* ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್‌ಗಳ ಜೊತೆ ಸಿಎಂ ವಿಡಿಯೋ ಸಂವಾದ
* ಉತ್ತಮ ಸೇವೆ ನೀಡಲು ಸೂಚನೆ
* ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗ್ರಾಮ ಒನ್’ ಯೋಜನೆ
ಬೆಂಗಳೂರು(ಫೆ.06): ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗೆ ಮಂಜೂರಾತಿ ನೀಡಲಾಗಿದ್ದು, ಇವುಗಳನ್ನು ‘ಗ್ರಾಮ ಒನ್’ ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರದ(Government of Karnataka) ಮಹತ್ವಾಕಾಂಕ್ಷಿ ಯೋಜನೆಯಾದ ‘ಗ್ರಾಮ ಒನ್’ ಯೋಜನೆ ಕುರಿತು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಡಳಿತ ಮತ್ತು ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್‌ಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ(Video Conference) ಮಾತನಾಡಿದ ಅವರು, ಸರ್ಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಗ್ರಾಮ ಒನ್ ಆಪರೇಟರ್ಸ್‌ಗಳಿಗೆ ವಹಿಸಿದೆ. ಹಾಗಾಗಿ ಜನರ ಬಳಿ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು ನೀಡಬೇಕು ಎಂದು ಸಲಹೆ ನೀಡಿದರು.
Grama One: ರಾಜ್ಯದ 3026 ಹಳ್ಳಿಗಳಲ್ಲಿ "ಗ್ರಾಮ ಒನ್’ಗೆ ಚಾಲನೆ
ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರ್ಕಾರದ ಸೇವೆಯನ್ನು ನೀಡಬೇಕು, ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆ ಪೂರೈಸಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ಪಿಡಿಒ, ತಹಶೀಲ್ದಾರ್‌ಗಳು ಸಿಬ್ಬಂದಿಗಳೊಂದಿಗೆ ಸೌಹಾರ್ದತೆಯಿಂದ ಇರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮೀರಿದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಅರಿವು ಇರಬೇಕು ಎಂದರು.
ಬಹುಮಾನ:
ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ಸ್‌ಗಳು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಪ್ರತಿವಾರ ಮೂರು ಉತ್ತಮ ಆಪರೇಟರ್ಸ್‌ಗಳನ್ನು ಆಯ್ಕೆ ಮಾಡಿ ಪ್ರಥಮ ಬಹುಮಾನ 10 ಸಾವಿರ ರು., ದ್ವಿತೀಯ ಬಹುಮಾನ ಏಳು ಸಾವಿರ ರು., ತೃತೀಯ ಬಹುಮಾನ ಐದು ಸಾವಿರ ರು. ಅನ್ನು ಇ-ಆಡಳಿತ ಇಲಾಖೆಯಿಂದ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಜಿಲ್ಲೆಗೆ ತಿಂಗಳಿಗೊಮ್ಮೆ ಒಂದು ಲಕ್ಷ ರು. ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದರು.
1 ತಿಂಗಳಲ್ಲಿ ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ:
ಬೆಂಗಳೂರು: ಲೋಕಾರ್ಪಣೆಗೊಂಡಿರುವ ಸರ್ಕಾರದ ಮಹತ್ವಾಕಾಂಕ್ಷಿ ಗ್ರಾಮ ಒನ್(Grama One) ಯೋಜನೆಯನ್ನು ಫೆಬ್ರವರಿ ಅಂತ್ಯದೊಳಗೆ ರಾಜ್ಯಾದ್ಯಂತ(Karnataka) ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೂಚಿಸಿದ್ದರು.
Grama One: 3000 ಸೇವಾಕೇಂದ್ರ ತೆರೆಯಲು ನಿರ್ಧಾರ: ಜ.26ರಿಂದ 12 ಜಿಲ್ಲೆಗಳಲ್ಲಿ ಜಾರಿ!
ಜ.29 ರಂದು ಈ ಕುರಿತು ಇ-ಆಡಳಿತ(E-Governance), ಆರ್‌ಡಿಪಿಆರ್(RDPR), ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಮತ್ತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ನಿರ್ದೇಶನ ನೀಡಿದ್ದರು. ಗ್ರಾಮ ಒನ್ ಯೋಜನೆಯ ಪರಿಶೀಲನೆ ನಡೆಸಲು ವಾರಕ್ಕೊಮ್ಮೆ ಖುದ್ದು ಗ್ರಾಮ ಒನ್ ಆಪರೇಟರ್‌ಗಳು, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದರು.
ಗ್ರಾಮ ಒನ್‌ನಿಂದ ಸ್ವೀಕರಿಸಿದ ಅರ್ಜಿಗಳ ಶೀಘ್ರ ವಿಲೇವಾರಿ, ಅರ್ಜಿಗಳ ತಿರಸ್ಕಾರಕ್ಕೆ ಕಾರಣಗಳನ್ನು ಎಲ್ಲಾ ಇಲಾಖೆಗಳ ಡ್ರಾಪ್‌ಡೌನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಿ, ಅನಗತ್ಯವಾಗಿ ತಿರಸ್ಕೃತ ಮಾಡುತ್ತಿರುವ ಅಕಾರಿ/ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕು. ಅಲ್ಲದೇ, ಕೆಡಿಪಿ ಸಭೆಯಲ್ಲಿ(KDP Meeting) ಪರಿಶೀಲಿಸಬೇಕು. ಎಲ್ಲಾ ಗ್ರಾಮ ಒನ್ ಆಪರೇಟರ್‌ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಿ, ಇದರ ಕಡ್ಡಾಯ ಪಾಲನೆಯನ್ನು ಜಿಲ್ಲಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ತಾಂತ್ರಿಕ, ಆಡಳಿತಾತ್ಮಕ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಗ್ರಾಮ ಒನ್ ಆಪರೇಟರ್ ಗಳಿಗೆ ತರಬೇತಿ ನೀಡಬೇಕು ಮತ್ತು ಸೇವೆಗಳನ್ನು ವಿತರಿಸುವ ಆಡಳಿತಾತ್ಮಕ ಕಾರ್ಯವಿಧಾನಗಳ ತಿಳುವಳಿಕೆ ಇರಬೇಕು. ಇದರಿಂದ ಗ್ರಾಮ ಒನ್ ಆಪರೇಟರ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಮತ್ತು ಯೋಜನೆಯು ಹೆಚ್ಚು ಜನಪ್ರಿಯ ಮತ್ತು ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.