ಕ್ರೀಡೆಯಲ್ಲೂ ಕನ್ನಡಿಗರಿಗೆ ಕಡಿಮೆ ಪ್ರಾತಿನಿಧ್ಯ

By Kannadaprabha News  |  First Published Nov 7, 2022, 9:12 AM IST
  • ಕ್ರೀಡೆಯಲ್ಲೂ ಕನ್ನಡಿಗರ ಕಡಿಮೆ ಪ್ರಾತಿನಿಧ್ಯ
  •  ಕ್ರಿಕೆಟ್‌, ಹಾಕಿಯಲ್ಲಿ ಕನ್ನಡಿಗರ ಸಂಖ್ಯೆ ಕಣ್ಮರೆ
  • ಒಲಿಂಪಿಕ್ಸ್‌ನಲ್ಲಿ ರಾಜ್ಯದ ಅಥ್ಲೀಟ್‌ಗಳ ಸಂಖ್ಯೆಯಲ್ಲಿ ಭಾರೀ ಕುಸಿತ
  •  ಸರ್ಕಾರಗಳಿಂದ ಕ್ರೀಡೆಯ ನಿರ್ಲಕ್ಷ್ಯ, ತಾರತಮ್ಯ
  • ಯೋಜನೆಗಳು ಬರೀ ಘೋಷಣೆಗೆ ಸೀಮಿತ, ಅನುದಾನವೂ ಇಲ್ಲ

ನಾಸಿರ್‌ ಸಜಿಪ

ಬೆಂಗಳೂರು (ನ.7) : ಭಾರತದಲ್ಲಿ ಕ್ರೀಡೆ ಅಂದಾಗ ತಕ್ಷಣ ಮನಸ್ಸಲ್ಲಿ ಮೂಡುವುದು ಕ್ರಿಕೆಟ್‌. ಉಳಿದಂತೆ ಹಾಕಿ, ಫುಟ್ಬಾಲ್‌, ಕಬಡ್ಡಿಯೂ ಹೆಸರು ಉಳಿಸಿಕೊಂಡಿದೆ. ಆದರೆ ಈ ಹೆಸರುಗಳನ್ನು ಕೇಳುವಾಗಲೂ ಮುಂಚೂಣಿಯಲ್ಲಿ ಬಂದು ನಿಲ್ಲುವ ರಾಜ್ಯಗಳು ಹರಾರ‍ಯಣ, ಉತ್ತರಪ್ರದೇಶ, ದೆಹಲಿ, ಒಡಿಶಾ, ಪಂಜಾಬ್‌ ಸೇರಿದಂತೆ ಇನ್ನಿತರ ಉತ್ತರ ಭಾರತದ ರಾಜ್ಯಗಳೇ ಹೊರತು ಕರ್ನಾಟಕದ ಹೆಸರು ಬಲು ಅಪರೂಪ. ಅದರಲ್ಲೂ ಅಥ್ಲೆಟಿಕ್ಸ್‌ನಲ್ಲಿ ಕನ್ನಡಿಗರ ಪ್ರಾತಿನಿಧ್ಯ ಹುಡುಕಿದರೂ ಸಿಗದು.

Tap to resize

Latest Videos

undefined

ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ: ಸಿಎಂ ಭರವಸೆ

ಒಂದು ಕಾಲದಲ್ಲಿ ಕ್ರಿಕೆಟ್‌, ಹಾಕಿ ಸೇರಿದಂತೆ ಕೆಲ ಪ್ರಮುಖ ಕ್ರೀಡೆಗಳಲ್ಲಿ ಕನ್ನಡಿಗರ ಪಾರುಪತ್ಯ ಹೆಚ್ಚಿತ್ತು. ಅದರಲ್ಲೂ ಹಾಕಿ ಕಂಡ ಸುವರ್ಣಯುಗದಲ್ಲಿ ಕನ್ನಡಿಗರ ಕೊಡುಗೆ ದಪ್ಪಾಕ್ಷರಗಳಲ್ಲಿ ಬರೆಯುಂತದ್ದು. ವಿಪರ್ಯಾಸವೆಂದರೆ ಈಗ ಹಾಕಿ, ಕ್ರಿಕೆಟ್‌ನಲ್ಲೂ ಕನ್ನಡಿಗರ ಹೆಸರು ಮರೆಯಾಗುತ್ತಿದೆ. ಇನ್ನು ಫುಟ್ಬಾಲ್‌, ಬ್ಯಾಡ್ಮಿಂಟನ್‌, ಶೂಟಿಂಗ್‌, ಬಾಕ್ಸಿಂಗ್‌, ಕುಸ್ತಿ, ವೆಟ್‌ಲಿಫ್ಟಿಂಗ್‌ನಲ್ಲಿ ಕನ್ನಡಿಗರು ಮಿಂಚಿದರೆ ಅದುವೇ ಅಚ್ಚರಿ. ಇದರ ನಡುವೆಯೂ ದೇಶದಲ್ಲಿ ಈಜಿನಲ್ಲಿ ಕನ್ನಡಿಗರ ಪ್ರಾಬಲ್ಯ ಕಂಡುಬರುತ್ತಿರುವುದು ಸಂತಸದ ವಿಚಾರ.

ಕ್ರಿಕೆಟಲ್ಲೂ ಕನ್ನಡಿಗರ ಕಣ್ಮರೆ

ಬಿಸಿಸಿಐನ ನೂತನ ಅಧ್ಯಕ್ಷ ರೋಜರ್‌ ಬಿನ್ನಿ, ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ಬ್ರಿಜೇಶ್‌ ಪಟೇಲ್‌, ಸಯ್ಯದ್‌ ಕೀರ್ಮಾನಿ, ಜಿ.ವಿಶ್ವನಾಥ್‌, ವೆಂಕಟೇಶ್‌ಪ್ರಸಾದ್‌ ದೇಶದ ಕ್ರಿಕೆಟಲ್ಲಿ ದೊಡ್ಡ ಸದ್ದು ಮಾಡಿದ ಹೆಸರುಗಳು. ಆದರೆ ಈಗ ಕೆ.ಎಲ್‌.ರಾಹುಲ್‌ ಬಿಟ್ಟರೆ ಉಳಿದವರ ಹೆಸರು ಕೇಳಿಬರದು. ಮನೀಶ್‌ ಪಾಂಡೆ, ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ಪ್ರಸಿದ್‌್ಧ ಕೃಷ್ಣ, ಕೆ.ಗೌತಮ್‌ ಐಪಿಎಲ್‌ನಲ್ಲಿ ಮಿಂಚಿದರೂ ರಾಷ್ಟ್ರೀಯ ತಂಡದಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಕಾಣಸಿಗುತ್ತಾರೆ. ಅಂಡರ್‌-19 ತಂಡದಲ್ಲೂ ರಾಜ್ಯದ ಕ್ರಿಕೆಟಿಗರ ಸಂಖ್ಯೆ ಕಡಿಮೆಯಾಗುತ್ತಿದೆ.

ಹಾಕಿಗೆ ಏನಾಯಿತು?:

ದೇಶದ ಹಾಕಿಗೆ ಕನ್ನಡಿಗರ ಕೊಡುಗೆ ಅಪಾರ. ಒಂದು ಕಾಲದಲ್ಲಿ ಹಾಕಿ ಎಂದರೆ ಕರ್ನಾಟಕ ಎಂಬಂತಿದ್ದ ಪರಿಸ್ಥಿತಿ ಈಗ ಬದಲಾಗಿದೆ. 1970-2000ದ ನಡುವೆ ಕರ್ನಾಟಕದ ಆಟಗಾರರು ಹಾಕಿಯಲ್ಲಿ ಅಬ್ಬರಿಸಿದ್ದರು. ಒಲಿಂಪಿಕ್ಸ್‌ಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸುವಲ್ಲಿ ಬಂಡು ಪಾಟೀಲ, ಎಂ.ಪಿ.ಗಣೇಶ್‌, ಎಂ.ಎಂ.ಸೋಮಯ್ಯ, ಎ.ಬಿ.ಸುಬ್ಬಯ್ಯ, ಎಂ.ಪಿ.ಗೋವಿಂದ, ವಿ.ಅರ್‌.ರಘುನಾಥ್‌, ಭರತ್‌ಚೆಟ್ರಿ, ಬಿ.ಪಿ.ಗೋವಿಂದ ಸೇರಿದಂತೆ ಹಲವರ ಕಾಣಿಕೆ ಮಹತ್ವದ್ದು. ಆದರೆ ಈಗ ಎಸ್‌.ವಿ.ಸುನಿಲ್‌ ಬಿಟ್ಟರೆ ಉಳಿದವರ ಹೆಸರು ಕನ್ನಡಿಗರಿಗೆ ಗೊತ್ತಿಲ್ಲ. 4 ದಶಕಗಳ ಬಳಿಕ ಇತ್ತೀಚೆಗಷ್ಟೇ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿತು. ತೀರಾ ಇತ್ತೀಚೆಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದರೂ ತಂಡದಲ್ಲಿ ಒಬ್ಬನೂ ಕನ್ನಡಿಗನಿರಲಿಲ್ಲ ಎನ್ನುವುದು ವಿಪರ್ಯಾಸ.

ಬ್ಯಾಡ್ಮಿಂಟನ್‌ನಲ್ಲೂ ಹೆಸರಿಲ್ಲ

ದೇಶದ ಬ್ಯಾಡ್ಮಿಂಟನ್‌ಗೂ ಕನ್ನಡಿಗರ ಕೊಡುಗೆ ಕಮ್ಮಿಯೇನಲ್ಲ. ಪ್ರಕಾಶ್‌ ಪಡುಕೋಣೆ, ವಸಂತ್‌ಕುಮಾರ್‌, ಅರವಿಂದ್‌ ಭಟ್‌ ಸೇರಿದಂತೆ ಹಲವರು ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಖ್ಯಾತಿ ತಂದವರು. ಆದರೆ ಸದ್ಯ ಅಶ್ವಿನಿ ಪೊನ್ನಪ್ಪ ಬಿಟ್ಟರೆ ಬೇರೆ ಕನ್ನಡಿಗರ ಹೆಸರು ಕಾಣಸಿಗದು. ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣರಂತೆ ಗುರುತಿಸಿಕೊಳ್ಳಲು ಈಗ ಯಾರೂ ಇಲ್ಲ. ಇನ್ನು ಫುಟ್ಬಾಲ್‌, ಕಬಡ್ಡಿಯಲ್ಲಿ ಹೆಸರಿಸಲು ಕನ್ನಡಿಗರೇ ಸಿಗುತ್ತಿಲ್ಲ. ಅಥ್ಲೆಟಿಕ್ಸ್‌ನಲ್ಲಿ ಕನ್ನಡಿಗರು ಇನ್ನಷ್ಟೇ ಮೇಲೆ ಬರಬೇಕಿದೆ. ಉಳಿದ ಕ್ರೀಡೆಗಳಲ್ಲಂತೂ ರಾಜ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ದೊಡ್ಡ ಹೆಸರುಗಳೇ ಇಲ್ಲ.

ಒಲಿಂಪಿಕ್ಸ್‌ನಲ್ಲಿ ಬರೀ ಐವರು!

ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ 120 ಅಥ್ಲೀಟ್‌ಗಳ ಪಟ್ಟಿಯಲ್ಲಿ ಕನ್ನಡಿಗರ ಸಂಖ್ಯೆ ಕೇವಲ 5. ಇದರಲ್ಲಿ ಒಬ್ಬರಿಗೂ ಪದಕ ಸಿಕ್ಕಿಲ್ಲ. ಇನ್ನು, ಈ ಪಟ್ಟಿಯಲ್ಲಿ ಶೇ.40ರಷ್ಟುಅಥ್ಲೀಟ್‌ಗಳು ಕೇವಲ ಹರಾರ‍ಯಣ, ಪಂಜಾಬ್‌ನವರು ಎಂದರೆ ನಂಬಲೇಬೇಕು.

ಪ್ರಾತಿನಿಧ್ಯ ಕುಸಿತಕ್ಕೇನು ಕಾರಣ?

ಕ್ರೀಡೆಯ ಬಗ್ಗೆ ಉತ್ತರ ಭಾರತದ ಜನರಿಗಿರುವ ಆಸಕ್ತಿ ಕರ್ನಾಟಕದ ಯುವ ಜನತೆಯಲ್ಲಿಲ್ಲ ಎನ್ನುವುದು ಸತ್ಯವಾದರೂ ಸರ್ಕಾರಗಳ ನಿರಾಸಕ್ತಿ ತಳ್ಳಿ ಹಾಕುವಂತಿಲ್ಲ. ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಯುವಜನತೆ ಕ್ರೀಡೆಯತ್ತ ಮುಖ ಮಾಡುತ್ತಿಲ್ಲ. ಕೆಲ ಯೋಜನೆಗಳನ್ನು ಜಾರಿಗೆ ತಂದರೂ ತಾರತಮ್ಯ ನೀತಿ ಅಥ್ಲೀಟ್‌ಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. ಹಣಕಾಸಿನ ನೆರವೂ ಸಿಗುತ್ತಿಲ್ಲ. ಗ್ರಾಮೀಣ ಮಟ್ಟದಲ್ಲಿ ಮಿಂಚುತ್ತಿದ್ದರೂ ಅವರನ್ನು ಗುರುತಿಸುವ ಕೆಲಸ ಸರ್ಕಾರಗಳು ಮಾಡುತ್ತಿಲ್ಲ. ಗುಣಮಟ್ಟದ ತರಬೇತಿ, ಕೋಚ್‌ಗಳ ಅಲಭ್ಯ, ಕ್ರೀಡಾಂಗಣಗಳ ಕೊರತೆ, ಪೌಷ್ಟಿಕ ಆಹಾರದ ಅಲಭ್ಯತೆ ಕೂಡ ಕನ್ನಡಿಗರ ಪ್ರಾತಿನಿಧ್ಯಕ್ಕೆ ಮುಳುವಾಗುತ್ತಿದೆ.

ಅಗ್ನಿವೀರರಾಗಲೂ ಹಿಂದಿ, ಇಂಗ್ಲಿಷ್‌ನಲ್ಲೇ ಪರೀಕ್ಷೆ: ಕನ್ನಡಕ್ಕಿಲ್ಲ ಅವಕಾಶ..!

ಕೇಂದ್ರದ ಅನುದಾನದಲ್ಲೂ ತಾರತಮ್ಯ

ಕೇಂದ್ರ ಸರ್ಕಾರದ ಅನುದಾನದ ತಾರತಮ್ಯ ಕ್ರೀಡೆಯನ್ನೂ ಬಿಟ್ಟಿಲ್ಲ. ಖೇಲೋ ಇಂಡಿಯಾ ಸೇರಿದಂತೆ ಕೆಲ ಯೋಜನೆಗಳಡಿ ಬರುವ ಅನುದಾನ ರಾಜ್ಯಕ್ಕೆ ಏನೇನೂ ಸಾಲದು ಎಂಬಂತಿದೆ. 2022-23ರ ಅನುದಾನದಲ್ಲಿ ಸರ್ಕಾರ 3063 ಕೋಟಿ ರು. ಅನುದಾನ ಮೀಸಲಿರಿಸಿದೆ. ಆದರೆ ಈ ಪೈಕಿ ಗುಜರಾತ್‌, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ರಾಜಸ್ಥಾನಕ್ಕೇ ಹೆಚ್ಚಿನ ಪಾಲಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಇನ್ನು, ರಾಜ್ಯ ಸರ್ಕಾರ 2022-23ರ ಬಜೆಟ್‌ನಲ್ಲಿ ಹೆಚ್ಚಿನ ಮೊತ್ತ ಮೀಸಲಿಟ್ಟಿಲ್ಲ. ಕ್ರೀಡಾಂಗಣಗಳ ಉನ್ನತೀಕರಣಕ್ಕೆ 100 ಕೋಟಿ ರು.ಸಮಗ್ರ ಯೋಜನೆ ಹಾಗೂ ಗ್ರಾಪಂ ಮಟ್ಟದಲ್ಲಿ ಕ್ರೀಡಾ ಅಂಕಣಗಳ ನಿರ್ಮಾಣಕ್ಕೆ 504 ಕೋಟಿ ಘೋಷಿಸಿದರೂ ಸಮರ್ಪಕ ಬಳಕೆಯ ಭರವಸೆ ಯಾರಿಗೂ ಇಲ್ಲ.

click me!