ಸರ್ಕಾರದ ನೆರವು ಮತ್ತು ರೈತರ ಸಹಕಾರದೊಂದಿಗೆ ಕಾವೇರಿ ನದಿ ಪಾತ್ರದಲ್ಲಿ ಕೈಗೊಂಡಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ| ಬರುವ ನವೆಂಬರ್ ಅಂತ್ಯದೊಳಗೆ ನದಿಯ ಇಕ್ಕೆಲಗಳಲ್ಲಿ 1 ಕೋಟಿ 10 ಲಕ್ಷ ಸಸಿಗಳನ್ನು ನೆಡಲಾಗುವುದು| ಸತ್ಕಾರ್ಯ- ‘ಕಾವೇರಿ ಕೂಗು’ ಅಭಿಯಾನದಡಿ ಈಶ ಫೌಂಡೇಶನ್‌ನಿಂದ ಬೃಹತ್ ವೃಕ್ಷಾರೋಪಣ|
ಬೆಂಗಳೂರು(ಆ.09): ಕಾವೇರಿ ಜಲಾಯನ ಪ್ರದೇಶದಲ್ಲಿ ಮುಂದಿನ ನವೆಂಬರ್ ತಿಂಗಳೊಳಗೆ 1.10 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ‘ಕಾವೇರಿ ಕೂಗು’ ಅಭಿಯಾನದ ನೇತೃತ್ವ ವಹಿಸಿರುವ ಈಶ ಫೌಂಡೇಶನ್ ಮುಖ್ಯಸ್ಥರಾದ ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದ್ದಾರೆ.
‘ಕಾವೇರಿ ಕೂಗು’ ಅಭಿಯಾನ ಆರಂಭಿಸಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ವೆಬಿನಾರ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನೆರವು ಮತ್ತು ರೈತರ ಸಹಕಾರದೊಂದಿಗೆ ಕಾವೇರಿ ನದಿ ಪಾತ್ರದಲ್ಲಿ ಕೈಗೊಂಡಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.ಬರುವ ನವೆಂಬರ್ ಅಂತ್ಯದೊಳಗೆ ನದಿಯ ಇಕ್ಕೆಲಗಳಲ್ಲಿ 1 ಕೋಟಿ 10 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಹೇಳಿದರು.
ಯೋಜನೆ ನಿರೀಕ್ಷೆಗಿಂತ ಹೆಚ್ಚು ವ್ಯಾಪಕವಾಗಿ ಅನುಷ್ಠಾನಗೊಳ್ಳುತ್ತಿದೆ. ಇದಕ್ಕೆ ಸರ್ಕಾರದ ನೆರವು, ಅಧಿಕಾರಿಗಳ ಬೆಂಬಲ, ರೈತರ ಉತ್ಸಾಹ ಕಾರಣವಾಗಿದೆ. ಇದೇ ರೀತಿ ಮುಂದಿನ 8ರಿಂದ 10 ವರ್ಷ ನಡೆಸಿದರೆ ಇಡೀ ವಿಶ್ವಕ್ಕೆ ಒಂದು ಸಕಾರಾತ್ಮಕ ಚಿಂತನೆ ನೀಡಿದಂತಾಗುತ್ತದೆ ಎಂದರು.
ಕೊರೋನಾ ಹಿನ್ನೆಲೆಯಲ್ಲಿ ಅಭಿಯಾನದ ವೇಗಕ್ಕೆ ಸ್ವಲ್ಪ ಅಡಚಣೆಯಾಗಿದ್ದರೂ ತಮಿಳುನಾಡಿನಲ್ಲಿ 11 ಲಕ್ಷ ಹಾಗೂ ಕರ್ನಾಟಕದಲ್ಲಿ 40 ಲಕ್ಷ ಸೇರಿ ಸುಮಾರು 51 ಲಕ್ಷ ಸಸಿಗಳನ್ನು ಈಗಾಗಲೇ ರೈತರಿಗೆ ವಿತರಿಸಲಾಗಿದೆ. ಇನ್ನು 60 ಲಕ್ಷ ಸಸಿಗಳ ವಿತರಣೆಗೆ ಸಿದ್ಧತೆ ನಡೆದಿದೆ. ಈ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಸುತ್ತೂರು ಸ್ವಾಮೀಜಿ, ಎಫ್‌ಪಿಒಗಳು, ರೈತ ಸಂಪರ್ಕ ಕೇಂದ್ರಗಳ ನೆರವು ಸಿಕ್ಕಿದೆ ಎಂದು ಹೇಳಿದರು.
ರೈತರಿಗೆ ಪ್ರತಿ ಗಿಡವನ್ನು ಸಂರಕ್ಷಿಸಲು ಮೊದಲು ನೀಡುತ್ತಿದ್ದ ವಾರ್ಷಿಕ 100 ರು.ಗಳ ಮೊತ್ತವನ್ನು ಈಗ 125 ರು.ಗೆ ಏರಿಸಲಾಗಿದೆ. ಸಸಿಗಳಿಗೆ ಹೆಚ್ಚು ಬೇಡಿಕೆ ಬರುತ್ತಿದ್ದು, ನರ್ಸರಿಗಳಲ್ಲಿ ಬೆಳೆಸಲಾಗುತ್ತಿರುವ ಗಿಡಗಳು ಸಾಕಾಗುವುದಿಲ್ಲ ಎನಿಸುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಆ ಮೂಲಕ ನದಿಯನ್ನು ಸಂರಕ್ಷಿಸುವುದು ಅಭಿಯಾನದ ಉದ್ದೇಶವಾಗಿದೆ. ಮರ ಆಧಾರಿತ ವ್ಯವಸಾಯದಿಂದ ರೈತರು ನಾಲ್ಕೈದು ವರ್ಷಗಳಲ್ಲಿ ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು.
ಆರೋಪ ಆಧಾರರಹಿತ:
ಕಾವೇರಿ ಕೂಗು ಅಭಿಯಾನದ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸದ್ಗುರು, ಆರೋಪಗಳು ಸಂಪೂರ್ಣ ನಿರಾಧಾರ. ರೈತರಿಂದ ಹಣ ಸಂಗ್ರಹ ಮಾಡುತ್ತಿಲ್ಲ. ಸಾರ್ವಜನಿಕರು ಒಂದು ಗಿಡಕ್ಕೆ 42 ರು. ದೇಣಿಗೆ ನೀಡಬಹುದೆಂಬ ಕರೆಗೆ ಸ್ಪಂದಿಸಿ 122 ರಾಷ್ಟ್ರಗಳಿಂದ 5 ಕೋಟಿ ರು. ದೇಣಿಗೆ ಸಂಗ್ರಹವಾಗಿದೆ. ಅದೆಲ್ಲವನ್ನೂ ಅಭಿಯಾನಕ್ಕೆ ಬಳಸಲಾಗುತ್ತಿದೆ ಎಂದರು.
ಡಿಜಿಟಲ್ ಪರ್ಮಿಟ್‌ನಿಂದ ಲಾಭ:
ರೈತರು ಮರಗಳನ್ನು ಬೆಳೆಸಿ ಕಟಾವು ಮಾಡಲು ಕೇಂದ್ರ ಪರಿಸರ ಸಚಿವಾಲಯ ಇದೀಗ ಡಿಜಿಟಲ್ ಪರ್ಮಿಟ್‌ಗಳನ್ನು ನೀಡಲು ನಿರ್ಧರಿಸಿದೆ. ಇದರಿಂದಾಗಿ ಇನ್ನು ಮುಂದೆ ರೈತರು ತಮ್ಮ ಭೂಮಿಯಲ್ಲಿ ಬೆಳೆದ ಮರಗಳನ್ನು ಕತ್ತರಿಸಿ ಸುಲಭವಾಗಿ ಮಾರಾಟ ಮಾಡುವ ವ್ಯವಸ್ಥೆ ಬರಲಿದೆ ಎಂದು ತಿಳಿಸಿದರು.