ರಾಜ್ಯದಲ್ಲಿವೆ ಪ್ಲೇಗಮ್ಮ, ಸಿಡುಬಮ್ಮ, ಏಡ್ಸಮ್ಮ ಗುಡಿ: ಈಗ ‘ಕೊರೋನಮ್ಮ’ ಹೆಸರಲ್ಲೂ ಪೂಜೆ!

By Kannadaprabha News  |  First Published Apr 18, 2020, 12:03 PM IST

ರಾಜ್ಯದಲ್ಲಿವೆ ಪ್ಲೇಗಮ್ಮ, ಸಿಡುಬಮ್ಮ, ಏಡ್ಸಮ್ಮ ಗುಡಿಗಳು!| 20ನೇ ಶತಮಾನದಲ್ಲಿ ದೇಶಾದ್ಯಂತ 1 ಕೋಟಿ ಬಲಿ ಪಡೆದಿದ್ದ ಪ್ಲೇಗ್‌| ಹೀಗಾಗಿ, ಆ ಹೆಸರಲ್ಲಿ ದೇಗುಲ ಸ್ಥಾಪನೆ| ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆ ಇವೆ ಇಂತಹ ದೇವಸ್ಥಾನ| ಇದೀಗ ‘ಕೊರೋನಮ್ಮ’ ಹೆಸರಲ್ಲೂ ಪೂಜೆ


ವಿಶೇಷ ವರದಿ

ಬೆಂಗಳೂರು(ಏ.18): ಕೊರೋನಾ ವೈರಸ್‌ ಸೋಂಕು ಹೆಚ್ಚುತ್ತಿದ್ದಂತೆ ಜನರು ರಾಜ್ಯದ ಕೆಲವೆಡೆ ಕೊರೋನಮ್ಮ ಎಂಬ ದೇವತೆಯನ್ನು ‘ಹುಟ್ಟುಹಾಕಿ’ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಚಿತ್ರದುರ್ಗದ ಸೀಗೆಹಳ್ಳಿ ಗ್ರಾಮಸ್ಥರು ಕೊರೋನಾ ಓಡಿಸಲು ಬಾಲಕರ ಕೈಯಲ್ಲಿ ಪುಟ್ಟಮಣ್ಣಿನ ಕುಡಿಕೆ ಇಟ್ಟು, ಬೇವಿನ ಸೊಪ್ಪು ತುಂಬಿ ಸಾಮೂಹಿಕ ಪೂಜೆ ನಡೆಸಿದ್ದಾರೆ. ರಾಜ್ಯದ ಇನ್ನೂ ಹಲವು ಕಡೆ ಕೊರೋನಮ್ಮನಿಗೆ ಪೂಜೆ ಆರಂಭವಾಗಿದೆ. ಈ ದೇವಿಯನ್ನು ಪೂಜಿಸಿದರೆ ಕೊರೋನಾ ಸೋಂಕು ತಮ್ಮ ಪ್ರದೇಶಕ್ಕೆ ತಗಲುವುದಿಲ್ಲ ಎಂಬ ನಂಬಿಕೆ ಜನರದು.

Tap to resize

Latest Videos

ಆದರೆ, ಸಾಂಕ್ರಾಮಿಕ ರೋಗಗಳು ವ್ಯಾಪಿಸಿದಾಗ ಆ ರೋಗದ ಹೆಸರಿನಲ್ಲಿ ದೇವತೆಯನ್ನು ಸೃಷ್ಟಿಸಿ ಪೂಜಿಸುವುದು ರಾಜ್ಯದಲ್ಲಿ ಹೊಸತೇನಲ್ಲ. ಹಿಂದೆ 19ನೇ ಶತಮಾನದ ಅಂತ್ಯದಲ್ಲಿ ಪ್ಲೇಗ್‌ ರೋಗ ಮಹಾಮಾರಿಯಾಗಿ ಕಾಡಿದಾಗ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ‘ಪ್ಲೇಗಮ್ಮ’ ಗುಡಿಗಳು ತಲೆಯೆತ್ತಿದ್ದವು. ಭಾರತದಲ್ಲಿ ಸುಮಾರು 1 ಕೋಟಿ ಜನರನ್ನು ಪ್ಲೇಗ್‌ ಬಲಿ ಪಡೆದಿತ್ತು. ಈಗಲೂ ಸಾಂಕ್ರಾಮಿಕ ರೋಗಗಳ ಹೆಸರಿರುವ ದೇವಿಯ ಹಲವು ದೇವಸ್ಥಾನಗಳು ರಾಜ್ಯಾದ್ಯಂತ ಇವೆ. ಪ್ಲೇಗಮ್ಮ ಮಾತ್ರವಲ್ಲದೆ ಸಿಡುಬಮ್ಮ, ಏಡ್ಸಮ್ಮ ಮುಂತಾದ ಹೆಸರಲ್ಲೂ ಗುಡಿ, ದೇಗುಲಗಳು ರಾಜ್ಯದಲ್ಲಿವೆ.

ಬೆಂಗಳೂರಿನ ತ್ಯಾಗರಾಜನಗರ, ಶಾಂತಿನಗರ, ಹಲಸೂರು, ಆನೇಕಲ್‌ ಮುಂತಾದೆಡೆ ಪ್ಲೇಗ್‌ ಮಾರಿಯಮ್ಮ, ಪ್ಲೇಗ್‌ ರಾಜರಾಜೇಶ್ವರಿಯಮ್ಮ ಮುಂತಾದ ಹೆಸರಿನಲ್ಲಿ ಏಳೆಂಟು ದೇವಸ್ಥಾನಗಳಿವೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ದಶಕಗಳ ಹಿಂದೆ ಪ್ಲೇಗ್‌ ಮಹಾಮಾರಿಗೆ ಸುತ್ತಮುತ್ತ ನೂರಾರು ಜನ ಅಸುನೀಗಿದ್ದರು. ಆಗ ಎಲ್ಲರೂ ಸೇರಿ ಗ್ರಾಮದ ಹೊರಗಿದ್ದ ಬೇವಿನ ಮರದ ಬುಡದಲ್ಲಿ ‘ಪ್ಲೇಗಿನಮ್ಮ’ ಮೂರ್ತಿ ಪ್ರತಿಷ್ಠಾಪಿಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟನಗರದ ಹೊರವಲಯದಲ್ಲಿರುವ ವೀರಾಪುರ ಗ್ರಾಮದ ಬಳಿ ಪ್ಲೇಗಮ್ಮನ ದೇವಾಲಯ ನಿರ್ಮಿಸಲಾಗಿದ್ದರೆ, ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲೂ ಪ್ಲೇಗ್‌ ಮಾರಮ್ಮನ ದೇವಾಲಯ ಇದೆ. ಚಿಂತಾಮಣಿ ತಾಲೂಕಿನ ಇರಗಂಪಲ್ಲಿ ಸಮೀಪವೂ ಒಂದು ಪ್ಲೇಗಮ್ಮನ ಗುಡಿ ಇದೆ.

ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರ ಜನತೆಯ ಆಡÜುಭಾಷೆಯಲ್ಲಿ ಪ್ಲೇಗಮ್ಮನನ್ನು ಪಿಳ್ಳೇಕಮ್ಮ ಎಂದು ಕರೆಯುತ್ತಾರೆ. ಇಲ್ಲಿನ ನಾಗರಕೆರೆ ಏರಿ ಪಕ್ಕದಲ್ಲಿ ತೋಟಗಳ ನಡುವೆ ಪಿಳ್ಳೇಕಮ್ಮ ದೇಗುಲವನ್ನು 1964ರಲ್ಲಿ ನಿರ್ಮಿಸಲಾಗಿದೆ.ಇಷ್ಟೇ ಅಲ್ಲದೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದಲ್ಲಿ ಮಾರಮ್ಮ ಮತ್ತು ಅಂತರಗಟ್ಟಮ್ಮ ಎಂಬ ಸೋಂಕು ನಿವಾರಣಾ ದೇವಾಲಯಗಳಿವೆ. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಿಡುಬು ಕಾಣಿಸಿಕೊಂಡಾಗ ಈ ದೇಗುಲದಲ್ಲಿ ಕೂರಿಸಿ ಎಳನೀರು, ಬೇವಿನ ಸೊಪ್ಪು ಮತ್ತಿತರ ವಸ್ತುಗಳೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ.

ಕೊರೋನಾ ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ DCC ಬ್ಯಾಂಕ್‌ 1 ಕೋಟಿ ದೇಣಿಗೆ

ಬೆಂಗಳೂರಿನಲ್ಲಿ ಏಳೆಂಟು ದೇಗುಲ:

ಬೆಂಗಳೂರಿನಲ್ಲಿ 1898ರಲ್ಲಿ ಹಾಗೂ ನಂತರ 1960ರ ದಶಕದಲ್ಲಿ ಕಾಣಿಸಿಕೊಂಡ ಪ್ಲೇಗ್‌ನಿಂದ ಸಾವಿರಾರು ಜನರು ಸಾವನ್ನಪ್ಪಿದ್ದರು. ಆಗ ತ್ಯಾಗರಾಜನಗರ, ಶಾಂತಿನಗರ, ಹಲಸೂರು, ಆನೇಕಲ್‌ ಮುಂತಾದೆಡೆ ಪ್ಲೇಗ್‌ ಮಾರಿಯಮ್ಮ, ಪ್ಲೇಗ್‌ ರಾಜರಾಜೇಶ್ವರಿಯಮ್ಮ ಮುಂತಾದ ಹೆಸರಿನಲ್ಲಿ ಏಳೆಂಟು ದೇವಸ್ಥಾನಗಳು ಸ್ಥಾಪನೆಯಾದವು. ಇಂದಿಗೂ ಈ ದೇವಸ್ಥಾನಗಳಲ್ಲಿ ನಿತ್ಯ ಪೂಜೆ, ಉತ್ಸವ, ಮೆರವಣಿಗೆ, ಜಾತ್ರೆಗಳು ನಡೆಯುತ್ತವೆ.

ಏಡ್ಸಮ್ಮ ದೇವಾಲಯ:

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಬನ್ನೂರು ಬಳಿಯ ಮೆಣಸಿ ಕ್ಯಾತನಹಳ್ಳಿಯಲ್ಲಿ 1998ರಲ್ಲಿ ಏಡ್ಸಮ್ಮ ದೇವಾಲಯ ಕಟ್ಟಲಾಗಿದೆ. ಗ್ರಾಮದಲ್ಲೊಬ್ಬರು ತಮಗೆ ಏಡ್ಸ್‌ ತಗುಲಿರುವ ಶಂಕೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಗ್ರಾಮಸ್ಥರು ಹೆದರಿ ಆ ವ್ಯಕ್ತಿಯ ಅಂತ್ಯಕ್ರಿಯೆಯನ್ನೂ ಮಾಡಲು ಬಿಡಲಿಲ್ಲ. ಅದೇ ವೇಳೆ, ಗ್ರಾಮದಲ್ಲಿ ಮಕ್ಕಳಿಗೆ ದಡಾರ, ಸೀತಾಳ ಬಂದಲ್ಲಿ ಮಾಪಮ್ಮನ ಗುಡಿಗೆ ಎಳನೀರು, ಬೇವಿನ ಸೊಪ್ಪು ಜೊತೆ ಬಂದು ತಂಪು ಪೂಜೆ ಮಾಡುತ್ತಿದ್ದರು. ಅದೇ ಗುಡಿ ಪಕ್ಕದಲ್ಲಿ ಏಡ್ಸಮ್ಮ ಗುಡಿ ಕಟ್ಟಿಸಿದರು. ಈಗಲೂ ಅಲ್ಲಿ ಪೂಜೆ ನಡೆಯುತ್ತದೆ.

ಕ್ವಾರಂಟೈನ್‌ ಹನುಮಂತ!

ಕಲಬುರಗಿಯಲ್ಲಿ ಕೋರಂಟಿ ಹನುಮಂತ ಎಂಬ ದೇವರ ಗುಡಿಯಿದೆ. 1947ರ ಸೆಪ್ಟೆಂಬರ್‌ನಲ್ಲಿ ಕಲಬುರಗಿಗೆ ಕಾಲಿಟ್ಟಪ್ಲೇಗ್‌ 1 ತಿಂಗಳ ಕಾಲ ಕಾಡಿತ್ತಂತೆ. ಆಗ ನಿಜಾಮರು ಪ್ಲೇಗ್‌ ನಿಯಂತ್ರಣಕ್ಕೆ ರೋಗ ಪೀಡಿತರನ್ನು ಊರ ಹೊರಗಡೆ ಇದ್ದ ಮಾರುತಿ ಮಂದಿರದ ಆವರಣದಲ್ಲಿ ಕ್ವಾರಂಟೈನ್‌ ಮಾಡಿದ್ದರು. ಅಂದು ಕ್ವಾರಂಟೈನ್‌ ಎಂಬ ಪದ ಹಳ್ಳಿ ಜನರ ಬಾಯಲ್ಲಿ ಕೋರಂಟಿ ಎಂದಾಗಿ ಈ ದೇವಸ್ಥಾನಕ್ಕೆ ಕೋರಂಟಿ ಮಾರುತಿ ಮಂದಿರ ಎಂಬ ಹೆಸರು ಕಾಯಂ ಆಯಿತು.

ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ PSI..!

ಶಕ್ತಿದೇವತೆ ಮುನಿಸು ಶಮನಕ್ಕೆ ದೇವಸ್ಥಾನ

ಹಿಂದೆಲ್ಲ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಊರಿನ ಶಕ್ತಿದೇವತೆ ಮುನಿಸಿಕೊಂಡಿರುವುದೇ ಕಾರಣ ಎಂಬ ನಂಬಿಕೆ ಜನರಲ್ಲಿತ್ತು. ಆದರೆ, ಹೆಣ್ಣು ದೇವರು ಎಂದರೆ ತಾಯಿ ಇದ್ದಂತೆ. ಬೇಡಿಕೊಂಡರೆ ತಾಯಿ ನಮ್ಮ ಸಂಕಷ್ಟವನ್ನು ದೂರ ಮಾಡುತ್ತಾಳೆ. ಆಕೆಯ ಹೆಸರಿನಲ್ಲಿ ದೇವಸ್ಥಾನ ಕಟ್ಟಿಪೂಜೆ ಸಲ್ಲಿಸಿದರೆ ನಮ್ಮನ್ನು ಕಾಪಾಡುತ್ತಾಳೆ ಎಂಬ ಭಾವನೆಯಿಂದ ಆಕೆಗೆ ದೇವಸ್ಥಾನ ಕಟ್ಟುವ ಸಂಪ್ರದಾಯ ಆರಂಭವಾಯಿತು. ಹಿಂದೆ ಊರಿನ ಒಳಗೆ ಪ್ಲೇಗ್‌ ಬರದಂತೆ ಪ್ಲೇಗಮ್ಮ ಕಾಯುತ್ತಾಳೆ ಎಂಬ ನಂಬಿಕೆಯಿಂದ ಎಲ್ಲ ಪ್ಲೇಗಮ್ಮ ದೇವಸ್ಥಾನಗಳನ್ನು ಊರಿನಿಂದ ಹೊರಗೆ ಸ್ಥಾಪಿಸಲಾಗುತ್ತಿತ್ತು. ಬೆಂಗಳೂರಿನಲ್ಲಿ ಇಂತಹ ಹಲವು ದೇವಸ್ಥಾನಗಳಿವೆ. ಈಗ ನಗರ ಬೆಳೆದ ಮೇಲೆ ಅವೆಲ್ಲವೂ ನಗರದೊಳಗೆ ಸೇರಿಕೊಂಡಿವೆ.

- ಸುರೇಶ್‌ ಮೂನ, ಇತಿಹಾಸ ತಜ್ಞ

click me!