ಬೆಂಗಳೂರು (ನ.14) : ಹೋಟೆಲ್ ಗ್ರಾಹಕರಿಗೆ ಮತ್ತೆ ಬೆಲೆಯೇರಿಕೆ ಬಿಸಿ ತಟ್ಟಲಿದೆಯೆ? ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರನ್ನು ಸಗಟಾಗಿ ಖರೀದಿಸುವವರಿಗೆ ನೀಡಲಾಗುತ್ತಿದ್ದ ರಿಯಾಯಿತಿ ರದ್ದಾಗಿರುವುದು ಬೆಲೆ ಹೆಚ್ಚಳ ಸಾಧ್ಯತೆಗೆ ಇಂಬು ನೀಡಿದೆ.
ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆ ಹಿಂದಿನಂತೆ 1817 ರು. ಇದೆ. ಆದರೆ, ಏಕಕಾಲಕ್ಕೆ ಹೆಚ್ಚಿನ ಸಿಲಿಂಡರ್ ಖರೀದಿ ಮಾಡುತ್ತಿದ್ದವರಿಗೆ ಡೀಲರ್‌ಗಳು ನೀಡುತ್ತಿದ್ದ ರಿಯಾಯಿತಿ ರದ್ದಾಗಿದೆ. ಇದು ಸಹಜವಾಗಿ ಏಕಕಾಲಕ್ಕೆ 30-50 ಎಲ್‌ಪಿಜಿ ಸಿಲಿಂಡರ್ ಖರೀದಿಸುತ್ತಿದ್ದ ಹೋಟೆಲ್‌ನವರಿಗೆ ಹೊರೆಯೆನಿಸಿದೆ. ಇವರಿಗೆ ಒಂದು ಸಿಲಿಂಡರ್ ಮೇಲೆ 50ರಿಂದ 300 ರು.ವರೆಗೂ ರಿಯಾಯಿತಿ ಸಿಗುತ್ತಿತ್ತು. ಆದರೆ, ಕಳೆದ ನ.8ರಂದು ಐಒಸಿಎಲ್, ಬಿಪಿಸಿಎಲ್, ಹಾಗೂ ಎಚ್‌ಪಿಸಿಎಲ್ ಕಂಪನಿಗಳು ಈ ರಿಯಾಯಿತಿ ನೀಡದಂತೆ ಡೀಲರ್‌ಗಳಿಗೆ ಸೂಚಿಸಿವೆ. ಇದು ಹೋಟೆಲ್ ಉದ್ಯಮಿಗಳು ಖಾದ್ಯಗಳ ಬೆಲೆಯೇರಿಕೆ ಕುರಿತು ಚಿಂತಿಸುವಂತೆ ಮಾಡಿದೆ.
ಗ್ಯಾಸ್ ಬೆಲೆ ಏರಿಕೆ: ಕಾಂಗ್ರೆಸ್ ಮುಖಂಡರ ಮನೆಯ ಮುಂಭಾಗದಲ್ಲಿ ವಿನೂತನ ಪ್ರತಿಭಟನೆ!
ಸರ್ಕಾರದ ಹಿಡಿತವಿರುವ ಎಚ್‌ಪಿ, ಇಂಡಿಯನ್, ಬಿಪಿಸಿಎಲ್ 19 ಕೆ.ಜಿ.ಯ ಸಿಲಿಂಡರ್ ಬೆಲೆ 1817 ರು. ಇದೆ. ಆದರೆ, 17 ಕೆ.ಜಿ.ಯ ಖಾಸಗಿ ಕಂಪನಿಗಳು ಪೂರೈಸುವ ಎಲ್‌ಪಿಜಿ ಸಿಲಿಂಡರ್‌ಗೆ 1500 ರು. ಇದೆ.
ಗ್ರಾಹಕರ ಜೇಬಿಗೆ ಕತ್ತರಿ?:
ಸದ್ಯಕ್ಕೇನೋ ಹೋಟೆಲ್ ಸಂಘಟನೆಗಳು ತಮ್ಮ ಸದಸ್ಯರಿಗೆ ಬೆಲೆ ಹೆಚ್ಚಳದ ನಿರ್ಣಯ ಕೈಗೊಳ್ಳದಂತೆ ತಿಳಿಸಿವೆ ಎಂಬ ಮಾಹಿತಿಯಿದೆ. ಆದರೆ, ಸಿಲಿಂಡರ್ ರಿಯಾಯಿತಿ ರದ್ದತಿ ಕುರಿತ ಕಂಪನಿಗಳ ಧೋರಣೆ ಮುಂದುವರಿದರೆ ಗ್ರಾಹಕರು ಹೆಚ್ಚು ಬೆಲೆ ತೆರುವುದು ಅನಿವಾರ್ಯವಾಗಲಿದೆ ಎಂದು ವೀರೇಂದ್ರ ಎನ್. ಕಾಮತ್ ಹೇಳುತ್ತಾರೆ. ಸಿಲಿಂಡರ್ ಡಿಸ್ಕೌಂಟ್ ರದ್ದತಿ ಹೋಟೆಲ್‌ಗಳಿಗೆ ಕಾಡುವಂತಹ ವಿಚಾರ. ನಾವು ಒಂದು ರುಪಾಯಿ ಬೆಲೆ ಹೆಚ್ಚಿಸಿದರೂ ಜನಸಾಮಾನ್ಯರ ಮೇಲೆ ಹೊರೆಯಾಗುತ್ತದೆ. ಇದು ನಮಗೂ ಇಷ್ಟವಿಲ್ಲ ಎಂದು ಉದ್ಯಮಿಗಳು ಹೇಳುತ್ತಾರೆ.
ಕೋವಿಡ್ ಬಳಿಕ ದಿನಸಿ, ತರಕಾರಿ ಸೇರಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿದಾಗ ಸಹಜವಾಗಿ ಹೋಟೆಲ್‌ಗಳು ದರ ಏರಿಕೆ ಮಾಡಿದ್ದವು. ನಂತರವೂ ಬೆಲೆ ಹೆಚ್ಚಳವಾಗಿತ್ತು. ಇದೀಗ ಸಿಲಿಂಡರ್‌ಗಳ ಮೇಲಿನ ಡಿಸ್ಕೌಂಟ್ ಕಡಿತದಿಂದಾಗಿ ಪುನಃ ಹೊಟೇಲ್ ನೆಚ್ಚಿಕೊಂಡವರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಸಿಲಿಂಡರ್ ರಿಯಾಯಿತಿ ಮುಂದುವರಿಕೆಗೆ ಒತ್ತಾಯ
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ‘ಗೃಹ ಬಳಕೆಗೆ ಬಳಸುವ ಎಲ್‌ಪಿಜಿಗೆ ಶೇ.5 ಜಿಎಸ್‌ಟಿ ಇದೆ. ಆದರೆ, ಕಮರ್ಷಿಯಲ್‌ಗೆ ಶೇ.18 ಜಿಎಸ್‌ಟಿ ಇದೆ. ಒಂದೋ ಕಮರ್ಷಿಯಲ್ ಸಿಲಿಂಡರ್ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಬೇಕು. ಇಲ್ಲವೇ ಹಿಂದಿನಂತೆ ಬಲ್‌್ಕ ಸಿಲಿಂಡರ್‌ಗಳ ಮೇಲಿನ ರಿಯಾಯಿತಿ ಮುಂದುವರಿಸಬೇಕು. ಈಗಾಗಲೆ ಹೋಟೆಲ್ ಸಂಘದಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ಕ್ರಮ ವಹಿಸದಿದ್ದರೆ ಒಎಂಸಿ ಜತೆ ಕಾನೂನು ಹೋರಾಟ ಮಾಡಬೇಕಾಗುತ್ತದೆ’ ಎಂದರು.
ತುಪ್ಪದ ಬೆಲೆ ಗಗನಕ್ಕೆ
ತುಪ್ಪದ ಬೆಲೆ ಎರಡೂವರೆ ತಿಂಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ ಲೀಟರ್‌ಗೆ 470 ರು. ಇದ್ದ ನಂದಿನಿ ತುಪ್ಪ ಇದೀಗ ಒಂದು ವಾರದಿಂದ 610-630 ರು.ವರೆಗೆ ತಲುಪಿದೆ. ಈವರೆಗೆ ಹಾಲಿನ ಮಾರಾಟದ ದರ ಹೆಚ್ಚಳ ಬದಲು, ಅದರಲ್ಲಿ ಆಗಿರುವ ನಷ್ಟಸರಿದೂಗಿಸಲು ತುಪ್ಪದ ಬೆಲೆ ಪರಿಷ್ಕರಣೆ ಆಗಿದೆ. ಇದು ಕೂಡ ನಮಗೆ ಹೊರೆಯಾಗಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ.
ಹೊಸ ವರ್ಷದಿಂದ ಗ್ರಾಹಕರಿಗೆ ಗ್ಯಾಸ್ ಶಾಕ್ : ಊಟ, ತಿಂಡಿ ಬೆಲೆ ಹೆಚ್ಚಳ!
ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಮೇಲಿನ ರಿಯಾಯಿತಿ ರದ್ದತಿಯಿಂದ ಹೋಟೆಲ್‌ಗಳಿಗೆ ಹೊರೆಯಾಗಲಿದೆ. ಸದÜ್ಯ ಗ್ರಾಹಕರಿಗೆ ನಾವು ಈ ಹೊರೆ ವರ್ಗಾಯಿಸದಿರಲು ನಿರ್ಧರಿಸಿದ್ದೇವೆ. ಸರ್ಕಾರ, ಕಂಪನಿಗಳ ಜೊತೆ ಮಾತನಾಡುತ್ತೇವೆ. ಸ್ಪಂದನೆ ಸಿಗದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ.
- ಪಿ.ಸಿ.ರಾವ್, ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರು