ಡಿ.ಕೆ.ಶಿವಕುಮಾರ್ (DK Shivakumar) ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ರಾಜ್ಯದಲ್ಲಿ ಚಿಗಿತುಕೊಂಡಿದೆ, ಜೊತೆಗೆ ಯಡಿಯೂರಪ್ಪ ಇಳಿಕೆ ನಂತರ ಕಾಂಗ್ರೆಸ್ ಇನ್ನಷ್ಟು ಮಜಬೂತ್ ಆಗುತ್ತಿದೆ ಎನ್ನುವುದು ಹೌದು.
ಪ್ರತಿಭಟನೆಗಳು, ಚಳವಳಿಗಳು, ಪಾದಯಾತ್ರೆಗಳು ಪ್ರಜಾಪ್ರಭುತ್ವದ (Democracy ) ಆತ್ಮ ಅಷ್ಟೇ ಅಲ್ಲ, ಜನಮಾನಸದ ಅರಿವನ್ನೂ ಸಹಜವಾಗಿ ಹೆಚ್ಚಿಸುತ್ತವೆ. ಆದರೆ ಒಂದು ಅಂತಾರಾಜ್ಯ ನದಿ ವ್ಯಾಜ್ಯದ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದಾಗ ಅದು ಹೇಗೆ ಯಾವುದೇ ಪಕ್ಷದ ಕೇಂದ್ರ ಸರ್ಕಾರ ಏಕಪಕ್ಷಿಯವಾಗಿ ಯೋಜನೆಗೆ ಅನುಮತಿ ನೀಡುತ್ತದೆ ಮತ್ತು ಆ ಅನುಮತಿ ಇಲ್ಲದೆ ಯಾವ ರಾಜ್ಯ ಸರ್ಕಾರ ಯೋಜನೆಯ ಕೆಲಸ ಶುರು ಮಾಡಲು ಒಕ್ಕೂಟ ವ್ಯವಸ್ಥೆಯಲ್ಲಿ ಸಾಧ್ಯವಿದೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಡಿ.ಕೆ.ಶಿವಕುಮಾರ್ ಆಗಲಿ, ಕಾಂಗ್ರೆಸ್ ಆಗಲಿ ಸಮರ್ಥ ಉತ್ತರವನ್ನು ನೀಡಿಲ್ಲ.
ನಾಳೆ ಒಂದು ವೇಳೆ 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಏನಕೇನ ಸ್ವತಃ ಡಿ.ಕೆ.ಶಿವಕುಮಾರ್ (DK Shivakumar) ಅವರೇ ಮುಖ್ಯಮಂತ್ರಿಯಾದರೂ ಸುಪ್ರೀಂಕೋರ್ಟ್ ಅಂತಿಮ ಒಪ್ಪಿಗೆ ನೀಡದೆ ಯೋಜನೆ ಸಾಕಾರಗೊಳ್ಳುವುದಿಲ್ಲ. ಇದೆಲ್ಲಾ ಗೊತ್ತಿದ್ದರೂ ಒಂದು ಸಮುದಾಯದ ನಾಯಕತ್ವ ತಮ್ಮ ಕೈಗೆ ಬರಬೇಕು ಎಂದು ಇಂಥ ಸೂಕ್ಷ್ಮ ವಿಷಯವನ್ನು ರಾಷ್ಟ್ರೀಯ ವಿಷಯವಾಗಿ ಮಾರ್ಪಡಿಸಲು ಹೊರಟರೆ ರಾಜ್ಯದ ಹಿತಕ್ಕೆ ನಷ್ಟಹೆಚ್ಚೇ ಹೊರತು ಲಾಭ ಕಡಿಮೆ.
Modi Security Breach: ಭದ್ರತಾ ಲೋಪಕ್ಕೆ ಕಾರಣ ರಾಜಕೀಯವೇ, ಕೊನೆ ಕ್ಷಣದ ಸಮನ್ವಯದ ಕೊರತೆಯೇ?
ಇಲ್ಲಿಯವರೆಗೆ ಕಾವೇರಿಯಿಂದ (Kaveri) ಹಿಡಿದು ಕೃಷ್ಣಾದವರೆಗೆ ಯಾವುದೇ ನದಿ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ರಾಜ್ಯದ 3 ರಾಜಕೀಯ ಪಕ್ಷಗಳೂ ಒಂದು ಗಟ್ಟಿನಿಲುವನ್ನು ತೆಗೆದುಕೊಂಡು ದಿಲ್ಲಿಯಲ್ಲಿ ಕುಳಿತಿರುವವರಿಗೆ ರಾಜಕೀಯವಾಗಿ, ಸುಪ್ರೀಂಕೋರ್ಟ್ ಪೀಠಕ್ಕೆ ಕಾನೂನಾತ್ಮಕವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದವು. ಆದರೆ ಡಿ.ಕೆ.ಶಿವಕುಮಾರ್ ತಮ್ಮ ಪಾದಯಾತ್ರೆಯನ್ನು ಒಮ್ಮೆಲೇ ರಾಜಕೀಯ ಪರಾಕಾಷ್ಠೆಗೆ ತೆಗೆದುಕೊಂಡು ಹೋಗಿ ನೆಲ-ಜಲದ ವಿಷಯಕ್ಕೆ ಒಟ್ಟಾಗಿ ಬರುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದಾರೆ. ನೆಲ-ಜಲದ ವಿಷಯದಲ್ಲಿ ಒಮ್ಮೆ ಆಂತರಿಕ ರಾಜಕಾರಣ ಶುರು ಆದರೆ ಅದಕ್ಕೆ ಕೊನೆ ಎಂಬುದು ಇರೋದಿಲ್ಲ.
ತಮಿಳ್ನಾಡನ್ನು ಎದ್ದು ಕೂರಿಸಲು?
ಯಾವುದೇ ಅಂತಾರಾಜ್ಯ ವಿವಾದಗಳನ್ನು ಪರಿಹರಿಸಲು ಅಧಿಕಾರದಲ್ಲಿ ಇರುವವರು ಮತ್ತು ವಿಪಕ್ಷಗಳಲ್ಲಿ ಕುಳಿತಿರುವವರು ಒಂದು ಮುತ್ಸದ್ದಿತನ ತೋರಿಸಿದರೆ ಮಾತ್ರ ಲಾಭ ಸಿಗುತ್ತದೆಯೇ ಹೊರತು ಆವೇಶದ ಹೇಳಿಕೆಗಳು, ವಿವಾದ ಉಲ್ಬಣಿಸುವುದರಿಂದ ಅಲ್ಲ. ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿದ್ದು, ಕೇಂದ್ರ ಜಲ ಆಯೋಗದಲ್ಲಿ ವಿಷಯ ಪ್ರಸ್ತಾಪಕ್ಕೂ ಈಗಲೇ ತಮಿಳುನಾಡು ತಗಾದೆ ತೆಗೆಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಬೊಮ್ಮಾಯಿ ಬರೆದ ಪತ್ರಕ್ಕೆ ದ್ವಿಪಕ್ಷೀಯ ಮಾತುಕತೆಗೂ ತಯಾರಿಲ್ಲ ಎಂದು ಹೇಳಿದ್ದಾರೆ. ಅನೇಕರು ಗಮನಿಸಿದರೋ ಇಲ್ಲವೋ; ವೈಕೋ ಒಂದು ಹೆಜ್ಜೆ ಮುಂದೆ ಹೋಗಿ ಮೇಕೆದಾಟುಗೆ ಕೇಂದ್ರ ಅನುಮತಿ ನೀಡಿದರೆ ನಾವು ಒಕ್ಕೂಟದಲ್ಲಿ ಇರುವ ಬಗ್ಗೆ ಮರುಚಿಂತನೆ ಮಾಡಬೇಕಾಗುತ್ತದೆ ಎಂದು ಅತಿರೇಕದ ಬಾಣ ಬಿಟ್ಟಿದ್ದಾರೆ.
ಅದೇನೂ ಹೊಸತಲ್ಲ, ಹೌದು. ಆದರೆ ಈಗ ಇಲ್ಲಿ ವೋಟಿಗೋಸ್ಕರ ಪಾದಯಾತ್ರೆ ನಡೆದರೆ ತಮಿಳುನಾಡು ರಾಜಕಾರಣಿಗಳು ಇನ್ನಷ್ಟುಎದ್ದು ಕೂರುತ್ತಾರೆ. ಅತಿರೇಕದ ಮಾತು ಆಡುತ್ತಾರೆ. ಆಗ ಹೇಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಯೋಜನೆಗೆ ಅನುಮತಿ ನೀಡುತ್ತದೆ? ಹಾಗಾದಾಗ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯುವುದೇ ನಮಗಿರುವ ಹಾದಿ. ಅದು ಇನ್ನೂ ಎಷ್ಟುವರ್ಷ ತೆಗೆದುಕೊಳ್ಳುತ್ತದೋ ಯಾರಿಗೆ ಗೊತ್ತು?
ತಮಿಳುನಾಡಿನ ಕ್ಯಾತೆ ಏಕೆ?
1924ರಷ್ಟುಹಿಂದೆಯೇ ಬ್ರಿಟಿಷರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಮದ್ರಾಸ್ ಪ್ರಾಂತ್ಯದ ಅಧಿಕಾರಿಗಳು ಮೈಸೂರಿಗೆ ಹೆಚ್ಚುವರಿ ನೀರನ್ನು ಬಳಸುವ ಯೋಜನೆಗೆ ತಾತ್ವಿಕವಾಗಿ ಆಕ್ಷೇಪಣೆ ಇಲ್ಲ ಎಂದು ತಿಳಿಸಿದ್ದರು. ಆದರೆ 1956ರ ರಾಜ್ಯ ಮರು ವಿಂಗಡಣೆ ನಂತರ ತೀವ್ರತೆ ಪಡೆದುಕೊಂಡ ಕಾವೇರಿ ವ್ಯಾಜ್ಯಕ್ಕೆ ಅಂತಿಮ ಮುಕ್ತಿ ಸಿಕ್ಕಿದ್ದು 2007ರ ಕಾವೇರಿ ನ್ಯಾಯಾಧಿಕರಣದ ಐತೀರ್ಪು ಮತ್ತು 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಅಂತಿಮ ತೀರ್ಪಿನ ನಂತರ.
ಕರ್ನಾಟಕ, ತಮಿಳುನಾಡಿಗೆ 177.25 ಟಿಎಂಸಿ ನೀರು ಪ್ರತಿ ವರ್ಷ ತಮಿಳುನಾಡು ಗಡಿಯಲ್ಲಿ ಇರುವ ಬಿಳಿಗುಂಡ್ಲುನಲ್ಲಿ ಕೊಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಭಾಗದಲ್ಲಿ ಕಾವೇರಿ ನೀರು ಹಿಡಿದಿಡುವ ಜಲಾಶಯದ ವ್ಯವಸ್ಥೆ ಇರುವುದು ತಮಿಳುನಾಡಿನ ಮೆಟ್ಟೂರಿನಲ್ಲಿ ಮಾತ್ರ. ಹೀಗಾಗಿ ಕೃಷ್ಣರಾಜ ಸಾಗರ ಮತ್ತು ಕಬಿನಿ ನಂತರ ಹರಿದು ಹೋಗುವ ನೀರು ಶೇಖರಿಸಲು ನಮ್ಮ ನೆಲದಲ್ಲೇ ನಿರ್ಮಿಸುವ ಮೇಕೆದಾಟು ಯೋಜನೆ ನಮ್ಮ ಹಕ್ಕು ಮತ್ತು ತಮಿಳುನಾಡಿಗೆ ಕೊಡಬೇಕಾದ 177.25 ಟಿಎಂಸಿ ಕೊಟ್ಟಮೇಲೆ ಹೆಚ್ಚುವರಿ ನೀರು ಬಳಸಿಕೊಳ್ಳಲು ತಮಿಳುನಾಡಿನ ಆಕ್ಷೇಪ ಅರ್ಥಹೀನ.
ಕಳೆದ 50 ವರ್ಷಗಳ ಮಳೆ ಅಧ್ಯಯನದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ ಕರ್ನಾಟಕದ ಪಾಲಿನ 284.75 ಟಿಎಂಸಿ ನೀರು ಬಳಸಿ ತಮಿಳುನಾಡಿಗೆ 177.25 ಟಿಎಂಸಿ, ಕೇರಳಕ್ಕೆ 21 ಟಿಎಂಸಿ ನೀರು ಕೊಟ್ಟು ಕೂಡ 91 ಟಿಎಂಸಿ ನೀರು ಹೆಚ್ಚುವರಿ ಆಗಿ ಉಳಿಯುತ್ತದೆ. ಆದರೆ ಗಡಿಯಲ್ಲಿ ಕರ್ನಾಟಕ ಜಲಾಶಯ ಕಟ್ಟಿದರೆ ಮಳೆ ಬೀಳುವ ವರ್ಷಗಳಲ್ಲಿ ಹೆಚ್ಚುವರಿ ನೀರು ಮೇಕೆದಾಟುವಿನಲ್ಲಿ ಶೇಖರವಾಗುತ್ತದೆ ಮತ್ತು ಮಳೆ ಬಾರದ ವರ್ಷಗಳಲ್ಲಿ ಪ್ರತಿಯೊಂದು ತೊಟ್ಟು ನೀರಿಗೂ ಮೇಕೆದಾಟು ಜಲಾಶಯದಿಂದ ಕೊಡುವಂತೆ ಮನವಿ ಮಾಡಬೇಕಾಗುತ್ತದೆ ಎನ್ನುವುದು ತಮಿಳುನಾಡಿನ ಕ್ಯಾತೆಗೆ ಮೂಲ ಕಾರಣ.
ಇದಕ್ಕೆ ತಿರುಗು ಬಾಣ ಎಂಬಂತೆ ಕಾವೇರಿ ವೈಗೈ ಗುಂಡರಜೋಡು ಯೋಜನೆ ಆರಂಭಿಸಿ ಅದಕ್ಕೆ 45 ಟಿಎಂಸಿ ಹೆಚ್ಚುವರಿ ನೀರು ಬಳಸಿಕೊಳ್ಳಲು ತಮಿಳುನಾಡು ತಂತ್ರ ರೂಪಿಸಿದ್ದು, ಅದನ್ನು ಕರ್ನಾಟಕ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ನೆಲ ಮತ್ತು ನೀರು ನಮ್ಮ ಹಕ್ಕು ಹೌದು. ಆದರೆ ಅದನ್ನು ವೋಟು ರಾಜಕೀಯಕ್ಕೆ ಬಳಸಿದರೆ ಯೋಜನೆ ಇನ್ನಷ್ಟುವಿಳಂಬ ಆಗಬಹುದಷ್ಟೇ ಹೊರತು ಜನರಿಗೇನೂ ಲಾಭ ಸಿಗುವುದಿಲ್ಲ.
Uttar Pradesh Elections: ಅಖಿಲೇಶ್ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು
ಬಿಜೆಪಿ ಸರ್ಕಾರ ಮಾಡಿದ ತಪ್ಪೇನು?
ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಸಿದ್ದರಾಮಯ್ಯ ಅವಧಿಯಲ್ಲಿ, ಕುಮಾರಸ್ವಾಮಿ ಅವಧಿಯಲ್ಲಿ ಮತ್ತು ಯಡಿಯೂರಪ್ಪ ಅವಧಿಯಲ್ಲಿ ಡಿಪಿಆರ್‌ಗೆ ಕೇಂದ್ರದ ಮಂಜೂರಾತಿ ತೆಗೆದುಕೊಂಡು ಯೋಜನೆ ಪೂರ್ಣಗೊಳಿಸಬಹುದಿತ್ತು ಎಂದು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದರೂ, ಒಂದು ರಾಜ್ಯದ ಅರ್ಜಿ ಸರ್ವೋಚ್ಚ ನ್ಯಾಯಾಲಯದ ಎದುರು ಇದ್ದಾಗ, ಜೊತೆಗೆ ಆ ರಾಜ್ಯ ಸತತ ಕ್ಯಾತೆ ತೆಗೆಯುತ್ತಿರುವಾಗ ಕೇಂದ್ರ ಸರ್ಕಾರ ಏಕಾಏಕಿ ಅನುಮತಿ ನೀಡುವುದು ಸಾಧ್ಯ ಇಲ್ಲದ ಮಾತು. ಆದರೆ ಬಿಜೆಪಿ ಸರ್ಕಾರ ಕಳೆದ 3 ವರ್ಷಗಳಲ್ಲಿ ಒಮ್ಮೆಯೂ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ದಿಲ್ಲಿಗೆ ಹೋಗಿ ಒತ್ತಡ ಹೇರುವ ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವುದು ಕೂಡ ನಿಜ.
ರಮೇಶ್ ಜಾರಕಿಹೊಳಿ ದಿಲ್ಲಿಯಲ್ಲಿ ಸಭೆ ನಡೆಸಿದರೂ ಹಿಂದಿನ ಹಾಗೆ ವ್ಯವಸ್ಥಿತ ವಕೀಲರ ತಂಡ ರಚಿಸಿ ಕೋರ್ಟಿನಲ್ಲಿ ಶೀಘ್ರ ವಿಚಾರಣೆ ಮತ್ತು ವಿಲೇವಾರಿಯ ಪ್ರಯತ್ನ ನಡೆಸಿಲ್ಲ. ಬೆಂಕಿ ಬಿದ್ದಾಗ ದಿಲ್ಲಿಗೆ ಧಾವಿಸುವ ನಮ್ಮ ಸರ್ಕಾರಗಳು, ಒತ್ತಡ ಇರದೇ ಇರುವ ಸಾಮಾನ್ಯ ಕಾಲದಲ್ಲಿ ದಿಲ್ಲಿಯಲ್ಲಿ ರಾಜಕೀಯವಾಗಿ ಮತ್ತು ಕಾನೂನಿನ ದೃಷ್ಟಿಯಿಂದ ಮನವರಿಕೆ ಮಾಡುವ ಬ್ಯಾಕ್‌ಗ್ರೌಂಡ್ ಕೆಲಸ ಮಾಡುವ ಯಾವುದೇ ಪ್ರಯತ್ನ ನಡೆಸುವುದಿಲ್ಲ. ಆಗಾಗ ನೆಲ ಜಲದ ರಾಜ್ಯದ ಹಿತಾಸಕ್ತಿಯ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆದು ಚರ್ಚಿಸುತ್ತಿದ್ದರೆ ಇಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.
ಈಗ ಅನಂತಕುಮಾರ್ ಇದ್ದಿದ್ದರೆ
ಕಾವೇರಿ, ಕೃಷ್ಣೆ, ಮಹದಾಯಿ ವಿಷಯವನ್ನು ತುಂಬಾ ವಿಸ್ತೃತವಾಗಿ ಅಭ್ಯಾಸ ಮಾಡಿ ತಲೆಕೆಡಿಸಿಕೊಂಡು ಕೆಲಸ ಮಾಡಿದ ಇತ್ತೀಚಿನ ರಾಜಕಾರಣಿಗಳು ಅಂದರೆ ದೇವೇಗೌಡ, ಸಿದ್ದರಾಮಯ್ಯ, ಅನಂತಕುಮಾರ್, ಎಚ್.ಕೆ.ಪಾಟೀಲ್, ಬಸವರಾಜ್ ಬೊಮ್ಮಾಯಿ ಮತ್ತು ಎಂ.ಬಿ.ಪಾಟೀಲ್ ಥರದ ಕೆಲವರು ಅಷ್ಟೆ. ಉಳಿದವರದು ಬರೀ ಹಿಮ್ಮೇಳ. ಆದರೆ ಮೊದಲು ವಾಜಪೇಯಿ ಮತ್ತು ಈಗಿನ ಮೋದಿ ಸರ್ಕಾರದ ಅವಧಿಯಲ್ಲಿ ನೀರಿನ ವಿಷಯದಲ್ಲಿ ತೆರೆಯ ಹಿಂದೆ ಪ್ರಧಾನಿಯನ್ನು ಒಪ್ಪಿಸಿ, ಅಧಿಕಾರಿಗಳ ಮನವೊಲಿಸಿ, ಕೇಂದ್ರದ ವಕೀಲರಿಗೆ ತಿಳಿಸಿ ಹೇಳಿ, ಅನುಕೂಲಕರ ವಾತಾವರಣ ನಿರ್ಮಿಸಿ ನಮ್ಮ ರಾಜ್ಯದ ಕೆಲಸವನ್ನು ಅನಂತ ಕುಮಾರ್ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರಿಗೆ ಏಕಕಾಲಕ್ಕೆ ದೇವೇಗೌಡ, ಸಿದ್ದರಾಮಯ್ಯ, ಬೊಮ್ಮಾಯಿ ಜೊತೆ ಮಾತಾಡಿ, ನಮ್ಮ ಏಕ ನಿಲುವನ್ನು ಮೋದಿ, ಜೇಟ್ಲಿ ಅವರಿಗೂ ತಿಳಿಸಿಹೇಳುವ ಸಾಮರ್ಥ್ಯ ಇತ್ತು. ಅದು ಈಗ ಯಾರೂ ಮಾಡುತ್ತಿಲ್ಲ. ನೆಲ ಜಲದ ವಿಷಯ ಬಂದಾಗ ಆವೇಶ, ಪ್ರತಿಭಟನೆ ಒಂದು ಭಾಗ. ತೆರೆಯ ಹಿಂದೆ ನಿಂತು ಕೆಲಸ ಆಗುವಂತೆ ಮಾಡುವುದು ಇನ್ನೊಂದು ಭಾಗ.
ಡಿಕೆಶಿಗೆ ಇದರಿಂದ ಲಾಭ ಎಷ್ಟು?
ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ರಾಜ್ಯದಲ್ಲಿ ಚಿಗಿತುಕೊಂಡಿದೆ, ಜೊತೆಗೆ ಯಡಿಯೂರಪ್ಪ ಇಳಿಕೆ ನಂತರ ಕಾಂಗ್ರೆಸ್ ಇನ್ನಷ್ಟುಮಜಬೂತ್ ಆಗುತ್ತಿದೆ ಎನ್ನುವುದು ಹೌದು. ಆದರೆ ಸಿದ್ದರಾಮಯ್ಯಗೆ ಇರುವಂತೆ ವೋಟ್‌ಬ್ಯಾಂಕ್ ತಮ್ಮ ಹಿಂದೆ ಇಲ್ಲ ಎನ್ನುವ ಕಾರಣದಿಂದ ಶಿವಕುಮಾರ್ ಒಕ್ಕಲಿಗರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿದ್ದಾರೆ. 1999ರಲ್ಲಿ ದೇವೇಗೌಡರ ಪ್ರಭಾವ ಕಡಿಮೆ ಆದಾಗ ಎಸ್.ಎಂ.ಕೃಷ್ಣಗೆ ಹೇಗೆ ಲಾಭ ಆಯಿತೋ ಅದೇ ರೀತಿ 2023ರಲ್ಲಿ ಆ ಜಾಗೆ ತುಂಬಲು ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯವಾಗಿ ಎಲ್ಲವೂ ಸರಿಯೇ. ಆದರೆ ಸುತ್ತಲೂ ಕ್ಯಾಮೆರಾಗಳು ಇರುವಾಗ ಡಿ.ಕೆ. ಮಾತನಾಡುವ ಶೈಲಿಯಲ್ಲಿ, ಬಾಡಿ ಲಾಂಗ್ವೇಜಲ್ಲಿ ಇನ್ನಷ್ಟುಬದಲಾವಣೆ ಆಗಬೇಕು. ಇಲ್ಲವಾದಲ್ಲಿ ಒಂದು ಕಡೆ ಆದ ಲಾಭ ಇನ್ನೊಂದು ಕಡೆಯ ನಷ್ಟಕ್ಕೂ ಕಾರಣ ಆಗಬಹುದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ