ಪೊಲೀಸರು ಮೈಯೆಲ್ಲಾ ಕಣ್ಣಾಗಿಸಿದ್ದರೂ ದಾವಣಗೆರೆಯ ದುಗ್ಗಮ್ಮನಿಗೆ ಹನ್ನೊಂದನೇ ಹೊಡೆತಕ್ಕೆ ಕೋಣ ಬಲಿ!

By Kannadaprabha NewsFirst Published Mar 22, 2024, 11:54 AM IST
Highlights

ದುಗ್ಗಮ್ಮನಿಗೆ ಕೋಣ ಬಲಿ ಕೊಡದೇ ಜಾತ್ರೆಯಂತೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮೈಯೆಲ್ಲಾ ಕಣ್ಣಾಗಿಸಿ, ದೇವಸ್ಥಾನದ ಪ್ರದೇಶದಲ್ಲಿ ಕಣ್ಗಾವಲಿಟ್ಟಿತ್ತು.  ಆದರೂ ದೈವಜ್ಞ ಕಲ್ಯಾಣ ಮಂಟಪದ ಬಳಿ ಇದೇ ಮೊದಲ ಬಾರಿಗೆ ಕೋಣ ವಧೆ ಮಾಡಲಾಯಿತು ಎನ್ನಲಾಗಿದೆ.

ದಾವಣಗೆರೆ (ಮಾ.22): ಕೋಣ ವಧೆಯಾಗದೇ ಜಾತ್ರೆ ಆಗದೆಂಬ ಮಾತಿನಂತೆ ಅಜ್ಞಾತಸ್ಥಳದ ನಿರ್ಜನ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ 3.30ರ ವೇಳೆ ಮಬ್ಬುಗತ್ತಲಿನಲ್ಲಿ ಕೋಣ ಬಲಿ ಕೊಡುವುರೊಂದಿಗೆ ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಕ್ಕಿತು.

ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಕಳೆದ ನಾಲ್ಕೈದು ದಿನಗಳಿಂದಲೂ ವ್ಯಾಪಕ ಪೊಲೀಸ್ ಭದ್ರತೆ, ಸಿಸಿ ಕ್ಯಾಮೆರಾ ಕಣ್ಗಾವಲಿನ ಜೊತೆಗೆ ದೇವಸ್ಥಾನದ ಸುತ್ತಲಿನ 200 ಮೀಟರು ಪ್ರದೇಶದಲ್ಲಿ ಪ್ರಾಣಿ ಬಲಿ ನಿಷೇಧಿಸಿ, ಹಿರಿಯ ಅಧಿಕಾರಿಗಳೇ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಕೋಣ ಬಲಿ ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ, ಮತ್ತೊಂದು ಕಡೆ ಹಿಂದಿನಿಂದಲೂ ಬಂದ ಆಚರಣೆ ಏನಾಗಬೇಕಿತ್ತೋ ಅದು ಆಯಿತು ಎಂದು ತಿಳಿದು ಬಂದಿದೆ.

ದುಗ್ಗಮ್ಮನಿಗೆ ಕೋಣ ಬಲಿ ಕೊಡದೇ ಜಾತ್ರೆಯಂತೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೈಯೆಲ್ಲಾ ಕಣ್ಣಾಗಿಸಿ, ದೇವಸ್ಥಾನದ ಪ್ರದೇಶದಲ್ಲಿ ಕಣ್ಗಾವಲಿಟ್ಟಿತ್ತು. ಎಂದಿನಂತೆ ವಾಹನವೊಂದರಲ್ಲಿ ದೇವಿಯ ಕೋಣವನ್ನು ಸುತ್ತಾಡಿಸಿ, ಕಡೆಗೆ ಬುಧವಾರ ಬೆಳಗಿನ ಜಾವ 3.30ರ ವೇಳೆ ವೀರ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಪಶು ವೈದ್ಯಕೀಯ ಆಸ್ಪತ್ರೆ ಹಿಂಭಾಗ ದೈವಜ್ಞ ಕಲ್ಯಾಣ ಮಂಟಪದ ಬಳಿ ಇದೇ ಮೊದಲ ಬಾರಿಗೆ ಕೋಣ ವಧೆ ಮಾಡಲಾಯಿತು ಎನ್ನಲಾಗಿದೆ.

ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಭಕ್ತಸಾಗರ: ಉಘೇ ಉಘೇ ಎಂದ ಭಕ್ತರು..!

ಕಟ್ಟುಮಸ್ತಾದ ಇಬ್ಬರು ಮಬ್ಬುಗತ್ತಲಲ್ಲಿ ನೂರಾರು ಜನರ ಮಧ್ಯೆ ಭಕ್ತಿಯ ಉನ್ಮಾದದಲ್ಲಿ ಒಂದು, ಎರಡು, ಮೂರು ಹೀಗೆ ಎಣಿಸುತ್ತಾ ಬಲವಾದ ಆಯುಧಗಳಿಂದ 11 ಹೊಡೆತಕ್ಕೆ ಕೋಣ‍ದ ರುಂಡ ಮುಂಡವನ್ನು ಬೇರ್ಪಡಿಸಿ, ಹರ್ಷೋದ್ಘಾರ ದೊಂದಿಗೆ ಬಂದಷ್ಟೇ ವೇಗದಲ್ಲಿ ‘ದುಗ್ಗಮ್ಮ ನಿನ್ನಾಲ್ಕು ಉಧೋ ಉಧೋ ’ಎಂಬುದಾಗಿ ಹರ್ಷೋದ್ಘಾರದೊಂದಿಗೆ ಅಲ್ಲಿಂದ ಸ್ಥಳ ಖಾಲಿ ಮಾಡಿದರು. ಅತ್ತ ದೇವಸ್ಥಾನದ ಬಳಿ ಇದ್ದವರು ಕೋಣ ಅಲ್ಲಿದೆ, ಇಲ್ಲಿದೆಯೆಂಬುದಾಗಿ ಸುದ್ದಿ ಹರಡುತ್ತಲೇ ಇತ್ತು. ಅಷ್ಟರಲ್ಲಿ 11 ಹೊಡೆತಕ್ಕೆ ಬಿತ್ತು ಎಂಬ ಮಾತು ಕೇಳುವುದರೊಂದಿಗೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತಲ್ಲದೇ, ದುಗ್ಗಮ್ಮನ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಂತಾಯಿತು.

ಬಲಿ ತಡೆಗೆ ಆಡಳಿತ ಯಂತ್ರ ಕಳೆದ ರಾತ್ರಿಯಿಂದಲೂ ಮೈಯೆಲ್ಲಾ ಕಣ್ಣಾಗಿಸಿಕೊಂಡು, ಕಾಯುತ್ತಿತ್ತು. ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆಗೆ ಮಫ್ತಿಯಲ್ಲಿದ್ದ ಪೊಲೀಸರು ಸಹ ಗುಂಪುಗಳಲ್ಲಿ ಚದುರಿಸಿದ್ದರು

ದೇವಸ್ಥಾನ ಸುತ್ತಮುತ್ತ, 200 ಮೀಟರ್ ಪರಿಧಿ ವ್ಯಾಪ್ತಿಯಲ್ಲಿ ಎಲ್ಲಿಯೂ ಕೋಣವಾಗಲೀ, ಕುರಿ ಇತರೆ ಪ್ರಾಣಿಗಳಾಗಲೀ ಸುಳಿಯದಂತೆ ಕಟ್ಟೆಚ್ಚರ ವಹಿಸಿದ್ದರು. ಆದರೆ, ಅತ್ತ ದೈವಜ್ಞ ಕಲ್ಯಾಣ ಮಂಟಪದ ಬಳಿ ನಿರ್ಜನ ಪ್ರದೇಶದ ಮಬ್ಬುಗತ್ತಲಿನಲ್ಲಿ 11 ಹೊಡೆತಕ್ಕೆ ಕೋಣ ತಲೆ ತೆಗೆದು, ಆಚರಣೆಯನ್ನು ಮುಗಿಸಿದ ಭಕ್ತರು ಜಯಕಾರ ಹಾಕುತ್ತಾ ಮುಂದಿನ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಕೋಣನ ಬಲಿ ನೀಡಿದರಷ್ಟೇ ದೇವಿ ಕೃಪೆ ತೋರುತ್ತಾಳೆಂಬ ನಂಬಿಕೆ ಇಲ್ಲಿ ಬಲವಾಗಿದೆ.

ಚಂದ್ರಗ್ರಹಣ ಮಾರ್ಚ್‌ 25ರ ನಂತರ ಇವರಿಗೆ ಹೊಸ ಜೀವನ ಆರಂಭ

ದುಗ್ಗಮ್ಮನ ಗುಡಿ ಬಳಿ ಅಲ್ಲದಿದ್ದರೂ ನಿರ್ದಿಷ್ಟ ವ್ಯಕ್ತಿಗಳಿಗಷ್ಟೇ ಸುಳಿವು ಸಿಗುವಂತೆ ನೋಡಿಕೊಂಡು, ತೀರ ಸಣ್ಣದು ಅಲ್ಲ, ಅತ್ತ ಬಲವಾದ ಕೋಣವೂ ಅಲ್ಲವೆಂಬಂತೆ ಮಧ್ಯಮ ಗಾತ್ರದ ಸುಮಾರು 3 ವರ್ಷದ ಕೋಣ ವಧೆ ಮಾಡಲಾಯಿತೆನ್ನಲಾಗಿದೆ. ಇತ್ತ ದೇವಸ್ಥಾನ ಬಳಿ ಪ್ರಾಣಿ ಬಲಿಗೆ ಆಸ್ಪದ ನೀಡದಂತೆ ಇಡೀ ಆಡಳಿತ ಯಂತ್ರ ಟೊಂಕಕಟ್ಟಿ ನಿಂತಿತ್ತು. ಜಾತ್ರೆ ವೇಳೆ ಕೋಣ ಸೇರಿದಂತೆ ಯಾವುದೇ ಪ್ರಾಣಿಗಳನ್ನು ಸಾರ್ವಜನಿಕವಾಗಿ ಬಲಿ ನೀಡುವುದಕ್ಕೆ ಅವಕಾಶ ಇಲ್ಲ. ಒಂದು ವೇಳೆ ಪ್ರಾಣಿ ಬಲಿ ನಡೆದಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದವು. ಆದರೆ, ದೇವಸ್ಥಾನ ಸಮೀಪವಂತೂ ಯಾವುದೇ ಬಲಿ ಆಚರಣೆ ಆಗಲಿಲ್ಲವೆಂಬುದೂ ಅಷ್ಟೇ ಸತ್ಯ. ದೇವಸ್ಥಾನ ಸಮಿತಿಯವರು ಸಹ ಕೋಣ ಬಲಿ ನೀಡುವುದಿಲ್ಲ. ಸಾಂಕೇತಿಕ ಆಚರಣೆಯಷ್ಟೇ ಇರುತ್ತದೆಂದು ಸ್ಪಷ್ಟಪಡಿಸಿದ್ದರು.

ಬಲಿ ಆಚರಣೆ ಮುಗಿಯುತ್ತಿದ್ದಂತೆ ಚರಗ ಚೆಲ್ಲುವ ಪ್ರಕ್ರಿಯೆ ಶುರುವಾಯಿತು. ಜೋಳ ಇತರೆ ಧಾನ್ಯಗಳಿಗೆ ಬಲಿಯಾದ ಕೋಣದ ರಕ್ತ ಬೆರೆಸಿ, ಊರಿನ ಎಷ್ಟ ದಿಕ್ಕಿಗೂ ಪುಟ್ಟಿಗಳನ್ನು ತುಂಬಿಕೊಂಡು, ಚರಗ ಚೆಲ್ಲುವ ಪ್ರಕ್ರಿಯೆ ನಡೆಯಿತು. ಯಾವಾಗ ಕೋಣ ಬಲಿ, ಚರಗ ಚೆಲ್ಲುವ ಕಾರ್ಯ ಶುರುವಾಯಿತೋ, ಜನರು ಸಹ ಕೈಗೆ ಸಿಕ್ಕಷ್ಟು, ತಮ್ಮ ತಲೆ ಮೇಲೆ ಬಿದ್ದಷ್ಟು ಚರಕ ಜೋಪಾನ ವಾಗಿಟ್ಟುಕೊಂಡು, ಹರ್ಷೋದ್ಘಾರದೊಂದಿಗೆ ದುಗ್ಗಮ್ಮನಿಗೆ ಜಯಕಾರ ಹಾಕುತ್ತಾ ತಮ್ಮ ಮನಗೆಳಿಗೆ ಮರಳಿದರು.

ದುಗ್ಗಮ್ಮ ಜಾತ್ರೆ ಅಂದ್ರೆ ಸುಮ್ನೆ ಅಲ್ಲ, ಖರ್ಚೇನೂ ಕಡಿಮೆ ಇಲ್ಲ! : ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾದ ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ಲಕ್ಷಾಂತರ ಪ್ರಾಣಿಗಳ ರಕ್ತದೋಕುಳಿ ಚರಂಡಿ, ಒಳ ಚರಂಡಿಗಳ ಮೂಲಕ ಹರಿಯುವ ಜೊತೆಗೆ ನೂರಾರು ಕೋಟಿ ರು.ಗಳ ವಹಿವಾಟಿನ ಮೂಲಕವೂ ಗಮನ ಸೆಳೆಯುತ್ತದೆ.

ಮಧ್ಯ ಕರ್ನಾಟಕದ ಪ್ರಮುಖ ಶಕ್ತಿ ದೇವತೆಯೆಂದೇ ಆರಾಧಿಸಲ್ಪಡುವ ದುಗ್ಗಮ್ಮನ ಜಾತ್ರೆಗೆ ಏನೆಲ್ಲವೆಂದರೂ ನೂರಾರು ಕೋಣಗಳು, ಖಾರದ ಅಡುಗೆ ಮಾಡುವವರ ಮನೆಗೆ ಕನಿಷ್ಟ 1ರಿಂದ ಐದಾರು ಕುರಿಗಳು, ಅಸಂಖ್ಯಾತ ಕೋಳಿಗಳ ವಧೆ ಯಾಗುತ್ತದೆ. ಒಂದು ಕುರಿಗೆ ಕನಿಷ್ಟ 15 ಸಾವಿರರಿಂದ 50-60 ಸಾವಿರ ರು.ವರೆಗೆ ಮಾರಾಟವಾಗಿದೆ.

ದುಗ್ಗಮ್ಮನ ಜಾತ್ರೆ ಅಂದರೆ ಬಂದ ಬೀಗರು, ಬಂಧು-ಬಳಗಕ್ಕೆ ಕುರಿ, ಕೋಳಿ, ಕೋಣಗಳ ಊಟ ಭರ್ಜರಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಇಡೀ ಊರಿನಲ್ಲಿ ಅಡುಗೆಯ ಘಮಘಮಿಸುತ್ತಿತ್ತು. ರಸ್ತೆಗಳ ಬದಿಯಲ್ಲಿ ಕುರಿಗಳ ತಲೆ, ಕಾಲುಗಳನ್ನು ಸುಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಡೀ ಊರು ರಕ್ತದೋಕುಳಿಯಾಗಿದ್ದು, ಚರಂಡಿಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಇನ್ನು, ಜಿಲ್ಲೆಯ ವಿವಿಧೆಡೆ ಅಷ್ಟೇಅಲ್ಲ, ರಾಜ್ಯದ ವಿವಿಧೆಡೆಯಿಂದ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ, ವಿದೇಶದಲ್ಲಿದ್ದವರೂ ತಮ್ಮ ನೆಚ್ಚಿನ ಆರಾಧ್ಯ ದೈವ ದುಗ್ಗಮ್ಮನ ಜಾತ್ರೆಗೆಂದೇ ಬರುತ್ತಾರೆ. ಸುಮಾರು 13 ಲಕ್ಷಕ್ಕೂ ಅಧಿಕ ಜನರು ಜಾತ್ರೆಗೆಂದೇ ಬಂದಿದ್ದಾರೆ. ಕನಿಷ್ಟ ಒಂದು ವಾರದಿಂದ 15 ದಿನಗಳ ಕಾಲ ಜಾತ್ರೆ ಇರುತ್ತದೆ.

ದೀಡು ನಮಸ್ಕಾರ, ಬೇವಿನುಡುಗೆ ಸೇವೆ: ಅರಮನೆಯಂತೆ ಅಲಂಕೃತವಾದ ದೇವಸ್ಥಾನ ಅಂಗಳದ ಮಹಾ ಮಂಟಪವೂ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಂಟಪದ ಒಳಗೆ ದೇವಿಯ ಮೂರ್ತಿ ಪ್ರತಿಷ್ಟಾಪಿಸಲಾಗಿದೆ. ನಸುಕಿನಿಂದಲೇ ಭಕ್ತಾದಿಗಳು ಬೇವಿನುಡುಗೆ ಹರಕೆ, ದೀಡು ನಮಸ್ಕಾರ, ಉರುಳು ಸೇವೆ ಮಾಡಿ, ಭಕ್ತಿ ಸಮರ್ಪಿಸಿದರು. ನಾನಾ ಹರಕೆ ಹೊತ್ತ ವರು, ತಮ್ಮ ಕೋರಿಕೆ ಈಡೇರಿಸಿದ ತಾಯಿ ದುಗ್ಗಮ್ಮನ ಸನ್ನಿಧಿಯಲ್ಲಿ ಭಕ್ತಿ ತುಂಬಿದ ಹರಕೆ ತೀರಿಸಿ ಕೃತಾರ್ಥರಾದರು.

ನಸುಕಿನಿಂದಲೇ ದೇವಿಗೆ ಹರಕೆ ತೀರಿಸಲು ಭಕ್ತರು ಬೇವಿನುಡಿಗೆ ತೊಟ್ಟವರು, ಉರುಳು ಸೇವೆ, ದೀಡು ನಮಸ್ಕಾರ ಮಾಡುವ ಸಣ್ಣ ಮಕ್ಕಳಿಂದ ಹಿರಿಯವರೆಗೆ ಕುಟುಂಬ ಸಮೇತರಾಗಿ ಬಂದು, ಭಕ್ತಿ ಸಮರ್ಪಿಸಿದರು. ಹರಕೆ ತೀರಿಸಲು ಬಡವ, ಬಲ್ಲಿದ, ಅಕ್ಷರಸ್ಥ, ಅನಕ್ಷರಸ್ಥ, ವಿಕಲಚೇತನಹೀಗೆ ಯಾವುದೇ ಅಂತರ, ಬೇಧಭಾವ ಇಲ್ಲದೇ, ಬೇವಿನುಡುಗೆ ಸೇವೆ, ಉರುಳು ಸೇವೆ, ದೀಡು ನಮಸ್ಕಾರದ ಸೇವೆ ಸಲ್ಲಿಸಿದರು. ದುಗ್ಗಮ್ಮನ ಮುಂದೆ ಎಲ್ಲರೂ ಒಂದಾಗಿ ತಮ್ಮ ಭಕ್ತಿ ಸಲ್ಲಿಸುವುದರಲ್ಲಿ ತಲ್ಲೀನರಾಗಿದ್ದರು.

click me!