INTERVIEW: ಸಿಎಂ ಕೈಕೆಳಗಿರುವ ಅಧಿಕಾರಿಗಳಿಂದ ತನಿಖೆ ನಡೆಸುವುದು ಸಮಂಜಸವಲ್ಲ: ನ್ಯಾ.ಎನ್‌. ಸಂತೋಷ್ ಹೆಗ್ಡೆ

By Kannadaprabha News  |  First Published Oct 3, 2024, 6:33 AM IST

ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲು ನಾನು ರಾಜಕಾರಣಿಯಲ್ಲ. ಅದನ್ನು ಹೇಳುವುದಿಲ್ಲ. ಯಾವುದೇ ಆರೋಪಗಳು ಬಂದಾಗ ಕಾರ್ಯ ನಿರ್ವಹಿಸುವ ಹುದ್ದೆಯಿಂದ ಕೆಳಗಿಳಿದು ವಿಚಾರಣೆ ನಡೆಸಿ ಎಂದು ಹೇಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಇಲ್ಲ. ಈ ಹಿಂದೆ ಹಲವು ರಾಜಕಾರಣಿಗಳು ಆರೋಪಗಳು ಕೇಳಿ ಬಂದಾಗ ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದರು. ಅಂಥ ಉದಾಹರಣೆಗಳೂ ಇವೆ.


ನ್ಯಾ.ಎನ್‌. ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ

- ಪ್ರಭುಸ್ವಾಮಿ ನಟೇಕರ್‌

Tap to resize

Latest Videos

undefined

MUDA Case:  ಒಂದು ಕಾಲದಲ್ಲಿ ರಾಜ್ಯದಲ್ಲಿನ ಭ್ರಷ್ಟರ ಪಾಲಿಗೆ ಲೋಕಾಯುಕ್ತ ಸಂಸ್ಥೆ ಸಿಂಹಸ್ವಪ್ನವಾಗಿತ್ತು. ಇದರಲ್ಲಿ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರ ಪಾತ್ರವೂ ದೊಡ್ಡದು. ಹೆಗ್ಡೆ ಅವರು ಲೋಕಾಯುಕ್ತರಾಗಿ ಸಂಸ್ಥೆಗೆ ಒಂದು ಹೊಸ ಖದರ್‌ ಬರುವಂತೆ ನೋಡಿಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಲೋಕಾಯುಕ್ತ ಸಂಸ್ಧೆಯ ಅಧಿಕಾರ ಮೊಟಕುಗೊಳಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿದರು. ಆದರೆ, ನಂತರದ ವರ್ಷಗಳಲ್ಲಿ ನ್ಯಾಯಾಲಯ ಎಸಿಬಿಗೆ ಬಾಗಿಲು ಹಾಕುವ ಆದೇಶ ಹೊರಡಿಸಿತು. ಇದೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ವಿರುದ್ಧದ ಮುಡಾ ನಿವೇಶನ ಹಂಚಿಕೆ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ. ಮುಖ್ಯಮಂತ್ರಿಗಳ ವಿರುದ್ಧದ ಪ್ರಕರಣ, ಲೋಕಾಯುಕ್ತ ಸಂಸ್ಥೆ ಹಿನ್ನೆಲೆ ಸಂತೋಷ್ ಹೆಗ್ಡೆ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...

ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಚಾಟಿ ಬೀಸುವ ಸಂಸ್ಥೆ ಎಂಬುದನ್ನು ನೀವು ಹಿಂದೆಯೇ ತೋರಿಸಿಕೊಟ್ಟಿದ್ದೀರಿ?

-ನ್ಯಾ. ವೆಂಕಟಾಚಲಯ್ಯ ಅವರು ಲೋಕಾಯುಕ್ತ ಸಂಸ್ಥೆಯ ಖದರ್‌ ಏನು ಎಂಬುದನ್ನು ಮೊದಲು ಜನತೆಗೆ ತೋರಿಸಿಕೊಟ್ಟರು. ಸರ್ಕಾರದ ಬಳಿಕ ಬಗೆಹರಿಯದ ಸಮಸ್ಯೆಗಳು ಲೋಕಾಯುಕ್ತ ಸಂಸ್ಥೆಯಿಂದ ಬಗೆಹರಿಸಬಹುದು ಎಂಬುದನ್ನು ತಿಳಿಸಿದರು. ಅದನ್ನು ನಾನು ಮುಂದುವರಿಸಿದೆ ಅಷ್ಟೇ. ತನಿಖೆಗಳನ್ನು ನಿಷ್ಪಪಕ್ಷಪಾತವಾಗಿ ಮಾಡುವುದರಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಿದ್ದೇನೆ.

ಸಿಎಂ ತನಿಖೆ ಎದುರಿಸ್ತೀನಿ ಅಂತಾರೆ, ಅವರೇ ಕೋರ್ಟ್‌ಗೆ ತಡೆ ಕೋರಿ ಅರ್ಜಿ ಸಲ್ಲಿಸ್ತಾರೆ: ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ

ನೀವು ಹಿಂದೆ ಅಧಿಕಾರದಲ್ಲಿ ಇದ್ದಾಗಿನ ಲೋಕಾಯುಕ್ತ ಸಂಸ್ಥೆಗೂ, ಈಗ ಕಾರ್ಯ ನಿರ್ವಹಿಸುತ್ತಿರುವ ಲೋಕಾಯುಕ್ತ ಸಂಸ್ಥೆಯಲ್ಲಿ ವ್ಯತ್ಯಾಸ ಅನಿಸಿದೆಯೇ?

-ಆ ರೀತಿ ಗಮನಿಸುವುದು ಸರಿಯಲ್ಲ. ಇನ್ನೊಬ್ಬರನ್ನು ದೂರಿದಂತಾಗುತ್ತದೆ. ನನ್ನ ಕಾರ್ಯವೈಖರಿ, ಮತ್ತೊಬ್ಬರ ಕಾರ್ಯ ವೈಖರಿ ಭಿನ್ನವಾಗಿ ಇರಬಹುದು. ಆದರೆ, ಜನ ಸಾಮಾನ್ಯರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಬೇಕು.

ಭ್ರಷ್ಟಾಚಾರ ನಿಗ್ರಹಕ್ಕಾಗಿ ಸ್ಥಾಪಿಸಿದ ಲೋಕಾಯುಕ್ತ ಸಂಸ್ಥೆಗೆ ಕಳಂಕ ಬಂದಿದ್ದೂ ಇದೆಯಲ್ಲವೇ?

-ದೇಶದಲ್ಲಿ ಭ್ರಷ್ಟಾಚಾರ ತಡೆಯಲು ಸಂಸ್ಥೆಯನ್ನು ಸ್ಥಾಪಿಸಲಾಯಿತು. ಭ್ರಷ್ಟಾಚಾರದ ದುಷ್ಪರಿಣಾಮ ತಡೆಗೆ ಹಲವು ಸಲಹೆಗಳು ಕೇಳಿ ಬಂದರೂ ಯಾವುದೇ ಸರ್ಕಾರಗಳು ಅದರತ್ತ ಹೆಚ್ಚಿನ ಗಮನ ನೀಡಲಿಲ್ಲ. 1983ರಲ್ಲಿ ಜನತಾ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸುವ ಕುರಿತು ಪ್ರಸ್ತಾಪಿಸಿತು. ಆಡಳಿತಕ್ಕೆ ಬಂದರೂ ಲೋಕಾಯುಕ್ತ ಸಂಸ್ಥೆಯನ್ನು ಆರಂಭಿಸುವ ಪ್ರಕ್ರಿಯೆ ನಡೆಸಲಿಲ್ಲ. ಒತ್ತಡಗಳು ಹೆಚ್ಚಾದ ಬಳಿಕ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಲೋಕಾಯುಕ್ತ ಸಂಸ್ಥೆಗೆ ತನ್ನದೇ ಘನತೆ ಇದೆ. ಈ ಹಿಂದೆ ಲೋಕಾಯುಕ್ತರೊಬ್ಬರು ಬಂದು ತಮ್ಮ ಪಕ್ಕದಲ್ಲಿ ಅವರ ಮಗನನ್ನು ಕೂರಿಸಿದ್ದರು. ಆಗ ಏನೆಲ್ಲಾ ನಡೆಯಿತು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ.

ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವೆ ತಿಕ್ಕಾಟ ಆರಂಭವಾಗಿದೆ?

-ಸಂವಿಧಾನದಲ್ಲಿ ತಾರತಮ್ಯ ಮಾಡಬಾರದು ಎಂಬುದು ಇದೆ. ಸಂವಿಧಾನದಲ್ಲಿ ರಾಜ್ಯಪಾಲರಿಗೆ ಕೆಲವು ಅಧಿಕಾರ ಇರುವುದರಿಂದ ಅದನ್ನು ಅವರ ವಿವೇಚನ ಬಳಸಿ ಬಳಕೆ ಮಾಡಬಹುದು. ರಾಜ್ಯಪಾಲರು ಏನೂ ಮಾಡುವಂತಿಲ್ಲ ಎನ್ನುವುದಾದರೆ ಸಂವಿಧಾನದಲ್ಲಿ ಯಾಕೆ ಅಧಿಕಾರ ನೀಡಲಾಗಿದೆ. ಅವರಿಗೆ ನೀಡಿರುವ ಹಕ್ಕನ್ನು ಕಾನೂನಿನಲ್ಲಿ ವಿವರಿಸಲಾಗಿದೆ.

ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆ. ಆದರೂ ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದರೂ ಆರಂಭದಲ್ಲಿ ಕ್ರಮ ಕೈಗೊಳ್ಳಲಿಲ್ಲ?

-ಲೋಕಾಯುಕ್ತ ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದ್ದರೂ ಅಲ್ಲಿ ಕೆಲಸ ಮಾಡುವ ಪೊಲೀಸ್‌ ಅಧಿಕಾರಿಗಳು ಸರ್ಕಾರ ವ್ಯಾಪ್ತಿಯಲ್ಲಿರುತ್ತಾರೆ. ವರ್ಗಾವಣೆ, ಬಡ್ತಿ ಇತರೆ ಯೋಚನೆಗಳು ಬರುವುದು ಸಹಜ. ಹೀಗಾಗಿ ಪ್ರಮುಖ ಹುದ್ದೆಯಲ್ಲಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಆಗದಿರಬಹುದು. ಆದರೆ, ಲೋಕಾಯುಕ್ತ ಸಂಸ್ಥೆಯು ಯಾವಾಗಲೂ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವಂತಹ ಸಂಸ್ಥೆಯಾಗಿರುತ್ತದೆ.

ನ್ಯಾಯಾಲಯದ ಸೂಚನೆ ಮೇರೆಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆಯಲ್ಲ?

-ಹಿಂದಿನ ಸಮಾಜ ಮತ್ತು ಈಗಿನ ಸಮಾಜವನ್ನು ಗಮನಿಸಿದ್ದೇನೆ. ಇತ್ತೀಚೆಗಿನ ದಿನದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಪ್ರಕರಣದಲ್ಲಿ ಎರಡು ನ್ಯಾಯಾಲಯಗಳು ತೀರ್ಪು ನೀಡಿವೆ. ಮೇಲ್ನೋಟಕ್ಕೆ ಸಾಕ್ಷಿ ಇವೆ ಎಂಬುದನ್ನು ನ್ಯಾಯಾಲಯಗಳು ಗಮನಿಸಿದ್ದು, ವಿಚಾರಣೆ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ, ಮುಖ್ಯಮಂತ್ರಿಗಳ ಕೈ ಕೆಳಗಿರುವ ಅಧಿಕಾರಿಗಳಿಂದ ನಡೆಸುವುದು ಸಮಂಜಸವಲ್ಲ. ಯಾಕೆಂದರೆ ಹಲವು ಸಂಶಯಗಳು ಇದ್ದೇ ಇರುತ್ತವೆ.

ಈಗ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆ?

-ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲು ನಾನು ರಾಜಕಾರಣಿಯಲ್ಲ. ಅದನ್ನು ಹೇಳುವುದಿಲ್ಲ. ಯಾವುದೇ ಆರೋಪಗಳು ಬಂದಾಗ ಕಾರ್ಯ ನಿರ್ವಹಿಸುವ ಹುದ್ದೆಯಿಂದ ಕೆಳಗಿಳಿದು ವಿಚಾರಣೆ ನಡೆಸಿ ಎಂದು ಹೇಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಇಲ್ಲ. ಈ ಹಿಂದೆ ಹಲವು ರಾಜಕಾರಣಿಗಳು ಆರೋಪಗಳು ಕೇಳಿ ಬಂದಾಗ ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದರು. ಅಂಥ ಉದಾಹರಣೆಗಳೂ ಇವೆ.

ಆದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡದೆ ವಿಚಾರಣೆ ಎದುರಿಸುತ್ತೇನೆ ಎಂದಿದ್ದಾರೆ. ಇದನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಬಹುದು?

-ನ್ಯಾಯಾಲಯ ತೀರ್ಪು ಬರುವವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ನ್ಯಾಯಾಲಯಗಳು ವಿಚಾರಣೆ ನಡೆಸಬೇಕು ಎಂಬ ಅಭಿಪ್ರಾಯ ತಿಳಿಸಿದ ಬಳಿಕ ನಾನು ಪ್ರತಿಕ್ರಿಯೆ ನೀಡಿದ್ದೇನೆ. ನ್ಯಾಯಾಲಯ ಹೇಳಿದ ಬಳಿಕವೂ ನಿರಪರಾಧಿ ಎಂದು ಹೇಳಿ ರಾಜೀನಾಮೆ ನೀಡುವುದಿಲ್ಲ ಎನ್ನುವುದು ಅವರ ಮೌಲ್ಯವನ್ನು ತೋರಿಸುತ್ತದೆ. ಅವರು ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿ. ಹೀಗಾಗಿ, ಮೌಲ್ಯಗಳನ್ನು ಕಾಪಾಡುವ ಮೂಲಕ ಅದೇ ಗೌರವವನ್ನು ಉಳಿಸಿಕೊಳ್ಳಬೇಕು. ನಿಜ, ಕಾನೂನಿನಲ್ಲಿ ರಾಜೀನಾಮೆ ನೀಡಬೇಕು ಎಂದೇನೂ ಇಲ್ಲ. ಆದರೆ, ಮೌಲ್ಯಗಳಿಗೆ ಬೆಲೆ ಕೊಡಬೇಕು.

ಮುಖ್ಯಮಂತ್ರಿಗಳ ಪತ್ನಿ ತಮಗೆ ಮುಡಾದಿಂದ ಹಂಚಿಕೆಯಾಗಿದ್ದ 14 ನಿವೇಶನಗಳನ್ನು ವಾಪಸ್‌ ನೀಡಿದ್ದಾರಲ್ಲ?

-ಈ ವಿಚಾರ ನ್ಯಾಯಾಲಯದಲ್ಲಿದೆ. ಹೀಗಾಗಿ, ಇದರ ಬಗ್ಗೆ ನಾನು ಹೆಚ್ಚಿಗೆ ಹೇಳುವುದಿಲ್ಲ. ನಿವೇಶನಗಳನ್ನು ವಾಪಸ್‌ ನೀಡುವ ತೀರ್ಮಾನ ಒಳ್ಳೆಯದು.

ನ್ಯಾಯಾಲಯಗಳಲ್ಲೂ ಭ್ರಷ್ಟಾಚಾರ ನಡೆಯುತ್ತದೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಲೇ ಇವೆಯಲ್ಲ?

-ಬೇರೆ ಸಂಸ್ಥೆಗಳಲ್ಲಿ ನ್ಯೂನತೆ ಇರುವಂತೆ ನ್ಯಾಯಾಂಗದಲ್ಲಿಯೂ ನ್ಯೂನತೆಗಳಿಲ್ಲ, ಭ್ರಷ್ಟಾಚಾರ ಇಲ್ಲ ಎಂದು ಹೇಳುವುದಿಲ್ಲ. ಆದರೆ, ಇತರೆ ಸಂಸ್ಥೆಗಳಲ್ಲಿರುವಂತೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಅನೇಕ ಬಾರಿ ಕಾಲ ಹರಣ ಮಾಡಬೇಕು ಎಂಬ ಕಾರಣಕ್ಕಾಗಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ. ಅಮೆರಿಕದಲ್ಲಿ ಎರಡೇ ನ್ಯಾಯಾಲಯಗಳಿವೆ. ಅಲ್ಲಿನ ವ್ಯವಸ್ಥೆ ನಮ್ಮಲ್ಲಿಯೂ ಜಾರಿಯಾದರೆ ಬೇಗ ಪ್ರಕರಣಗಳ ಇತ್ಯರ್ಥವಾಗುತ್ತದೆ.

ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕಾ? ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ!

ಲೋಕಾಯುಕ್ತ ಬದಲು ಸಿಬಿಐ ತನಿಖೆಗೆ ನೀಡಬೇಕು ಎಂಬ ಒತ್ತಾಯವನ್ನು ಪ್ರತಿಪಕ್ಷಗಳು ಮಾಡುತ್ತಿವೆಯಲ್ಲ?

- ಒಂದು ಕಡೆ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳಿಂದ ತನಿಖೆ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂಬ ಅನುಮಾನ ಸಹಜ. ಮತ್ತೊಂದು ಕಡೆ ಸಿಬಿಐ ಸಹ ಇನ್ನೊಂದು ಪಕ್ಷ ಆಡಳಿತದಲ್ಲಿರುವಾಗ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಯೂ ಸಹ ಸಹಜವಾಗಿ ಮೂಡುತ್ತದೆ. ಸಿಬಿಐ ಬರಬೇಕು ಎಂಬುದು ಕೇಳುವುದು ಕೂಡ ಅಷ್ಟೊಂದು ಸರಿಯಲ್ಲ. ಲೋಕಾಯುಕ್ತ ಪೊಲೀಸರು ಸಹ ಸ್ವತಂತ್ರವಾಗಿ ತನಿಖೆ ನಡೆಸಲಿದ್ದಾರೆ.

click me!