Latest Videos

ಭಾರೀ ಮಳೆಯಾದರೂ ಕರ್ನಾಟಕದಲ್ಲಿ ಬಿತ್ತನೆ 20% ಕುಂಠಿತ..!

By Kannadaprabha NewsFirst Published Jun 15, 2024, 9:47 AM IST
Highlights

2.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ 2.36 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ(ಶೇ.80). ವಾಡಿಕೆಯಂತೆ 115 ಮಿ.ಮೀ. ಮಳೆಯಾಗಬೇಕಿತ್ತಾದರೂ 151 ಮಿ.ಮೀ. ಮಳೆಯಾದರೂ ಬಿತ್ತನೆ ಕುಂಠಿತವಾಗಿದೆ. ಜೋಳ, ರಾಗಿ, ತೊಗರಿ, ಕಡಲೆ ಸೇರಿದಂತೆ ಏಕ ದಳ, ದ್ವಿದಳ ಧಾನ್ಯಗಳ ಬಿತ್ತನೆ ಚೆನ್ನಾಗಿದೆ. ಆದರೆ, ಶೇಂಗಾ, ಎಳ್ಳು, ಸೂರ್ಯಕಾಂತಿ ಸೇರಿದಂತೆ ಎಣ್ಣೆಕಾಳು ಬೆಳೆಗಳ ಬಿತ್ತನೆಯಲ್ಲಿ ಶೇ.68 ರಷ್ಟು ಮಾತ್ರ ಪ್ರಗತಿಯಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಜೂ.15):  ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ಪೂರ್ವ ಮುಂಗಾರಿನಲ್ಲಿ ಕೃಷಿ ಇಲಾಖೆ ನಿರೀಕ್ಷಿಸಿದ್ದಕ್ಕಿಂತ ಬಿತ್ತನೆಯಲ್ಲಿ ಶೇ.20ರಷ್ಟು ಕೊರತೆ ಕಂಡುಬಂದಿದೆ. 2.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ 2.36 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ(ಶೇ.80). ವಾಡಿಕೆಯಂತೆ 115 ಮಿ.ಮೀ. ಮಳೆಯಾಗಬೇಕಿತ್ತಾದರೂ 151 ಮಿ.ಮೀ. ಮಳೆಯಾದರೂ ಬಿತ್ತನೆ ಕುಂಠಿತವಾಗಿದೆ. ಜೋಳ, ರಾಗಿ, ತೊಗರಿ, ಕಡಲೆ ಸೇರಿದಂತೆ ಏಕ ದಳ, ದ್ವಿದಳ ಧಾನ್ಯಗಳ ಬಿತ್ತನೆ ಚೆನ್ನಾಗಿದೆ. ಆದರೆ, ಶೇಂಗಾ, ಎಳ್ಳು, ಸೂರ್ಯಕಾಂತಿ ಸೇರಿದಂತೆ ಎಣ್ಣೆಕಾಳು ಬೆಳೆಗಳ ಬಿತ್ತನೆಯಲ್ಲಿ ಶೇ.68 ರಷ್ಟು ಮಾತ್ರ ಪ್ರಗತಿಯಾಗಿದೆ.

50000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಜೋಳ, ರಾಗಿ ಮತ್ತಿತರ ಏಕ ದಳ ಧಾನ್ಯಗಳನ್ನು ಬೆಳೆಯುವ ಗುರಿ ಹೊಂದಲಾಗಿತ್ತಾದರೂ 47000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.94 ರಷ್ಟು ಸಾಧನೆಯಾಗಿದೆ. 63000 ಹೆಕ್ಟೇರ್‌ನಲ್ಲಿ ತೊಗರಿ, ಉದ್ದು, ಹೆಸರು, ಅಲಸಂದೆ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯುವ ಗುರಿ ಹೊಂದಿದ್ದು, ಶೇ.100 ರಷ್ಟು ಪ್ರಗತಿಯಾಗಿದೆ.

ಚಾಮರಾಜನಗರ: ಮುಂಗಾರು ತಡ: ಸೂರ್ಯಕಾಂತಿ, ಹತ್ತಿ ಬಿತ್ತನೆ ಇ‍ಳಿಮುಖ

ತುಮಕೂರು, ಚಿತ್ರದುರ್ಗ, ಕೊಪ್ಪಳ ಉತ್ತಮ:

ತುಮಕೂರು, ಚಿತ್ರದುರ್ಗ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ತುಮಕೂರು ಜಿಲ್ಲೆಯಲ್ಲಿ 2000 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇತ್ತಾದರೂ 6000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ 6000 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಗೆ ಬದಲಾಗಿ 13000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ 33000 ಹೆಕ್ಟೇರ್‌ಗೆ ಬದಲಿಗೆ 32000 ಹೆಕ್ಟೇರ್‌, ಚಿಕ್ಕಮಗಳೂರಿನಲ್ಲಿ 6000 ಹೆಕ್ಟೇರ್‌ಗೆ ಬದಲಾಗಿ 4000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ರಾಮನಗರ, ಮೈಸೂರು ಜಿಲ್ಲೆಯಲ್ಲಿ ಮುಕ್ಕಾಲು ಪಾಲು ಬಿತ್ತನೆ ಗುರಿ ಸಾಧಿಸಲಾಗಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದ ಗುರಿ ಸಾಧನೆಯಾಗಿಲ್ಲ.

ರಾಜ್ಯದಲ್ಲಿ ಬಿತ್ತನೆ ಬೀಜ ದರ ಭಾರೀ ಏರಿಕೆ: ರೈತರಿಗೆ ಶಾಕ್..!

ಎಣ್ಣೆ ಕಾಳು, ವಾಣಿಜ್ಯ ಬೆಳೆ ಬಿತ್ತನೆ ಭಾರೀ ಕುಂಠಿತ

ರಾಜ್ಯದಲ್ಲಿ ಪೂರ್ವ ಮುಂಗಾರಿನಲ್ಲಿ ಎಣ್ಣೆ ಕಾಳು ಮತ್ತು ವಾಣಿಜ್ಯ ಬೆಳೆಗಳ ಬಿತ್ತನೆಯು ಭಾರೀ ಪ್ರಮಾಣದಲ್ಲಿ ಕುಂಠಿತವಾಗಿದೆ. 34000 ಹೆಕ್ಟೇರ್‌ನಲ್ಲಿ ಶೇಂಗಾ, ಎಳ್ಳು, ಸೂರ್ಯಕಾಂತಿ ಮತ್ತಿತರ ಎಣ್ಣೆಕಾಳು ಬೆಳೆಗಳನ್ನು ಬೆಳೆಯುವ ಗುರಿ ಇತ್ತಾದರೂ 23000 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿ ಶೇ.68 ರಷ್ಟು ಸಾಧನೆಯಾಗಿದೆ. 1.49 ಲಕ್ಷ ಹೆಕ್ಟೇರ್‌ನಲ್ಲಿ ಹತ್ತಿ, ಕಬ್ಬು, ತಂಬಾಕು ಬೆಳೆಯುವ ಗುರಿ ಇತ್ತಾದರೂ 1.01 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.68 ರಷ್ಟು ಪ್ರಗತಿಯಾಗಿದೆ. 

ಸಕಾಲಕ್ಕೆ ಮಳೆ ಬಾರದಿದ್ದರಿಂದ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಆದರೆ ಮುಂಗಾರು ಉತ್ತಮವಾಗಿ ಆರಂಭವಾಗಿದ್ದು ಇದೀಗ ಬಿತ್ತನೆ ಬಿರುಸುಗೊಂಡಿದೆ ಎಂದು ಕೃಷಿ ಇಲಾಖೆ ಆಯುಕ್ತ ವೈ.ಎಸ್‌.ಪಾಟೀಲ್‌ ತಿಳಿಸಿದ್ದಾರೆ. 

click me!