* ಅತ್ಯಾಚಾರ, ಕೊಲೆ, ಸುಲಿಗೆ ಮಿತಿಮೀರಿವೆ
* ಸರ್ಕಾರ ಬೇಜವಾಬ್ದಾರಿ ಮೆರೆಯುತ್ತಿದೆ
* ನಮ್ಮ ರಾಜ್ಯವನ್ನು ನೀಚ ಸಂಸ್ಕೃತಿಗೆ ತೆಗೆದುಕೊಂಡು ಹೋಗುತ್ತಿರುವುದು ನೋವು ತಂದಿದೆ
ಬೆಂಗಳೂರು(ಆ.27): ರಾಜ್ಯದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಪ್ರಕರಣಗಳು ಮಿತಿ ಮೀರಿದ್ದು, ಬಿಜೆಪಿ ಸರ್ಕಾರ ಬೇಜವಾಬ್ದಾರಿ ಮೆರೆಯುತ್ತಿದೆ. ಇದರಿಂದ ಇಡೀ ವಿಶ್ವವು ಗೌರವದಿಂದ ಕಾಣುತ್ತಿದ್ದ ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಇಲಾಖೆ ಮರ್ಯಾದೆ ಹಾಳು ಮಾಡುತ್ತಿದ್ದಾರೆ. ಸ್ವತಃ ಸರ್ಕಾರವೇ ಆರೋಪಿಗಳ ರಕ್ಷಣೆಗೆ ನಿಲ್ಲುವ ಮೂಲಕ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹಾಳು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಿರುವ ಗೃಹ ಸಚಿವರ ಕ್ಷೇತ್ರದಲ್ಲಿ, ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಈ ಹಿಂದೆ ಮಂತ್ರಿಯಾಗಿದ್ದವರ ಮೇಲೂ ಅತ್ಯಾಚಾರ ಆರೋಪ ಕೇಳಿಬಂದಿವೆ. ಮೈಸೂರಿನಲ್ಲಿ ಘಟನೆ ನಡೆದು 48 ಗಂಟೆಗಳಾಗಿವೆ. ಆದರೆ ಇದುವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವೂ ಆಗಿಲ್ಲ. ಇದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಡಿಕೆ ಶಿವಕುಮಾರ್ ಭೇಟಿಯಾದ ಜಮೀರ್ ಅಹಮದ್ : ಬೆನ್ನಲೆ ಟ್ವೀಟ್ ಮಾಡಿ ಗಂಭೀರ ಆರೋಪ
ಬಿಜೆಪಿಯವರು ವಿಪಕ್ಷ ಸಹಕರಿಸಬೇಕು ಎಂದು ಹೇಳುತ್ತಾರೆ. ಯಾವ ಸಹಕಾರ ನೀಡಬೇಕು? ಈ ಹಿಂದೆ ಸರಕಾರ ಎಸ್‌ಐಟಿ ರಚಿಸಿತ್ತು. ಅತ್ಯಾಚಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವ ಪೊಲೀಸರು ಮರ್ಯಾದೆ ಕಳೆದುಕೊಂಡಿದ್ದಾರೆ. ಇದರಿಂದ ರಾಜ್ಯದ ಘನತೆಗೆ ಧಕ್ಕೆಯಾಗುತ್ತಿದೆ. ನಮ್ಮ ರಾಜ್ಯವನ್ನು ನೀಚ ಸಂಸ್ಕೃತಿಗೆ ತೆಗೆದುಕೊಂಡು ಹೋಗುತ್ತಿರುವುದು ನೋವು ತಂದಿದೆ ಎಂದರು.
ಅತ್ಯಾಚಾರ ನಡೆದ ಸಮಯದಲ್ಲಿ ಆ ಪ್ರದೇಶದ ಸುತ್ತಮುತ್ತಲಿನಲ್ಲಿರುವ ಮೊಬೈಲ್ ಟವರ್ ಮೂಲಕ ಜಾಡು ಹಿಡಿದರೆ ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳ ಪತ್ತೆ ಮಾಡಬಹುದು. ಈವರೆಗೂ ಕಣ್ಣು ಮುಚ್ಚಿಕೊಂಡಿದ್ದ ಸರ್ಕಾರ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸ್ತಾಪವಾದ ನಂತರ ಕಣ್ಣು ಬಿಡಲಾರಂಭಿಸಿದೆ ಎಂದು ಟೀಕಿಸಿದರು.