ಪೌರಸಂಸ್ಥೆಗಳಲ್ಲಿ ಶೇ.33 ಒಬಿಸಿ ಮೀಸಲಿಗೆ ಶಿಫಾರಸು: ಭಕ್ತವತ್ಸಲ ಆಯೋಗದಿಂದ ವರದಿ ಸಲ್ಲಿಕೆ

By Govindaraj S  |  First Published Jul 22, 2022, 7:41 AM IST

ರಾಜ್ಯದ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ‘ಎ’ ಮತ್ತು ‘ಬಿ’ ಪ್ರವರ್ಗದಡಿ ಬರುವ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೂರನೇ ಒಂದು ಭಾಗ ಅಥವಾ ಶೇ.33ರಷ್ಟು ಮೀಸಲಾತಿ ನೀಡುವುದು ಸೂಕ್ತ ಎಂದು ನ್ಯಾಯಮೂರ್ತಿ ಭಕ್ತವತ್ಸಲ ಅವರ ನೇತೃತ್ವದ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.


ಬೆಂಗಳೂರು (ಜು.22): ರಾಜ್ಯದ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ‘ಎ’ ಮತ್ತು ‘ಬಿ’ ಪ್ರವರ್ಗದಡಿ ಬರುವ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೂರನೇ ಒಂದು ಭಾಗ ಅಥವಾ ಶೇ.33ರಷ್ಟು ಮೀಸಲಾತಿ ನೀಡುವುದು ಸೂಕ್ತ ಎಂದು ನ್ಯಾಯಮೂರ್ತಿ ಭಕ್ತವತ್ಸಲ ಅವರ ನೇತೃತ್ವದ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಸರ್ಕಾರ ಈ ವರದಿಯನ್ನು ಶುಕ್ರವಾರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಅದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮುಂದೆ ಮಂಡನೆ ಮಾಡುವ ಸಾಧ್ಯತೆಯಿದೆ. 

ಹೀಗಾದಲ್ಲಿ ನಗರ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿದ್ದ ತಡೆ ನಿವಾರಣೆಯಾದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಸ್ವತಂತ್ರ ಆಯೋಗ ರಚಿಸಿ ವರದಿ ಪಡೆಯಬೇಕು ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದು ಎಲ್ಲ ರಾಜ್ಯಗಳಿಗೂ ಅನ್ವಯಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷ ಸಭೆ ನಡೆಸಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿದ ಬಳಿಕವೇ ಚುನಾವಣೆ ನಡೆಸಲು ನಿರ್ಧರಿಸಿ ಆಯೋಗ ರಚಿಸಲು ನಿರ್ಧರಿಸಿತ್ತು. 

Tap to resize

Latest Videos

ಸಿದ್ದು ಮುಗಿಸಲು ಉತ್ತರ ಕುಮಾರನ ತಂಡದ ಖೆಡ್ಡ ಸೃಷ್ಟಿ: ಸುಧಾಕರ್‌

ಅದರಂತೆ ಕಳೆದ ಮೇ 7ರಂದು ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ಗುರುವಾರ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದು, ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಅನೇಕ ಅಂಶಗಳನ್ನು ಉಲ್ಲೇಖಿಸಿದೆ. ಮುಖ್ಯವಾಗಿ ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ಮುಂದುವರೆಸುವುದರೊಂದಿಗೆ ಒಬಿಸಿ ಮತ್ತು ಎಸ್ಸಿ​-ಎಸ್ಟಿಸಮುದಾಯಗಳಿಗೆ ನೀಡುವ ಮೀಸಲಾತಿ ಪ್ರಮಾಣ ಶೇ.50ರಷ್ಟುಮೀರಬಾರದು. ಈ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಕೂಡ ಆಯೋಗ ಸೂಚಿಸಿದೆ.

3ನೇ 1ರಷ್ಟು ಮೀಸಲು ಓಕೆ: ರಾಜ್ಯದಲ್ಲಿ 1996, 2001, 2010 ಮತ್ತು 2015ರಲ್ಲಿ ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂಬಂಧ ಅವಲೋಕಿಸಿದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಬಿಸಿ ವ್ಯಾಪ್ತಿಯ ಪ್ರವರ್ಗ ಎ ಮತ್ತು ಬಿ ಅಡಿ ಬರುವ ಜಾತಿ, ಸಮುದಾಯದ ಜನರು ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂದಿಗೂ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಅಡಿ ಬರುವ ಸಮುದಾಯಗಳಿಗೆ (ಅಲ್ಪಸಂಖ್ಯಾತರನ್ನೂ ಒಳಗೊಂಡು) ಒಟ್ಟು ಸ್ಥಾನಗಳ 1/3 ಭಾಗ ಅಥವಾ ಶೇ.33ರಷ್ಟುಮೀಸಲಾತಿಯನ್ನು ಒದಗಿಸುವುದು ಅತ್ಯಂತ ಸಮಂಜಸವಾಗಿದೆ ಎಂದು ಹೇಳಿದೆ.

ಭಾರತದ ಸಂವಿಧಾನದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಪಟ್ಟಿಯನ್ನು ಗುರುತಿಸುವ ಆರ್ಟಿಕಲ್‌ 15(4) ಮತ್ತು 16(4)ರಲ್ಲೇ ಆ ಸಮುದಾಯಗಳಿಗೆ ರಾಜಕೀಯ ಮೀಸಲಾತಿಯನ್ನೂ ಅಳವಡಿಸಲಾಗಿದೆ. ರಾಜಕೀಯ ಮೀಸಲಾತಿಗಾಗಿ ಪ್ರತ್ಯೇಕ ಉಲ್ಲೇಖವನ್ನು ನೀಡಲಾಗಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕು. ಈ ಆಧಾರದ ಮೇಲೆ ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಉದ್ದೇಶಕ್ಕಾಗಿ ಪಟ್ಟಿಮಾಡಿರುವ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.44ರಷ್ಟಿರುವ ಒಬಿಸಿಯವರಿಗೂ (ಅಲ್ಪಸಂಖ್ಯಾತರನ್ನೂ ಒಳಗೊಂಡು) ರಾಜಕೀಯ ಮೀಸಲಾತಿಗೆ ಪರಿಗಣಿಸಬೇಕು. ಒಬಿಸಿಯವರು ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಆಧಾರದ ಮೇಲೆ ಅವರನ್ನು ರಾಜಕೀಯ ಮೀಸಲಾತಿಗೆ ಪರಿಗಣಿಸಬೇಕು ಎಂದು ಹೇಳಿದೆ.

ಮುಸ್ಲಿಂ ಬಿಟ್ಟು ಬೇರೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಸಿಕ್ಕಿಲ್ಲ: ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಡುವ ಬೇರೆ ಯಾವ ಸಮುದಾಯದವರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಮೀಸಲಾತಿಯ ಲಾಭವನ್ನು ಪಡೆಯಲು ಇದುವರೆಗೆ ಸಾಧ್ಯವಾಗಿರುವುದಿಲ್ಲ. ಪ್ರವರ್ಗ 2(ಬಿ) ಅಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಕೇವಲ ಮುಸ್ಲಿಂ ಸಮುದಾಯವನ್ನು ಮಾತ್ರ ಗಣನೆಗೆ ಪಡೆಯಲಾಗಿದೆ. 1996, 2001, 2010 ಮತ್ತು 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ. 

ಇನ್ಯಾವುದೇ ಅಲ್ಪಸಂಖ್ಯಾತರ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಆಯೋಗ ಹೇಳಿದೆ. ಹಾಗಾಗಿ ಅಲ್ಪಸಂಖ್ಯಾತರು ಸೇರಿದಂತೆ ಒಬಿಸಿ ಅಡಿ ಬರುವ ಎಲ್ಲ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಪರಿಣಾಮಕಾರಿಯಾಗಿ ದೊರೆಯುವಂತಾಗಲು 2027 ಅಥವಾ 2028ರ ಕರ್ನಾಟಕ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಡಿ ಪರಿಗಣಿಸಲ್ಪಡುವ ಪ್ರವರ್ಗ-ಎ ಮತ್ತು ಬಿ ಗಳನ್ನು ಮತ್ತೆರಡು ವರ್ಗಗಳಾಗಿ ಮರು ವರ್ಗೀಕರಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.

ನನ್ನ ಮೇಲೆ ಸಿಟ್ಟಾಗಲು ಸಿಎಂಗೆ ಹಕ್ಕಿದೆ: ಪ್ರತಾಪ ಸಿಂಹ

ಕೆಎಂಸಿ ಕಾಯ್ದೆ ತಿದ್ದುಪಡಿಗೆ ಸಲಹೆ: ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್‌ 57 ರ ಪ್ರಕಾರ ಮೇಯರ್‌ ಮತ್ತು ಉಪ ಮೇಯರ್‌ ಅವರ ಅಧಿಕಾರಾವಧಿಯನ್ನು ಚುನಾವಣಾ ದಿನಾಂಕದಿಂದ 30 ತಿಂಗಳುಗಳವರೆಗೆ ನಿಗದಿಪಡಿಸಲಾಗಿದೆ. ಆದರೆ, ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ 1976ರ ಸೆಕ್ಷನ್‌ 10ರ ಪ್ರಕಾರ ಮೇಯರ್‌ ಮತ್ತು ಉಪಮೇಯರ್‌ ಅಧಿಕಾರಾವಧಿಯನ್ನು ಕೇವಲ 12 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಕೆಎಂಸಿ ಕಾಯ್ದೆಯ ಸೆಕ್ಷನ್‌ 10ಅನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಆಯೋಗ ಸಲಹೆ ನೀಡಿದೆ.

ಅಲ್ಲದೆ, ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್ಸ್‌ ಆಕ್ಟ್ 1976ರ ಸೆಕ್ಷನ್‌ 10ರಲ್ಲಿ ಪ್ರವರ್ಗ ಎ ಮತ್ತು ಬಿ ಅಡಿ ಬರುವ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಒಟ್ಟು ಮೇಯರ್‌ ಮತ್ತು ಉಪಮೇಯರ್‌ ಸ್ಥಾನಗಳಲ್ಲಿ 1/3 ಭಾಗದಷ್ಟುಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಬಿಬಿಎಂಪಿ ಕಾಯ್ದೆಯಲ್ಲಿ ಮೇಯರ್‌, ಉಪಮೇಯರ್‌ ಹುದ್ದೆಗಳಿಗೆ ಒಬಿಸಿ ಯವರಿಗೆ ಮೀಸಲಾತಿ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂಬುದನ್ನು ಆಯೋಗ ಸರ್ಕಾರದ ಗಮನಕ್ಕೆ ತಂದಿದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಬಿಬಿಎಂಪಿ ಕಾಯಿದೆಯಲ್ಲಿ ಹಿಂದುಳಿದ ವರ್ಗಗಳ ವ್ಯಾಖ್ಯಾನವನ್ನು ನಗರಾಭಿವೃದ್ಧಿ ಇಲಾಖೆಯು ಸೂಚಿಸಿರುವಂತೆ ಮಾಡಲಾಗಿಲ್ಲ. ಅಂದರೆ ಪ್ರವರ್ಗ ಎ ಮತ್ತು ಬಿ ಯನ್ನು ಒಬಿಸಿ ಅಡಿ ಉಲ್ಲೇಖಿಸುವುದಿಲ್ಲ. ಆದರೆ, ಕಾಯಿದೆಯ ಸೆಕ್ಷನ್‌ 8 ರ ಉಪ-ವಿಭಾಗ 3ರಲ್ಲಿ ನಿಯಮ 1, 2 ಮತ್ತು 3 ರಲ್ಲಿ ಪ್ರವರ್ಗ ಎ ಮತ್ತು ಬಿ ಬಗ್ಗೆ ಉಲ್ಲೇಖಿಸಲಾಗಿದೆ.

click me!