಂತ್ಯಕ್ಕೆ 26.36 ಲಕ್ಷ ದೇಶಿ, 507 ವಿದೇಶಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಬಂದು ಹೋಗಿದ್ದಾರೆ.
ಅತಿ ಹೆಚ್ಚು ಪ್ರವಾಸಿಗರು ಶ್ರೀ ರೇವಣಸಿದ್ದೇಶ್ವರ ಬೆಟ್ಟ, ಸಾವನದುರ್ಗಾ, ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯ, ಮೇಕೆದಾಟು - ಸಂಗಮ, ಮೈತ್ರೇಯ ಪ್ಯಾರಮಿಟ್ ಕಣಿವೆ, ಕಬ್ಬಾಳಮ್ಮ ದೇವಾಲಯ, ಜಾನಪದ ಲೋಕ, ಮಂಚನಬೆಲೆ ಜಲಾಶಯ, ಚುಂಚಿ ಫಾಲ್ಸ್, ಕಲ್ಲಹಳ್ಳಿಯ ವೆಂಕಟರಮಣ ಸ್ವಾಮಿ ದೇವಾಲಯ, ಕೆಂಗಲ್ ಆಂಜನೇಯ ದೇಗುಲ, ಅಪ್ರಮೇಯ ಸ್ವಾಮಿ ದೇವಾಲಯ, ವಂಡರ್ ಲಾ ಅಮ್ಯೂಸ್‌ಮೆಂಟ್‌ಗೆ ಭೇಟಿ ನೀಡಿದ್ದಾರೆ.
ಇನ್ನುಳಿದ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಆ ತಾಣಗಳಿಗೂ ಸಮರ್ಪಕವಾದ ರಸ್ತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಕಾರ್ಯ ತುರ್ತಾಗಿ ನಡೆದಲ್ಲಿ ಪ್ರವಾಸಿಗರು ಸಂಖ್ಯೆ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ.
ಈ ಹಿಂದಿನ ಸರ್ಕಾರಗಳು ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಒಳಗೊಂಡ ಟೂರಿಂಗ್ ಹಬ್(ಪ್ರವಾಸಿ ಸಕ್ಯೂರ್ಟ್) ಯೋಜನೆ ರೂಪಿಸಿತ್ತು. ಇದು ಸದ್ಯಕ್ಕೆ ಜಾರಿ ಆಗಿಲ್ಲವಾದರೂ ಕಾರ್ಯರೂಪಕ್ಕೆ ತರುವ ಪ್ರಯತ್ನ ಮುಂದುವರಿದಿದೆ.
ರಾಮನಗರ ಜಿಲ್ಲೆಯು ಮುತ್ತತ್ತಿ, ಸಂಗಮ, ಮೇಕೆದಾಟುಗಳಂತಹ ನದಿತೀರ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದೆ. ಅಲ್ಲದೆ ಜಿಲ್ಲೆಯಲ್ಲಿ ಕಾವೇರಿ, ಶಿಂಷಾ, ಅರ್ಕಾವತಿ ಸೇರಿದಂತೆ ಸಣ್ಣಪುಟ್ಟನದಿಗಳು ಹರಿಯುತ್ತಿವೆ. ಸಂಪತ್ಭರಿತವಾದ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಜಲಸಾಹಸ ಕ್ರೀಡೆಗಳಿಗೆ ಕಣ್ವ, ಇಗ್ಗಲೂರು, ಮಂಚನಬೆಲೆ, ತಿಪ್ಪಗೊಂಡನಹಳ್ಳಿಗಳಂತಹ ಜಲಾಶಯಗಳು ಇಲ್ಲಿವೆ. ಹೀಗೆ ಹತ್ತು ಹಲವು ಬಗೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಜಿಲ್ಲೆಗೆ ಬರುವಂತಹ ಪ್ರವಾಸಿಗರನ್ನು ಸೆಳೆಯಲು ಸೈಕಲ್ ಸವಾರಿ ಹಲವು ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ವಿವಿಧ ಚಟುವಟಿಕೆ, ಗುಡ್ಡಗಾಡು ಪ್ರದೇಶದಲ್ಲಿ ಪರ್ವತಾರೋಹಣ, ಸೈಕ್ಲಿಂಗ್ ಹಾಗೂ ಟ್ರೆಕ್ಕಿಂಗ್‌ಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಅದೇ ರೀತಿ ರಾಮನಗರ ಜಿಲ್ಲೆ ಕಲೆಗೆ ಹೆಸರುವಾಸಿಯಾಗಿದ್ದು ಜಿಲ್ಲೆಯಲ್ಲಿ ಪಾರಂಪರಿಕ ವಸ್ತು ಸಂಗ್ರಾಹಲಯ ಸಿದ್ದಪಡಿಸಲು, ಚನ್ನಪಟ್ಟಣದ ಬೊಂಬೆ, ರೇಷ್ಮೆ ಟೂರಿಸಂ, ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೂ ಪ್ರವಾಸ ಕೈಗೊಳ್ಳಲು ಅಭಿವೃದ್ಧಿ ಪಡಿಸಬಹುದಾಗಿದೆ.
ಇದರ ಜೊತೆಗೆ ಮೈಕ್ರೋಲೈಟ್ ಏರ್ ಕ್ರಾಫ್ಟ್, ಮ್ಯಾರಥಾನ್, ವಾಕ್ ಥಾನ್, ಪ್ರೋಟಿಂಗ್ ಹೌಸ್, ಹಿಲಿಂಗ್ ಸೆಂಟರ್ ಹಾಗೂ ಮೂಲ ಸೌಕರ್ಯಗಳು ಲಭ್ಯವಿರುವ ಮಾಹಿತಿಯನ್ನು ಒದಗಿಸುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಬಹುದಾಗಿದೆ.
ಬೆಂಗಳೂರಿನಿಂದ ಅನತಿ ದೂರದಲ್ಲಿರುವ ರಾಮನಗರವು ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು ಒಂದು ಗಂಟೆಯಲ್ಲಿ ಪ್ರಯಾಣದ ದೂರದಲ್ಲಿದೆ. ಜಿಲ್ಲೆಯಲ್ಲಿರುವ ಹಲವು ಪ್ರವಾಸಿತಾಣಗಳನ್ನು ಒಂದು ಯೂನಿಟ್‌ನಂತೆ ರೂಪಿಸಿ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಳ್ಳಲು ಟೂರಿಂಗ್ ಹಬ್‌ನಂತೆ ರೂಪಿಸಲು ರಾಮನಗರವು ಹೇಳಿ ಮಾಡಿಸಿದಂತಹ ಜಿಲ್ಲೆಯಾಗಿದೆ.
ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಆತಿಥ್ಯೋದ್ಯಮ ಹಾಗೂ ಸಾಹಸ ಕ್ರೀಡೆಗಳ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸಿಗರಿಗಾಗಿ ಟೂರಿಂಗ್ ಹಬ್ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಅದಕ್ಕೆಲ್ಲ ಶೀಘ್ರದಲ್ಲಿ ಒಂದು ರೂಪ ನೀಡಿ ಹೆಚ್ಚು ಹೆಚ್ಚು ಪ್ರವಾಸಿಗರು ಆಕರ್ಷಿಸುವ ಕೆಲಸ ಮಾಡಲಾಗುವುದು.
- ಶಶಿ ಕುಮಾರ್, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ರಾಮನಗರ