ಮಹಡಿ ಕಟ್ಟಿ 1ಕ್ಕಷ್ಟೇ ತೆರಿಗೆ ಕಟ್ಟಿದರೆ ನಡೆಯಲ್ಲ: ಡಿಕೆಶಿ ಖಡಕ್ ಎಚ್ಚರಿಕೆ

By Kannadaprabha NewsFirst Published Nov 29, 2023, 5:43 AM IST
Highlights

ಒಂದು ಮಹಡಿಗೆ ಅನುಮತಿ ಪಡೆದು, ನಾಲ್ಕು ಮಹಡಿ ಕಟ್ಟಿಸಿಕೊಂಡು ಬರೀ ಒಂದೇ ಮಹಡಿಗೆ ಮಾತ್ರ ನಾನು ತೆರಿಗೆ ಕಟ್ಟುತ್ತೇನೆ ಎಂದರೆ ನಡೆಯುವುದಿಲ್ಲ. ಕಟ್ಟಿಕೊಂಡಿರುವ ಅಷ್ಟೂ ಮಹಡಿಗಳಿಗೆ ತೆರಿಗೆ ಕಟ್ಟಬೇಕು ಎಂದು ಕಟ್ಟಡ ಮಾಲೀಕರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ನ.29): ಒಂದು ಮಹಡಿಗೆ ಅನುಮತಿ ಪಡೆದು, ನಾಲ್ಕು ಮಹಡಿ ಕಟ್ಟಿಸಿಕೊಂಡು ಬರೀ ಒಂದೇ ಮಹಡಿಗೆ ಮಾತ್ರ ನಾನು ತೆರಿಗೆ ಕಟ್ಟುತ್ತೇನೆ ಎಂದರೆ ನಡೆಯುವುದಿಲ್ಲ. ಕಟ್ಟಿಕೊಂಡಿರುವ ಅಷ್ಟೂ ಮಹಡಿಗಳಿಗೆ ತೆರಿಗೆ ಕಟ್ಟಬೇಕು ಎಂದು ಕಟ್ಟಡ ಮಾಲೀಕರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ 3 ದಿನಗಳ ‘ಮುನಿಸಿಪಾಲಿಕಾ-2023’ ಸುರಕ್ಷಿತ, ಸ್ಮಾರ್ಟ್, ಸುಸ್ಥಿರ ನಗರಗಳ 17ನೇ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರನ್ನು ನಂಬಿಕೊಂಡು ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಯಿತು. ಆದರೆ, ತೆರಿಗೆ ಸಂಗ್ರಹದಿಂದ ನಮಗೆ ಸಮಾಧಾನ ಆಗಿಲ್ಲ. ಯಾರು ಎಷ್ಟು ಕಟ್ಟಡ ಕಟ್ಟಿಸಿಕೊಂಡಿದ್ದಾರೆ? ಅದರ ಅಳತೆ ಎಷ್ಟಿದೆ ಎಂಬುದರ ಪ್ರಕಾರವೇ ತೆರಿಗೆ ಕಟ್ಟಬೇಕು. ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ಸಚಿವರ ಜೊತೆ ಕುಳಿತು ಚರ್ಚಿಸಿ ಈ ಬಗ್ಗೆ ಸರಿಯಾದ ರೀತಿಯಲ್ಲಿ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು. ಅಲ್ಲದೆ, ಒಂದು ಮಹಡಿಗೆ ಅನುಮತಿ ಪಡೆದು, 4 ಮಹಡಿ ಕಟ್ಟಿಸಿಕೊಂಡು ಒಂದಕ್ಕೆ ಮಾತ್ರ ತೆರಿಗೆ ಕಟ್ಟುತ್ತೇನೆ ಎಂದರೆ ಆಗುವುದಿಲ್ಲ. 

Latest Videos

ತೆಲಂಗಾಣ ಜನ ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್ ಅಧಿಕಾರ ನಿಶ್ಚಿತ: ಡಿಕೆಶಿ

ಕಟ್ಟಿರುವ ಅಷ್ಟೂ ಮಹಡಿಗೂ ತೆರಿಗೆ ಕಟ್ಟಬೇಕು. ನಾವು ಜಾಸ್ತಿ ಕಟ್ಟಿ ಎನ್ನುತ್ತಿಲ್ಲ. ನಿಗದಿಯಾಗಿರುವ ದರದಂತೆ ತೆರಿಗೆ ಕಟ್ಟಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ‘ಅಧಿಕಾರಿಗಳು, ಜನಪ್ರತಿನಿಧಿಗಳು ಹೊಣೆಗಾರಿಕೆ, ಪಾರದರ್ಶಕತೆ ಹೊಂದಿರಬೇಕು. ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಬೇಕಾಬಿಟ್ಟಿ ಬಳಕೆಗೆ ಕಡಿವಾಣ ಇಡಬೇಕು. ದಿನದಿಂದ ದಿನಕ್ಕೆ ನೀರಿಗೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ಅಂತರ್ಜಲ ಬಳಕೆ ಹೆಚ್ಚಾಗುತ್ತಿದೆ. ಹೊಸದಾಗಿ ಕೊರೆಸುವ ಮತ್ತು ಬಳಕೆಯಲ್ಲಿರುವ ಕೊಳವೆಬಾವಿಗಳ ಬಗ್ಗೆ ಲೆಕ್ಕ ಇಡಬೇಕು. ಅದಕ್ಕಾಗಿ ಶುಲ್ಕ ನಿಗದಿಪಡಿಸುವ ಆಲೋಚನೆ ಇದೆ’ ಎಂದು ಅವರು ಹೇಳಿದರು.

‘ಸ್ಮಾರ್ಟ್ ಆಡಳಿತದ ಕಡೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನ ಹರಿಸಬೇಕು. ಆಸ್ತಿ ತೆರಿಗೆ ಸಂಗ್ರಹ, ನೀರಿನ ಶುಲ್ಕ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಪ್ರತಿಯೊಂದರಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು. ಡ್ರೋನ್, ಜಿಪಿಎಸ್ ಸೇರಿದಂತೆ ಲಭ್ಯವಿರುವ ಆಧುನಿಕ ಮೂಲಸೌಕರ್ಯ, ತಂತ್ರಜ್ಞಾನ ಬಳಸಿಕೊಂಡು ಸ್ಮಾರ್ಟ್ ವರ್ಕ್ ಮಾಡಬೇಕು. ಸ್ವಂತ ಶಕ್ತಿಯಿಂದ ಸಂಪನ್ಮೂಲ ಸಂಗ್ರಹಿಸಿ ಪಾಲಿಕೆ, ಪುರಸಭೆ, ನಗರಸಭೆಗಳು ಸ್ವಾವಲಂಬನೆ ಸಾಧಿಸಬೇಕು. ಶಕ್ತಿಶಾಲಿಯಾಗಬೇಕು. ಸರ್ಕಾರದಿಂದ ಸಿಗಬೇಕಾದ ನೆರವು ಸಿಕ್ಕೇ ಸಿಗುತ್ತದೆ. ಸ್ಥಳೀಯ ಸಂಸ್ಥೆಗಳ ಆರ್ಥಿಕ ಶಿಸ್ತು ಉತ್ತಮವಾಗಿದ್ದರೆ ನೆರವು, ಸಬ್ಸಿಡಿ, ಸಾಲ ಸೌಲಭ್ಯ ತಾನಾಗಿಯೇ ಬರುತ್ತದೆ’ ಎಂದು ಹೇಳಿದರು.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಭಾರತವೂ ಸುಸ್ಥಿರ ಬೆಳವಣಿಗೆ ಕಾಣಬೇಕು. ರಾಜ್ಯದ 316 ನಗರಗಳಿಗೆ ಅಗತ್ಯವಾದ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ. ರಾಜ್ಯದಲ್ಲಿ ಶೇ.38 ರಷ್ಟು ಮಂದಿ ನಗರ ಪ್ರದೇಶಗಳಲ್ಲಿ‌ ನೆಲೆಸಿದ್ದಾರೆ. ಇವರೆಲ್ಲರಿಗೂ ಟ್ರಾಫಿಕ್ ಕಿರಿಕಿರಿ ಇಲ್ಲದ ಸುಗಮ ಸಂಚಾರ, ಕಸ ವಿಲೇವಾರಿ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಸೇರಿ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ಸವಾಲಿನ ಕೆಲಸ. ಇದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ’ ಎಂದರು.

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್, ಆಸ್ಟ್ರೇಲಿಯಾ ವ್ಯಾಪಾರ ಮತ್ತು ಹೂಡಿಕೆ ಆಯೋಗದ ಅಧ್ಯಕ್ಷೆ ಕ್ಯಾಥರಿನ್ ಜಿ. ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೂರು ದಿನಗಳ ಈ ಸಮ್ಮೇಳನದಲ್ಲಿ ಹೊರ ರಾಜ್ಯಗಳು ಹಾಗೂ ರಾಜ್ಯದ ವಿವಿಧ ನಗರಸಭೆ, ಮಹಾನಗರ ಪಾಲಿಕೆ, ಪುರಸಭೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಸುಸ್ಥಿರ ನಗರಾಭಿವೃದ್ಧಿ ಕುರಿತು ಪರಸ್ಪರ ವಿಷಯ ವಿನಿಮಯ ಮಾಡಿಕೊಳ್ಳುತ್ತಾರೆ. ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ. ವಿವಿಧ ನಗರ, ಪಟ್ಟಣಗಳಲ್ಲಿ ಅಳವಡಿಸಿಕೊಂಡಿರುವ ತಂತ್ರಜ್ಞಾನ, ಪಾಲಿಸುತ್ತಿರುವ ಕ್ರಮಗಳ ಪ್ರದರ್ಶನ ಕೂಡ ಇದೆ.

click me!