ಎನ್‌ಆರ್‌ಸಿ ಜಾರಿಗೆ ರಾಜ್ಯ ಸರ್ಕಾರ ರೆಡಿ

By Kannadaprabha News  |  First Published Oct 19, 2019, 7:41 AM IST

ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅಭಿಯಾನ (ಎನ್‌ಆರ್‌ಸಿ) ಆರಂಭಿಸಲು ಕರ್ನಾಟ ಸರ್ಕಾರ ತಾಲೀಮು ಶುರುಮಾಡಿದೆ.


ಬೆಂಗಳೂರು [ಅ.19]  : ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅಭಿಯಾನ (ಎನ್‌ಆರ್‌ಸಿ) ಆರಂಭಿಸಲು ಸರ್ಕಾರ ತಾಲೀಮು ಶುರುಮಾಡಿದ್ದು, ಶೀಘ್ರದಲ್ಲೇ ಬೆಂಗಳೂರು ಹೊರವಲಯದ ನೆಲಮಂಗಲದ ಸಮೀಪ ವಿದೇಶೀಯರ ಮೊದಲ ನಿರಾಶ್ರಿತರ ಕೇಂದ್ರಕ್ಕೆ ಚಾಲನೆ ನೀಡಲು ಭರದ ಸಿದ್ಧತೆ ನಡೆಸಿದೆ.

ಅಫ್ರಿಕಾ ಪ್ರಜೆಗಳ ಪುಂಡಾಟಿಕೆ ಘಟನೆಗಳ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ರಿಕಾ ಪ್ರಜೆಗಳನ್ನು ಕೂಡಿಹಾಕಲು ನಿರಾಶ್ರಿತರ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದರು. ಆದರೆ ಕೇಂದ್ರ ಗೃಹ ಇಲಾಖೆಯು ಅದೇ ಕೇಂದ್ರದಲ್ಲಿ ಈಗ ಎನ್‌ಆರ್‌ಸಿ ನಿರಾಶ್ರಿತರಿಗೆ ವಸತಿ ಕಲ್ಪಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

Tap to resize

Latest Videos

ನೆಲಮಂಗಲ ಹತ್ತಿರದ ಸೊಂಡೆಕೊಪ್ಪದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿಗಳ ವಸತಿ ನಿಲಯವನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತನೆಗೊಳಿಸಲಾಗುತ್ತಿದ್ದು, ಅದರ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಈಗಾಗಲೇ ಭದ್ರತೆಗೆ 40 ಜನ ಪೊಲೀಸರನ್ನು ಸಹ ರಾಜ್ಯ ಸರ್ಕಾರ ನೇಮಕಗೊಳಿಸಿದೆ ಎಂದು ಮೂಲಗಳು  ಹೇಳಿವೆ.

ಏಳೆಂಟು ವರ್ಷ ಹಿಂದಿನ ಪ್ರಸ್ತಾವನೆ:

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಾದಕ ವಸ್ತು ಮಾಫಿಯಾ ಹಾಗೂ ವೇಶ್ಯಾವಾಟಿಕೆ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಅಫ್ರಿಕಾ ಪ್ರಜೆಗಳ ಪಾಲ್ಗೊಳ್ಳುವಿಕೆ ಪ್ರಮಾಣ ಏರಿಕೆಯಾಗಿತ್ತು. ಅಲ್ಲದೆ, ಕುಡಿದ ಮತ್ತಿನಲ್ಲಿ ಸ್ಥಳೀಯರು ಹಾಗೂ ಪೊಲೀಸರ ಮೇಲೆ ವಿದೇಶೀಯರು ಪುಂಡಾಟಿಕೆ ನಡೆಸಿದ್ದ ಘಟನಾವಳಿಗಳು ವರದಿಯಾಗಿದ್ದವು. ಈ ಅಪರಾಧ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ರಿಕಾ ಪ್ರಜೆಗಳನ್ನು ಪತ್ತೆಹಚ್ಚಿ ಕೂಡಿಹಾಕಲು ಪ್ರತ್ಯೇಕ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. 2010ರಲ್ಲಿ ಈಶಾನ್ಯ ಭಾರತೀಯರ ಮೇಲಿನ ಅಕ್ರಮ ಬಾಂಗ್ಲಾ ವಲಸಿಗರ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಸಹ ನಿರಾಶ್ರಿತ ಕೇಂದ್ರ ಪ್ರಸ್ತಾಪವಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ವಾಸ್ತವ್ಯ ಹೂಡಿದ್ದ ವಿದೇಶೀಯರು ದಸ್ತಗಿರಿಯಾದರೆ ಪೊಲೀಸರು ಅವರನ್ನು ಜೈಲಿನಲ್ಲಿ ಬಂಧಿಸಲಿಡಲು ರಾಜತಾಂತ್ರಿಕ ಸಮಸ್ಯೆ ಎದುರಾಗುತ್ತಿತ್ತು. ಕೇವಲ ವೀಸಾ ನಿಯಮಾವಳಿ ಉಲ್ಲಂಘನೆಗೆ ಸೆರೆಮನೆಗೆ ತಳ್ಳಿದರೆ ಸಂಬಂಧಿಸಿದ ದೇಶದ ರಾಯಭಾರಿ ಕಚೇರಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೂ ಸಹ ನಿರಾಶ್ರಿತ ಕೇಂದ್ರ ಸ್ಥಾಪನೆಗೆ ಪ್ರಮುಖ ಕಾರಣವಾಗಿತ್ತು. ಹೀಗೆ ಏಳೆಂಟು ವರ್ಷಗಳ ನಂತರ ನಿರಾಶ್ರಿತರ ಕೇಂದ್ರ ಪ್ರಸ್ತಾಪಕ್ಕೆ ಅಸ್ತು ಎಂದ ಸರ್ಕಾರವು, ನೆಲಮಂಗಲದ ಸಮೀಪದ ಸರ್ಕಾರಿ ವಸತಿ ನಿಲಯವನ್ನು ನಿರಾಶ್ರಿತರ ಕೇಂದ್ರವಾಗಿ ಪರಿವರ್ತಿಸಲು ತೀರ್ಮಾನಿಸಿತು. ಈಗ ಅಲ್ಲೇ ಕೇಂದ್ರ ಸರ್ಕಾರವು ಎನ್‌ಆರ್‌ಸಿ ನಿರಾಶ್ರಿತರಿಗೆ ವಸತಿ ಕಲ್ಪಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲಾಖೆ ನಡುವೆ ನಿರ್ವಹಣೆ ಜಟಾಪಟಿ?

ವಿದೇಶೀಯರ ನಿರಾಶ್ರಿತರ ಕೇಂದ್ರದ ನಿರ್ವಹಣೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳ ಮಧ್ಯೆ ಜಟಪಾಟಿ ನಡೆದಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ನಿರ್ಮಾಣವಾಗಿರುವ ನಿರಾಶ್ರಿತರ ಕೇಂದ್ರ ಮೂಲತಃ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರಲಿದೆ. ಆದರೆ ವಿದೇಶೀಯರ ವಿಚಾರದಲ್ಲಿ ಭದ್ರತೆಗೆ ಸಂಬಂಧಿಸಿದ ಕೆಲಸಗಳನ್ನು ಗೃಹ ಇಲಾಖೆ ನೋಡಿಕೊಳ್ಳುತ್ತದೆ. ಆದರೆ ಈಗ ಎನ್‌ಆರ್‌ಸಿ ಪ್ರಸ್ತಾಪವಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳ ಪ್ರವೇಶವಾಗಿದೆ. ಹೀಗಾಗಿ ಕೇಂದ್ರವನ್ನು ಯಾರು ನಿರ್ವಹಿಸಬೇಕು ಎಂಬುದು ಖಚಿತವಾಗಿಲ್ಲ.

ರಾಜ್ಯದಲ್ಲಿ 186 ರಾಷ್ಟ್ರಗಳ 31,000 ಪ್ರಜೆಗಳು!

ರಾಜ್ಯದಲ್ಲಿ 186 ದೇಶಗಳ ಸುಮಾರು 31 ಸಾವಿರ ಪ್ರಜೆಗಳು ನೆಲೆಸಿದ್ದಾರೆ ಎಂದು ವಿದೇಶೀಯರ ಪ್ರಾದೇಶಿಕ ನೊಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಅಧಿಕಾರಿಗಳು ಹೇಳುತ್ತಾರೆ.

ಈ ವಿದೇಶಿ ನಾಗರಿಕರ ಪೈಕಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಸುತ್ತಮುತ್ತ ಸುಮಾರು 22 ಸಾವಿರ ಜನರು ನೆಲೆಸಿದ್ದಾರೆ. ಇದರಲ್ಲಿ ವೀಸಾ ಅವಧಿ ಮುಗಿದವರು ಸುಮಾರು ಒಂದು ಸಾವಿರ ಮಂದಿ ಇದ್ದಾರೆ. ಆದರೆ ವಿದೇಶೀಯರ ಪೂರ್ವಾಪರ ಪರಿಶೀಲಿಸಿದರೆ ಅಕ್ರಮವಾಗಿ ನೆಲೆಸಿರುವ ಸಂಖ್ಯೆಯ ನಿಖರ ಮಾಹಿತಿ ಸಿಗಲಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ ರಾಜ್ಯದಲ್ಲಿ 32 ಕಡೆ ಬಾಂಗ್ಲಾ ವಲಸಿಗರ ಕ್ಯಾಂಪ್‌ಗಳಿವೆ. ಇಲ್ಲಿ ಬಹುತೇಕರು ಸ್ಥಳೀಯ ಪ್ರಜೆಗಳೆಂದು ಮತದಾರರ ಪಟ್ಟಿಗೆ ಸೇರಿದ್ದಾರೆ. ಅಲ್ಲದೆ ಪಡಿತರ ಹಾಗೂ ಆಧಾರ್‌ ಕಾರ್ಡ್‌ ಸಹ ಹೊಂದಿದ್ದಾರೆ. ಈ ಬಗ್ಗೆ ಸಹ ತನಿಖೆಗಳು ನಡೆದರೆ ವಲಸಿಗರ ಬಣ್ಣ ಬಯಲಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಏನಿದೆ ಅದರಲ್ಲಿ?

ಆರು ಕೊಠಡಿಗಳು, ಒಂದು ಅಡುಗೆ ಮನೆ, ಉಗ್ರಾಣ ಹಾಗೂ ಶೌಚಾಲಯವಿದೆ. ಇದು ನಿರ್ಬಂಧಿತ ಪ್ರದೇಶವಾಗಿದ್ದು, ಸುತ್ತಲು ನಾಲ್ಕು ಸುತ್ತು ತಂತಿ ಬೇಲಿ ಹಾಕಲಾಗಿದೆ. ಅಲ್ಲದೆ, 10 ಅಡಿ ಎತ್ತರದ ಗೋಡೆಗಳ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಎರಡು ಕಡೆ ವೀಕ್ಷಣಾ ಗೋಪುರ ಕಟ್ಟಲಾಗಿದ್ದು, ದಿನದ 24 ತಾಸು ಸಹ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಡಲಿದ್ದಾರೆ.

ಲ್ಲಿದೆ ಕೇಂದ್ರ?

1992ರಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆಯು ನೆಲಮಂಗಲ ಸಮೀಪದ ಸೊಂಡೆಕೊಪ್ಪದಲ್ಲಿ ಎಸ್‌ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪಿಸಿತ್ತು. ವಿದ್ಯಾರ್ಥಿಗಳು ಕಡಿಮೆ ಆದ್ದರಿಂದ 2008ರಲ್ಲಿ ಇದನ್ನು ಮುಚ್ಚಲಾಯಿತು. ಅದನ್ನು ನಿರಾಶ್ರಿತರ ಕೇಂದ್ರವಾಗಿ ಬದಲಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಸಮಾಜ ಕಲ್ಯಾಣ ಇಲಾಖೆ ಒಪ್ಪಿಗೆ ಪಡೆದ ಗೃಹ ಇಲಾಖೆ, ಅದರ ನವೀಕರಣಕ್ಕೆ ಚಾಲನೆ ನೀಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!