ಕುರಿ ಮಾಂಸ ಮಾರಾಟ ಮಳಿಗೆಯಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಬೆಂಗಳೂರು (ಮೇ.28): ಕುರಿ ಮಾಂಸ ಮಾರಾಟ ಮಳಿಗೆಯಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಹೈಖೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ-2020ರ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಹೈದರಿ ಅಲಿ ಅಕ ತಾಜು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹೈದರ್ ಅಲಿ ಹೊಸಕೋಟೆಯಲ್ಲಿ ಮಟನ್ (ಕುರಿ/ಮೇಕೆ ಮಾಂಸ) ಮಾರಾಟ ಮಳಿಗೆ ನಡೆಸುತ್ತಿದ್ದಾನೆ. ಆತ ಶೇ.60ರಷ್ಟುಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಆತನಿಂದ ಗೋಮಾಂಸ ಖರೀದಿಸಿದ್ದಾಗಿ ಮೊದಲ ಮತ್ತು ಎರಡನೇ ಆರೋಪಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಅರ್ಜಿದಾರ ಅಲಿಯನ್ನು ಆರೋಪಿಯಾಗಿ ಸೇರಿಸಲಾಗಿದೆ. ಆದರೆ, ಪೊಲೀಸರು ಅರ್ಜಿದಾರನಿಂದ ಗೋಮಾಂಸವನ್ನು ಜಪ್ತಿ ಮಾಡಿಲ್ಲ. ನಿರೀಕ್ಷಣಾ ಜಾಮೀನು ಮಂಜೂರಾತಿಗೆ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೂ ಬದ್ಧವಾಗಿರುತ್ತಾನೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದ್ದರು.
ಈ ವಾದ ಆಕ್ಷೇಪಿಸಿದ ಸರ್ಕಾರಿ ವಕೀಲರು, ಕುರಿ ಮಾಂಸದ ಮಾರಾಟ ಅಂಗಡಿ ನಡೆಸುತ್ತಿದ್ದ ಅರ್ಜಿದಾರರು, ಗೋಮಾಂಸ ಮಾರಾಟ ಮಾಡುತ್ತಿದ್ದ ಎಂಬ ಬಗ್ಗೆ ಆರೋಪವಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕಿದೆ. ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದರು.
ತುಮಕೂರಿನಲ್ಲಿ 70 ವರ್ಷದ ವೃದ್ಧೆಯ ಸಾಮೂಹಿಕ ಅತ್ಯಾಚಾರ,
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆಟೋ ರಿಕ್ಷಾದಲ್ಲಿ ಗೋ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಡೆದು ಪೊಲೀಸರು ಪ್ರಶ್ನಿಸಿದ್ದರು. ಅರ್ಜಿದಾರ ತಮಗೆ ಗೋಮಾಂಸ ಮಾರಾಟ ಮಾಡಿರುವುದಾಗಿ ಆ ಇಬ್ಬರು ಆರೋಪಿಗಳು ತಿಳಿಸಿದ್ದಾರೆ. ಅವರು ಈಗಾಗಲೇ ಬಂಧನಕ್ಕೆ ಒಳಗಾಗಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ಸಹ ಪಡೆದುಕೊಂಡಿದ್ದಾರೆ. ಇದರಿಂದ ಅರ್ಜಿದಾರನಿಗೆ ಜಾಮೀನು ನಿರಾಕರಿಸಲು ಯಾವುದೇ ಸಕಾರಣ ಇಲ್ಲ. ಷರತ್ತುಗಳನ್ನು ವಿಧಿಸಿ ಜಾಮೀನು ನೀಡಬಹುದಾಗಿದೆ. ಅರ್ಜಿದಾರ ಸಹ ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿತು.
Bengaluru: ಒಂಟಿ ಮಹಿಳೆಯ ಕೈ-ಕಾಲು ಕಟ್ಟಿ ಉಸಿರು ಗಟ್ಟಿಸಿ ಹತ್ಯೆ, ಮನೆ ದರೋಡೆ!
ನಂತರ ಅರ್ಜಿದಾರನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಖೋರ್ಟ್ , ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಸಾಕ್ಷ್ಯಧಾರ ತಿರುಚಲು ಯತ್ನಿಸಬಾರದು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿ ಆದೇಶಿಸಿದೆ.