ಎಫ್ಐಆರ್ ದಾಖಲಾಗಿ 2 ವಾರ ಬಳಿಕ ವಿಚಾರಣೆ
3 ಗಂಟೆ ಕಾಲ ದೆಹಲಿ ಪೊಲೀಸರಿಂದ ಪ್ರಶ್ನೆ
ಆರೋಪ ನಿರಾಕರಿಸಿದ ಡಬ್ಲ್ಯುಎಫ್ಐ ಅಧ್ಯಕ್ಷ
ನವದೆಹಲಿ(ಮೇ.13): ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಸೇರಿದಂತೆ ಗಂಭೀರ ಆರೋಪಗಳಿಗೆ ತುತ್ತಾಗಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ರನ್ನು ಶುಕ್ರವಾರ ದೆಹಲಿ ಪೊಲೀಸರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನೂ ರಚಿಸಲಾಗಿದೆ.
ಕಳೆದ ತಿಂಗಳು 28ರಂದು ಏಳು ಕುಸ್ತಿಪಟುಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಬ್ರಿಜ್ ವಿರುದ್ಧ ಫೋಕ್ಸೋ ಕಾಯ್ದೆ ಸೇರಿ 2 ಪ್ರತ್ಯೇಕ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಶುಕ್ರವಾರ ಬ್ರಿಜ್ ಹಾಗೂ ಡಬ್ಲ್ಯುಎಫ್ಐ ಸಹಾಯಕ ಕಾರ‍್ಯದರ್ಶಿ ವಿನೋದ್ ತೋಮರ್‌ರನ್ನು ಪೊಲೀಸರು ವಿಚಾರಣೆ ನಡೆಸಿದರು. ‘ಎಲ್ಲಾ ಆರೋಪಗಳನ್ನು ಬ್ರಿಜ್ ಹಾಗೂ ತೋಮರ್ ನಿರಾಕರಿಸಿದ್ದಾರೆ. ಅವರನ್ನು ಮತ್ತೆ ವಿಚಾರಣೆ ನಡೆಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆ ಒದಗಿಸುವಂತೆ ಹೇಳಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಪ್ರಕರಣದ ತನಿಖೆಯ ಸ್ಥಿತಿ ವರದಿಯನ್ನು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ತನಿಖೆಗಾಗಿ 4 ಮಹಿಳಾ ಸಿಬ್ಬಂದಿ ಸೇರಿ 10 ಪೊಲೀಸರಿರುವ ವಿಶೇಷ ತಂಡ(ಎಸ್‌ಐಟಿ) ರಚಿಸಿರುವ ಬಗ್ಗೆ ಮಾಹಿತಿ ನೀಡಿದರು. ಕುಸ್ತಿಪಟುಗಳ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ದಾಖಲಿಸುವಂತೆ ಸೂಚಿಸಿದ ಪೀಠ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.
ಸಾಕ್ಷ್ಯಕ್ಕಾಗಿ 4 ರಾಜ್ಯಕ್ಕೆ ಭೇಟಿ
ಇನ್ನು ಪ್ರಕರಣಕ್ಕೆ ಸಂಬಂಧಿದಂತೆ ಸಾಕ್ಷ್ಯ ಸಂಗ್ರಹಿಸಲು ದೆಹಲಿ ಪೊಲೀಸರ ವಿವಿಧ ತಂಡಗಳು ಕರ್ನಾಟಕ, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಹರಾರಯಣಕ್ಕೆ ಭೇಟಿ ನೀಡಿವೆ. ಹಲವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದು, ಕೆಲ ಫೋಟೋ ಹಾಗೂ ವಿಡಿಯೋಗಳು ಕೂಡಾ ದೊರೆತಿವೆ ಎಂದು ತಿಳಿದುಬಂದಿದೆ. ಇನ್ನು ವಿದೇಶಗಳಲ್ಲೂ ಕಿರುಕುಳ ನೀಡಿದ್ದಾಗಿ ಕುಸ್ತಿಪಟುಗಳು ತಮ್ಮ ದೂರಿನಲ್ಲಿ ತಿಳಿಸಿದ್ದು, ಈ ಸಂಬಂಧ ಕೆಲ ವಿದೇಶಿ ಕುಸ್ತಿ ಸಂಸ್ಥೆಗಳನ್ನೂ ಪೊಲೀಸರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ನಮ್ಮ ಮೊಬೈಲ್ ಕರೆ ಟ್ರೇಸ್ ಮಾಡಲಾಗುತ್ತಿದೆ: ಭಜರಂಗ್!
ಪ್ರತಿಭಟನಾ ನಿರತ ಕುಸ್ತಿಪಟುಗಳ ಕರೆಗಳನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಭಜರಂಗ್ ಪೂನಿಯಾ ಆರೋಪಿಸಿದ್ದಾರೆ. ‘ಕೆಲ ದಿನಗಳಿಂದ ನಮ್ಮ ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಲಾಗುತ್ತಿದೆ. ನಮಗೆ ಯಾರು ಕರೆ ಮಾಡುತ್ತಿದ್ದಾರೆ, ನಾವು ಯಾರೊಂದಿಗೆ ಮಾತನಾಡುತ್ತಿದ್ದೇವೆ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ನಮ್ಮನ್ನು ಕ್ರಿಮಿನಲ್‌ಗಳಂತೆ ನೋಡಲು ಶುರು ಮಾಡಿದ್ದಾರೆ’ ಎಂದು ಭಜರಂಗ್ ಹೇಳಿದ್ದಾರೆ.
ಹೋರಾಟಕ್ಕಾಗಿ ಜನರದಿಂದ ದೇಣಿಗೆ!
ನವದೆಹಲಿ: ಜಂತರ್ಮಂತರ್ನಲ್ಲಿ 19 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಆರ್ಥಿಕ ಸಮಸ್ಯೆ ನಿಭಾಯಿಸಲು ಸದ್ಯ ಸಾರ್ವಜನಿಕರ ಮೊರೆ ಹೋಗಿದ್ದಾರೆ. ವಿದ್ಯಾರ್ಥಿಗಳು, ರೈತರು ಸೇರಿ ಕೆಲ ಸಂಘಟನೆಗಳೂ ಸಹಾಯಕ್ಕೆ ಧಾವಿಸಿದ್ದು, ಕಳೆದ 4 ದಿನಗಳಲ್ಲಿ 6 ಲಕ್ಷ ರು. ದೇಣಿಗೆ ಸಂಗ್ರಹವಾಗಿದೆ. ಆದರೆ ವಂಚನೆ ತಪ್ಪಿಸಲು ಆನ್ಲೈನ್ ಮೂಲಕ ಹಣ ಸಂಗ್ರಹಿಸದಿರಲು ಕುಸ್ತಿಪಟುಗಳು ನಿರ್ಧರಿಸಿದ್ದಾರೆ.
ಈ ಮೊದಲು ವಿನೇಶ್, ಭಜರಂಗ್, ಸಾಕ್ಷಿ ತಲಾ 3 ಲಕ್ಷ ರು. ವೈಯಕ್ತಿಕ ಹಣದೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಉಳಿದ ಕುಸ್ತಿಪಟುಗಳು, ರೆಫ್ರಿಗಳು, ಅಖಾಡಗಳಿಂದ ಒಟ್ಟು 15 ಲಕ್ಷ ರು. ಸಂಗ್ರಹವಾಗಿತ್ತು. ಆದರೆ ದಿನಕ್ಕೆ 1.5 ಲಕ್ಷ ರು.ನಿಂದ 1.8 ಲಕ್ಷ ರು. ಖರ್ಚು ಬರುತ್ತಿದ್ದು, ಸುಮಾರು 800ರಿಂದ 1000 ಪ್ರತಿಭಟನಾ ನಿರತರಿಗೆ ನೀರಿನ ಬಾಟಲಿಗೆ 90000 ರು., ಮೂರು ಹೊತ್ತು ಊಟಕ್ಕೆ 60000 ರು. ಖರ್ಚಾಗುತ್ತಿದೆ ಎಂದು ಕುಸ್ತಿಪಟುಗಳು ತಿಳಿಸಿದ್ದಾರೆ. ಈ ನಡುವೆ ವಿನೇಶ್‌ರ ಪತಿ ಸೋಮ್‌ವೀರ್‌ರ ಸಹೋದರಿ ಮನೆಯಿಂದ ವಿನೇಶ್, ಭಜರಂಗ್, ಸಾಕ್ಷಿ ಸೇರಿ ಒಟ್ಟು 10 ತಾರಾ ಕುಸ್ತಿಪಟುಗಳಿಗೆ ಪ್ರತಿನಿತ್ಯ ಊಟ ಬರುತ್ತಿದೆ. ಬ್ರಿಜ್‌ಭೂಷಣ್ ಕಡೆಯವರು ತಮ್ಮ ಆಹಾರದಲ್ಲಿ ನಿಷೇಧಿತ ಮದ್ದು ಬೆರೆಸಿ ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿಬೀಳುವಂತೆ ಮಾಡಬಹುದು ಎನ್ನುವ ಭಯ ಇರುವ ಕಾರಣಕ್ಕೆ ಮನೆ ಊಟ ತರಿಸಿಕೊಳ್ಳುತ್ತಿರುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ.