ಜನನ ಪ್ರಮಾಣ ಪತ್ರದಲ್ಲಿ ಲಿಂಗ ಬದಲಾವಣೆಗೆ ಹೈಕೋರ್ಟ್‌ ವಿಶೇಷ ನಿರ್ದೇಶನ

By Kannadaprabha News  |  First Published Dec 30, 2024, 10:22 AM IST

ಗಂಡಾಗಿ ಹುಟ್ಟಿ ಕಾಲಾನಂತರ ಹೆಣ್ಣಾಗಿ ಪರಿವರ್ತನೆಯಾದ ಮಹಿಳೆಯ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವ ಮೂಲಕ ಹೈಕೋರ್ಟ್‌ ವಿಶೇಷ ಆದೇಶ ಹೊರಡಿಸಿದೆ. 


ವೆಂಕಟೇಶ್ ಕಲಿಪಿ

ಬೆಂಗಳೂರು (ಡಿ.30): ಗಂಡಾಗಿ ಹುಟ್ಟಿ ಕಾಲಾನಂತರ ಹೆಣ್ಣಾಗಿ ಪರಿವರ್ತನೆಯಾದ ಮಹಿಳೆಯ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವ ಮೂಲಕ ಹೈಕೋರ್ಟ್‌ ವಿಶೇಷ ಆದೇಶ ಹೊರಡಿಸಿದೆ. ಜನನ ಮತ್ತು ಮರಣ ಪ್ರಮಾಣ ಪತ್ರ ನೋಂದಣಿ ಕಾಯ್ದೆಯಡಿ ಈಗಾಗಲೇ ವಿತರಿಸಿದ ಜನನ ಪ್ರಮಾಣ ಪತ್ರದಲ್ಲಿ ಹೆಸರು ಹಾಗೂ ಲಿಂಗ ಮಾಹಿತಿ ಬದಲಾಯಿಸಲು ಅವಕಾಶವಿಲ್ಲ ಎಂಬ ಸರ್ಕಾರದ ವಾದ ಒಪ್ಪದ ಹೈಕೋರ್ಟ್‌ ಈ ಆದೇಶ ಮಾಡಿದೆ.

Tap to resize

Latest Videos

ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ತನ್ನ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗೆ ಕೋರಿ ತಾನು ಸಲ್ಲಿಸಿದ್ದ ಅರ್ಜಿ ಪರಿಗಣಿಸಲು ನಿರಾಕರಿಸಿದ್ದ ಮಂಗಳೂರು ನಗರ ಜನನ ಮತ್ತು ಮರಣ ಪ್ರಮಾಣ ಪತ್ರ ನೋಂದಣಿ ರಿಜಿಸ್ಟ್ರಾರ್‌ ಅವರ ಕ್ರಮ ಆಕ್ಷೇಪಿಸಿ ಮಹಿಳೆಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸಬ್ಸಿಡಿ ಯೋಜನೆ ಬದಲಿಗೆ ದುಡಿದು ತಿನ್ನುವಂತೆ ಮಾಡಿ: ಹೈಕೋರ್ಟ್

ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ, ಅರ್ಜಿದಾರರ ಅರ್ಜಿ ಪರಿಗಣಿಸಿ ನಾಲ್ಕು ವಾರದಲ್ಲಿ ಅಗತ್ಯ ಬದಲಾವಣೆ ಮಾಡಿ ಜನನ ಪ್ರಮಾಣ ಪತ್ರ ವಿತರಿಸಬೇಕು ಎಂದು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ. ಅಲ್ಲದೆ, ಲಿಂಗತ್ವ ಅಲ್ಪಸಂಖ್ಯಾತರು ನಿಗದಿತ ಶುಲ್ಕ ಪಾವತಿಸಿ, ತಮ್ಮ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಮಾಹಿತಿಯಲ್ಲಿ ಅಗತ್ಯ ಬದಲಾವಣೆ ಮಾಡಲು ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಪರಿಗಣಿಸಿ ಬದಲಾವಣೆಗೆ ಅನುಕೂಲವಾಗುವಂತೆ ಜನನ ಮತ್ತು ಮರಣ ಪ್ರಮಾಣಪತ್ರ ನೋಂದಣಿ ಕಾಯ್ದೆ-1969ರ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಆದೇಶಿಸಿದೆ.

ಪ್ರಕರಣದ ವಿವರ: ಅರ್ಜಿದಾರೆ 1983ರ ಏ.6ರಂದು ಗಂಡಾಗಿ ಜನಿಸಿದ್ದು, ಜನನ ಪ್ರಮಾಣಪತ್ರ ಏ.20ರಂದು ನೋಂದಣಿಯಾಗಿತ್ತು. 2007ರಲ್ಲಿ ಅರ್ಜಿದಾರೆಗೆ ಲಿಂಗ ಬದಲಾವಣೆ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ವೈದ್ಯರ ತಪಾಸಣೆ ವೇಳೆ ಅರ್ಜಿದಾರೆ ಪುರುಷ ದೇಹ ಹೊಂದಿದ್ದರೂ ಹೆಣ್ಣಾಗಿ ಭಾವಿಸುತ್ತಿರುವುದು ದೃಢಪಟ್ಟಿತ್ತು. ನಂತರ ಅಗತ್ಯ ಅನುಮೋದನೆಯೊಂದಿಗೆ ಲಿಂಗ ಬದಲಾವಣೆ ಸರ್ಜರಿಗೆ ಒಳಗಾಗಿದ್ದರು.

ತರುವಾಯ ಅರ್ಜಿದಾರೆ ಮಂಗಳೂರು ನಗರ ಪಾಲಿಕೆ ಜನನ ಮತ್ತು ಮರಣ ಪ್ರಮಾಣ ಪತ್ರ ವಿಭಾಗದ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿ, ತನ್ನ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗವನ್ನು ಸ್ತ್ರೀ ಎಂಬುದಾಗಿ ಬದಲಾಯಿಸಲು ಕೋರಿದ್ದರು. ಆದರೆ, ಜನನ ಮತ್ತು ಮರಣಗಳ ಪ್ರಮಾಣ ಪತ್ರ ಕಾಯ್ದೆ-1969ರ ಸೆಕ್ಷನ್‌ 15ರ ಪ್ರಕಾರ ಈಗಾಗಲೇ ವಿತರಿಸಿರುವ ಜನನ ಪ್ರಮಾಣ ಪತ್ರದಲ್ಲಿ ಬದಲಾವಣೆಗೆ ಅವಕಾಶವಿಲ್ಲ. ತಪ್ಪು ಮಾಹಿತಿ ಉಲ್ಲೇಖಿಸಿದ್ದರೆ ಮಾತ್ರ ಅದನ್ನು ಸರಿಪಡಿಸಬಹುದು ಎಂದು ರಿಜಿಸ್ಟ್ರಾರ್‌ ತಿಳಿಸಿದ್ದರು. ಇದರಿಂದ ಅರ್ಜಿದಾರೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಬ್ಯಾನರ್‌ ಅಳವಡಿಕೆ ಕುರಿತು ಲಘು ಧೋರಣೆ: ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ಚಾಟಿ

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್‌ 2(ಕೆ) ಅಡಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಮಾನ್ಯತೆ ನೀಡಲಾಗಿದೆ. ಕಾಯ್ದೆಯ ಸೆಕ್ಷನ್‌ 4, 5, 6 ಮತ್ತು 7 ಅನ್ವಯ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಪ್ರಮಾಣ ಪತ್ರ ನೀಡಬೇಕಿದೆ. ಕಾಯ್ದೆಯ ನಿಯಮ 2(ಸಿ) ಅಡಿ ವ್ಯಾಖ್ಯಾನಿಸಿರುವಂತೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಜನನ ಪ್ರಮಾಣಪತ್ರ ಅಧಿಕೃತ ದಾಖಲೆಯಾಗಿದೆ. ಅದರಂತೆ ಅಗತ್ಯವಿದ್ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಪರಿಷ್ಕೃತ ಜನನ ಪ್ರಮಾಣಪತ್ರ ನೀಡಬೇಕಾಗುತ್ತದೆ. ಆಗ ಮಾತ್ರವೇ ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣಾ ಕಾಯ್ದೆ ಜಾರಿ ಉದ್ದೇಶ ಈಡೇರುತ್ತದೆ. ಆದರೆ, ಅರ್ಜಿದಾರೆ ಮನವಿ ಒಪ್ಪದೆ ಅಧಿಕಾರಿಗಳು ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣಾ ಹಕ್ಕುಗಳ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

click me!