Compensation For Crop loss : ಮುಂಗಾರಲ್ಲಿ ಬೆಳೆ ಪರಿಹಾರ ಪಡೆದಿದ್ರೆ ಹಿಂಗಾರಿಗೆ ಇಲ್ಲ!

By Kannadaprabha NewsFirst Published Dec 24, 2021, 8:00 AM IST
Highlights
  • ಮುಂಗಾರಲ್ಲಿ ಬೆಳೆ ಪರಿಹಾರ ಪಡೆದಿದ್ರೆ ಹಿಂಗಾರಿಗೆ ಇಲ್ಲ!
  •   ಹಿಂಗಾರಿನ ಬೆಳೆ ಹಾನಿಗೆ ಪರಿಹಾರ ಸಿಗದೆ ಲಕ್ಷಾಂತರ ರೈತರ ಪರದಾಟ
  •  ಪರಿಹಾರ ಪಡೆಯಲು ಭೂಮಿ ತಂತ್ರಾಂಶದಲ್ಲಿ ಅರ್ಜಿಗಳೇ ಸ್ವೀಕಾರವಾಗುತ್ತಿಲ್ಲ
     

ವರದಿ :  ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು (ಡಿ.24):  ಮುಂಗಾರು (Monsoon) ಹಂಗಾಮಿನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಬೆಳೆ ಹಾನಿ ಪರಿಹಾರ ಪಡೆದಿದ್ದವರು ಈಗ ಹಿಂಗಾರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ (Rain) ಉಂಟಾದ ಬೆಳೆ ಹಾನಿಗೆ ಅರ್ಜಿ ಸಲ್ಲಿಸಿದರೆ ಅರ್ಜಿಗಳೇ ಸ್ವೀಕಾರವಾಗುತ್ತಿಲ್ಲ. ಇದರಿಂದ ಲಕ್ಷಕ್ಕೂ ಅಧಿಕ ಅನ್ನದಾತರು ಪರಿಹಾರದಿಂದ ವಂಚಿತರಾಗಿದ್ದಾರೆ. ಈ ಸಂಖ್ಯೆ ಬೆಳಗಾವಿ (Belagavi) ಜಿಲ್ಲೆಯಲ್ಲೇ ಅಧಿಕ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಭಾರೀ ಮಳೆಗೆ ರಾಜ್ಯಾದ್ಯಂತ ಜುಲೈ ತಿಂಗಳಿನಲ್ಲೇ 2,50,322 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಫಸಲು ಹಾನಿಯಾಗಿತ್ತು. ಇದರಲ್ಲಿ ಬಹುತೇಕ ಉತ್ತರ ಕರ್ನಾಟಕ (Karnataka) ಭಾಗದಲ್ಲೇ ಹೆಚ್ಚು ಹಾನಿಯಾಗಿತ್ತು. ಲಕ್ಷಕ್ಕೂ ಅಧಿಕ ರೈತರು (farmers) ಸಂಕಷ್ಟಕ್ಕೆ ಒಳಗಾಗಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಇದೀಗ ತಾಂತ್ರಿಕ ಕಾರಣದಿಂದಾಗಿ ಮುಂಗಾರು ಹಂಗಾಮಿನಲ್ಲಿ (Monsoon) ಪರಿಹಾರ ಪಡೆದಿದ್ದವರು ಹಿಂಗಾರಿನಲ್ಲೂ ಬೆಳೆ ಹಾನಿಯಾಗಿದ್ದರೆ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಗಾರು ಬೆಳೆ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್‌ಡಿಆರ್‌ಎಫ್‌ NDRF) ಯಡಿ ಪರಿಹಾರ ಪಡೆದಿದ್ದವರ ವಿವರಗಳನ್ನು ಭೂಮಿ ತಂತ್ರಾಂಶಕ್ಕೆ ಅಪ್‌ ಲೋಡ್‌ ಮಾಡುವಾಗ ಖಾರಿಫ್‌ ಎಂದು ನಮೂದಿಸಲಾಗಿದೆ. ಪ್ರಸಕ್ತ ಪರಿಹಾರ ನೀಡುತ್ತಿರುವುದರ ವಿವರದಲ್ಲಿ ಖಾರಿಫ್‌/ರಬಿ ಎಂದು ನಮೂದಾಗುತ್ತಿದೆ. ಇದರಿಂದಾಗಿ ಮುಂಗಾರಿನಲ್ಲಿ ಉಂಟಾದ ಬೆಳೆ ನಷ್ಟಕ್ಕೆ ಈಗಾಗಲೇ ಪರಿಹಾರ ಪಡೆದವರು, ಈಗ ಪರಿಹಾರ ಪಡೆಯಲು ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗುತ್ತಿಲ್ಲ. ಈಗಾಗಲೇ ಪರಿಹಾರ ಪಾವತಿಸಲಾಗಿದೆ ಎಂದು ತಂತ್ರಾಶ ಹೇಳುತ್ತಿದೆ.

ಬೆಳಗಾವಿಯಲ್ಲೇ ಹೆಚ್ಚು ಹಾನಿ:  ಜುಲೈನಲ್ಲಿ ಮಳೆಯಿಂದಾಗಿ ಪ್ರಮುಖವಾಗಿ ಬೆಳಗಾವಿ (Belagavi) ಜಿಲ್ಲೆಯಲ್ಲಿ 4926 ಹೆಕ್ಟೇರ್‌ ಭತ್ತ, 12194 ಹೆಕ್ಟೇರ್‌ ಮೆಕ್ಕೆಜೋಳ, 14598 ಹೆಕ್ಟೇರ್‌ ಸೋಯಾಬೀನ್‌, ಧಾರವಾಡದಲ್ಲಿ 3846 ಹೆಕ್ಟೇರ್‌ ಮೆಕ್ಕೆಜೋಳ, ಗದಗದಲ್ಲಿ 3507 ಹೆಕ್ಟೇರ್‌, ಹಾವೇರಿಯಲ್ಲಿ (Haveri) 5032 ಹೆಕ್ಟೇರ್‌ ಬಾಗಲಕೋಟೆಯಲ್ಲಿ 3410 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿದ್ದವು.

ಮುಂಗಾರಿನಲ್ಲಿ (Monsoon) ಬೆಳೆ ಹಾನಿ ಪರಿಹಾರ ಪಡೆದ ರೈತರು, ಬಳಿಕ ಹೆಸರು, ಭತ್ತ, ರಾಗಿ, ಗೋವಿನಜೋಳ, ಮೆಣಸಿನಕಾಯಿ, ಕಡಲೆ, ಗೋದಿ, ಹಿಂಗಾರು ಜೋಳ, ಕುಸುಬಿ ಮತ್ತಿತರ ಬೆಳೆಗಳನ್ನು ಬೆಳೆದಿದ್ದರು. ಅಕ್ಟೋಬರ್‌-ನವೆಂಬರ್‌ನಲ್ಲಿ ಎಡಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಪುನಃ ಬೆಳೆ ಹಾನಿ ಉಂಟಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಪುನಃ ಬೆಳೆ ಹಾನಿ ಪರಿಹಾರ ಪಡೆಯಲು ಸಾಧ್ಯವಾಗದೇ ಸಂಕಷ್ಟಅನುಭವಿಸುತ್ತಿದ್ದಾರೆ.

‘ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಮುಂಗಾರಿನಲ್ಲಿ ಪರಿಹಾರ ಪಡೆದಿದ್ದು. ಹಿಂಗಾರಿನಲ್ಲೂ ನಷ್ಟಉಂಟಾಗಿದ್ದರೆ ಪರಿಹಾರ ಕೊಡುವ ಸಂಬಂಧ ಪರಿಶೀಲನೆ ನಡೆಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮಸ್ಯೆ ಪರಿಹರಿಸಿ, ಅರ್ಜಿಗೆ ಅವಕಾಶ ನೀಡಿ

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಪಡೆದಿದ್ದ ಲಕ್ಷಾಂತರ ರೈತರು ಇದೀಗ ಬೆಳೆ ಹಾನಿ ಪರಿಹಾರದಿಂದ ವಂಚಿತರಾಗಿದ್ದಾರೆ. ಮುಂಗಾರಿನಲ್ಲಿ ಬೆಳೆ ಹಾನಿಗೊಳಗಾಗಿ ಪರಿಹಾರ ಪಡೆದ ನಂತರ ರೈತರು ಯಾವುದೇ ಬೆಳೆ ಬೆಳೆದಿಲ್ಲ ಎಂಬುದನ್ನು ಒಪ್ಪಬೇಕೆ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ ಎನ್ನುವಂತಿದೆ ಈ ನಿಯಮ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ರೈತ ಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ್‌ ಸೊಬರದಮಠ ಆಗ್ರಹಿಸಿದ್ದಾರೆ.

click me!