ವಿರೋಧದ ನಡುವೆಯೂ ಎಪಿಎಂಸಿ ಸುಗ್ರೀವಾಜ್ಞೆಗೆ ಸಂಪುಟ ಅಸ್ತು?

By Kannadaprabha News  |  First Published May 14, 2020, 7:27 AM IST

ರಾಜ್ಯಪಾಲರ ಸೂಚನೆಯಂತೆ ಅನುಮೋದನೆ ಸಾಧ್ಯತೆ| ಸುಗ್ರೀವಾಜ್ಞೆಗೆ ರೈತರು, ವಿಪಕ್ಷಗಳಿಂದ ತೀವ್ರ ವಿರೋಧ| ಅನುಮೋದನೆ ಪಡೆದು ಮತ್ತೆ ಗವರ್ನರ್‌ಗೆ ರವಾನೆ| ತಿದ್ದುಪಡಿ ಆದರೆ ರೈತರಿಂದ ಕಂಪನಿಗಳು ನೇರವಾಗಿ ಉತ್ಪನ್ನ ಖರೀದಿಸಬಹುದು


ಬೆಂಗಳೂರು(ಮೇ.14): ರೈತ ಸಂಘಟನೆಗಳು ಹಾಗೂ ವಿಪಕ್ಷಗಳ ವಿರೋಧದ ನಡುವೆಯೂ ಎಪಿಎಂಸಿ ಸುಗ್ರೀವಾಜ್ಞೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯಪಾಲರ ಸೂಚನೆಯಂತೆಯೇ ಗುರುವಾರ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಮತ್ತೆ ರಾಜ್ಯಪಾಲರಿಗೆ ರವಾನಿಸಲು ಸಿದ್ಧತೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತೀವ್ರ ವಿರೋಧ ವ್ಯಕ್ತವಾಗಿದ್ದರೂ ರಾಜ್ಯ ಸರ್ಕಾರ ಈ ಗುರುವಾರ ಸಚಿವ ಸಂಪುಟದ ಅಜೆಂಡಾದಲ್ಲಿ ಈ ವಿಚಾರವನ್ನು ತರಲಾಗಿದೆ. ಈ ಬಗೆಗಿನ ಸುಗ್ರೀವಾಜ್ಞೆ ಕಡತವನ್ನು ಮಂಗಳವಾರವಷ್ಟೇ ರಾಜ್ಯಪಾಲರು ಸರ್ಕಾರಕ್ಕೆ ಹಿಂತಿರುಗಿಸಿ ಸಂಪುಟ ಸಭೆಯಲ್ಲಿ ಚರ್ಚಿಸುವಂತೆ ಸೂಚಿಸಿದ್ದರು. ಹೀಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

Tap to resize

Latest Videos

ಸಾವಿರಾರು ಮಂದಿ ಬೀದಿಗೆ ಬೀಳುವ ಆತಂಕ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ!

ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿನ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ರೈತರ ಬೆಳೆ ಹಾಗೂ ಉತ್ಪನ್ನಗಳನ್ನು ಯಾರು ಬೇಕಾದರೂ ನೇರವಾಗಿ ಖರೀದಿ ಮಾಡಬಹುದು ಎಂಬುದು ಸೇರಿದಂತೆ ಹಲವು ಕಾನೂನು ಬದಲಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ರೈತ ಸಂಘಗಳು ಹಾಗೂ ವಿರೋಧಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಎಪಿಎಂಸಿ ಮಾರುಕಟ್ಟೆವ್ಯವಸ್ಥೆಯನ್ನು ಬಹುರಾಷ್ಟ್ರೀಯ (ಎಂಎನ್‌ಸಿ) ಕಂಪನಿಗಳ ಹಿತಕ್ಕಾಗಿ ಬಲಿ ಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮೇ 5 ರಂದು ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯಿದೆ ತಿದ್ದುಪಡಿ ಕುರಿತು ಮಾದರಿ ಪತ್ರ ಕಳುಹಿಸುತ್ತೇವೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದರಂತೆ ಇತ್ತೀಚೆಗೆ ಕೇಂದ್ರವು ಕಳುಹಿಸಿದ್ದ ಮಾದರಿ ಪತ್ರದ ಅನ್ವಯ ತಿದ್ದುಪಡಿ ನಿಯಮಾವಳಿ ರೂಪಿಸಿ ತಿದ್ದುಪಡಿಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಒಂದು ವೇಳೆ ಸುಗ್ರೀವಾಜ್ಞೆ ಜಾರಿಗೆ ಬಂದರೆ ರಾಜ್ಯ ರೈತರಿಗೆ ತೀವ್ರ ಅನ್ಯಾಯ ಉಂಟಾಗಲಿದ್ದು, ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯವೂ ಖೋತಾ ಆಗಲಿದೆ. ರೈತರ ಉತ್ಪನ್ನಗಳನ್ನು ಸೂಪರ್‌ಮಾರ್ಕೆಟ್‌ಗಳು ನೇರವಾಗಿ ಖರೀದಿಸುವ ಮೂಲಕ ಸಣ್ಣ ವ್ಯಾಪಾರಿಗಳು ನಷ್ಟಹೊಂದುತ್ತಾರೆ. ಅಲ್ಲದೆ, ಎಪಿಎಂಸಿ ಮಾರುಕಟ್ಟೆವ್ಯವಸ್ಥೆ ಹಾಳಾಗಲಿದೆ. ಇದರಿಂದ ಖಾಸಗಿ ಮಾರುಕಟ್ಟೆಗಳ ನಿರ್ಮಾಣಕ್ಕೂ ಅವಕಾಶವಾಗಲಿದೆ ಎಂಬ ಆರೋಪ ಕೇಳಿ ಬಂದಿದೆ.

ಸಾವಿರಾರು ಮಂದಿ ಬೀದಿಗೆ ಬೀಳುವ ಆತಂಕ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ!

ಏನಿದು ತಿದ್ದುಪಡಿ?

ರಾಜ್ಯದಲ್ಲಿ ಪ್ರಬಲವಾಗಿದ್ದ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿಯವರು ನೇರವಾಗಿ ರೈತರಿಂದ ಬೆಳೆ ಖರೀದಿಗೆ ಅವಕಾಶ ಮಾಡಿಕೊಡಲಿದೆ. ವರ್ತಕರು ನೇರವಾಗಿ ಹೊಲಕ್ಕೆ ಬಂದು ಬೆಳೆ ಖರೀದಿಸಬಹುದು. ಇದಕ್ಕಾಗಿ ರಾಜ್ಯದ ಎಪಿಎಂಸಿ ಕಾಯಿದೆಯ ವಿವಿಧ ಕಲಂಗಳಿಗೆ ತಿದ್ದುಪಡಿ ಸೂಚಿಸಲಾಗಿದೆ. ರಾಜ್ಯದಲ್ಲಿ 177 ಎಪಿಎಂಸಿ ಮತ್ತು ಉಪ ಸಂಸ್ಥೆಗಳಿವೆ. ರೈತರು ಮತ್ತು ವರ್ತಕರ ನಡುವಿನ ಕೊಂಡಿಗೆ ಎಪಿಎಂಸಿ ಸಾಂಸ್ಥಿಕ ವ್ಯವಸ್ಥೆಯಾಗಿದೆ. ಇಲ್ಲಿಯೂ ತೂಕದಲ್ಲಿ ಮೋಸವಾಗುತ್ತದೆ. ರೈತರ ಶೋಷಣೆ ನಡೆಯುತ್ತದೆ ಎಂಬ ದೂರಿದೆ. ಇದನ್ನು ಸುಧಾರಿಸುವುದು ಬಿಟ್ಟು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂಬುದು ಆರೋಪ.

ಕಾಯ್ದೆ ತಿದ್ದುಪಡಿ ಪರಿಣಾಮವೇನು?

- ಸಂಕಷ್ಟದ ಸಮಯದಲ್ಲಿ ಎಪಿಎಂಸಿ ಮೂಲಕ ಸಿಗುತ್ತಿದ್ದ ಬೆಂಬಲ ಬೆಲೆ ಇಲ್ಲ

- ಮಧ್ಯವರ್ತಿ/ಖಾಸಗಿ ಕಂಪೆನಿಗಳು ನಿಗದಿ ಮಾಡಿದ್ದೇ ದರವಾಗಬಹುದು

- ಯಾವುದೇ ಖರೀದಿದಾರ ರಾಜ್ಯದಲ್ಲಿ ಖಾಸಗಿ ಮಾರುಕಟೆ ನಿರ್ಮಿಸಿಕೊಳ್ಳಬಹುದು.

- ಕ್ರಮೇಣ ಎಪಿಎಂಸಿಗಳಿಗೆ ಬಾಗಿಲು ಹಾಕುವ ಸ್ಥಿತಿಗೆ ಬರಬಹುದು

- ಸರ್ಕಾರಕ್ಕೂ ಆದಾಯ ಖೋತಾ

- ಮಧ್ಯವರ್ತಿಗಳ ಮೂಲಕ ಕಾರ್ಪೊರೇಟ್‌ ಕಂಪೆನಿಗಳು ಹಳ್ಳಿಗಳನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳುವ ಆತಂಕ

- ವರ್ತಕರಿಂದ ಮೋಸವಾದರೆ ದೂರು ದಾಖಲಿಸಲಾಗದ ಸ್ಥಿತಿ ನಿರ್ಮಾಣವಾಗಬಹುದು

ಎಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ತಿರಸ್ಕಾರ!

ಕಾಯ್ದೆ ಬಗ್ಗೆ ಸರ್ಕಾರದ ವಾದವೇನು?

- ಎಪಿಎಂಸಿ ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ರೈತರಿಗೆ ಉಂಟಾಗುತ್ತಿದ್ದ ನಷ್ಟತಡೆಯಬಹುದು

- ಮುಕ್ತ ಮಾರುಕಟ್ಟೆಯಲ್ಲಿ ಪೈಪೋಟಿ ಮೇಲೆ ಉತ್ತಮ ದರ ಸಿಗುವ ಸಾಧ್ಯತೆ

- ಕೃಷಿ ಉತ್ಪನ್ನ ಮಾರಲು ರೈತರಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ

- ಈಗಿರುವ ಎಪಿಎಂಸಿ ವ್ಯವಸ್ಥೆಗಿಂತ ಹೆಚ್ಚು ಶಿಸ್ತು ಬದ್ಧವಾಗಲಿವೆ

- ಖಾಸಗಿ ಕಂಪನಿಗಳ ನಡುವೆ ಪೈಪೋಟಿ ಕಾರಣ ರೈತರ ಬೆಳೆಗೆ ಹೆಚ್ಚಿನ ಬೆಲೆ

- ಖಾಸಗಿ ಕಂಪನಿಗೆಳಿಂದ ಉತ್ತಮ ಖರೀದಿ ಜಾಲ

- ಹಳ್ಳಿಗಳ ರೈತರ ಉತ್ಪನ್ನಗಳೂ ರಫ್ತಾಗಲು ಅನುಕೂಲ

click me!