65 ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 600ಕ್ಕೂ ಅಧಿಕ ಅರ್ಜಿಗಳು ಸ್ವೀಕಾರವಾಗಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಈ ಪ್ರಶಸ್ತಿ ಪಡೆದಿದ್ದಾರೆ
ಬೆಂಗಳೂರು (ಅ.01): ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಆಧಾರದಲ್ಲಿಯೇ ಈ ಬಾರಿಯೂ ಪ್ರಶಸ್ತಿಗೆ ಸಾಧಕರ ಆಯ್ಕೆ ನಡೆಯಲಿದೆ.
ಕರ್ನಾಟಕ ಏಕೀಕರಣಗೊಂಡು 65 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ 65 ಮಂದಿ ಸಾಧಕರನ್ನು ಆಯ್ಕೆ ಮಾಡುವ ಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಲನೆ ನೀಡಿದೆ. ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಪ್ರಶಸ್ತಿ ನೀಡುವಂತೆ ವಿವಿಧ ಅಕಾಡೆಮಿಗಳ ಮೂಲಕ ಈಗಾಗಲೇ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ 2020-21 ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಮೊದಲ ಸಭೆ ನಡೆಸಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಲು ನಾಲ್ಕು ಸಲಹಾ ಉಪ ಸಮಿತಿಗಳನ್ನು ಕೂಡಾ ನೇಮಕ ಮಾಡಲಾಗಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಮಾನವೀಯ ಕಾರ್ಯಗಳಿಗೆ ಗೌರವ: ಸೋನು ಸೂದ್‌ಗೆ ವಿಶ್ವಸಂಸ್ಥೆ ಪ್ರಶಸ್ತಿ..! .
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅಧ್ಯಕ್ಷತೆಯ ಏಳು ಜನ ಸದಸ್ಯರಿರುವ ಉಪ ಸಮಿತಿಯು ಸಾಹಿತ್ಯ, ಶಿಕ್ಷಣ, ಕ್ರೀಡೆ, ಯೋಗ, ನ್ಯಾಯಾಂಗ ಮತ್ತು ಮಾಧ್ಯಮದ ಸಾಧಕರನ್ನು ಶೋಧಿಸಲಿದೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಸಂಘದ ಅಧ್ಯಕ್ಷ ಡಾ.ರಘು ಅಕ್ಮಂಚಿ ಅವರ ಅಧ್ಯಕ್ಷತೆಯಲ್ಲಿ ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿಯು ಸಮಾಜಸೇವೆ, ಸಂಘ-ಸಂಸ್ಥೆ, ಹೊರನಾಡು, ಹೊರದೇಶ, ಸ್ವಾತಂತ್ರ್ಯ ಹೋರಾಟಗಾರರು, ಸಂಕೀರ್ಣ ಕ್ಷೇತ್ರದ ಸಾಧಕರ ಕುರಿತು ಪರಿಶೀಲನೆ ನಡೆಸಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿರುವ ಐದು ಸದಸ್ಯರಿರುವ ಉಪ ಸಮಿತಿಯು ರಂಗಭೂಮಿ, ಸಂಗೀತ-ನೃತ್ಯ, ಜಾನಪದ, ಚಲನಚಿತ್ರ, ಕಿರುತೆರೆ, ಚಿತ್ರಕಲೆ-ಶಿಲ್ಪಕಲೆ, ಯಕ್ಷಗಾನ-ಬಯಲಾಟದ ಸಾಧಕರನ್ನು ಗುರುತಿಸಲಿದೆ. ಹಾಗೆಯೇ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ವೈ.ಬಿ.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಾಲ್ವರು ಸದಸ್ಯರಿರುವ ಸಮಿತಿಯು ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಸಹಕಾರ, ವೈದ್ಯಕೀಯ ಕ್ಷೇತ್ರದ ಸಾಧಕರ ಆಯ್ಕೆ ನಡೆಸಲಿದೆ.
ಹೀಗೆ ಈ ನಾಲ್ಕು ಉಪ ಸಮಿತಿಗಳು ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರುವ ಮತ್ತು ತೆರೆ ಮರೆಯಲ್ಲಿ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಗೆ ಶಿಫಾರಸು ಮಾಡಲಿವೆ. ನಂತರ ಅ.15ರಿಂದ 25ರವರೆಗೆ ಆಯ್ಕೆ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಪ್ರಶಸ್ತಿಗೆ ಮಾನದಂಡಗಳು:
1956ರಲ್ಲಿ ಕರ್ನಾಟಕ ಏಕೀಕರಣದ ಬಳಿಕ ಅಂದಿನಿಂದ ಪ್ರತಿ ವರ್ಷ ರಾಜ್ಯೋತ್ಸವದ ವೇಳೆ ಒಂದು ಪ್ರಶಸ್ತಿಯನ್ನು ಹೆಚ್ಚಳ ಮಾಡಿ ನೀಡಲಾಗುತ್ತಿತ್ತು. 2009-10ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 159 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ರಾಜ್ಯೋತ್ಸವ ಆಯ್ಕೆ ಸಮಿತಿ ತಮ್ಮ ಸೇವೆ ಪರಿಗಣಿಸದೆ ನಿರ್ಲಕ್ಷ್ಯ ಮಾಡಿದೆ ಎಂದು ಸಾಹಿತಿ ಬಿ.ವಿ.ಸತ್ಯನಾರಾಯಣ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಮಾನದಂಡವೇ ಇಲ್ಲ ಎಂದು ದೂರಿದ್ದರು. ಅವರ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸೂಕ್ತ ಮಾನದಂಡ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾ.ನಾಗಮೋಹನ್‌ದಾಸ್ ನೇತೃತ್ವದಲ್ಲಿ ಹಿರಿಯ ಸಾಹಿತಿಗಳನ್ನೊಳಗೊಂಡ ಸಮಿತಿ ರಚಿಸಿ ಪ್ರಶಸ್ತಿ ಆಯ್ಕೆ ಕುರಿತು ಮಾನದಂಡ ರೂಪಿಸುವಂತೆ ಸೂಚಿಸಿತ್ತು. ಸಮಿತಿ ನೀಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೂ ಸಲ್ಲಿಸಿದ್ದು, ಅದಂತೆ ಪ್ರತಿವರ್ಷ ರಾಜ್ಯೋತ್ಸವದ ವರ್ಷದಷ್ಟೇ ಪ್ರಶಸ್ತಿ ಪುರಸ್ಕೃತರು ಹಾಗೂ ಅಲ್ಲದೇ ಪ್ರಶಸ್ತಿ ಪುರಸ್ಕೃತರು 60 ವರ್ಷ ಮೀರಿರಬೇಕು ಎಂಬ ಸಂಪ್ರದಾಯ ರೂಢಿಸಿಕೊಂಡು ಬರಲಾಗುತ್ತಿದೆ.
ಹೈಕೋರ್ಟ್ ಆದೇಶಿಸಿರುವಂತೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕುರಿತಂತೆ ರಾಜ್ಯ ಸರ್ಕಾರ ಈ ಹಿಂದೆ ನೀಡಿರುವ ಮಾರ್ಗಸೂಚಿಗಳನ್ನೇ ಅನುಸರಿಸಲಾಗುವುದು. ಯಾವುದೇ ಬದಲಾವಣೆ ಇರುವುದಿಲ್ಲ. ಈ ಬಾರಿ 65 ಸಾಧಕರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.
- ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ