ಕಾರ್ಮಿಕರ ಮಕ್ಕಳ ಸ್ಕಾಲರ್‌ಶಿಪ್‌ಗೆ ಅರ್ಜಿಗಳೇ ಇಳಿಕೆ

By Contributor AsianetFirst Published Mar 27, 2022, 10:09 AM IST
Highlights

* ಪ್ರೋತ್ಸಾಹಧನದಿಂದ ವಂಚಿತರಾಗುತ್ತಿರುವ ಕಾರ್ಮಿಕರ ಮಕ್ಕಳು

* ಕಾರ್ಮಿಕರ ಮಕ್ಕಳ ಸ್ಕಾಲರ್‌ಶಿಪ್‌ಗೆ ಅರ್ಜಿಗಳೇ ಇಳಿಕೆ

* ನೋಂದಣಿಗೆ ಶಿಕ್ಷಣ ಸಂಸ್ಥೆಗಳ ಉದಾಸೀನ

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಮಾ.27): ಸಂಘಟಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಕಾರ್ಮಿಕ ಕಲ್ಯಾಣ ಮಂಡಳಿಯು ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ, ಶಿಕ್ಷಣ ಸಂಸ್ಥೆಗಳ ಉದಾಸೀನದಿಂದಾಗಿ ಇಡೀ ಯೋಜನೆ ನಿರೀಕ್ಷಿತ ಪ್ರಗತಿ ಸಾಧಿಸುತ್ತಿಲ್ಲ.

ಪ್ರೋತ್ಸಾಹ ಧನ ಪಡೆಯಬೇಕೆಂದರೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿ ಅಭ್ಯಾಸ ಮಾಡುವ ಶಿಕ್ಷಣ ಸಂಸ್ಥೆ ಮತ್ತು ತಂದೆ ಅಥವಾ ತಾಯಿ ಕಾರ್ಯನಿರ್ವಹಿಸುವ ಕಾರ್ಖಾನೆಯು ಕಾರ್ಮಿಕ ಇಲಾಖೆಯ ನಿಯೋಜಿತ ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ನೋಂದಣಿ ಆಗಿರುವುದು ಕಡ್ಡಾಯವಾಗಿದೆ. ಈ ಎರಡೂ ಅಂಶಗಳು ಪಾಲನೆ ಆಗದಿದ್ದರೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆಗುವುದಿಲ್ಲ.

ಆದರೆ ಶಿಕ್ಷಣ ಸಂಸ್ಥೆಗಳು ವೆಬ್‌ಸೈಟ್‌ಗೆ ಲಿಂಕ್‌ ಮಾಡಿಕೊಳ್ಳಲು ಸಬೂಬು ಹೇಳುತ್ತಿದ್ದು, ವಿದ್ಯಾರ್ಥಿಗಳು ಸ್ಕಾಲರ್‌ ಶಿಪ್‌ನಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಾಲೇಜು, ಪದವಿ, ಸ್ನಾತಕೋತ್ತರ ಸೇರಿದಂತೆ ಲಕ್ಷಾಂತರ ಶಿಕ್ಷಣ ಸಂಸ್ಥೆಗಳಿದ್ದು, ಇದರಲ್ಲಿ ಕೇವಲ 5021 ಶೈಕ್ಷಣಿಕ ಸಂಸ್ಥೆಗಳು ಮಾತ್ರ ನೋಂದಣಿ ಮಾಡಿಕೊಂಡಿವೆ. ಇನ್ನುಳಿದ ಶಿಕ್ಷಣ ಸಂಸ್ಥೆಗಳು ಇದರ ಉಸಾಬರಿಗೇ ಹೋಗಿಲ್ಲ.

ಕಡಿಮೆಯಾಗುತ್ತಿರುವ ಫಲಾನುಭವಿಗಳು:

ಕಳೆದ ಎರಡು ವರ್ಷದಲ್ಲಿ ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. 2019-20ರಲ್ಲಿ 26257 ವಿದ್ಯಾರ್ಥಿಗಳು ಪ್ರೋತ್ಸಾಹ ಧನ ಪಡೆದಿದ್ದರೆ, 2020-21ರಲ್ಲಿ 13,729ಕ್ಕೆ ಕುಸಿತ ಕಂಡಿದೆ. 2021-22ರಲ್ಲಿ ಇಲ್ಲಿಯವರೆಗೆ 10,745 ವಿದ್ಯಾರ್ಥಿಗಳಿಗೆ ಮಾತ್ರ ಪ್ರೋತ್ಸಾಹ ಧನ ವಿತರಿಸಲಾಗಿದೆ.

ರಾಜ್ಯದಲ್ಲಿ 41 ಲಕ್ಷಕ್ಕೂ ಅಧಿಕ ಸಂಘಟಿತ ಕಾರ್ಮಿಕರಿದ್ದು, ಕೇವಲ 19,746 ಕಾರ್ಖಾನೆಗಳು ಮಾತ್ರ ನಿಯೋಜಿತ ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿವೆ. ಶೈಕ್ಷಣಿಕ ಪ್ರೋತ್ಸಾಹ ಧನಕ್ಕೆ ಮೊದಲೆಲ್ಲಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರಲಿಲ್ಲ. ಆದರೆ ನಕಲಿ ಪ್ರಮಾಣ ಪತ್ರ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಎರಡು ವರ್ಷದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಮಾ.31 ಕೊನೆಯ ದಿನವಾಗಿದೆ.

ಪ್ರೋತ್ಸಾಹ ಧನದ ನಿಯಮಗಳೇನು?

18ರಿಂದ 60 ವರ್ಷದೊಳಗಿರುವ, ಮಾಸಿಕ 21 ಸಾವಿರ ರು. ಮೀರದಂತೆ ಸಂಬಳ ಪಡೆಯುವ ಕಾರ್ಮಿಕರ ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುವುದು. 8ರಿಂದ 10ನೇ ತರಗತಿವರೆಗೆ ವಾರ್ಷಿಕ 3 ಸಾವಿರ ರು., ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಎಚ್‌ಗೆ 4 ಸಾವಿರ, ಪದವಿಗೆ 5 ಸಾವಿರ, ಸ್ನಾತಕೋತ್ತರ ಶಿಕ್ಷಣಕ್ಕೆ 6 ಸಾವಿರ, ಎಂಜಿನಿಯರಿಂಗ್‌/ವೈದ್ಯಕೀಯ ಶಿಕ್ಷಣಕ್ಕೆ ವಾರ್ಷಿಕವಾಗಿ 10 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.50 ಹಾಗೂ ಪರಿಶಿಷ್ಟಜಾತಿ, ಪಂಗಡದ ವಿದ್ಯಾರ್ಥಿಗಳು ಶೇ.45ರಷ್ಟುಅಂಕ ಪಡೆದು ಉತ್ತೀರ್ಣರಾಗಿರಬೇಕು.

ಸ್ಯಾಟ್ಸ್‌ ಬಳಸಿ ಸ್ಕಾಲರ್‌ಶಿಪ್‌ ನೀಡುತ್ತೇವೆ

ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ವೇತನದ ಪೋರ್ಟಲ್‌ನಲ್ಲಿ ನೊಂದಣಿ ಮಾಡಿಸಿಕೊಳ್ಳದಿರುವುದು ಗಮನಕ್ಕೆ ಬಂದಿದೆ. ಶಿಕ್ಷಣ ಇಲಾಖೆ ಬಳಿ ಇರುವ ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ (ಸ್ಯಾಟ್ಸ್‌) ಬಳಸಿಕೊಂಡು ವಿದ್ಯಾರ್ಥಿ ವೇತನ ನೀಡುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಲಿದೆ.

- ಅಕ್ರಂ ಪಾಷಾ, ಕಾರ್ಮಿಕ ಇಲಾಖೆ ಆಯುಕ್ತ

click me!