ಜಾಗತಿಕ ಪ್ರತಿಷ್ಠೆಯ ಬೆಂಗಳೂರು ತಂತ್ರಜ್ಞಾನ ಸಮಾವೇಶದ ರಜತೋತ್ಸವ ವರ್ಷದ ಶೃಂಗಸಭೆಯು ನ.16ರಿಂದ ಮೂರು ದಿನಗಳ ಕಾಲ ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದ್ದು, 20 ದೇಶಗಳ 350ಕ್ಕೂ ಹೆಚ್ಚು ಪರಿಣತರು ಭಾಗವಹಿಸುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ನ. 8): ಜಾಗತಿಕ ಪ್ರತಿಷ್ಠೆಯ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್) ರಜತೋತ್ಸವ ವರ್ಷದ ಶೃಂಗಸಭೆಯು ನ.16, 17 ಮತ್ತು 18ರಂದು ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುಯಲ್ ರೂಪದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಂದಿನ ತಲೆಮಾರಿಗೆ ತಂತ್ರಜ್ಞಾನ' (Tech4NexGen) ಘೋಷವಾಕ್ಯದಡಿ ಸಮಾವೇಶವು ಈ ಬಾರಿ ಭೌತಿಕವಾಗಿ (ಆಫ್‌ಲೈನ್) ನಡೆಯಲಿದೆ. 20 ದೇಶಗಳ 350ಕ್ಕೂ ಹೆಚ್ಚು ಪರಿಣತರು ಭಾಗವಹಿಸುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದರ ಜತೆಗೆ 575 ಪ್ರದರ್ಶಕರು, ನಾವೀನ್ಯತೆಯ ಶಕ್ತಿಯನ್ನು ತೋರಿಸಲು ಬೃಹತ್ ಸಂಖ್ಯೆಯ ನವೋದ್ಯಮಗಳು ಮತ್ತು ಯೂನಿಕಾರ್ನ್ ಕಂಪನಿಗಳು ಇರಲಿವೆ. ಮುಂದೆ ಈ ಸಮಾವೇಶವನ್ನು ದಾವೋಸ್ ಶೃಂಗಸಭೆಯಂತೆ ನಡೆಸಲಾಗುವುದು ಎಂದರು.
ರಾಜ್ಯ ಸರಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್‌ಗಳ (ಎಸ್‌ಟಿಪಿಐ) ಸಹಯೋಗದೊಂದಿಗೆ ಬಿಟಿಎಸ್-25ನ್ನು ಏರ್ಪಡಿಸುತ್ತಿದೆ. ಇದು ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾಗಿದ್ದು, ಎಲೆಕ್ಟ್ರಾನಿಕ್ಸ್, ಡೀಪ್ ಟೆಕ್, ಬಯೋಟೆಕ್ ಮತ್ತು ಸ್ವಾರ್ಟಪ್‌ಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು. ಬೆಳ್ಳಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಖಾತೆಯ ಸಹಾಯಕ ಸಚಿವ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್ ವ್ಯಾಟ್ಸ್, ಫಿನ್ಲೆಂಡ್‌ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್, ಭಾರತದ ಪ್ರಪ್ರಥಮ ಯೂನಿಕಾರ್ನ್ ಕಂಪನಿ 'ಇಮ್ಮೊಬಿ'ಯ ಸಂಸ್ಥಾಪಕ ನವೀನ್ ತೆವಾರಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ (ವರ್ಚುಯಲ್) ಮತ್ತು ಅಮೆರಿಕದ ಕೈಂಡ್ರೆಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರಜತ ಮಹೋತ್ಸವದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ 25ಕ್ಕಿಂತ ಹೆಚ್ಚು ವರ್ಷದಿಂದ ಸಕ್ರಿಯವಾಗಿರುವ ಐಟಿಇ ವಲಯದ 35, ಎಸ್‌ಟಿಪಿಐ ವಲಯದ 10, ಬಿಟಿ ವಲಯದ 6 ಕಂಪನಿಗಳಿಗೆ ಮತ್ತು ಯೂನಿಕಾರ್ನ್ ದರ್ಜೆಯ 10 ನವೋದ್ಯಮಗಳಿಗೆ ಸನ್ಮಾನಿಸಲಾಗುವುದು. ಸಮಾವೇಶವು 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯ ಸಾಧನೆಗೆ ಇಂಬು ನೀಡಲಿದೆ ಎಂದು ಅವರು ನುಡಿದರು.
ಐಒಟಿ ವಲಯದಲ್ಲಿ ಭಾರತದ ಒಟ್ಟು ಪಾಲಿನಲ್ಲಿ ರಾಜ್ಯವು ಶೇ.25ರಷ್ಟು ಪಾಲು ಹೊಂದಿದೆ. ಚಿಪ್ ವಿನ್ಯಾಸದಲ್ಲಿ ಜಗತ್ತಿಗೇ ಎರಡನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲಿದ್ದೇವೆ. ಎನ್‌ಇಪಿ ಅನುಷ್ಠಾನದಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದ್ದು, ಪ್ರತಿಭೆಯ ಶೋಧ ಮತ್ತು ಪೋಷಣೆ ಎರಡೂ ನಡೆಯುತ್ತಿದೆ. ಉದ್ಯಮರಂಗಕ್ಕೆ ಅತ್ಯುತ್ತಮ ಪ್ರತಿಭೆಗಳ ಅಗತ್ಯವಿರುವುದನ್ನು ಗಮನಿಸಿ, ಕ್ರಾಂತಿಕಾರಕ ಪರಿವರ್ತನೆಗಳನ್ನು ತರಲಾಗಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
ಇದೇ 11ರಂದು ಪ್ರಧಾನಿ ನರೇಂದ್ರ ಮೋದಿ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನ ನಾಗಾಲೋಟಕ್ಕೆ ತಕ್ಕಂತೆ ಇದಕ್ಕೆ 'ಪ್ರಗತಿ ಪ್ರತಿಮೆ' ಎಂದು ನಾಮಕರಣ ಮಾಡಲಾಗಿದೆ. ಇದು ನಮ್ಮ ರಾಜಧಾನಿಯ ಯಶೋಗಾಥೆಯನ್ನು ಸಂಕೇತಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ ಐಟಿಇ ಮತ್ತು ಡೀಪ್ ಟೆಕ್, ಬಯೋಟೆಕ್, ಸ್ಟಾರ್ಟಪ್ ಟ್ರಾಕ್‌ಗಳಲ್ಲಿ ಗೋಷ್ಠಿಗಳು ನಡೆಯಲಿವೆ. ಇವುಗಳಲ್ಲಿ ಕೃತಕ ಬುದ್ಧಿಮತ್ತೆ, ಹೈಬ್ರಿಡ್ ಕ್ಲೌಡ್, 5ಜಿ, ಎಡ್ಜ್ ಕಂಪ್ಯೂಟಿಂಗ್, ಸ್ಪೇಸ್‌ಟೆಕ್, ಜಿನೋಮಿಕ್ಸ್, ಬಯೋಫಾರ್ಮ, ಜೀನ್ ಎಡಿಟಿಂಗ್ ಮತ್ತು ಕೃಷಿ, ಜಿನೋಮಿಕ್ ಔಷಧಿ, ಜೈವಿಕ ಇಂಧನ, ಜೀನ್ ಥೆರಪಿ, ರೋಬೋಟಿಕ್ಸ್, ಫಿನ್‌ಟೆಕ್, ಸಾಮಾಜಿಕ ಉದ್ಯಮಶೀಲತೆ ಮುಂತಾದವುಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ತಿಳಿಸಿದರು.
Invest Karnataka Summit: 'ಜಿಮ್'ನಲ್ಲಿ ಹರಿದು ಬಂದ ದುಪ್ಪಟ್ಟು ಬಂಡವಾಳ: ಮುರುಗೇಶ್ ನಿರಾಣಿ ಹೇಳಿದ್ದೇನು?
ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಟ್ಯ್ಯಾಕ್‌ನಲ್ಲಿ ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್‌ಡಂ, ಸ್ವೀಡನ್, ನೆದರ್‍ಲೆಂಡ್ಸ್, ಇಸ್ರೇಲ್, ಜರ್ಮನಿ, ಸ್ವಿಜರ್ಲೆಂಡ್f, ಜಪಾನ್, ಯೂರೋಪಿಯನ್ ಒಕ್ಕೂಟ ಸೇರಿದಂತೆ ಮುಂತಾದ ದೇಶಗಳು ಭಾಗವಹಿಸಲಿವೆ ಎಂದು ಸಚಿವರು ಹೇಳಿದರು.
ದೆಹಲಿ ರೋಡ್ ಶೋ: ನ.16ರಿಂದ ಬಿಟಿಎಸ್-25, 5ಜಿ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಕುರಿತು ಚರ್ಚೆ, ಅಶ್ವತ್ಥ್
ಪತ್ರಿಕಾಗೋಷ್ಠಿಯಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಸ್ಥ ಬಿ ವಿ ನಾಯ್ಡು, ಜಗದೀಶ್ ಪಾಟಣಕರ್, ಜೈವಿಕ ತಂತ್ರಜ್ಞಾನ ಕ್ಷೇತ್ರದ ಉಸ್ತುವಾರಿ ವಿಜಯ್ ಚಂದ್ರು ಉಪಸ್ಥಿತರಿದ್ದರು.