ಕ್ಷೌರ ನಿರಾಕರಿಸಿ ದಲಿತನ ಹತ್ಯೆ: ಅಧಿಕಾರಿಗಳು ದೌಡು, ತನಿಖೆ ಆರಂಭ

By Kannadaprabha News  |  First Published Aug 19, 2024, 6:03 AM IST

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಬಂದಿದ್ದ ವೇಳೆ ದಲಿತ ಯುವಕ ಯಮನೂರಪ್ಪಗೆ ಹೇರ್‌ಕಟ್‌ ಮಾಡಲು ನಿರಾಕರಿಸಿ, ಆತನನ್ನು ಕತ್ತರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಮುತ್ತು ಸವರಗೊಳ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. 


ಕೊಪ್ಪಳ (ಆ.19): ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಬಂದಿದ್ದ ವೇಳೆ ದಲಿತ ಯುವಕ ಯಮನೂರಪ್ಪಗೆ ಹೇರ್‌ಕಟ್‌ ಮಾಡಲು ನಿರಾಕರಿಸಿ, ಆತನನ್ನು ಕತ್ತರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಮುತ್ತು ಸವರಗೊಳ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಇದೇ ವೇಳೆ, ಗ್ರಾಮಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಧೈರ್ಯ ತುಂಬಿ, ಮೃತ ಯಮನೂರಪ್ಪ ಕುಟುಂಬಕ್ಕೆ ಸರ್ಕಾರಿ ನೌಕರಿ, ₹8.25 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. 

ಅಲ್ಲದೆ, ಗ್ರಾಮದಲ್ಲಿ ಶಾಂತಿಸಭೆ ನಡೆಸಿ, ಶಾಂತಿ ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಸೋಮವಾರ ಸಂಗನಾಳಕ್ಕೆ ಭೇಟಿ ನೀಡಲಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಈ ಮಧ್ಯೆ, ಹತ್ಯೆ ಖಂಡಿಸಿ ಸೋಮವಾರ ಕೊಪ್ಪಳದ ತಹಸೀಲ್ದಾರ್‌ ಕಚೇರಿ ಮುಂಭಾಗ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Tap to resize

Latest Videos

undefined

ತನಿಖೆ ಆರಂಭ: ಘಟನೆ ಕುರಿತು ತನಿಖೆ ಆರಂಭಿಸಿರುವ ಡಿವೈಎಸ್ಪಿ ಮುತ್ತು ಸವರಗೊಳ ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ಮಹಜರು ನಡೆಸಿದರು. ಸ್ಥಳದಲ್ಲಿದ್ದವರಿಂದ ಸಾಕ್ಷ್ಯ ಸಂಗ್ರಹಿಸಿದರು. ಇದೇ ವೇಳೆ, ಗ್ರಾಮಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು ತಳವಾರ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶಿಧರ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ದಲಿತ ವ್ಯಕ್ತಿ ಕೊಲೆಯಾದರೆ ಕೊಡಬಹುದಾದ ₹8.25 ಲಕ್ಷ ಪರಿಹಾರ ಹಾಗೂ ಸರ್ಕಾರಿ ನೌಕರಿಯನ್ನು ಕೊಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಈಗ ತುರ್ತಾಗಿ ₹4 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು.

ಒದ್ದರೆ ಬೀಳುವಂತಿದೆ ಬೆಂಗಳೂರಿನ ಫುಟ್‌ಬಾಲ್‌ ಸ್ಟೇಡಿಯಂ: ಭೂತದ ಬಂಗಲೆಯಂತೆ ಕಾಣುವ ಮೈದಾನ

ಶಾಂತಿ ಸಭೆ: ಈ ಮಧ್ಯೆ, ಭಾನುವಾರ ಸಮಾಜ ಕಲ್ಯಾಣ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮದ ದುರಗಮ್ಮನ ಗುಡಿಯಲ್ಲಿ ಶಾಂತಿಸಭೆ ನಡೆಸಲಾಯಿತು. ಗ್ರಾಮದ ಮುಖಂಡರುಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಶಾಂತಿ ಕಾಪಾಡುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದರು. ಯಾವ ಕಾರಣಕ್ಕೂ ಅಸ್ಪಶ್ಯತೆ ಆಚರಣೆಗೆ ಅವಕಾಶ ನೀಡಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ, ಆರೋಪಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಲಾಯಿತು.

click me!