ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತೀಯರ ಮಿಂಚಿನ ಸಾಧನೆ
ದಾಖಲೆಯ ಮೂರು ಕಂಚಿನ ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದೆ
5 ದಶಕಗಳಲ್ಲೇ ಚೊಚ್ಚಲ ಚಿನ್ನ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.
ತಾಷ್ಕೆಂಟ್(ಮೇ.13): ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಭಾರತೀಯ ಬಾಕ್ಸರ್ಗಳ ನಿರೀಕ್ಷೆ ಹುಸಿಯಾದರೂ, ದಾಖಲೆಯ ಮೂರು ಕಂಚಿನ ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. ಇದರೊಂದಿಗೆ 5 ದಶಕಗಳಲ್ಲೇ ಚೊಚ್ಚಲ ಚಿನ್ನ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.
ಇದೇ ಮೊದಲ ಬಾರಿ ಭಾರತದ 3 ಪುರುಷ ಬಾಕ್ಸರ್ಗಳು ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು. ಆದರೆ ಯಾರೂ ಸೆಮೀಸ್‌ನಿಂದ ಮುಂದೆ ಸಾಗಲಿಲ್ಲ. 57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಮೊಹಮದ್ ಹುಸ್ಮುದ್ದೀನ್ ಮಂಡಿಯ ಗಾಯಕ್ಕೆ ತುತ್ತಾಗಿದ್ದರಿಂದ ಸೆಮೀಸ್ನಲ್ಲಿ ಸ್ಪರ್ಧಿಸಲಿಲ್ಲ. ಬಳಿಕ 51 ಕೆ.ಜಿ. ವಿಭಾಗದಲ್ಲಿ ದೀಪಕ್ 2 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ, ಫ್ರಾನ್ಸ್ನ ಬಿಲಾಲಾ ಬೆನ್ನಾಮ ವಿರುದ್ಧ 3-4 ಅಂತರದಲ್ಲಿ ಪರಾಭವಗೊಂಡರೆ, 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ದೇವ್, 2022ರ ಏಷ್ಯನ್ ಚಾಂಪಿಯನ್, ಕಜಕಸ್ತಾನದ ಅಸ್ಲನ್ಬೆಕ್ ವಿರುದ್ಧ ಸೋಲನುಭವಿಸಿದರು.
ದಾಖಲೆಯ 3 ಪದಕ!
1974ರಿಂದಲೂ ನಡೆಯುತ್ತಿರುವ ಪುರುಷರ ಕೂಟದಲ್ಲಿ ಭಾರತ ಇದೇ ಮೊದಲ ಬಾರಿ ಒಂದೇ ಕೂಟದಲ್ಲಿ 3 ಪದಕ ತನ್ನದಾಗಿಸಿಕೊಂಡಿತು. ಒಟ್ಟಾರೆ ಈವರೆಗೆ 8 ಕಂಚು, 1 ಬೆಳ್ಳಿ ಪದಕ ಗೆದ್ದಿದೆ. 2009ರಲ್ಲಿ ವಿಜೇಂದರ್ ಸಿಂಗ್ ಕಂಚಿನ ರೂಪದಲ್ಲಿ ದೇಶಕ್ಕೆ ಚೊಚ್ಚಲ ಪದಕ ತಂದುಕೊಟ್ಟರು. ಬಳಿಕ 2011ರಲ್ಲಿ ವಿಕಾಸ್ ಕೃಷನ್, 2015ರಲ್ಲಿ ಶಿವ ಥಾಪ, 2017ರಲ್ಲಿ ಗೌರವ್ ಬಿಧೂರಿ, 2021ರಲ್ಲಿ ಆಕಾಶ್ ಕುಮಾರ್ ಕಂಚು ಜಯಿಸಿದರು. 2019ರಲ್ಲಿ ಅಮಿತ್ ಪಂಘಾಲ್ ಏಕೈಕ ಬೆಳ್ಳಿ, ಮನೀಶ್ ಕೌಶಿಕ್ ಕಂಚು ಗೆದ್ದಿದ್ದರು.
ಫ್ರೆಂಚ್ ಓಪನ್ ಬಹುಮಾನ ಮೊತ್ತ ಭಾರೀ ಏರಿಕೆ
ಪ್ಯಾರಿಸ್(ಮೇ.13): ಮೇ 28ರಿಂದ ಆರಂಭವಾಗಲಿರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಬಹುಮಾನ ಮೊತ್ತ ಕೋವಿಡ್ ಬಳಿಕ ಮತ್ತೆ ಏರಿಕೆಯಾಗಿದ್ದು, ಇನ್ನು ಮುಂದೆ ಸಿಂಗಲ್ಸ್ ವಿಭಾಗದ ಪ್ರಶಸ್ತಿ ವಿಜೇತರು ಬರೋಬ್ಬರಿ 2.5 ಮಿಲಿಯನ್ ಡಾಲರ್(ಸುಮಾರು 20.5 ಕೋಟಿ ರು.) ಪಡೆಯಲಿದ್ದಾರೆ. ಒಟ್ಟಾರೆ ಟೂರ್ನಿಯ ಬಹುಮಾನ ಮೊತ್ತ 442 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಕೋವಿಡ್ನಿಂದಾಗಿ 2019ರ ಬಳಿಕ ಬಹುಮಾನದ ಮೊತ್ತದಲ್ಲಿ ಕಡಿತಗೊಳಿಸಲಾಗಿತ್ತು. ಕಳೆದ ವರ್ಷ ಸಿಂಗಲ್ಸ್ ವಿಜೇತರಿಗೆ 18 ಕೋಟಿ ರು. ನೀಡಲಾಗಿತ್ತು.
ಲೈಂಗಿಕ ಕಿರುಕುಳ ಆರೋಪ: ಬ್ರಿಜ್‌ಗೆ ವಿಚಾರಣೆ ಬಿಸಿ!
ಫುಟ್ಬಾಲ್: ಜೂನ್ 9ರಂದು ಭಾರತ vs ಮಂಗೋಲಿಯಾ
ಭುವನೇಶ್ವರ: 2024ರ ಎಎಫ್ಸಿ ಏಷ್ಯನ್ ಕಪ್ ಸಿದ್ಧತೆಗಾಗಿ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ಜೂ.9ರಿಂದ ಆರಂಭವಾಗಲಿರುವ 3ನೇ ಆವೃತ್ತಿಯ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಪುರುಷರ ತಂಡ ಮಂಗೋಲಿಯಾ ಸವಾಲನ್ನು ಎದುರಿಸಲಿದೆ. ಟೂರ್ನಿಯಲ್ಲಿ 4 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ 2ನೇ ಪಂದ್ಯದಲ್ಲಿ ಜೂ.12ಕ್ಕೆ ವಾನವಟು, ಜೂ.15ಕ್ಕೆ ಅಂತಿಮ ಪಂದ್ಯವನ್ನು ಲೆಬನಾನ್ ವಿರುದ್ಧ ಆಡಲಿದೆ. ರೌಂಡ್ ರಾಬಿನ್ ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆವ ತಂಡಗಳು ಜೂ.18ಕ್ಕೆ ಫೈನಲ್‌ನಲ್ಲಿ ಸೆಣಸಲಿವೆ. ಈ ಟೂರ್ನಿಯ ಬಳಿಕ ಭಾರತ ತಂಡ ಜೂ.21ರಿಂದ ಜು.3ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲಿದೆ.