ಖಾಸಗಿ ಆಸ್ಪತ್ರೆಗಳ ಶೇ.50 ಹಾಸಿಗೆ ಕೊರೋನಾ ಚಿಕಿತ್ಸೆಗೆ| ಐಸಿಯು, ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ ಇರಬೇಕು| ಈ ಬಗ್ಗೆ ಕ್ರಮ ಕೈಗೊಳ್ಳಿ: ಡೀಸಿಗಳಿಗೆ ಸರ್ಕಾರದ ಆದೇಶ|
ಬೆಂಗಳೂರು(ಜು.16): ರಾಜಧಾನಿ ಬೆಂಗಳೂರಿನ ಮಾದರಿಯಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ಶೇ.50ರಷ್ಟುಹಾಸಿಗೆಗಳನ್ನು ಮೀಸಲಿಡಲು ಆಯಾ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಆಯಾ ಆಸ್ಪತ್ರೆಗಳಲ್ಲಿ ಲಭ್ಯರುವ ಒಟ್ಟು ಹಾಸಿಗೆಗಳಲ್ಲಿ ಶೇ.50ರಷ್ಟುಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಮಾಡಿದ್ದಾರೆ.
ಆರೋಗ್ಯ ಇಲಾಖೆ ಎಲ್ಲ ಹುದ್ದೆಗಳಿಗೆ ನೇಮಕ!
ಯಾವ ವ್ಯವಸ್ಥೆ ಇರಬೇಕು?:
ಶೇ.50ರಷ್ಟುಹಾಸಿಗೆಗಳನ್ನು ಗುರುತಿಸುವಾಗ ಐಸಿಯು, ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯವಿರುವ ಹಾಸಿಗೆಗಳಿಗೆ ಪ್ರಾಮುಖ್ಯತೆ ನೀಡಬೇಕು. ಈ ರೀತಿ ಗುರುತಿಸಲಾದ ಖಾಸಗಿ ಆಸ್ಪತ್ರೆಗಳು ಹಾಗೂ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ನಿರ್ವಹಣೆಗೆ ಇರುವ ಹಾಸಿಗೆಗಳನ್ನು ಒಟ್ಟುಗೂಡಿಸಿ ಅವುಗಳನ್ನು ಕೇಂದ್ರೀಕೃತ ವ್ಯವಸ್ಥೆ (ಸೆಟ್ರಲೈಸ್ಡ್ ಬೆಡ್ ಅಲಾಟ್‌ಮೆಂಟ್ ಸಿಸ್ಟಮ್) ಮೂಲಕ ಸೋಂಕಿತರಿಗೆ ಹಂಚಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಅನುಷ್ಠಾನಗೊಳಿಸಿರುವ ತಂತ್ರಾಂಶವನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
‘ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ) ಪೋರ್ಟಲ್‌ನಲ್ಲಿ ಕೋವಿಡ್ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಸೋಂಕಿತರನ್ನು ಗುರುತಿಸಿ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲು ವ್ಯವಸ್ಥೆ ಕಲ್ಪಿಸಬೇಕು. ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚುವರಿಯಾಗಿ ಅವಶ್ಯವಿರುವ ಆಂಬ್ಯುಲೆನ್ಸ್‌ಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಾಡಿಗೆ ಆಧಾರದ ಮೇಲೆ ಒದಗಿಸಿಕೊಳ್ಳಬೇಕು. ಸೋಂಕಿತರ ಅಂತ್ಯಸಂಸ್ಕಾರಕ್ಕೆ ಅವಶ್ಯವಿರುವ ವಾಹನಗಳ ವ್ಯವಸ್ಥೆಗೆ ಕ್ರಮ ವಹಿಸಬೇಕು’ ಎಂದು ಸೂಚಿಸಲಾಗಿದೆ.
ದೇಶದಲ್ಲಿ ಕೊರೋನಾ ಅಕ್ಟೋಬರಲ್ಲಿ ತಾರಕಕ್ಕೆ, ಮಾರ್ಚ್‌ವರೆಗೂ ಇರುತ್ತೆ
ಖಾಸಗಿ ಆಸ್ಪತ್ರೆಗಳಿಂದ 9 ಅಂಶಗಳ ಮನವಿ
1. ಕೊರೋನಾ ಸೋಂಕಿತರಿಗೆ ಕೇಂದ್ರೀಯ ಹಾಸಿಗೆ ಹಂಚಿಕೆ ವ್ಯವಸ್ಥೆ ಜಾರಿಗೊಳಿಸಿ
2. ಸರ್ಕಾರ ಹೇಳಿದಂತೆ ಹಾಸಿಗೆಗಳಿಗೆ ವ್ಯವಸ್ಥೆ ಆಗಿದೆ. ಆದರೆ, ಅವೆಲ್ಲ ತುಂಬಿವೆ
3. ಆಸ್ಪತ್ರೆಗಳಿಗೆ ಅರೆವೈದ್ಯ ಸೇರಿ ಸಿಬ್ಬಂದಿ ಕೊರತೆ ಇದೆ. ಸರ್ಕಾರ ನೆರವಾಗಬೇಕು
4. ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಡುವ ವ್ಯವಸ್ಥೆ ಜಾರಿ ಮಾಡಿ
5. ಸಾರಿ, ಐಎಲ್‌ಐ ರೋಗಿಗಳಿಗೆಂದೇ ಶೇ.20ರಷ್ಟುಹಾಸಿಗೆಗಳ ಅವಶ್ಯಕತೆ ಇದೆ
6. ಆರೋಗ್ಯ ಸೇವಾ ಸಿಬ್ಬಂದಿಗೆ ಸೋಂಕು ತಗುಲಿದರೆ ಚಿಕಿತ್ಸೆ ನೀಡುವ ಸವಾಲಿದೆ
7. ಶೇ.50 ಹಾಸಿಗೆ ಕೊರೋನಾಕ್ಕೆ ಮೀಸಲಿಟ್ಟರೆ, ಉಳಿದ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಹಾಗಾಗಿ, ಶೇ.50 ಆದೇಶ ಮರುಪರಿಶೀಲಿಸಿ
8. ಕೊರೋನಾ ವಿರುದ್ಧ ಹೋರಾಡಲು ನಾವು ಸಿದ್ಧ. ಸರ್ಕಾರ ಸಹಕರಿಸಿ, ಬೆಂಬಲಿಸಬೇಕು
9. ನಮಗೂ ರಾರಯಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ ನೀಡಿ, ಪರೀಕ್ಷೆ ತ್ವರಿತಗೊಳಿಸಿ