‘ಸ್ವಾಮಿ, ಮಳೆ ಇಲ್ಲದೆ ಬೆಳೆದ ಮೆಕ್ಕೆಜೋಳ ಹಾಳಾಗಿದ್ದು, ನಯಾಪೈಸೆ ಬೆಳೆ ಬಾರದಂತಾಗಿದೆ. ಹತ್ತಾರು ಸಾವಿರ ಖರ್ಚು ಮಾಡಿದರೂ ಬೆಳೆ ಬಂದಿಲ್ಲ. ದಯವಿಟ್ಟು, ಕಾರಿನಿಂದ ಕೆಳಗಿಳಿದು ಹಾನಿ ಪರಿಶೀಲಿಸಿ. ಕೂಡಲೇ ಪರಿಹಾರ ಕೊಡಿ.
ಗದಗ/ಕೊಪ್ಪಳ/ತುಮಕೂರು/ಬೆಳಗಾವಿ (ಅ.07): ‘ಸ್ವಾಮಿ, ಮಳೆ ಇಲ್ಲದೆ ಬೆಳೆದ ಮೆಕ್ಕೆಜೋಳ ಹಾಳಾಗಿದ್ದು, ನಯಾಪೈಸೆ ಬೆಳೆ ಬಾರದಂತಾಗಿದೆ. ಹತ್ತಾರು ಸಾವಿರ ಖರ್ಚು ಮಾಡಿದರೂ ಬೆಳೆ ಬಂದಿಲ್ಲ. ದಯವಿಟ್ಟು, ಕಾರಿನಿಂದ ಕೆಳಗಿಳಿದು ಹಾನಿ ಪರಿಶೀಲಿಸಿ. ಕೂಡಲೇ ಪರಿಹಾರ ಕೊಡಿ. ಇಲ್ಲದಿದ್ದರೆ ನಾವು ವಿಷ ಕುಡಿಯಬೇಕಾಗುತ್ತದೆ’ ಎನ್ನುತ್ತಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ರೈತ ಮಲ್ಲಪ್ಪ ಬಿಂಗಿಕೊಪ್ಪ, ಕಣ್ಣೀರು ಸುರಿಸುತ್ತಾ, ಅಧಿಕಾರಿಗಳ ಕಾಲಿಗೆ ಬೀಳಲು ಮುಂದಾದರು. ಕಾರಿಗೆ ಅಡ್ಡಲಾಗಿ ಬಂದು ‘ಕೆಳಗಿಳಿಯಿರಿ ಸ್ವಾಮಿ’ ಎಂದು ಅಂಗಲಾಚಿದರು.
ಆದರೆ, ಬರ ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರ ತಂಡದ ಅಧಿಕಾರಿಗಳು ಕಾರಿನಿಂದ ಕೆಳಗಿಳಿಯಲೇ ಇಲ್ಲ. ಕಾರಿನ ಗ್ಲಾಸನ್ನು ಅರ್ಧಕ್ಕೆ ಇಳಿಸಿ, ತಮ್ಮ ಮುಂದೆ ಕೈಮುಗಿದು ನಿಂತಿದ್ದ ರೈತನ ಗೋಳನ್ನು ಆಲಿಸುತ್ತಲೇ ಮುಂದಕ್ಕೆ ನಡೆದರು. ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದಾಗ ಕಂಡು ಬಂದ ದೃಶ್ಯ. ಕೇಂದ್ರದ 10 ಅಧಿಕಾರಿಗಳ ತಂಡ ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದು, ಮೂರು ತಂಡಗಳಲ್ಲಿ ಅಧ್ಯಯನ ಆರಂಭಿಸಿದೆ. ಶುಕ್ರವಾರದಿಂದ 4 ದಿನಗಳ ಕಾಲ ರಾಜ್ಯದಲ್ಲಿ ಬರ ಅಧ್ಯಯನ ನಡೆಸಲಿದೆ. ಶುಕ್ರವಾರ ಬೆಳಗಾವಿ, ವಿಜಯಪುರ, ಗದಗ, ಕೊಪ್ಪಳ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಂಡ ಬರ ಅಧ್ಯಯನ ಪ್ರವಾಸ ನಡೆಸಿತು.
undefined
ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ
ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್ ನೇತೃತ್ವದ ತಂಡ ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಬರ ಅಧ್ಯಯನ ನಡೆಸಿತು. ನಂತರ, ಅಧಿಕಾರಿಗಳ ತಂಡ ಕುಷ್ಟಗಿ ತಾಲೂಕಿನ ಬಂಡಿ ಕ್ರಾಸ್ ಬಳಿ ಬರುತ್ತಿದ್ದಂತೆ ಶರಣಮ್ಮ ರೊಟ್ಟಿ ಎಂಬ ರೈತ ಮಹಿಳೆ, ತಮ್ಮ ಸಜ್ಜೆ ಹೊಲದಲ್ಲಿ ನಿಂತುಕೊಂಡು, ‘ಹಿಂಗ್ ಬೆಳೆ ಬಂದಿದೆ. ಇದರಲ್ಲಿ ಒಂದು ಕಾಳ್ ಸಿಗಲ್ಲ. ನನಗೆ ಆಧಾರ್ ಕಾರ್ಡ್ ಇಲ್ಲದಿರುವುದರಿಂದ ಗೃಹಲಕ್ಷ್ಮಿ ಯೋಜನೆಯ ಹಣವೂ ಬರುತ್ತಿಲ್ಲ’ಎಂದು ಅಳಲು ತೋಡಿಕೊಂಡರು.
ಈ ಮಧ್ಯೆ, ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಕಡೆ ಪಂಪ್‌ಸೆಟ್ ಬಳಸಿ, ಬೆಳೆಗಳನ್ನು ಬೆಳೆಯಲಾಗಿದ್ದ ಹಸಿರು ಪ್ರದೇಶ ಇರುವೆಡೆಯೇ ಅಧಿಕಾರಿಗಳು ಅಧ್ಯಯನ ನಡೆಸಿದರು. ಇದು ಟೀಕೆಗೆ ಕಾರಣವಾಯಿತು. ಮಾಧ್ಯಮದವರು ಇದನ್ನು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ನಳಿನ್ ಅತುಲ್, ‘ಈಗ ಇರುವುದೇ ಹಸಿರು ಬರ. ಅದನ್ನೇ ಅವರಿಗೆ ತೋರಿಸಿದ್ದೇವೆ. ಮೊದಲೇ ಸುತ್ತಾಡಿಯೇ ನಿಗದಿ ಮಾಡಿದ್ದೇವೆ’ ಎಂದರು. ಅಲ್ಲದೆ, ಈ ವೇಳೆ, ಆಯಾ ಕ್ಷೇತ್ರದ ಶಾಸಕರು ಗೈರಾಗಿದ್ದು, ರೈತರ ಅಸಮಾಧಾನಕ್ಕೆ ಕಾರಣವಾಯಿತು.
ಇನ್ನು, ಅಧಿಕಾರಿಗಳು ಗದಗ ಜಿಲ್ಲೆಯ ದೇವಿಹಾಳ ಗ್ರಾಮಕ್ಕೆ ಬಂದಾಗ, ಯಲ್ಲಮ್ಮ ಮಾದರ ಎಂಬ ರೈತ ಮಹಿಳೆ, ‘ನನಗೆ ಮೂವರು ಮಕ್ಕಳು. ಒಬ್ಬ ಮಗಳು ಮತ್ತು ಒಬ್ಬ ಮಗ ಮೂಗರಿದ್ದಾರೆ. ಇನ್ನೊಬ್ಬ ಮಗ ಹೆಂಡತಿ ಕಟ್ಟಿಕೊಂಡು ಬೇರೆಲ್ಲೋ ಇದ್ದಾನೆ. ನನಗೆ ನಾಲ್ಕು ಎಕರೆ ಜಮೀನಿದ್ದು, ಎರಡು ಬಾರಿ ಮೆಕ್ಕೆ ಜೋಳ ಹಾಕಿದೆ. ನಯಾ ಪೈಸೆ ಮರಳಲಿಲ್ಲ. ಎಲ್ಲೆಡೆ ಸಾಲ ಮಾಡಿದ್ದೇನೆ. ದುಡಿಯುವ ಶಕ್ತಿ ನನಗಿಲ್ಲ. ನೀವೇ ನನಗೆ ತಂದೆ-ತಾಯಿ, ಕೈ ಮುಗಿಯುವೆ ಪರಿಹಾರ ಕೊಡಿಸಿ’ ಎಂದು ಕಣ್ಣೀರು ಹಾಕಿದರು.
ಈ ಮಧ್ಯೆ, ಗದಗ ಜಿಲ್ಲೆ ದೊಡ್ಡೂರು ಗ್ರಾಮಕ್ಕೆ ತಂಡ ಬಂದಾಗ, ರೈತರು ಹಿಂದಿ ಬಾರದೆ ಪರದಾಡಿದರು. ಬಳಿಕ, ಜಿಲ್ಲಾಧಿಕಾರಿ, ಹಿಂದಿ ಬಲ್ಲ ಸ್ಥಳೀಯರ ಸಹಕಾರದಿಂದ ತಮ್ಮ ನೋವನ್ನು ತೋಡಿಕೊಂಡರು. ಆದರೆ, ಹಿಂದಿ, ಇಂಗ್ಲಿಷ್ ಬಲ್ಲ ಶಿರಹಟ್ಟಿ ಶಾಸಕ ಚಂದ್ರ ಲಮಾಣಿ ಬಾರದಿದ್ದುದು ರೈತರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ಕೇಂದ್ರದ ಅಧಿಕಾರಿಗಳು ಇಲ್ಲಿ ಬರ ಅಧ್ಯಯನ ನಡೆಸುತ್ತಿದ್ದಾಗ ಗದಗ ತಹಶೀಲ್ದಾರ ಹಾಗೂ ಇನ್ನೋರ್ವ ಅಧಿಕಾರಿ ಕಾರಿನಲ್ಲಿಯೇ ನಿದ್ದೆ ಮಾಡುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಯಿತು. ಈ ಮಧ್ಯೆ, ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ .ವಿ ನೇತೃತ್ವದ ತಂಡ ತುಮಕೂರು ಜಿಲ್ಲೆ ಕೊರಟಗೆರೆಗೆ ಬಂದಾಗ ರೈತರು ಅವರಿಗೆ ಎಳನೀರು ನೀಡಿ ಸ್ವಾಗತ ಕೋರಿ, ತಮ್ಮ ನೋವನ್ನು ತೋಡಿಕೊಂಡರು.
ರೈತನಿಂದ ಆತ್ಮಹತ್ಯೆಗೆ ಯತ್ನ: ಇದೇ ವೇಳೆ, ಅಧಿಕಾರಿಗಳ ತಂಡ ತಮ್ಮ ಅಹವಾಲು ಆಲಿಸಲಿಲ್ಲ ಎಂದು ಆಕ್ರೋಶಗೊಂಡು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲಕುಪ್ಪಿ ಬಳಿ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಅಪ್ಪಾ ಸಾಹೇಬ ಯಕ್ಕುಂಡಿ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆಯಿತು.
ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಪರಿಹಾರ: ಸಂಸದ ಡಿ.ಕೆ.ಸುರೇಶ್
ಕಲಕುಪ್ಪಿ ಗ್ರಾಮದ ಬಳಿ ಇವರು ಬೆಳಗಿನಿಂದಲೇ ಕಾದು ನಿಂತಿದ್ದರೂ, ಅಧಿಕಾರಿಗಳು ಇವರ ಸಮಸ್ಯೆ ಆಲಿಸಲಿಲ್ಲ. ಇದರಿಂದ ನೊಂದ ಅವರು, ‘ನಮ್ಮ ನೋವನ್ನು ಯಾರಿಗೆ ಹೇಳಬೇಕು. ಜೀವನದಲ್ಲಿ ತುಂಬಾ ನೊಂದಿದ್ದೇನೆ. ನನ್ನ ಸಮಸ್ಯೆ ಆಲಿಸದೇ ಹೋಗಿದ್ದಾರೆ. ನಾನು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾ ಕೀಟನಾಶಕ ಸೇವಿಸಲು ಮುಂದಾದರು. ಆಗ ಸ್ಥಳದಲ್ಲಿಯೇ ಇದ್ದ ಪೊಲೀಸರು ಅವರ ಕೈಯಿಂದ ಕೀಟನಾಶಕದ ಬಾಟಲಿ ಕಸಿದುಕೊಂಡರು. ಅಪ್ಪಾ ಸಾಹೇಬ ಬಳಿ ಇನ್ನೊಂದು ಕೀಟನಾಶಕ ಬಾಟಲಿ ಇತ್ತು. ಅದನ್ನೂ ತೆಗೆದುಕೊಳ್ಳಲು ಹೋದಾಗ ಪೊಲೀಸರು ಹಾಗೂ ಅವರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.