ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಕ್ಷೇತ್ರಗಳ ದೈತ್ಯ ಕಂಪನಿಗಳಾಗಿರುವ ಸುಜ್ಲಾನ್ ಮತ್ತು ರೆನೈಸಾನ್ಸ್ ಕಂಪನಿಗಳು 36 ಸಾವಿರ ಕೋಟಿ ರು. ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿವೆ.
ಬೆಂಗಳೂರು (ಮಾ.13): ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಕ್ಷೇತ್ರಗಳ ದೈತ್ಯ ಕಂಪನಿಗಳಾಗಿರುವ ಸುಜ್ಲಾನ್ ಮತ್ತು ರೆನೈಸಾನ್ಸ್ ಕಂಪನಿಗಳು 36 ಸಾವಿರ ಕೋಟಿ ರು. ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಇದರಿಂದಾಗಿ ವಿಜಯಪುರವು ದೇಶದಲ್ಲೇ 2ನೇ ಅತೀ ದೊಡ್ಡ ಪವನ ವಿದ್ಯುತ್ ಘಟಕ ಹೊಂದಲಿದೆ. ತಮ್ಮನ್ನು ಭೇಟಿ ಮಾಡಿದ ಸುಜ್ಲಾನ್ ಸಮೂಹದ ಸಿಇಒ ಜೆ.ಪಿ.ಚಲಸಾನಿ ಮತ್ತು ರೆನೈಸಾನ್ಸ್ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿಯ ಸಿಇಒ ಮಿಲಿಂದ್ ಕುಲಕರ್ಣಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದರು.
ʻಸುಜ್ಲಾನ್ ಕಂಪನಿಯು ಪವನ ವಿದ್ಯುತ್ ಕ್ಷೇತ್ರಕ್ಕೆ ಅಗತ್ಯವಿರುವ 160 ಮೀಟರ್ ಎತ್ತರದ ಕಂಬ, 70 ಮೀಟರ್ ಉದ್ದದ ಬೃಹತ್ ಬ್ಲೇಡುಗಳ ಉತ್ಪಾದನೆಗೆ ಹೆಸರಾಗಿದೆ. ವಿಜಯಪುರದಲ್ಲಿ 30 ಸಾವಿರ ಕೋಟಿ ರು. ಹೂಡಿಕೆಗೆ ಮುಂದೆ ಬಂದಿದೆ. ಮೊದಲ ಹಂತದಲ್ಲಿ ಕಂಪನಿಯು ಬ್ಲೇಡುಗಳ ತಯಾರಿಕಾ ಘಟಕ ಆರಂಭಿಸಲು ತೀರ್ಮಾನಿಸಿದ್ದು, 100 ಎಕರೆ ಜಮೀನು ಕೇಳಿದೆ. ಇದು ಜಿಲ್ಲೆಗೆ ಹರಿದು ಬರಲಿರುವ ಬೃಹತ್ ಹೂಡಿಕೆಯಾಗಲಿದೆ ಎಂದು ತಿಳಿಸಿದರು.
ಯಾರೋ ಪಾಕ್ ಪರ ಘೋಷಣೆ ಕೂಗಿದ್ರೆ ನಾಸಿರ್ ಏಕೆ ಹೊಣೆ: ಸಚಿವ ಎಂ.ಬಿ.ಪಾಟೀಲ್
ಅಧ್ಯಯನಗಳ ಪ್ರಕಾರ ದೇಶದಲ್ಲಿ ವಿಜಯಪುರ, ಆಂಧ್ರಪ್ರದೇಶದ ಅನಂತಪುರ ಮತ್ತು ರಾಜಾಸ್ಥಾನದ ಜೈಸಲ್ಮೇರ್ ಮಾತ್ರ ಪವನ ವಿದ್ಯುತ್ ಉತ್ಪಾದನೆಗೆ ಅತ್ಯಂತ ಪ್ರಶಸ್ತ ತಾಣಗಳಾಗಿವೆ. ಅನಂತಪುರ, ಜೈಸಲ್ಮೇರ್‌ನಲ್ಲಿ ಸುಜ್ಲಾನ್ ಕಂಪನಿಯು ಈಗಾಗಲೇ ಕ್ರಮವಾಗಿ 2 ಸಾವಿರ ಮತ್ತು 3 ಸಾವಿರ ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಪವನ ವಿದ್ಯುತ್ ಘಟಕಗಳನ್ನು ಹೊಂದಿದೆ. ವಿಜಯಪುರದಲ್ಲಿ 5 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಪ್ರಾರಂಭಿಸಲಿದ್ದು, ದೇಶದಲ್ಲೇ 2ನೇ ಅತೀ ದೊಡ್ಡ ಪವನ ವಿದ್ಯುತ್ ಘಟಕವಾಗಿರಲಿದೆ ಎಂದು ಮಾಹಿತಿ ನೀಡಿದರು.\
ಸುಜ್ಲಾನ್ ಕಂಪನಿಯು ಇಲ್ಲಿ ತಯಾರಿಸಲಿರುವ ಕಂಬ ಮತ್ತು ಬ್ಲೇಡುಗಳನ್ನು ಸ್ಥಳೀಯವಾಗಿಯೇ ಬಳಸಲಿದೆ. ಕಂಪನಿಗೆ ಅಗತ್ಯವಿರುವ 100 ಎಕರೆ ಜಮೀನನ್ನು ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ನೀಡಲು ಸಮಸ್ಯೆ ಇಲ್ಲ. ಒಂದೊಮ್ಮೆ ಬೇರೆಡೆ ಭೂಮಿ ಇದೆ ಎಂದು ತಿಳಿಸಿದರೆ ಸ್ವಾಧೀನಪಡಿಸಿಕೊಂಡು ನೀಡಲಾಗುವುದು. ಒಟ್ಟಿನಲ್ಲಿ ಈ ಕಂಪನಿಯು ವಿಜಯಪುರಕ್ಕೆ ಬರಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ರೆನೈಸಾನ್ಸ್‌ನಿಂದ 6 ಸಾವಿರ ಕೋಟಿ ರು. ಹೂಡಿಕೆ: ಸೌರ ಫಲಕಗಳ ತಯಾರಿಕೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಹೆಸರಾಗಿರುವ ರೆನೈಸಾನ್ಸ್ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿ ಕೂಡ ವಿಜಯಪುರದಲ್ಲಿ ಘಟಕ ಆರಂಭಿಸಲು 6 ಸಾವಿರ ಕೋಟಿ ರು. ಬಂಡವಾಳ ಹೂಡಲು ಮುಂದೆ ಬಂದಿದೆ. ಈ ಸಂಬಂಧ ಕಂಪನಿಯ ಸಿಇಒ ಮಿಲಿಂದ್ ಕುಲಕರ್ಣಿ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು.
2032ಕ್ಕೆ 1 ಟ್ರಿಲಿಯನ್ ಆರ್ಥಿಕತೆ ರಾಜ್ಯದ ಗುರಿ: ಸಚಿವ ಎಂ.ಬಿ.ಪಾಟೀಲ್
ಈ ಕಂಪನಿಯು 100 ಎಕರೆ ಜಮೀನು, 80 ಮೆಗಾವ್ಯಾಟ್ ವಿದ್ಯುತ್ ಮತ್ತು ಪ್ರತಿನಿತ್ಯ 10 ಎಂಎಲ್‌ಡಿ ನೀರಿನ ಅಗತ್ಯವಿದೆ ಎಂದು ತಿಳಿಸಿದೆ. ಜಮೀನು ಮತ್ತು ವಿದ್ಯುತ್‌ಗೆ ಜಿಲ್ಲೆಯಲ್ಲಿ ಸಮಸ್ಯೆಯಿಲ್ಲ. ಆಲಮಟ್ಟಿ ಅಣೆಕಟ್ಟೆಯಿಂದ ನೀರನ್ನೂ ಕೊಡಬಹುದು. ಕಂಪನಿಯು ಆರಂಭದಲ್ಲಿ 2,500 ಕೋಟಿ ರೂ. ಹಣ ಹೂಡಿಕೆ ಮಾಡಲಿದ್ದು 5 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಆರಂಭಿಸಲಿದೆ. 2025ರ ಅಂತ್ಯದ ಹೊತ್ತಿಗೆ ವಾಣಿಜ್ಯ ಚಟುವಟಿಕೆ ಆರಂಭಿಸಲು ಉದ್ದೇಶಿಸಲಿದೆ. ಇದರಿಂದ ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದರು. ಕೆಐಎಡಿಬಿ ಸಿಇಒ ಡಾ.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.