ಸದನ ಆರಂಭದ 72 ತಾಸಿನೊಳಗೆ ಕೊರೋನಾ ಪರೀಕ್ಷೆ| ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಕಲಾಪ| ಎಲ್ಲ ಸದಸ್ಯರಿಗೂ ಮಾಸ್ಕ್, ಸ್ಯಾನಿಟೈಸರ್ ಕಿಟ್| ಸಾಮಾಜಿಕ ಅಂತರ ಕಾಯ್ದುಕೊಂಡು ಆಸನ ವ್ಯವಸ್ಥೆ| ಸಾರ್ವಜನಿಕರ ಗ್ಯಾಲರಿಯಲ್ಲಿ ಪತ್ರಕರ್ತರಿಗೆ ಆಸನ| ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ|
ಬೆಂಗಳೂರು(ಸೆ.19): ವಿಧಾನಮಂಡಲ ಅಧಿವೇಶನವು ಸೆ.21ರಿಂದ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಪ್ರವೇಶಕ್ಕೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ.
ವಿಧಾನಪರಿಷತ್ ಸಭಾಂಗಣಕ್ಕೆ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜತೆಗೆ ಕೊರೋನಾ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು ಎಂದು ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ವಿಧಾನಪರಿಷತ್ ಆವರಣದಲ್ಲಿ ಕೊರೋನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 72 ಗಂಟೆಗಳೊಳಗಾಗಿ ಆರ್‌ಟಿ-ಪಿಸಿಆರ್ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಹೊಂದಿದ್ದರೆ ಮಾತ್ರವೇ ಸದನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇತಿಹಾಸದಲ್ಲೇ ಮೊದಲ ಬಾರಿ ವಿಭಿನ್ನ ಅಧಿವೇಶನ: ಕಲಾಪದ ವಿಧಾನ ಬದಲು!
ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಮುಗಿಯುವವರೆಗೂ ವಿಧಾನಸೌಧ ಆವರಣದಲ್ಲಿ ಕೊರೋನಾ ಪರೀಕ್ಷೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾದರಿ ಸಂಗ್ರಹಿಸಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ಒಳಗಾಗಿ ಸೇವೆ ಪಡೆಯಬಹುದು. ಪರಿಷತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪತ್ರಕರ್ತರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜತೆಗೆ ಪ್ರತಿ ನಿತ್ಯ ವಿಧಾನಪರಿಷತ್ ಸಭಾಂಗಣ ಹಾಗೂ ಮೊಗಸಾಲೆಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಸದಸ್ಯರ ಆಪ್ತ ಸಹಾಯಕರು ಹಾಗೂ ಗನ್‌ಮ್ಯಾನ್‌ಗಳಿಗೆ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಧಿಕಾರಿಗಳು, ನೌಕರರು ಹಾಗೂ ಸದಸ್ಯರಿಗೆ ನಿತ್ಯ ಫೇಸ್ ಮಾಸ್ಕ್ ಹಾಗೂ ಫೇಸ್ ಶೀಲ್ಡ್, ಸ್ಯಾನಿಟೈಸರ್ ಒದಗಿಸಲಾಗುವುದು. ಸದಸ್ಯರ ಆಸನಗಳ ನಡುವೆ ಪಾರದರ್ಶಕ ಫೈಬರ್ ಶೀಟ್ ಅಳವಡಿಕೆ ಮಾಡಲಾಗುವುದು. ಜತೆಗೆ ತಮಗೆ ಮೀಸಲಿಟ್ಟಆಸನದಲ್ಲೇ ಕುಳಿತುಕೊಳ್ಳುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಅಧಿಕಾರಿಗಳ ಸಂಖ್ಯೆ ಕಡಿಮೆ ಮಾಡಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಅಲ್ಲದೆ, ಅಧಿಕಾರಿಗಳು, ಸಚಿವರ ಆಪ್ತ ಕಾರ್ಯದರ್ಶಿಗಳು, ಪತ್ರಕರ್ತರಿಗೆ ಸಾರ್ವಜನಿಕರ ವೀಕ್ಷಣಾ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು.
58 ಸೂಚನೆ, 1,254 ಪ್ರಶ್ನೆ ಸ್ವೀಕಾರ
ಎಂಟು ದಿನಗಳು ನಡೆಯಲಿರುವ ವಿಧಾನಪರಿಷತ್ ಕಲಾಪದಲ್ಲಿ ಮೊದಲಿಗೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲು ಸಂತಾಪ ಸೂಚಕ ನಿರ್ಣಯ ಮಂಡಿಸಲಾಗುವುದು. ಬಳಿಕ ಕಳೆದ ಅಧಿವೇಶನದಿಂದ ಈವರೆಗೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಂದ ಅಂಗೀಕೃತಗೊಂಡ ವಿಧೇಯಕಗಳ ಪಟ್ಟಿಯನ್ನು ಸಭೆ ಮುಂದೆ ಮಂಡಿಸಲಾಗುವುದು ಎಂದು ಮಹಾಲಕ್ಷ್ಮೀ ಮಾಹಿತಿ ನೀಡಿದರು. ಅಲ್ಲದೆ, ಸದಸ್ಯರಿಂದ 1254 ಪ್ರಶ್ನೆಗಳನ್ನು ಸ್ವೀಕರಿಸಿದ್ದು ನಿಯಮ 72ರ ಅಡಿ 34 ಸೂಚನೆಗಳು ಹಾಗೂ ನಿಯಮ 330ರ ಅಡಿ 24 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡ 9 ವಿಧೇಯಕಗಳು ವಿಧಾನಪರಿಷತ್‌ನಲ್ಲಿ ಮಂಡನೆಯಾಗುವುದು ಬಾಕಿ ಇದೆ. ಈ ಪೈಕಿ ಎರಡು ವಿಧೇಯಕಗಳಿಗೆ ಸುಗ್ರೀವಾಜ್ಞೆ ಹೊರಡಿಸಿದ್ದು ಉಳಿದ 7 ವಿಧೇಯಕ ಮಂಡನೆಯಾಗಲಿದೆ. ಸದಸ್ಯರ ಖಾಸಗಿ ಕಲಾಪಕ್ಕೂ ಅವಕಾಶವಿದೆ ಎಂದರು.