2020- 21ನೇ ಸಾಲಿನ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಸಜ್ಜಾಗಿದ್ದಾರೆ. ರಾಜ್ಯದ ಬೊಕ್ಕಸ ಸ್ಥಿತಿ ಸುಸ್ಥತಿಯಲ್ಲಿ ಇಲ್ಲದ ಸಂದರ್ಭದಲ್ಲಿ ಬಜೆಟ್ ಮಂಡನೆ ಮಾಡುತ್ತಿರುವುದು ಸಿಎಂಗೆ ದೊಡ್ಡ ಸವಾಲಾಗಿದೆ. ಏನಿದು ಸವಾಲು? ಇದನ್ನು ಎದುರಿಸಲು ಅವರು ಸಿದ್ಧತೆ ಮಾಡಿಕೊಂಡಿರುವುದು ಹೇಗ..? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಗುರುವಾರ ಸಿಗಲಿದೆ.
ಬೆಂಗಳೂರು, (ಮಾ.04): ಸಿಎಂ ಯಡಿಯೂರಪ್ಪ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಈ ಬಾರಿಯ ಬಜೆಟ್ ಮಂಡನೆ ಮಾಡಲಿದ್ದು, ಹತ್ತು ಹಲವು ನಿರೀಕ್ಷೆಗಳು ಗರಿಗೆದರಿವೆ.
ನೆರೆ, ಬರದಿಂದ 30 ಸಾವಿರ ಕೋಟಿ ನಷ್ಟ. ಕೇಂದ್ರದಿಂದ ಬರಬೇಕಿರುವ GST ಬಾಕಿ ಇರುವ 6500 ಕೋಟಿ ರೂ.ಗೆ ಖೋತಾ, ತೆರಿಗೆ ರೂಪದಲ್ಲಿ ಕೇಂದ್ರದಿಂದ 10 ಸಾವಿರ ಕೋಟಿಗೆ ಕೊಕ್, ರಾಜ್ಯದ ತೆರಿಗೆ ಸಂಗ್ರಹದಲ್ಲಿ 7 ಸಾವಿರ ಕೋಟಿ ಇಳಿಕೆ. ಈ ಸವಾಲುಗಳ ಮಧ್ಯೆ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆಗೆ ಮುಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಪ್ರತ್ಯೇಕ ಕೃಷಿ ಬಜೆಟ್ ಇಲ್ಲ: ಆದರೆ ಸಿಎಂ ರಿಂದ ಸಿಗುತ್ತಾ ಗುಡ್ ನ್ಯೂಸ್?
ಕುಮಾರಸ್ವಾಮಿ ಅವರು 2019-20ನೇ ಸಾಲಿಗೆ 2 ಲಕ್ಷದ 34 ಸಾವಿರದ 154 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿ, ರೈತರ ಸಾಲಮನ್ನಾ ಮಾಡಿದ್ದರು. ಇದೀಗ ಯಡಿಯೂರಪ್ಪ, ಕುಮಾರಸ್ವಾಮಿಗೆ ಸೆಡ್ಡು ಹೊಡೆಯುವಂಥ ಬಜೆಟ್ ಮಂಡಿಸೋದು ಕಷ್ಟ ಸಾಧ್ಯ.
ಆದ್ರೆ, ಹಾಸಿಗೆ ಇದ್ದಷ್ಟು ಕಾಲ ಚಾಚಲು ಮುಂದಾಗಿರುವ ಸಿಎಂ, ಕಳೆದ ಬಜೆಟ್ ಗಾತ್ರಕ್ಕಿಂತ 3ರಷ್ಟು ಮಾತ್ರ ಹೆಚ್ಚಿಸಲು ಅಂದ್ರೆ, ಅಂದಾಜು 7 ಸಾವಿರ ಕೋಟಿಯಷ್ಟು ಹೆಚ್ಚಿಸಲು ಮುಂದಾಗಿದ್ದಾರೆ. ಈ ಲೆಕ್ಕಾಚಾರದ ಅನ್ವಯ ಈ ಬಾರಿ ಬಜೆಟ್ ಗಾತ್ರ 2 ಲಕ್ಷದ 41 ಸಾವಿರ ಕೋಟಿ ರೂ. ಆಸುಪಾಸು ಇರಲಿದೆ.
ಕರ್ನಾಟಕದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಿ, ಉದ್ಯೋಗ ಸೃಷ್ಟಿಗೆ ಬಿಎಸ್ವೈ ಪ್ಲಾನ್ ಮಾಡಿದ್ದಾರೆ. ನೀರಾವರಿ ಯೋಜನೆ, ಕೃಷಿ, ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಗೆ ಸಿಎಂ ಹಲವು ಕ್ರಮ ಕೈಗೊಳ್ಳಲಿದ್ದಾರೆ.
ಭೂ ಕಬಳಿಕೆದಾರರ ಭೂಮಿ ಮಾರಿ ಬೊಕ್ಕಸ ತುಂಬಿಸಲು ಸಿಎಂ ಕ್ರಮ ಕೈಗೊಳ್ಳಲಿದ್ದಾರೆ. ಇನ್ನು ಅಬಕಾರಿ ಇಲಾಖೆ ಮೇಲಿನ ತೆರಿಗೆ ಹೆಚ್ಚಳ ಮಾಡಿ, ಮಧ್ಯ ಪ್ರಿಯರಿಗೆ ಶಾಕ್ ಕೊಡವ ಎಲ್ಲಾ ಸಾಧ್ಯತೆಗಳಿವೆ.
ಬಜೆಟ್ ನಿರೀಕ್ಷೆಗಳು
ಬಜೆಟ್ ನಿರೀಕ್ಷೆಗಳೇನು ಅಂತ ನೋಡೋದಾದ್ರೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ನಿಗದಿ, ತುಂಗಭದ್ರಕ್ಕೆ ಸಮಾನಾಂತರವಾಗಿ ನೂತನ ನವಲಿ ಜಲಾಶಯ ಘೋಷಣೆ, ನೀರಾವರಿ ಕಾಲುವೆಗಳಿಗೆ ಕಾಯಕಲ್ಪ ನೀಡೋದು, ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ವೇಗ ಕೊಡೋದು, ಕಳಸಾ ಬಂಡೂರಿ ಕಾಮಗಾರಿಗೆ ಹೆಚ್ಚು ಅನುದಾನ, ಕಬ್ಬು ಬೆಳೆಗಾರರಿಗೆ ಭರಪೂರ ಸಿಹಿ ನೀಡಿ, ಅನ್ನಭಾಗ್ಯ ಯೋಜನೆಯಡಿ ಗೋಧಿ ಸೇರ್ಪಡೆ ಮಾಡಿ, ಮಕ್ಕಳು, ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಘೋಷಿಸಿ, ಹೊಸ ಸ್ವರೂಪದಲ್ಲಿ ಭಾಗ್ಯ ಲಕ್ಷ್ಮಿ ಯೋಜನೆ ರೂಪಿಸಿ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಒತ್ತು ಕೊಡಬಹುದು. ಮಠ-ಮಾನ್ಯಗಳಿಗೆ ಈ ಬಾರಿ ಅನುದಾನ ಇಲ್ಲ. ಜತೆಗೆ ಸಾಲ ಮನ್ನಾ, ಸಬ್ಸಿಡಿಗೆ ಕೊಕ್ ಕೊಡುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಿನಲ್ಲಿ ಸಿಎಂ ಬಿಎಸ್ವೈ ಬಜೆಟ್ನಲ್ಲಿ ಕಹಿ ಕೊಡದೆ, ಅತಿ ಸಿಹಿಯನ್ನೂ ನೀಡದೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸೂತ್ರದ ಅಡಿ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.