ವಿಶೇಷ ಸೌಲಭ್ಯ ಇಲ್ಲ, ಟಿವಿ ವ್ಯವಸ್ಥೆನೂ ಇಲ್ಲ: ಸಾಮಾನ್ಯ ಕೈದಿ ರೀತಿ ಜೈಲೂಟ ಸವಿದ ಕಿಲ್ಲಿಂಗ್ ಸ್ಟಾರ್‌

By Kannadaprabha News  |  First Published Jun 24, 2024, 6:20 AM IST

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ಅವರು ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.


ಬೆಂಗಳೂರು (ಜೂ.24): ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ಅವರು ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

ಕೊಲೆ ಪ್ರಕರಣದ ಸಂಬಂಧ ದರ್ಶನ್ ಗ್ಯಾಂಗ್‌ ಅನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಶನಿವಾರ ನಗರದ ಎಸಿಎಂಎ ನ್ಯಾಯಾಲಯವು ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ದರ್ಶನ್ ಗ್ಯಾಂಗ್‌ಗೆ ಸೆರೆಮನೆ ವಾಸ ಮುಂದುವರೆಯಲಿದ್ದು, ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆಯಲು ನಟ ದರ್ಶನ್ ಅವರಿಗೆ ನ್ಯಾಯಾಲಯ ಅನುಮತಿ ನೀಡಿಲ್ಲ.

Tap to resize

Latest Videos

'ಓಹ್, ಸೂರಜ್ ರೇವಣ್ಣ ಕೂಡ ಅರೆಸ್ಟ್ ಆದ್ರಾ? ನಂಗೆ ಗೊತ್ತೇ ಇರಲಿಲ್ಲ' ಎಂದ ಜಿಟಿ ದೇವೇಗೌಡ!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ದರ್ಶನ್ ಇದ್ದು, ಮಹಿಳಾ ವಿಭಾಗದಲ್ಲಿ ಅವರ ಪ್ರಿಯತಮೆ ಪವಿತ್ರಾಗೌಡ ಇದ್ದಾರೆ. ಇನ್ನುಳಿದ ಸಹಚರರು ವಿಚಾರಣಾಧೀನ ಕೈದಿಗಳ ವಿಭಾಗದಲ್ಲಿ ಪ್ರತ್ಯೇಕವಾಗಿ ಬಂಧನದಲ್ಲಿದ್ದಾರೆ. ಮೊದಲ ದಿನ ಭಾನುವಾರ ಸಹಚರರ ಜತೆ ಮಾತನಾಡುತ್ತಾ ದರ್ಶನ್ ಕಾಲ ಕಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ವಿತರಿಸಿದ ಚಪಾತಿ, ಅನ್ನ, ಸಾಂಬಾರ್ ಹಾಗೂ ಮಜ್ಜಿಗೆಯನ್ನೇ ದರ್ಶನ್ ಕೂಡ ಸೇವಿಸಿದ್ದಾರೆ.

ಭಾನುವಾರ ಭೇಟಿಗೆ ನಿರ್ಬಂಧ:

ಜೈಲಿನಲ್ಲಿ ಭಾನುವಾರ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲಿ ಸಂದರ್ಶಕರ ಭೇಟಿಗೆ ಅ‍ವಕಾಶವಿಲ್ಲ. ಇದೇ ನಿಯಮ ದರ್ಶನ್ ಅವರಿಗೂ ಅನ್ವಯವಾಗಿದೆ. ಹೀಗಾಗಿ ದರ್ಶನ್ ಹಾಗೂ ಅವರ ಸಹಚರರ ಭೇಟಿಗೆ ಭಾನುವಾರ ಹೊರಗಿನವರಿಗೆ ಅ‍ವಕಾಶ ನೀಡಿಲ್ಲ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನ್ ಅವರಿಗಿಂತ ಮುಂಚಿತವಾಗಿ ಜೈಲು ಸೇರಿದ್ದ ಅವರ ಪ್ರಿಯತಮೆ ಪವಿತ್ರಾಗೌಡರನ್ನು ಶನಿವಾರ ಭೇಟಿಯಾಗಿ ಆಕೆಯ ಕುಟುಂಬದವರು ಬಟ್ಟೆ ನೀಡಿ ತೆರಳಿದ್ದರು. ಶನಿವಾರ ಸಂಜೆ ಜೈಲಿಗೆ ಪ್ರವೇಶಿಸಿದ ದರ್ಶನ್ ಅವರಿಗೆ ಕುಟುಂಬದವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಜೈಲಿನಲ್ಲಿ ದರ್ಶನ್‌ ಅವರ ಭೇಟಿಗೆ ಸೋಮವಾರ ಅವರ ಕುಟುಂಬ ಸದಸ್ಯರು ಹಾಗೂ ವಕೀಲರಿಗೆ ನಿಯಮಾನುಸಾರ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಮೀನು ಕೋರಿ ಶೀಘ್ರದಲ್ಲೇ ಅರ್ಜಿ

ಜಾಮೀನು ಕೋರಿ ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ನಟ ದರ್ಶನ್‌, ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ ಆರೋಪಿಗಳು ಅರ್ಜಿ ಸಲ್ಲಿಸಲ್ಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ದಾಖಲೆಗಳ ಕ್ರೋಢೀಕರಣಕ್ಕೆ ದರ್ಶನ್ ಪರ ವಕೀಲರು ಮುಂದಾಗಿದ್ದು, ಸೋಮವಾರದ ಬಳಿಕ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.

click me!