ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಕುತೂಹಲ ಮೂಡಿದೆ. ದೂರುದಾರರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು (ಆ.17): ಮೈಸೂರಿನ ಮುಡಾದಿಂದ ಅಕ್ರಮವಾಗಿ 14 ಸೈಟ್ ಪಡೆದುಕೊಂಡ ಆರೋಪದ ಮೇಲೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಟಿಜೆ ಅಬ್ರಾಹಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಕುಮಾರ್ ಎಂಬ ಮೂವರು ನೀಡಿದ್ದರು. ದೂರಿನ ಹಿನ್ನೆಲೆ ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ.
ಇದೆಲ್ಲದರ ನಡುವೆ ಮುಡಾ ಹಗರಣದಲ್ಲಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ನಂತರ ಮುಂದೇನು? ಎಂಬ ಪ್ರಶ್ನೆ ಕೂಡ ಎದ್ದಿದೆ. ಈ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಸಚಿವರು ಕಾನೂನು ಸಲಹೆಗಾರರು ದೌಡಾಯಿಸುತ್ತಿದ್ದಾರೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್: ತುರ್ತು ಸಚಿವ ಸಂಪುಟ ಸಭೆ ರದ್ದು, ನಿವಾಸಕ್ಕೆ ಸಚಿವರ ದೌಡು
ದೂರುದಾರರು ಪೂರ್ವಾನುಮತಿ ದಾಖಲೆಯನ್ನು ಪಡೆದುಕೊಳ್ಳಲಿದ್ದಾರೆ. ನಂತರ ಕೋರ್ಟ್ ಗೆ ಪೂರ್ವಾನುಮತಿ ದಾಖಲೆ ಸಲ್ಲಿಸಲಿದ್ದಾರೆ. ಪೂರ್ವಾನುಮತಿ ಕೋರ್ಟ್ ಸಲ್ಲಿಕೆಯಾದಲ್ಲಿ ಸಿಎಂ ವಿರುದ್ಧ ತನಿಖೆಗೆ ಆದೇಶ ಮಾಡುವ ಸಾಧ್ಯತೆ ಇದೆ.
ಸ್ನೇಹಮಯಿ ಕೃಷ್ಣ ಅರ್ಜಿಯ ಆದೇಶವನ್ನು ಆ.20ಕ್ಕೆ ಕೋರ್ಟ್ ಕಾಯ್ದಿರಿಸಿದೆ. ಸೋಮವಾರವೇ ಪೂರ್ವಾನುಮತಿ ಕೋರ್ಟ್ ಗೆ ಸಲ್ಲಿಸಿದರೆ ಮಂಗಳವಾರ ಆದೇಶ ಹೊರಬೀಳಲಿದೆ. ಟಿ.ಜೆ.ಅಬ್ರಹಾಂ ಅರ್ಜಿ ವಿಚಾರಣೆ ಆ.21 ಕ್ಕೆ ನಡೆಯಲಿದೆ. ಅರ್ಜಿದಾರರ ವಕೀಲರು ದೂರಿನ ಅಂಶಗಳನ್ನು ಕೋರ್ಟ್ ಮುಂದೆ ವಾದಿಸಿದ್ದರು. ಪ್ರಾಸಿಕ್ಯೂಷನ್ ಇಲ್ಲದೇ ಆದೇಶದ ಜಿಗ್ನಾಸೆ ಕೋರ್ಟ್ ಮುಂದಿತ್ತು. ಪೂರ್ವಾನುಮತಿ ಸಿಕ್ಕಲ್ಲಿ ತನಿಖೆಗೆ ಆದೇಶ ಸಾಧ್ಯತೆ ಹೆಚ್ಚು ಇರುವುದರಿಂದ ಒಂದು ವೇಳೆ ತನಿಖೆಗೆ ಆದೇಶ ಸಿಕ್ಕಲ್ಲಿ ಸಿದ್ದರಾಮಯ್ಯ ವಿರುದ್ದ ತಕ್ಷಣ ಎಫ್ಐಆರ್ ದಾಖಲಾಗಲಿದೆ.
Muda Scam: ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ, ರಾಜ್ಯಪಾಲರು ಕೇಂದ್ರದ ಕೈಗೊಂಬೆ: ಸಿಎಂ ಪರ ಎಂಬಿ ಪಾಟೀಲ್ ಬ್ಯಾಟಿಂಗ್!
ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಬಹುದು. ಹೀಗಾಗಿ ಮುಖ್ಯಮಂತ್ರಿಗಳು ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದನ್ನು ಪ್ರಶ್ನಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಸಿಎಂ ಪರ ವಕೀಲರು ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಕೆಯ ಬಳಿಕ ಹೈಕೋರ್ಟ್ ಮೇಟ್ಟಿಲೇರಲು ಸಿದ್ದತೆ ಮಾಡಿಕೊಂಡಿದ್ದಾರೆ. ಸೋಮವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಆದರೆ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಅರ್ಜಿ ಸಾಧ್ಯತೆ ಹಿನ್ನೆಲೆ ದೂರುದಾರ ಪ್ರದೀಪ್ ಕುಮಾರ್ ಅದಕ್ಕೂ ಮುನ್ನವೇ ಕೇವಿಯಟ್ ಸಲ್ಲಿಸಿದ್ದಾರೆ. ಅಂದರೆ ನಮ್ಮ ವಾದವನ್ನು ಕೇಳದೆ ಸಿದ್ದರಾಮಯ್ಯ ಅವರು ಯಾವುದೇ ಅರ್ಜಿ ಸಲ್ಲಿಸುವಂತಿಲ್ಲ ಎಂಬುದು ಈ ಕೇವಿಯಟ್ ಅರ್ಜಿಯ ಸಾರ. ಪ್ರದೀಪ್ ಕುಮಾರ್ ಎಸ್.ಪಿ ಜೆಡಿಎಸ್ ರಾಜ್ಯ ವಕ್ತಾರ ಹಾಗೂ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಇನ್ನು ರಾಜ್ಯಪಾಲರ ಪ್ರಾಸಿಕ್ಯೂಶನ್ ಗೆ ಅನುಮತಿ ಆದೇಶದಲ್ಲಿ ಹಲವು ಅಂಶ ಉಲ್ಲೇಖ ಮಾಡಲಾಗಿದೆ. ಸರ್ಕಾರ ಮುಡಾ ಅಕ್ರಮದ ವಾಸ್ತವಾಂಶಗಳನ್ನು ಪರಿಗಣಿಸಿದೆ. ಹಾಗಾಗಿ ಸರ್ಕಾರವು 'ಕಮಿಷನ್ ಆಫ್ ಇನ್‌ಕ್ವೈರಿ ಆಕ್ಟ್ 1952' ಅಡಿಯಲ್ಲಿ ಉನ್ನತ ಮಟ್ಟದ ಏಕಸದಸ್ಯ ವಿಚಾರಣಾ ಸಮಿತಿಯನ್ನು ನೇಮಿಸಿತ್ತು. ಉನ್ನತ ಮಟ್ಟದ ಏಕಸದಸ್ಯ ತನಿಖಾ ಸಮಿತಿಯ ಉಲ್ಲೇಖದ ನಿಯಮಗಳ ಪ್ರಕಾರ, ಅಕ್ರಮ ಹಂಚಿಕೆ, ಪರ್ಯಾಯ ನಿವೇಶನಗಳು, ಅಕ್ರಮ ಭೂ ಮಂಜೂರಾತಿ ಮತ್ತು ಜಮೀನು ಹಂಚಿಕೆಯಲ್ಲಿ ಅಕ್ರಮ ಆರೋಪಗಳು ಇವೆ. ಏಕಸದಸ್ಯ ಆಯೋಗದ ವ್ಯಾಪ್ತಿಯ ನಿಯಮಾವಳಿಗಳನ್ನ ನೋಡಿದ್ರೆ ಮೇಲ್ನೋಟಕ್ಕೆ ಆರೋಪ ಕಂಡುಬಂದಿದೆ ಎಂದಿರುವ ರಾಜ್ಯಪಾಲರು ಆಗಸ್ಟ್ 16ರಂದೇ ಸಹಿ ಹಾಕಿರುವ ಪ್ರತಿ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಪ್ರತಿ ಲಭ್ಯವಾಗಿದೆ.