ಬೆಂಬಲ ಬೆಲೆ ನಿಗದಿಪಡಿಸುವ ಕೃಷಿ ಬೆಲೆ ಆಯೋಗಕ್ಕೆ ಗ್ರಹಣ: ಅಧ್ಯಕ್ಷರಿಲ್ಲದೆ 2 ವರ್ಷ

Published : Dec 02, 2024, 11:53 AM ISTUpdated : Dec 02, 2024, 11:56 AM IST
ಬೆಂಬಲ ಬೆಲೆ ನಿಗದಿಪಡಿಸುವ ಕೃಷಿ ಬೆಲೆ ಆಯೋಗಕ್ಕೆ ಗ್ರಹಣ: ಅಧ್ಯಕ್ಷರಿಲ್ಲದೆ 2 ವರ್ಷ

ಸಾರಾಂಶ

ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ಎರಡು ವರ್ಷಗಳಿಂದ ಕಾಯಂ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿದೆ. ವರದಿ ಸಲ್ಲಿಕೆ ಸ್ಥಗಿತಗೊಂಡಿದ್ದು, ರೈತರಿಗೆ ಸಂಬಂಧಿಸಿದ ಅಧ್ಯಯನಗಳು ನಿಂತು ಹೋಗಿವೆ. ಸರ್ಕಾರ ಕೂಡಲೇ ಕಾಯಂ ಅಧ್ಯಕ್ಷರನ್ನು ನೇಮಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಸಿದ್ದು ಚಿಕ್ಕಬಳ್ಳೇಕೆರೆ, ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹತ್ವದ 'ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ 2 ವರ್ಷವಾದರೂ ಕಾಯಂ ಅಧ್ಯಕ್ಷರ ನೇಮಕ ವಾಗದೆ 'ಗ್ರಹಣ' ಹಿಡಿದೆ. ಇದರಿಂದಾಗಿ ಒಕ್ಕಲುತನಕ್ಕೆ ಸಂಬಂಧಿಸಿದ ಅಧ್ಯಯನ, ವರದಿ ಸಲ್ಲಿಕೆಗೆ ಭಾರಿ ಹಿನ್ನಡೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈವರೆಗೆ ಕಾಯಂ ಅಧ್ಯಕ್ಷರನ್ನು ನೇಮಿಸಿ ಅಗತ್ಯ ಸಿಬ್ಬಂದಿ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರಿಂದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಸರ್ಕಾರ ತಕ್ಷಣ ಕಾಯಂ ಅಧ್ಯಕ್ಷರನ್ನು ನೇಮಿಸಿ ಅಗತ್ಯ ಸಿಬ್ಬಂದಿ ಒದಗಿಸಬೇಕು ಎಂಬ ಆಗ್ರಹ ರೈತರಿಂದ ವ್ಯಕ್ತವಾಗಿದೆ. ಸೆಪ್ಟೆಂಬರ್ 2019 ರಿಂದ 2022 ಜುಲೈವರೆಗೂ ಹನುಮನಗೌಡ ಬೆಳಗುರ್ಕಿ ಅಧ್ಯಕ್ಷರಾಗಿದ್ದರು. ನಂತರ 4 ತಿಂಗಳು ಅಧ್ಯಕ್ಷಗಾದಿ ಖಾಲಿ ಇತ್ತು. ಆಗ ಕೃಷಿ ಇಲಾಖೆ ಕಾರ್ಯದರ್ಶಿಯಾಗಿದ್ದ ಶಿವಯೋಗಿ ಸಿ.ಕಳಸದ್ ಅವರಿಗೆ ಅಧ್ಯಕ್ಷ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. 2023ರ ಜೂನ್ ನಿಂದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರೇ ಆಯೋಗದ ಅಧ್ಯಕ್ಷರಾಗಿದ್ದಾರೆ. ಸಚಿವ ಸ್ಥಾನದ ಕಾರ್ಯಭಾರದ ನಡುವೆ ಆಯೋಗದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಲು ಸಾಧ್ಯವಾಗುವುದಿಲ್ಲ. ಕಾಯಂ ಅಧ್ಯಕ್ಷರಿಲ್ಲದೇ ಆಯೋಗ ಸೊರಗುತ್ತಿದೆ. ಆಯೋಗದ ವಿಶೇಷ ತಾಂತ್ರಿಕ ಸಲಹೆಗಾರ ಹುದ್ದೆಯೂ ಎಂಟು ತಿಂಗಳಿನಿಂದ ಖಾಲಿಯಾಗಿಯೇ ಇದ್ದು ಸಮಸ್ಯೆ ಪರಿಹರಿಸಬೇಕು' ಎಂಬ ಒತ್ತಾಯ ಕೇಳಿ ಬಂದಿದೆ.

ಆಯೋಗದ ಕಾರ್ಯವೇನು?
ಕರ್ನಾಟಕ ಕೃಷಿ ಬೆಲೆ ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವ ಹಿಸುತ್ತದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆಗೆ ತಗುಲುವ ವೆಚ್ಚವೆಷ್ಟು, ಬೆಳೆಗಳಿಗೆ ಎಷ್ಟು ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ನಿಗದಿಪಡಿಸಬೇಕು. ಅತಿವೃಷ್ಟಿ-ಅನಾವೃಷ್ಟಿ ವೇಳೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು, ಆಹಾರ ಪದಾರ್ಥಗಳ ಬೆಲೆ ಇಳಿಕೆಯಾದಾಗ ಮಾರುಕಟ್ಟೆ ಮಧ್ಯ ಪ್ರವೇಶ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡುವುದು ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಆಯೋಗ ಕೈಗೊಳ್ಳಲಿದೆ.

ಒಂದೂ ವರದಿ ಸಲ್ಲಿಕೆ ಇಲ್ಲ: 

ಕೃಷಿ ಬೆಲೆ ಆಯೋಗ, ರಾಜ್ಯದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿಯ ವಿಶ್ಲೇಷಣಾ ವರದಿ, ಇದಕ್ಕೆ ಸಂಬಂಧಿಸಿದ ಶಿಫಾರಸ್ಸುಗಳನ್ನು ಪ್ರತಿ ವರ್ಷವೂ ಸರ್ಕಾರಕ್ಕೆ ಸಲ್ಲಿಸುತ್ತಾ ಬಂದಿದೆ. ಆದರೆ 2021-22 ನೇ ಸಾಲಿನ ವರದಿ ಸಲ್ಲಿಕೆಯಾದ ಬಳಿಕ ಇಲ್ಲಿಯವರೆಗೂ ಒಂದೇ ಒಂದು ವರದಿಯೂ ಸಲ್ಲಿಕೆಯಾಗಿಲ್ಲ, ಕೃಷಿ, ತೋಟಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದ ಐದು ಕೃಷಿ ವಿಶ್ವವಿದ್ಯಾನಿಲಯಗಳ ಜೊತೆ ಆಯೋಗದ ಅಧ್ಯಕ್ಷರು ಸಂಪರ್ಕ ಇಟ್ಟು ಕೊಂಡು ಸಲಹೆ ಪಡೆಯುವುದಲ್ಲದೇ, ವರದಿಗಳ ತಯಾರಿಕೆಗೆ ಅಗತ್ಯ ಅಂಕಿ-ಅಂಶ ಸಂಗ್ರಹಿಸುತ್ತಿದ್ದರು. ರೈತ ಮುಖಂಡರೊಂದಿಗೆ ಚರ್ಚೆ, ಕ್ಷೇತ್ರ ಭೇಟಿ ಸೇರಿದಂತೆ ಹಲವು ಕಾರ್ಯ ಕೈಗೊಳ್ಳುತ್ತಿದ್ದರು. ಆದರೆ ಕಾಯಂ ಅಧ್ಯಕ್ಷರು ಇಲ್ಲದಿರುವುದರಿಂದ ಈ ಕಾರ್ಯ ಗಳಿಗೆ ಹಿನ್ನಡೆ ಉಂಟಾಗಿದೆ.

ಕನಿಷ್ಠ ಬೆಂಬಲಬೆಲೆ ನೀಡುವ ಸಂಬಂಧ    ಪ್ರತಿವರ್ಷ ವಿವಿಧ ಬೆಳೆಗಳ ಉತ್ಪಾದನಾ ವೆಚ್ಚವನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಆದರೆ ಸಚಿವರೇ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿರುವುದರಿಂದ ಎರಡು ಕಾರ್ಯವನ್ನೂ ತೂಗಿಸಿಕೊಂಡು ಹೋಗುವುದು ಕಷ್ಟವಾಗುತ್ತದೆ. ಬೇರೊಬ್ಬರನ್ನು ತಕ್ಷಣ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು  ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ದಾರೆ.

ದೇಶದಲ್ಲೇ ಮಾದರಿಯಾಗಿ ರಚನೆಯಾದ ಕೃಷಿ ಬೆಲೆ ಆಯೋಗಕ್ಕೆ ರಾಜ್ಯ ಸರ್ಕಾರ ತಕ್ಷಣ ಅಧ್ಯಕ್ಷರನ್ನು ನೇಮಿಸಿ ಶಕ್ತಿ ತುಂಬಬೇಕು. ಬೆಂಬಲ ಬೆಲೆಗೆ ಕಾಯ್ದೆ ತರಬೇಕು ಎಂದು 2018 ರಲ್ಲೇ ನಾನು ವರದಿ ನೀಡಿದ್ದೆ. ಇದನ್ನು ಜಾರಿಗೊಳಿಸಿ ದರೆ ದೇಶಕ್ಕೇ ಕರ್ನಾಟಕ ಮಾದರಿಯಾಗಲಿದೆ ಎಂದು ಕೃಷಿ ಬೆಲೆ ಆಯೋಗದ ಮತ್ತೊಬ್ಬ ಮಾಜಿ ಅಧ್ಯಕ್ಷ . ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಆರ್ಭಟಕ್ಕೆ ಮದ್ಯ ಮಾರಾಟವೇ ಕುಸಿತ!
ಟೈಗರ್‌ ಜಿಂದಾ ಹೈ, ಕಿಂಗ್‌ ಈಸ್ ಅಲೈವ್‌: ಸಿಎಂ ಬಗ್ಗೆ ಸಚಿವ ಬೈರತಿ ಸುರೇಶ್ ಗುಣಗಾನ