ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರ ಪರಿಣಾಮ ಎಲ್ಲೆಡೆ ಜಲಮೂಲಗಳು ತುಂಬಿ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗದಂತಾಗಿದೆ. ಆದರೂ, ನದಿ ಸೇರಿದಂತೆ ಇನ್ನಿತರ ಜಲಮೂಲಗಳಿಲ್ಲದೆ ಕೆರೆಗಳನ್ನೇ ನೀರಿನ ಮೂಲವಾಗಿ ಅವಲಂಬಿಸಿರುವಲ್ಲಿನ ಕೆಲ ಜಿಲ್ಲೆಗಳಲ್ಲಿರುವ ಕೆರೆಗಳು ಖಾಲಿ ಉಳಿದಿವೆ. ಅಲ್ಲದೆ, ಕೆರೆಗಳಲ್ಲಿ ನೀರಿದ್ದರೂ ಅದನ್ನು ಬಳಸಲಾಗದಂತಹ ಪರಿಸ್ಥಿತಿಯಿದೆ.
ಗಿರೀಶ್ ಗರಗ
ಬೆಂಗಳೂರು(ಆ.07): ರಾಜ್ಯದೆಲ್ಲೆಡೆ ಮುಂಗಾರು ಅಬ್ಬರಿಸುತ್ತಿದ್ದು, ಈಗಾಗಲೇ ಜಲಾಶಯಗಳೆಲ್ಲವೂ ಭರ್ತಿಯಾಗಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯ ಜೀವನಾಡಿಯಾದ ಕೆರೆಗಳು ಮಾತ್ರ ಇನ್ನೂ ತುಂಬಿಲ್ಲ. ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ 3,683 ಕೆರೆಗಳಲ್ಲಿ ಶೇ.15.1ರಷ್ಟು ಕೆರೆಗಳಲ್ಲಿ ಇನ್ನೂ ಬೇಸಿಗೆಯ ಛಾಯೆಯೇ ಇದ್ದು ಒಂದು ಹನಿಯೂ ನೀರು ಶೇಖರಣೆಯಾಗಿಲ್ಲ.
ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರ ಪರಿಣಾಮ ಎಲ್ಲೆಡೆ ಜಲಮೂಲಗಳು ತುಂಬಿ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗದಂತಾಗಿದೆ. ಆದರೂ, ನದಿ ಸೇರಿದಂತೆ ಇನ್ನಿತರ ಜಲಮೂಲಗಳಿಲ್ಲದೆ ಕೆರೆಗಳನ್ನೇ ನೀರಿನ ಮೂಲವಾಗಿ ಅವಲಂಬಿಸಿರುವಲ್ಲಿನ ಕೆಲ ಜಿಲ್ಲೆಗಳಲ್ಲಿರುವ ಕೆರೆಗಳು ಖಾಲಿ ಉಳಿದಿವೆ. ಅಲ್ಲದೆ, ಕೆರೆಗಳಲ್ಲಿ ನೀರಿದ್ದರೂ ಅದನ್ನು ಬಳಸಲಾಗದಂತಹ ಪರಿಸ್ಥಿತಿಯಿದೆ. ಒಟ್ಟು 3,683 ಕೆರೆಗಳ ಪೈಕಿ ಶೇ. 67.55 ಕೆರೆಗಳಲ್ಲಿ ಇನ್ನೂ ಶೇ.50ಕ್ಕಿಂತ ಕಡಿಮೆ ನೀರಿದೆ. ಹೀಗಾಗಿ ಕೆರೆ ತುಂಬದ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗೆ ಸಮಸ್ಯೆಯಾಗುವಂತಾಗಿದೆ.
ಕೊಡಗು: 104 ಸ್ಥಳಗಳಲ್ಲಿ ಭೂಕುಸಿತ, ಪ್ರವಾಹ; 2995 ಕುಟುಂಬಗಳ ಸ್ಥಳಾಂತರಕ್ಕೆ ಭೂಗರ್ಭಶಾಸ್ತ್ರ ಇಲಾಖೆ ಸೂಚನೆ!
ಸಣ್ಣ ನೀರಾವರಿ ಇಲಾಖೆ ಮಾಹಿತಿಯಂತೆ, ಇಲಾಖೆ ನಿರ್ವಹಣೆಯಲ್ಲಿನ 3,683 ಕೆರೆಗಳು ಸಂಪೂರ್ಣ ಭರ್ತಿಯಾದರೆ 107.78 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗುತ್ತದೆ. ಆ ನೀರು ಒಟ್ಟು 4.40 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಪೂರೈಸಬಹುದಾಗಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರೂ, ಕೆಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಳೆ ನಿರೀಕ್ಷಿತ ಮಟ್ಟದಲ್ಲಾಗದ ಕಾರಣ ಕೆರೆಗಳಲ್ಲಿ ನೀರಿನ ಶೇಖರಣೆ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಇಲಾಖೆಯ ಜು.27ರ ಮಾಹಿತಿಯಂತೆ ಒಟ್ಟು 3,683 ಕೆರೆಗಳಲ್ಲಿ 553 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, ಆ ಕೆರೆಗಳಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲದಂತಾಗಿದೆ. ಅದರಲ್ಲೂ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಕೆರೆಗಳು ನೀರಿಲ್ಲದೆ ಖಾಲಿಯಾಗಿದ್ದು, ಒಟ್ಟು 172 ಕೆರೆಗಳಲ್ಲಿ ಹನಿ ನೀರಿಲ್ಲದಂತಾಗಿದೆ. ಉಳಿದಂತೆ 1,526 ಕೆರೆಗಳಲ್ಲಿ ಶೇ. 30ಕ್ಕಿಂತ ಕಡಿಮೆ ನೀರು ಭರ್ತಿಯಾಗಿದೆ. 409 ಕೆರೆಗಳಲ್ಲಿ ಶೇ. 31ರಿಂದ 50ರಷ್ಟು ನೀರು ತುಂಬಿದೆ. ಅಲ್ಲದೆ, ರಾಮನಗರ, ತುಮಕೂರು, ದಾವಣಗೆರೆ, ಕೊಪ್ಪಳ, ಗದಗ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಒಂದೂ ಕೆರೆ ಶೇ.100ರಷ್ಟು ಭರ್ತಿಯಾಗಿಲ್ಲ.
ಶೇ.17.13ರಷ್ಟು ಕೆರೆಗಳು ಮಾತ್ರ ಭರ್ತಿ:
ಸಣ್ಣ ನೀರಾವರಿ ಇಲಾಖೆ ಕೆರೆಗಳ ಪೈಕಿ 564 ಕೆರೆಗಳಲ್ಲಿ ಶೇ. 51ರಿಂದ 99ರಷ್ಟು ನೀರು ಭರ್ತಿಯಾಗಿದೆ. ಅದರ ಪ್ರಮಾಣ ಶೇ.15.31ರಷ್ಟಿದೆ. ಉಳಿದಂತೆ 631 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಇದನ್ನು ಗಮನಿಸಿದರೆ 3,683 ಕೆರೆಗಳ ಪೈಕಿ 1,195 ಕೆರೆಗಳು ಕೃಷಿ ಚಟುವಟಿಕೆಗೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸುತ್ತಿವೆ. ಹೀಗೆ ಭರ್ತಿಯಾಗಿರುವ ಕೆರೆಗಳ ಪೈಕಿ ಭಾರೀ ಮಳೆಯಾಗುತ್ತಿರುವ ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ್ದಾಗಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 301 ಕೆರೆಗಳು ಶೇ.51ರಿಂದ 100ರಷ್ಟು ಭರ್ತಿಯಾಗಿದೆ. ಅದರಲ್ಲಿ 168 ಕೆರೆಗಳು ಶೇ.100ರಷ್ಟು ಭರ್ತಿಯಾಗಿದೆ. ಇನ್ನು ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಶೇ.50ರಿಂದ 100ರಷ್ಟು ನೀರಿನ ಪ್ರಮಾಣ ಹೊಂದಿದ 128 ಕೆರೆಗಳು, ಹಾವೇರಿಯಲ್ಲಿ 123, ಉತ್ತರ ಕನ್ನಡದಲ್ಲಿ 88, ಚಿಕ್ಕಮಗಳೂರಿನ 78 ಕೆರೆಗಳಲ್ಲಿ ನೀರು ಹೆಚ್ಚಿದೆ.
ರಾಜ್ಯದಲ್ಲಿ 41 ಸಾವಿರ ಕೆರೆಗಳು
ರಾಜ್ಯದಲ್ಲಿ ಒಟ್ಟಾರೆ 40,998 ಕೆರೆಗಳಿದ್ದು, ಅವುಗಳು ಸಣ್ಣ ನೀರಾವರಿ ಇಲಾಖೆ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ ಇಲಾಖೆಗಳ ಸುಪರ್ದಿಯಲ್ಲಿವೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿಯೇ ಅತಿಹೆಚ್ಚು ಕೆರೆಗಳಿದ್ದು, ಅವುಗಳ ಪರಿಸ್ಥಿತಿಯೂ ಸಣ್ಣ ನೀರಾವರಿ ಇಲಾಖೆ ಕೆರೆಗಳಂತೆಯೇ ಆಗಿದೆ. ನರೇಗಾ ಅಡಿಯಲ್ಲಿ ಅವುಗಳಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯ ಮಾಡಲಾಗಿದೆಯಾದರೂ, ಶೇ.30ಕ್ಕಿಂತ ಹೆಚ್ಚಿನ ಕೆರೆಗಳು ಇನ್ನೂ ಶೇ. 100ರಷ್ಟು ಭರ್ತಿಯಾಗಿಲ್ಲ.
ಧಾರಾಕಾರ ಮಳೆಗೆ ನಷ್ಟವಾಯ್ತು ಕಾಫಿ ಬೆಳೆ! ಸಂಕಷ್ಟದಲ್ಲಿ ರೈತರು!
ಕೆರೆಗಳಲ್ಲಿನ ನೀರಿನ ವಿವರ
ಕೆರೆಗಳ ಸಂಖ್ಯೆ ಖಾಲಿ ಇರುವ ಕೆರೆಗಳು ಶೇ. 1ರಿಂದ 30 ಭರ್ತಿ ಶೇ. 31ರಿಂದ 50 ಭರ್ತಿ ಶೇ. 51ರಿಂದ 99 ಭರ್ತಿ ಶೇ. 100 ಭರ್ತಿ
3683 ಕೆರೆಗಳು:
ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿ
107 ಟಿಎಂಸಿ:
ಈ ಕೆರೆಗಳ ಒಟ್ಟು ಸಂಗ್ರಹ ಸಾಮರ್ಥ್ಯ
4.40 ಲಕ್ಷ ಹೆಕ್ಟೇರ್
ಕೆರೆ ತುಂಬಿದರೆ ಅಪಾರ ಕೃಷಿ ಭೂಮಿಗೆ ನೀರು
ಕೆರೆ ಎಷ್ಟು ಭರ್ತಿ?
0%: 553
1-30%: 1526
31-50%: 409
51-99%: 564
100%: 631