ಬೆಂಗ್ಳೂರು ಏರ್ಪೋರ್ಟಲ್ಲಿ ‘ಕ್ಯಾಟ್‌-3 ಬಿ’ ವ್ಯವಸ್ಥೆ

By Kannadaprabha NewsFirst Published Jan 1, 2021, 11:12 AM IST
Highlights

ಈ ವ್ಯವಸ್ಥೆ ಹೊಂದಿದ ದ. ಭಾರತದ ಮೊದಲ ಏರ್‌ಪೋರ್ಟ್‌ | ಇದರಿಂದ 50 ಮೀ. ವಿಚ್ಯುವಲ್‌ ರೇಂಜ್‌ನಲ್ಲೂ ವಿಮಾನ ಇಳಿಬಹುದು | ಈ ಮುನ್ನ 550 ಮೀ ವಿಷ್ಯುವಲ್‌ ರೇಂಜ್‌ ಇರಬೇಕಿತ್ತು | ಮಂಜಿನ ಸಮಸ್ಯೆಯಿಂದ ವಿಮಾನ ಹಾರಾಟದ ತೊಂದರೆ ನಿವಾರಣೆ

ಬೆಂಗಳೂರು(ಜ.01): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ದಕ್ಷಿಣ ರನ್‌ ವೇಯನ್ನು ‘ಕ್ಯಾಟ್‌-3 ಬಿ’ ವ್ಯವಸ್ಥೆ ಅಳವಡಿಸಿ ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಂಡಿದೆ. ಗುರುವಾರದಿಂದಲೇ ಈ ನೂತನ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ಈ ಮೂಲಕ ‘ಕ್ಯಾಟ್‌-3 ಬಿ’ ಹಂತದ ರನ್‌ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ವಿಮಾನ ನಿಲ್ದಾಣ ಹಾಗೂ ದೇಶದ ಆರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಗೆ ಕೆಐಎಲ್‌ ಪಾತ್ರವಾಗಿದೆ.

ಹಿಂದೂ ಮಹಾಸಾಗರದಲ್ಲಿ ಡ್ರೋಣ್ ಮೂಲಕ ಚೀನಾ ಬೇಹುಗಾರಿಕೆ

‘ಕ್ಯಾಟ್‌-3 ಬಿ’ ನಿಯಮಾವಳಿಗಳಿಗೆ ತಕ್ಕಂತೆ ಈ ರನ್‌ ವೇ ಮೇಲ್ದರ್ಜೆಗೇರಿಸಿರುವುದರಿಂದ ವಿಮಾನಗಳ ಚಲನೆಗಳ ಮೇಲೆ ಪ್ರತಿಕೂಲ ಹವಾಮಾನ ಮತ್ತು ಮಂಜು ಮುಸುಕಿದ ಸ್ಥಿತಿಗಳಿಂದ ಉಂಟಾಗುವ ಪರಿಣಾಮ ಕನಿಷ್ಠಗೊಳ್ಳುವ ಸಾಧ್ಯತೆಯಿದೆ. ರನ್‌ವೇಯಲ್ಲಿ 50 ಮೀಟರ್‌ನಷ್ಟುಕಡಿಮೆ ವಿಷ್ಯುವಲ್‌ ರೇಂಜ್‌ನಲ್ಲಿ ವಿಮಾನ ಇಳಿಯಲು ಹಾಗೂ 125 ಮೀಟರ್‌ನಷ್ಟುವಿಷ್ಯಯಲ್‌ ರೇಂಜ್‌ನಲ್ಲಿ ವಿಮಾನ ಹಾರಲು ಅವಕಾಶ ಮಾಡಿಕೊಡಬಹುದಾಗಿದೆ. ಈ ಹಿಂದೆ ವಿಮಾನ ಇಳಿಯಲು 550 ಮೀಟರ್‌ ಹಾಗೂ ಹಾರುವಾಗ 300 ಮೀಟರ್‌ ವಿಷ್ಯುವಲ್‌ ರೇಂಜ್‌ಗೆ ಪರವಾನಗಿ ನೀಡಲಾಗಿತ್ತು.

ಈ ರನ್‌ ವೇ ಸುತ್ತ ಏರ್‌ಫೀಲ್ಡ್‌ ಗ್ರೌಂಡ್‌ ಲೈಟ್‌ (ಎಜಿಎಲ್‌), ಬೆಳಕಿನ ವ್ಯವಸ್ಥೆ, ಟಾನ್ಸ್‌ಮಿಸ್ಸೋ ಮೀಟರ್‌, ಸ್ವಯಂ ಚಾಲಿತ ಹವಾಮಾನ ನಿರೀಕ್ಷಣಾಲಯ (ಎಡಬ್ಲ್ಯೂಒಎಸ್‌), ಮೇಲ್ಮೈ ಚಲನೆಯ ರಾಡಾರ್‌ (ಎಸ್‌ಎಂಆರ್‌) ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ವರ್ಷದೊಳಗೆ ಬೆಂಗ್ಳೂರಿನ ಚಿತ್ರಣವೇ ಚೇಂಜ್..!

ಈ ಎಲ್ಲ ವ್ಯವಸ್ಥೆಗಳಿಂದ ಈ ಹಿಂದೆ ಮಂಜಿನ ಸಂದರ್ಭದಲ್ಲಿ ವಿಮಾನ ಇಳಿಯುವಾಗ ಹಾಗೂ ಹಾರುವಾಗ ಉಂಟಾಗುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

ಮಂಜು ಕುರಿತ ವಿಶ್ಲೇಷಣಾ ಅಧ್ಯಯನ:

ಕೆಐಎಲ್‌ 2019ರಲ್ಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಅಧ್ಯಯನ ನಡೆಸಲು ಜವಾಹರ್‌ಲಾಲ್‌ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ವಿಮಾನ ನಿಲ್ದಾಣ ಪ್ರದೇಶದ ಮೇಲೆ ಕಿರಣಾತ್ಮಕ ಮಂಜು ಕವಿಯುವುದನ್ನು ಮುಂಚಿತವಾಗಿ ತಿಳಿಸುವ ಸಾಮರ್ಥ್ಯರುವ ಸಂಖ್ಯಾತ್ಮಕ ಅನುಕರಣಾ ಉಪಕರಣವನ್ನು ಅಭಿವೃದ್ಧಿ ಪಡಿಸಲು ಅಧ್ಯಯನ ನಡೆಯುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ಈ ಅಧ್ಯಯನ ಮುಗಿಯುವ ಸಾಧ್ಯತೆಯಿದೆ.

ಉತ್ತರ ರನ್‌ ವೇ ನವೀಕರಣ:

ಇನ್ನು ಕಳೆದ ಜೂನ್‌ 22ರಿಂದ ವಿಮಾನ ನಿಲ್ದಾಣದ ಉತ್ತರ ರನ್‌ ವೇ ನವೀಕರಣ ಕಾಮಗಾರಿ ನಡೆಯುತ್ತಿದ್ದು, ರನ್‌ವೇಗೆ ಹೊಸದಾಗಿ ಮೇಲ್ಮೈ ಹಾಸು ಅಳವಡಿಕೆ, ಎಲ್‌ಇಡಿ ರನ್‌ವೇ ಸೆಂಟರ್‌ ಲೈಟ್‌ಗಳು ಮತ್ತು ರನ್‌ ವೇ ಕೊನೆಯ ಲೈಟ್‌ಗಳ್ನು ಅಳವಡಿಕೆ ಹಾಗೂ ನವೀಕರಣ ಕಾರ್ಯಗಳು ಭರದಿಂದ ಸಾಗಿವೆ ಎಂದು ಕೆಐಎಎಲ್‌ ತಿಳಿಸಿದೆ.

click me!