ಜಿಲ್ಲೆ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನೀರಿನ ಟ್ಯಾಂಕ್(ಓವರ್ ಹೆಡ್)ಗಳ ನಿರ್ವಹಣೆ ಕೊರತೆಯೇ ಕಲುಷಿತ ನೀರು ಪ್ರಕರಣಕ್ಕೆ ಪ್ರಮುಖ ಕಾರಣಗಳಲ್ಲೊಂದು.
ಕಳೆದ ಕೆಲ ದಿನಗಳಿಂದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಸೇರಿ ಮೂರ್ನಾಲ್ಕು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಪ್ರತಿ ಬೇಸಿಗೆಯಲ್ಲೂ ಈ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಜನ ಸಾವಿಗೀಡಾಗುವ, ಅಸ್ವಸ್ಥಗೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಪ್ರತಿ ವರ್ಷ ಇಂಥ ಘಟನೆಗಳು ಬೆಳಕಿಗೆ ಬರುತ್ತಿದ್ದರೂ ಆಡಳಿತ ಮಾತ್ರ ಎಚ್ಚೆತ್ತುಕೊಳ್ಳುತ್ತಲೇ ಇಲ್ಲ. ಮತ್ತದೇ ಘಟನೆಗಳು ಮರುಕಳಿಸಿ ಇನ್ನಷ್ಟುಮಂದಿ ಜೀವ ಕಳೆದುಕೊಳ್ಳುವುದು ನಡೆದೇ ಇದೆ. ಕುಡಿಯುವ ನೀರು ಈ ರೀತಿ ಕಲುಷಿತಗೊಳ್ಳಲು ಆಡಳಿತದ ನಿರ್ಲಕ್ಷ್ಯವೇ ಮೂಲ ಕಾರಣವಾದರೂ ಜೀವಜಲ ವಿಷವಾಗಲು ಐದು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1 ಸ್ವಚ್ಛತೆ ಕಾಣದ ನೀರಿನ ಟ್ಯಾಂಕ್: ಜಿಲ್ಲೆ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನೀರಿನ ಟ್ಯಾಂಕ್(ಓವರ್ ಹೆಡ್)ಗಳ ನಿರ್ವಹಣೆ ಕೊರತೆಯೇ ಕಲುಷಿತ ನೀರು ಪ್ರಕರಣಕ್ಕೆ ಪ್ರಮುಖ ಕಾರಣಗಳಲ್ಲೊಂದು. ಕಳೆದ ವರ್ಷ ರಾಯಚೂರು ನಗರದಲ್ಲಿ ಕಲುಷಿತ ನೀರಿನಿಂದಾಗಿ ಏಳು ಮಂದಿ ಮೃತಪಟ್ಟು, ನೂರಾರು ಮಂದಿ ಅಸ್ವಸ್ಥಗೊಂಡಿದ್ದರು. ಅದಕ್ಕೆ ನಗರದಲ್ಲಿರುವ ಸುಮಾರು 30 ಓವರ್‌ಹೆಡ್ ಟ್ಯಾಂಕ್ಗಳನ್ನು ಹಲವು ವರ್ಷಗಳಿಂದ ಸ್ವಚ್ಛಗೊಳಿಸದಿರುವುದೇ ಕಾರಣವಾಗಿತ್ತು. ಇವುಗಳಲ್ಲಿ ಕೆಲ ಟ್ಯಾಂಕ್ಗಳನ್ನು ಸುಮಾರು 20 ವರ್ಷಗಳಿಂದ ಸ್ವಚ್ಛಗೊಳಿಸಿಯೇ ಇಲ್ಲ ಎಂಬ ಆಘಾತಕಾರಿ ವಿಚಾರ ಆ ವೇಳೆ ಬಹಿರಂಗವಾಗಿತ್ತು. ಇಂಥ ಪರಿಸ್ಥಿತಿ ಗ್ರಾಮೀಣ ಭಾಗದ ಅನೇಕ ಕಡೆ ಇದೆ. ಇದರಿಂದ ಸಂಗ್ರಹಿಸಿದ ನೀರು ಪಾಚಿ, ಬ್ಯಾಕ್ಟೀರಿಯಾಗಳು, ಕ್ರಿಮಿಕೀಟಗಳ ತಾಣವಾಗುತ್ತಿದೆ. ಇಂಥ ನೀರು ಕುಡಿದ ಮಂದಿ ವಾಂತಿ, ಭೇದಿಯಂಥ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೀರು ನಿರ್ವಹಣೆ ಜವಾಬ್ದಾರಿ ಹೊಂದಿರುವ ಸ್ಥಳೀಯ ಆಡಳಿತ ಸಂಸ್ಥೆಗಳು, ಜಿಪಂ, ತಾಪಂ ಹಾಗೂ ಗ್ರಾಪಂಗಳು ನೀರಿನ ಟ್ಯಾಂಕ್ಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿಲ್ಲ ಹಾಗೂ ಕ್ಲೋರಿನೇಷನ್ ಮಾಡಿಸುವ ಕೆಲಸವೂ ಸರಿಯಾಗಿ ನಡೆಯುತ್ತಿಲ್ಲ. ರಾಯಚೂರು ಮಾತ್ರವಲ್ಲ, ಕಲ್ಯಾಣ ಕರ್ನಾಟಕದ ಅನೇಕ ಕಡೆ ಇದೇ ಪರಿಸ್ಥಿತಿ ಇದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 20 ಸ್ಥಾನ: ಸಿಎಂ ಸಿದ್ದರಾಮಯ್ಯ
2 ಗುಣಮಟ್ಟದ ಪೈಪ್ಲೈನ್-ದುರಸ್ತಿ ವಿಳಂಬ: ಪೈಪ್‌ಗಳು ಆಗಾಗ ಒಡೆದು ಕುಡಿಯುವ ನೀರು ಕಲುಷಿತಗೊಳ್ಳುವುದು ಮಾಮೂಲಿ ಆಗುತ್ತಿದೆ. ಇದಕ್ಕೆ ಪೈಪ್‌ಗಳ ಕಳಪೆ ಗುಣಮಟ್ಟವೇ ಕಾರಣ ಎನ್ನಲಾಗುತ್ತಿದೆ. ಬಹುತೇಕ ಕಡೆ ಇಂಥ ಪೈಪ್‌ಗಳು ಚರಂಡಿ ಅಕ್ಕ-ಪಕ್ಕದಲ್ಲೇ ಹಾದು ಹೋಗಿರುವುದು, ಪೈಪ್‌ಗಳು ಒಡೆದು ಹೋದರೆ ತಕ್ಷಣ ದುರಸ್ತಿ ಮಾಡದೇ ಇರುವುದು ಸಹ ನೀರು ಕಲುಷಿತಗೊಳ್ಳಲು ಕಾರಣ. ಕೆಲ ಗ್ರಾಮಗಳಲ್ಲಿ 20-30 ವರ್ಷಗಳ ಹಿಂದೆ ನಿರ್ಮಿಸಿದ ಟ್ಯಾಂಕ್ ಹಾಗೂ ಪೈಪ್‌ಗಳ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು 850 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ 5 ಹಂತಗಳಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಬಳಸುತ್ತಿರುವ ಪರಿಕರಗಳು ಗುಣಮಟ್ಟದ ಕೊರತೆ ಎದುರಿಸುತ್ತಿವೆ. ಜಿಲ್ಲೆಯಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ಹಳ್ಳಹಿಡಿದಿದೆ. ಬಹುತೇಕ ಗ್ರಾಮಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೇ ಇಲ್ಲ. ಶೇ.90ರಷ್ಟುಹಳ್ಳಿಗಳು ಇನ್ನೂ ಬಹಿರ್ದೆಸೆಯಿಂದ ಮುಕ್ತಗೊಂಡಿಲ್ಲ. ಪೈಪ್ಲೈನ್ ಹಾದು ಹೋಗಿರುವ ಕಡೆ ಇದೇ ಪರಿಸ್ಥಿತಿ ಇರುವುದರಿಂದ ಪೈಪ್ಲೈನ್ ಒಡೆದರೆ ಸಾಕು ನೀರು ಕಲುಷಿತಗೊಳ್ಳುತ್ತದೆ. ಒಡೆದ ಪೈಪ್ಲೈನ್ ಹಲವು ದಿನಗಳ ಕಾಲ ದುರಸ್ತಿ ಕಾಣದೆ ಚರಂಡಿ ನೀರಿನೊಂದಿಗೆ ಬೆರೆಯುತ್ತಿದ್ದು, ಇದನ್ನು ಕುಡಿದ ಜನ ವಾಂತಿ-ಭೇದಿಗೆ ತುತ್ತಾಗುತ್ತಿದ್ದಾರೆ.
3 ನೀರಿನ ಮೂಲವೇ ಕಲುಷಿತ: ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಹಲವು ಮಂದಿ ಅಸ್ವಸ್ಥಗೊಂಡ ನಂತರ ಅಲ್ಲಿನ 38 ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 8 ಮಾದರಿಗಳು ಕುಡಿಯಲು ಯೋಗ್ಯವಲ್ಲ ಎನ್ನುವುದು ವರದಿಯಾಗಿದೆ. ಅದೇ ರೀತಿ ಲಿಂಗಸುಗೂರು ತಾಲೂಕಿನ ಗೊರೇಬಾಳದಲ್ಲಿ 39 ನೀರಿನ ಮಾದರಿ ಪರೀಕ್ಷಿಸಿದಾಗ ಅದರಲ್ಲಿ 13 ಮಾದರಿ ಯೋಗ್ಯವಲ್ಲ ಎಂದು ವರದಿ ತಿಳಿಸಿದೆ. ಇದಕ್ಕೆ ಕಾರಣ ನೀರಿನ ಮೂಲ ಕಲುಷಿತಗೊಂಡಿರುವುದೇ ಕಾರಣ. ತುಂಗಭದ್ರಾ, ಕೃಷ್ಣಾ ನದಿಗಳ ಜೊತೆಗೆ ಕೆರೆ, ಹಳ್ಳ ಹಾಗೂ ಬೋರ್‌ವೆಲ್ ಮೂಲಗಳಿಂದ ಜಿಲ್ಲೆಯ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.
ತುಂಗಭದ್ರಾ-ಕೃಷ್ಣಾ ನದಿಗಳ ವ್ಯಾಪ್ತಿ ಪ್ರದೇಶಕ್ಕೆ ಟಿಎಲ್ಬಿಸಿ ಹಾಗೂ ಎನ್ಆರ್ಬಿಸಿಯಿಂದ ಕೆರೆ-ಜಲಾಶಯಗಳನ್ನು ತುಂಬಿಸಿಕೊಂಡು, ಶುದ್ಧೀಕರಣ ಘಟಕದ ಮೂಲಕ ನೀರು ಪೂರೈಕೆಯಾಗುತ್ತದೆ. ಬೇಸಿಗೆ ಸಮಯದಲ್ಲಿ ಈ ಭಾಗದ ನೀರಿನ ಮೂಲಗಳಾದ ನದಿ, ಕೆರೆ, ಹಳ್ಳ ಹಾಗೂ ಬೋರ್ವೆಲ್ಗಳು ಬತ್ತುವುದು ಮಾಮೂಲಿ. ಆಗ ತಳದಲ್ಲಿ ಸಂಗ್ರಹಗೊಂಡ ಯೋಗ್ಯವಲ್ಲದ ನೀರನ್ನೇ ಸರಬರಾಜು ಮಾಡಲಾಗುತ್ತದೆ. ಬೋರ್‌ವೆಲ್ ನೀರು ಕುಡಿಯೋಣವೆಂದರೆ ಬೇಸಿಗೆಯಲ್ಲಿ ಪ್ಲೋರೈಡ್-ಆರ್ಸೆನಿಕ್ ಸೇರಿ ಇತರೆ ಲವಣಾಂಶಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಬೋರ್ ನೀರು ಹೊಂದಿರುತ್ತದೆ. ಆಗ ಬೋರ್‌ವೆಲ್ ಮೂಲಕ ಕುಡಿಯುವ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಜನರ ಆರೋಗ್ಯ ಹದಗೆಡುತ್ತದೆ. ಇನ್ನು ಸರಿಯಾದ ನಿರ್ವಹಣೆ ಇಲ್ಲದ ಕೆರೆಗಳಲ್ಲಿ ನೀರಿನಮಟ್ಟಕಡಿಮೆಯಾಗಿ ಪಾಚಿಪೇರಿಕೊಂಡು ನೀರು ಹಸಿರು ಬಣ್ಣಕ್ಕೆ ತಿರುಗಿ, ವಾಸನೆ ಬರುತ್ತಿರುತ್ತದೆ. ಅನಿವಾರ್ಯವಾಗಿ ಕೆಲವೆಡೆ ಅದೇ ನೀರನ್ನು ಪೂರೈಸಲಾಗುತ್ತದೆ.
4 ಆರ್‌ಒ ಘಟಕ ನಿರ್ವಹಣೆ ಸವಾಲು: ರಾಯಚೂರು ಜಿಲ್ಲೆಯಲ್ಲಿ 877 ಗ್ರಾಪಂಗಳಲ್ಲಿ 1,170 ಹಳ್ಳಿಗಳಿದ್ದು, ಅಲ್ಲಿಯ ಶುದ್ಧಕುಡಿಯುವ ನೀರಿನ ಘಟಕಗಳ ನಿರ್ವಹಣೆಯೇ ಜಿಲ್ಲಾಡಳಿತ ಹಾಗೂ ಜಿಪಂಗೆ ದೊಡ್ಡ ಸವಾಲಾಗಿದೆ. 887 ಗ್ರಾಪಂಗಳ ಪೈಕಿ 541 ಕಡೆ ಆರ್‌ಒ ಘಟಕ ಕೆಲಸ ಮಾಡುತ್ತಿದ್ದು, ಉಳಿದ 336 ವಿವಿಧ ಕಾರಣಗಳಿಂದ ದುರಸ್ತಿಯಲ್ಲಿವೆ. ಸರಿಸುಮಾರು ಶೇ.35ರಷ್ಟುಆರ್‌ಒ ಘಟಕಗಳು ಕೆಲಸವನ್ನೇ ಮಾಡುತ್ತಿಲ್ಲ. ಸಕಾಲಕ್ಕೆ ಆರ್‌ಒ ಘಟಕಗಳ ನಿರ್ವಹಣೆ ಮಾಡದೇ ಇರುವ ಕಾರಣಕ್ಕೆ ಜನಸಾಮಾನ್ಯರಿಗೆ ಅದರಲ್ಲೂ ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಕೆಲಹಳ್ಳಿಗಳಲ್ಲಿ ಶುದ್ಧಕುಡಿಯುವ ನೀರಿನ(ಆರ್‌ಒ) ಘಟಕಗಳು ಹಾಳಾಗಿದ್ದು, ಇನ್ನು ಕೆಲ ದುರಸ್ತಿ ಮಾಡಿದರೆ ಸರಿ ಹೋಗುತ್ತವೆ. ಆಯಾ ತಾಪಂ, ಗ್ರಾಪಂಗಳ ವ್ಯಾಪ್ತಿಯಲ್ಲಿ ದುರಸ್ತಿಗೆ ಅವಕಾಶವಿದ್ದು ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ಘಟಕಗಳನ್ನು ಏನು ಮಾಡಬೇಕು ಎನ್ನುವುದು ಆಡಳಿತ ವರ್ಗಕ್ಕೆ ತಲೆನೋವು ತಂದಿಟ್ಟಿದೆ. ಕಲುಷಿತ ನೀರಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನ ಶುದ್ಧ ಕುಡಿಯುವ ನೀರನ್ನು ಖಾಸಗಿಯಾಗಿ ಖರೀದಿಸುವ ಪರಿಸ್ಥಿತಿ ಎಲ್ಲೆಡೆ ನಿರ್ಮಾಣಗೊಂಡಿದೆ.
ಗೋಹತ್ಯೆ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಇಲ್ಲ: ಸಚಿವ ಎಚ್.ಕೆ.ಪಾಟೀಲ್
5 ಬೇಸಿಗೆ ತಾಪದ ಪರಿಣಾಮ: ರಾಯಚೂರು ಮತ್ತಿತರ ಕಡೆ ವಾಂತಿ-ಭೇದಿ ಪ್ರಕರಣ ಹೆಚ್ಚಾಗಲು ನೀರಿನ ಜೊತೆಗೆ ಬೇಸಿಗೆ ತಾಪವೂ ಒಂದು ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ 40 ರಿಂದ 44 ಗರಿಷ್ಠ ತಾಪಮಾನ ಇರುತ್ತದೆ. ಈ ವೇಳೆ ಕುಡಿಯುವ ನೀರಿನಲ್ಲಿ ಕೊಂಚ ವ್ಯತ್ಯಾಸವಾದರೂ ಆರೋಗ್ಯ ಏರುಪೇರಾಗುತ್ತದೆ. ಬೇಸಿಗೆಯಲ್ಲಿ ಈ ಭಾಗದಲ್ಲಿ ಬಹುಬೇಗ ಬಾಯಾರಿಕೆಯಿಂದಾಗಿ ಅನೇಕ ಬಾರಿ ಕುದಿಸಿ ಆರಿಸಿದ ನೀರಿನ ಬದಲು ಅಶುದ್ಧ ನೀರನ್ನೇ ಕುಡಿದು ಜನ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಮಾಹಿತಿ: ರಾಮಕೃಷ್ಣ ದಾಸರಿ