ತಮಿಳುನಾಡಿನ ಹೊಸೂರಿಗೆ ಮೆಟ್ರೋ ವಿಸ್ತರಿಸುವ ಬದಲು ನಗರದೊಳಗೇ ಆಗಲಿ: ತಜ್ಞರು

By Kannadaprabha NewsFirst Published Aug 6, 2023, 5:23 AM IST
Highlights

ಹೊಸೂರಿಗೆ ಮೆಟ್ರೋ ಕಲ್ಪಿಸುವುದಕ್ಕೂ ಮುನ್ನ ಬೆಂಗಳೂರು ನಗರದೊಳಗಿನ ಜಾಲವನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಮುಖ್ಯವಾಗಿ ನಗರಕ್ಕೆ ಮೆಟ್ರೋದ ಮಾಸ್ಟರ್‌ ಪ್ಲಾನ್‌ ಇಲ್ಲದೆ ಅಂತಾರಾಜ್ಯ ಸಂಪರ್ಕ ಸಾಧಿಸಲು ಮುಂದಾಗುವುದು ಸಮಂಜಸವಲ್ಲ.ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು (ಆ.6) :  ಹೊಸೂರಿಗೆ ಮೆಟ್ರೋ ಕಲ್ಪಿಸುವುದಕ್ಕೂ ಮುನ್ನ ಬೆಂಗಳೂರು ನಗರದೊಳಗಿನ ಜಾಲವನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಮುಖ್ಯವಾಗಿ ನಗರಕ್ಕೆ ಮೆಟ್ರೋದ ಮಾಸ್ಟರ್‌ ಪ್ಲಾನ್‌ ಇಲ್ಲದೆ ಅಂತಾರಾಜ್ಯ ಸಂಪರ್ಕ ಸಾಧಿಸಲು ಮುಂದಾಗುವುದು ಸಮಂಜಸವಲ್ಲ. ಬೊಮ್ಮಸಂದ್ರ ಮೂಲಕ ಹೊಸೂರಿಗೆ ಸಂಪರ್ಕಿಸುವ ಪ್ರಸ್ತಾವಿತ ಯೋಜನೆ ಜಾರಿ ಬದಲಾಗಿ ಕನ್ನಡಿಗರಿರುವ ಪ್ರದೇಶ ಹಾಗೂ ನಗರದ ಆಂತರಿಕ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮಾಸ್ಟರ್‌ ಪ್ಲಾನ್‌ ಆಗಬೇಕು:

ಮೂರನೇ ಹಂತ ಎರಡು ಕಾರಿಡಾರ್‌ಗಳೊಂದಿಗೆ 44.65 ಕಿಲೋ ಮೀಟರ್‌ ಮಾರ್ಗವಿದೆ. ಕಾರಿಡಾರ್‌-1ರಡಿ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹಾಗೂ 2ನೇ ಕಾರಿಡಾರ್‌ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಇರಲಿದೆ. ಇಷ್ಟಾದರೂ ನಮ್ಮ ಮೆಟ್ರೋ ಪರಿಪೂರ್ಣ ಬೆಂಗಳೂರನ್ನು ಸಂಪರ್ಕಿಸಿದಂತೆ ಆಗುವುದಿಲ್ಲ. ಹೀಗಾಗಿ ಮುಖ್ಯ ರಸ್ತೆ, ಪ್ರಮುಖ ಸಂಚಾರ ಸಮಸ್ಯೆ ಇರುವಲ್ಲಿ, ಹೆಚ್ಚಿನ ಜನವಸತಿ ಪ್ರದೇಶಕ್ಕೆ ಮೆಟ್ರೋ ಲಭ್ಯವಾಗಬೇಕು, ಇದಕ್ಕಾಗಿ ಶೀಘ್ರವೇ ಮಾಸ್ಟರ್‌ ಪ್ಲಾನ್‌ ಆಗಬೇಕು ಎನ್ನುತ್ತಾರೆ ತಜ್ಞರು.

ಹೊಸೂರಿನ ಬದಲು ಬೆಂಗಳೂರು ಗ್ರಾಮಾಂತರಕ್ಕೆ ಮೆಟ್ರೋ ಕಲ್ಪಿಸಲಿ: ಕರವೇ ಪ್ರವೀಣ್ ಕುಮಾರ್

ವರ್ತುಲ ರಸ್ತೆಗಳು:

ನಗರ ಸಾರಿಗೆ ತಜ್ಞ ಶ್ರೀನಿವಾಸ ಅಲವಳ್ಳಿ ಮಾತನಾಡಿ, ಬೆಂಗಳೂರಿನ ಒಳವರ್ತುಲ ರಸ್ತೆಯ ಕೋರಮಂಗಲ ಸೇರಿ ಕೆಲ ಭಾಗಗಳನ್ನು ಇನ್ನೂ ಮೆಟ್ರೋ ತಲುಪಿಲ್ಲ. ಜೊತೆಗೆ ಆರಂಭವಾಗಿರುವ ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್‌) ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್‌, ತಟ್ಟಿಕೆರೆ, ಕನಕಪುರ, ರಾಮನಗರ ಮತ್ತು ಮಾಗಡಿ ರಸ್ತೆವರೆಗೆ ಮೆಟ್ರೋ ಮಾರ್ಗ ಕೊಂಡೊಯ್ಯಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲನೆ ಆಗಬೇಕು. ಜೊತೆಗೆ ಪೆರಿಫೆರಲ್‌ ರಿಂಗ್‌ ರೋಡ್‌ ಹೆಸರಘಟ್ಟರಸ್ತೆ, ಹೆಣ್ಣೂರ ರಸ್ತೆಯ ಬಳಿಯೂ ಮೆಟ್ರೋ ಸಾಧ್ಯತೆ, ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ರೈಲ್ವೆ ಸಂಪರ್ಕ ಇಲ್ಲವೇ ಇಲ್ಲ ಎನ್ನಬಹುದಾದ ಮಾಗಡಿ, ಮೈಸೂರು ರಸ್ತೆ ಬಗ್ಗೆ ಯೋಚಿಸಬೇಕು ಎಂದು ಅವರು ಹೇಳುತ್ತಾರೆ.

ಉದಾಹರಣೆಗೆ ನಗರದೊಳಗೆ ಸಹಕಾರ ನಗರದಿಂದ ಹೆಬ್ಬಾಳಕ್ಕೆ ಬರದೆ ಮಲ್ಲೇಶ್ವರ ತಲುಪುವುದು ಕಷ್ಟ. ಜಯನಗರದಿಂದ ಏರ್‌ಪೋರ್ಚ್‌ಗೆ ತೆರಳುವುದು ಸುಲಭವಾಗಿಲ್ಲ. ಈ ರೀತಿ ಸಾಕಷ್ಟುಸಮಸ್ಯಾತ್ಮಕ ಸಂಚಾರಕ್ಕೆ ಮೆಟ್ರೋ ಸಹಕಾರಿ ಆಗಬಹುದು. ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಮೆಟ್ರೋ ಸೇವೆ ಕಲ್ಪಿಸಬೇಕು. ಕನ್ನಡಿಗರಿಗೆ ಇದರಿಂದ ಉಪಯೋಗ ಆಗಲಿದೆ. ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಭಾಗದವರಿಗೆ ನಗರ ತಲುಪಲು ಹೆಚ್ಚು ಸಹಕಾರಿಯಾಗುತ್ತದೆ.

ಇವನ್ನೆಲ್ಲ ಬಿಟ್ಟು ಈಗಾಗಲೇ ಅಭಿವೃದ್ಧಿ ಹೊಂದಿರುವ ಹೊಸೂರಿಗೆ ಸಂಪರ್ಕ ಕಲ್ಪಿಸುವುದು ಎಷ್ಟುಸರಿ? ಅಲ್ಲದೇ, ಸಬ್‌ ಅರ್ಬನ್‌ ರೈಲ್ವೆ ಯೋಜನೆಯಡಿ ಹೊಸೂರು ರಸ್ತೆವರೆಗೆ ಸಂಪರ್ಕಿಸುವ ಕಾರಿಡಾರ್‌ ರೂಪಿಸುವ ಪ್ರಸ್ತಾಪ ಇದೆ. ಹೀಗಾಗಿ ಪುನಃ ಅಲ್ಲಿಗೆ ಸದ್ಯಕ್ಕಂತೂ ಮೆಟ್ರೋ ಬೇಕಾಗಿಲ್ಲ ಎಂದು ನಗರ ಸಾರಿಗೆ ತಜ್ಞರು ಹೇಳುತ್ತಾರೆ.

ಬೆಂಗ್ಳೂರಿನ ರಿಯಲ್‌ ಎಸ್ಟೇಟ್‌ಗೆ ಹೊಡೆತ

ಸಾರಿಗೆ ತಜ್ಞ, ಸತ್ಯ ಅರಿ ತುಕಾರಾಮ್‌ ಮಾತನಾಡಿ, ನಮ್ಮ ಮೆಟ್ರೋದಿಂದಾಗಿ ರಾಜಧಾನಿಯ ರಿಯಲ್‌ ಎಸ್ಟೇಟ್‌ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಇಂಥ ಸಂದರ್ಭದಲ್ಲಿ ಮೆಟ್ರೋವನ್ನು ಹೊಸೂರುವರೆಗೆ ಸಂಪರ್ಕಿಸಿದರೆ ಅಲ್ಲಿ ರಿಯಲ್‌ ಎಸ್ಟೇಟ್‌ ಎದ್ದೇಳುತ್ತದೆ. ಇದು ಸಹಜವಾಗಿ ನಮ್ಮ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಹೊಡೆತ ಕೊಡಲಿದೆ. ಹೀಗಾಗಿ ಈ ಬಗ್ಗೆಯೂ ಯೋಚನೆ ಮಾಡಬೇಕಿದೆ ಎಂದರು.

ಹೊಸೂರಿಗೆ ಮೆಟ್ರೋ ಯೋಜನೆ: ಕನ್ನಡ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ!

ಕನ್ನಡಪ್ರಭ ವರದಿ ಎಕ್ಸ್‌’ನಲ್ಲಿ ಚರ್ಚೆ

‘ಕನ್ನಡಪ್ರಭ’ ಪ್ರಕಟಿಸಿದ್ದ ‘ಹೊಸೂರಿಗೆ ಮೆಟ್ರೋ; ಕನ್ನಡಿಗರ ತೀವ್ರ ವಿರೋಧ’ ವರದಿಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಲವರು ಬೆಂಗಳೂರಿನ ಸುತ್ತಲಿನ ಓಬಳಾಪುರ, ದಾಬಸ್‌ಪೇಟೆ, ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಪಶ್ಚಿಮದ ಮಾಗಡಿಯಿಂದ ತಾವರೆಕೆರೆವರೆಗೆ ಮೆಟ್ರೋ ಬೇಕೆಂದು ಒತ್ತಾಯಿಸಿದ್ದಾರೆ. ಹೊಸೂರುವರೆಗೆ ಮೆಟ್ರೋ ಹೋಗುವುದಾದರೆ ಚಲ್ಲಘಟ್ಟದಿಂದ ಮೈಸೂರುವರೆಗೆ ಯಾಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅತ್ತಿಬೆಲೆಗೆ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್‌ ಹೇಳಿರುವಾಗ ಹೊಸೂರಿಗೆ ಸಂಪರ್ಕಿಸುವುದರ ಹಿಂದೆ ಯಾವ ಲಾಜಿಕ್‌ ಇದೆ? ಇದರ ಹಿಂದೆ ರಿಯಲ್‌ ಎಸ್ಟೇಟ್‌ ವಿಚಾರಗಳಿವೆಯೇ ಎಂಬ ಪ್ರಶ್ನೆಯೂ ಮೂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

click me!