ಮಂಡ್ಯದ ಆಲೆಮನೆಯೊಂದರಲ್ಲಿ ಪತ್ತೆಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಮಂಡ್ಯ (ಡಿ.17): ಮಂಡ್ಯದ ಆಲೆಮನೆಯೊಂದರಲ್ಲಿ ಪತ್ತೆಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ನಿಯಮಾನುಸಾರ ತನಿಖೆ ನಡೆಸಿಲ್ಲ. ಇದುವರೆಗೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದ ಆಲೆಮನೆಯನ್ನು ಜಪ್ತಿ ಮಾಡಿಲ್ಲ. ಅಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಆಲೆಮನೆ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ನಿರ್ಲಕ್ಷಿಸಿವೆ. ನಿಯಮಬದ್ಧವಾಗಿ ತನಿಖೆ ನಡೆಸಿದ್ದರೆ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಾಗಿತ್ತು. ಸಾಕ್ಷ್ಯ ನಾಶಕ್ಕೆ ಅಧಿಕಾರಿಗಳೇ ಎಡೆಮಾಡಿಕೊಟ್ಟಿದ್ದಾರೆ ಎಂದು ದೂಷಿಸಿದರು.
ಸಂಸತ್ ಭದ್ರತಾ ಲೋಪ ಪ್ರಕರಣ: ಪ್ರತಾಪ ಸಿಂಹ ವಿರುದ್ಧ ನಡೆದಿದೆ ಭಾರೀ ಸಂಚು, ಯತ್ನಾಳ್ ಹೇಳಿದ್ದೇನು?
ಸಾಕ್ಷ್ಯ ನಾಶಕ್ಕೆ ಅವಕಾಶ
ಆಲೆಮನೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದರಿಂದ ಸ್ಕ್ಯಾನ್ ಮಾಡುವ ಮೊದಲಿಗೆ ಜೆಲ್ ಹಚ್ಚುತ್ತಾರೆ. ಗ್ಲೌಸ್‌ಗಳನ್ನು ಹಾಕಿಕೊಂಡಿರುತ್ತಾರೆ. ಜೆಲ್ ಒರೆಸಿ ಎಸೆದ ಹತ್ತಿಗಳು, ಗ್ಲೌಸ್ಗ್‌ಗಳು, ಗೋಡೆಯ ಮೇಲೆ ಅಂಟಿರಬಹುದಾದ ಜೆಲ್, ಗರ್ಭಿಣಿ ಸ್ತ್ರೀಯರಿಗೆ ಬಳಸಿ ಬಿಸಾಡಿರುವ ಬಟ್ಟೆಗಳು, ಪ್ರಿಸ್‌ಕ್ರಿಪ್ಷನ್‌ಗಳು, ಟ್ಯಾಬ್ಲೆಟ್‌ಗಳು ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕೆ ಅವಕಾಶಗಳಿದ್ದರೂ ಆರೋಗ್ಯ ಇಲಾಖೆ ಕೈಚೆಲ್ಲಿ ಕುಳಿತಿದ್ದಾರೆ. ಒಮ್ಮೆ ಸಾಕ್ಷ್ಯಗಳು ಸಿಕ್ಕಿದ್ದರೂ ಅವುಗಳನ್ನು ಅವರೇ ನಾಶಪಡಿಸಿರುವ ಸಾಧ್ಯತೆಗಳಿವೆ. ತಜ್ಞ ವೈದ್ಯರು, ತಂತ್ರಜ್ಞರನ್ನು ಸ್ಥಳಕ್ಕೆ ಕರೆಸಿ ಸಮಗ್ರ ಪರಿಶೀಲನೆ ನಡೆಸಿದ್ದರೆ ಸಾಕ್ಷ್ಯ ಸಂಗ್ರಹಿಸಬಹುದಿತ್ತು. ಆರೋಗ್ಯ ಇಲಾಖೆಯವರು ಕಾರ್ಯಪ್ರವೃತ್ತರಾಗದ ಕಾರಣ ಆರೋಪಿಗಳು ಪ್ರಕರಣ ಬೆಳಕಿಗೆ ಬಂದ ೨೦ ದಿನಗಳಲ್ಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದು ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿಗೆ ಸಾಕ್ಷಿ ಎಂದು ಟೀಕಿಸಿದರು.
ಅಧಿಕಾರಿಗಳ ವಸೂಲಿ ಕೇಂದ್ರಗಳು
ಈಗ ಆಲೆಮನೆಯಲ್ಲಿ ಬೆಲ್ಲದ ಸ್ಟೋರೇಜ್ ಮಾಡಿಕೊಂಡಿದ್ದಾರೆ. ಅಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಬಗ್ಗೆ ನ್ಯಾಯಾಲಯಕ್ಕೆ ಈಗ ಏನು ಸಾಕ್ಷ್ಯ ಕೊಡಲು ಸಾಧ್ಯ. ಆರೋಗ್ಯ ಇಲಾಖೆ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ವಸೂಲಿ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಕೂಡಲೇ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಚಾಣಕ್ಯರ ರೀತಿ ಕೆಲಸ
ನರ್ಸಿಂಗ್ ಹೋಂಗಳು, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಯಾರಿಗೂ ನಿಯಂತ್ರಣವೇ ಇಲ್ಲದಂತಾಗಿದೆ. ಭ್ರೂಣ ಹತ್ಯೆ ದಂಧೆಕೋರರಿಗೆ ಕಾನೂನಿನ ಭಯವಿಲ್ಲ. ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಲ್ಲಿ ತೊಡಗಿರುವವರು ಅತ್ಯಾಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಸ್ಕ್ಯಾನಿಂಗ್ ನಡೆಸುತ್ತಿದ್ದಾರೆ. ಈಗೆಲ್ಲಾ ಫೋರ್ಟಬಲ್ ಸ್ಕ್ಯಾನಿಂಗ್ ಯಂತ್ರಗಳು ಬಂದಿವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದಾದ ಮೊಬೈಲ್‌ಸ್ಕ್ಯಾನಿಂಗ್ ಯಂತ್ರಗಳಿವೆ. ದಂಧೆಕೋರರು ಚಾಣಕ್ಯರ ರೀತಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಹೊಸ ಕಾನೂನು ಜಾರಿ ಅವಶ್ಯ
ಹೆಣ್ಣು ಭ್ರೂಣ ಹತ್ಯೆ ಜಾಲ ಪರಿಣಾಮಕಾರಿ ತಡೆಯಲು ಹೊಸ ಕಾನೂನು ಜಾರಿಗೊಳಿಸುವ ಅಗತ್ಯವಿದೆ. ಭ್ರೂಣ ಪತ್ತೆ ಮತ್ತು ಹತ್ಯೆಯಲ್ಲಿ ತೊಡಗುವವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಪೈಶಾಚಿಕ ಕೃತ್ಯವನ್ನು ತಡೆಯದಿದ್ದರೆ ಕೆಲವೇ ವರ್ಷಗಳಲ್ಲಿ ಹೆಣ್ಣಿಗಾಗಿ ಗಲಾಟೆಗಳು, ಹೊಡೆದಾಟಗಳು ನಡೆಯುತ್ತವೆ. ಹೆಣ್ಣಿಲ್ಲದೆ ಘೋರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣವನ್ನೂ ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಪ್ರಕರಣ ಸಂಬಂಧ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೆವು. ಸರ್ಕಾರ ಹೆದರಿ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ. ಸ್ಪೀಕರ್ ಕೂಡ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಚರ್ಚೆಗೆ ಪರಿಗಣಿಸಲಿಲ್ಲ. ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪಾರ್ಲಿಮೆಂಟ್ ಭದ್ರತಾ ಲೋಪ ; ಸಂಸದ ಪ್ರತಾಪ ಸಿಂಹ ವಿರುದ್ಧ ಎಚ್ ವಿಶ್ವನಾಥ ವಾಗ್ದಾಳಿ!
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಅಶೋಕ್ ಜಯರಾಂ, ಚೇತನ್‌ಗೌಡ, ಎಸ್.ಪಿ.ಸ್ವಾಮಿ, ಸಚ್ಚಿದಾನಂದ, ಡಾ. ಈ.ಸಿ.ನಿಂಗರಾಜ್‌ಗೌಡ ಇತರರಿದ್ದರು.