3ನೇ ಅಲೆ ತಡೆಗೆ ಈಗಲೇ ಪ್ಲಾನ್!| ಅಲೆ ನಿಗ್ರಹಕ್ಕೆ ತಜ್ಞರ ಸಮಿತಿ: ಬಿಎಸ್‌ವೈ ನೇತೃತ್ವದ ಸಭೆ ನಿರ್ಧಾರ| ಸಿಬ್ಬಂದಿ ಕೊರತೆ ನೀಗಿಸಲು ವೈದ್ಯ ವಿದ್ಯಾರ್ಥಿಗಳ ಬಳಕೆಗೆ ಚಿಂತನೆ
ಬೆಂಗಳೂರು(ಮೇ.02): ಕೊರೋನಾ ಎರಡನೇ ಅಲೆಯ ಭೀಕರತೆ ಅನುಭವಿಸುತ್ತಿರುವ ಈ ಹಂತದಲ್ಲೇ ರಾಜ್ಯದಲ್ಲಿ ಮೂರನೇ ಅಲೆಯ ಹಾವಳಿ ತಪ್ಪಿಸಲು ಸರ್ಕಾರ ಕಾರ್ಯತಂತ್ರ ಆರಂಭಿಸಿದೆ. ಮುಂದಿನ ಅಲೆಯಲ್ಲಿ ಯಾವುದೇ ಲೋಪದೋಷವಾಗದೆ ಅದನ್ನು ಸಮರ್ಥವಾಗಿ ನಿಭಾಯಿಸಲು ತಜ್ಞರ ಸಮಿತಿಯೊಂದನ್ನು ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಮಾಲೋಚನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
undefined
ರಾಜ್ಯ ಎರಡನೇ ಅಲೆಯಲ್ಲಿ ನಲುಗಿರುವ ಈ ಹಂತದಲ್ಲೇ ಮುಂದಿನ ಅಕ್ಟೋಬರ್ ವೇಳೆಗೆ ಮೂರನೇ ಅಲೆಯೇಳುವ ಸಾಧ್ಯತೆ ಬಗ್ಗೆ ತಜ್ಞರು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ತಜ್ಞರ ಸಮಿತಿ ರಚಿಸಲು ಸರ್ಕಾರ ತೀರ್ಮಾನಿಸಿತು.
ಮೂರನೇ ಅಲೆ ವೇಳೆಗೆ ವೈದ್ಯಕೀಯ ಸಿಬ್ಬಂದಿಯ ಕೊರತೆಯಾಗದಂತೆ ತಡೆಯಲು ವಿದೇಶದಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿ ಅವರನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.
ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಂಡರೆ ಅವರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ನರ್ಸಿಂಗ್, ಫಾರ್ಮಸಿ, ಪಿಜಿಯೋಥೆರಪಿ, ಆಯುಷ್ ವೈದ್ಯ, ದಂತ ವೈದ್ಯಕೀಯ ಕೋರ್ಸ್‌ಗಳ ಮತ್ತು ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಬೇಕು. ಇದೇ ವೇಳೆ ಕೋವಿಡ್ ಲಸಿಕೆಯ ವೇಗವನ್ನು ಮತ್ತಷ್ಟುಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಅಲ್ಲದೆ, ಕೋವಿಡ್ ಚಿಕಿತ್ಸೆ ನೀಡುವಲ್ಲಿ ತೊಡಗಿರುವ ವೈದ್ಯರಿಗೆ ಈಗ ನೀಡುತ್ತಿರುವ ಪ್ರೋತ್ಸಾಹಧನ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಯಿತು. ಕೋವಿಡ್ ಕರ್ತವ್ಯದಲ್ಲಿ ನಿರತರಾಗಿರುವ ವೈದ್ಯರು/ವೈದ್ಯಕೀಯ ಸಿಬ್ಬಂದಿಗಳು ಸೋಂಕಿತರಾದರೆ ಅವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು.
ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸೂಕ್ತ ಆಡಿಟ್ ವ್ಯವಸ್ಥೆ ರೂಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಜತೆಗೆ, ವೈದ್ಯಕೀಯ ಕಾಲೇಜಿನ ವಸತಿ ನಿಲಯಗಳ ಸಾಮಾನ್ಯ ಬೆಡ್‌ಗಳನ್ನು ಆಕ್ಸಿಜನೇಟೆಡ್ ಬೆಡ್‌ಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಅಳವಡಿಸಲು ಸರ್ಕಾರದಿಂದ ಧನಸಹಾಯ ನೀಡುವುದು ಮತ್ತು ಕಡಿಮೆ ಕಾರ್ಯಭಾರವಿರುವ ವೈದ್ಯಕೀಯ ಸಿಬ್ಬಂದಿಯನ್ನು ಗುರುತಿಸಿ ಅವರನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಕಾನ್ಸನ್ಟೆ್ರೕಟರ್‌ಗಳನ್ನು ಬಳಸಿಕೊಂಡು ಹೋಟೆಲ್‌ಗಳನ್ನು ಆಕ್ಸಿಜನೇಟೆಡ್ ಬೆಡ್ ಮಾದರಿಯ ಸ್ಟೆಪ್‌ಡೌನ್ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು. ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳನ್ನು ಐಸಿಯು ಹಾಸಿಗೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿಲ್ಲದ ರೋಗ ಲಕ್ಷಣ ರಹಿತ ಸೋಂಕಿತರು ಕೂಡ ದಾಖಲಾಗುತ್ತಿದ್ದಾರೆ. ಆದ್ದರಿಂದ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಉಳಿದ ಲಕ್ಷಣರಹಿತ ಸೋಂಕಿತರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿ ಚಿಕಿತ್ಸೆ ಮುಂದುವರೆಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿಮೆಡಿಸಿನ್ ಸೌಲಭ್ಯವನ್ನು ಬಲಪಡಿಸಬೇಕು ಎಂದು ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona