* ಅಮೆರಿಕಾದ ಯುಜೀನ್‌ನಲ್ಲಿಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆರಂಭ
* ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಮೇಲೆ ಎಲ್ಲರ ಚಿತ್ತ
* ಕೂಟದಲ್ಲಿ ಭಾರತ ಐವರು ಮಹಿಳಾ ಅಥ್ಲೀಟ್‌ಗಳು ಸೇರಿದಂತೆ 22 ಮಂದಿ ಭಾಗಿ
ಯುಜೀನ್(ಜು.15): 2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಶುಕ್ರವಾರ ಅಮೆರಿಕದ ಯುಜೀನ್ ಎಂಬಲ್ಲಿ ಆರಂಭವಾಗಲಿದ್ದು, ಎಲ್ಲರ ನಿರೀಕ್ಷೆ ಒಲಿಂಪಿಕ್ಸ್ ಚಾಂಪಿಯನ್ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೇಲೆ ನೆಟ್ಟಿದೆ. 10 ದಿನಗಳ ಕಾಲ ನಡೆಯುವ ಕೂಟದಲ್ಲಿ 49 ವಿವಿಧ ಸ್ಫರ್ಧೆಗಳು ನಡೆಯಲಿದ್ದು, 2000ದಷ್ಟು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕೂಟದಲ್ಲಿ ಭಾರತ ಐವರು ಮಹಿಳಾ ಅಥ್ಲೀಟ್‌ಗಳು ಸೇರಿದಂತೆ 22 ಮಂದಿ ಪಾಲ್ಗೊಳ್ಳುತ್ತಿದ್ದು, ವಿವಿಧ ಸ್ಪರ್ಧೆಗಳಲ್ಲಿ ಪದಕಕ್ಕಾಗಿ ಹೋರಾಡಲಿದ್ದಾರೆ.
2003ರಲ್ಲಿ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್‌ನಲ್ಲಿ ಗೆದ್ದ ಕಂಚು ಭಾರತ ಈವರೆಗಿನ ಏಕೈಕ ಪದಕವಾಗಿದ್ದು, ಈ ಬಾರಿ ನೀರಜ್ ಚೋಪ್ರಾ ಸೇರಿದಂತೆ ಹಲವು ಪದಕದ ಭರವಸೆ ಹುಟ್ಟಿಸಿದ್ದಾರೆ. ನೀರಜ್ ಇತ್ತೀಚೆಗಷ್ಟೇ ಸ್ವೀಡನ್‌ನ ಡೈಮಂಡ್ ಲೀಗ್‌ನಲ್ಲಿ 89.94 ಮೀ. ದೂರ ಎಸೆದು ದಾಖಲೆ ಬರೆದಿದ್ದು, 90 ಮೀ. ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಲಾಂಗ್ ಜಂಪ್ ಪಟು ಮುರಳಿ ಶ್ರೀಶಂಕರ್, 3,000 ಮೀ. ಸ್ಟೀಪಲ್‌ಚೇಸ್‌ನ ಅವಿನಾಶ್ ಸಾಬ್ಳೆ ಸೇರಿದಂತೆ ರಾಷ್ಟ್ರೀಯ ದಾಖಲೆ ಹೊಂದಿರುವ 7 ಮಂದಿ ಕೂಟದಲ್ಲಿ ಸ್ಪರ್ಧಿಸುತ್ತಿದ್ದು, ಪದಕ ಗೆಲ್ಲಲು ಎದುರು ನೋಡುತ್ತಿದ್ದಾರೆ.
ಈವರೆಗೆ ಗೆದ್ದಿದ್ದು ಒಂದೇ ಪದಕ!
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈವರೆಗೆ ಕೇವಲ ಒಂದೇ ಪದಕ ಗೆದ್ದಿದೆ. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಕೂಟದಲ್ಲಿ ಕೇರಳದ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಆ ಬಳಿಕ ಯಾವುದೇ ಸ್ಫರ್ಧೆಯಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲಲು ವಿಫಲರಾಗುತ್ತಿದ್ದಾರೆ.
ಶೂಟಿಂಗ್ ವಿಶ್ವಕಪ್: 3 ಚಿನ್ನ ಸೇರಿ ಭಾರತಕ್ಕೆ 8 ಪದಕ ಪದಕ
ಚಾಂಗ್‌ವೊನ್: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 8 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಗುರುವಾರ 10 ಮೀ. ಏರ್ ರೈಫಲ್ ಪುರುಷರ ತಂಡ ವಿಭಾಗದಲ್ಲಿ ಅರ್ಜುನ್ ಬಾಬುತಾ, ತುಷಾರ್ ಮಾನೆ, ಪಾರ್ಥ್ ಮಖಿಜಾ ಅವರನ್ನೊಳಗೊಂಡ ತಂಡ ಕೊರಿಯಾವನ್ನು 17-15ರಿಂದ ಮಣಿಸಿ ಚಿನ್ನ ಗೆದ್ದುಕೊಂಡಿತು.
Asianet News Samvad: ದೇಶದಲ್ಲಿ ಕ್ರೀಡಾ ಕ್ರಾಂತಿಗೆ ಮೌಲ್ಯಗಳ ಶಿಕ್ಷಣ ಅಗತ್ಯವೆಂದ ಅಭಿನವ್ ಬಿಂದ್ರಾ
ಮಹಿಳಾ ವಿಭಾಗದಲ್ಲಿ ಎಲವೆನಿಲ್ ವಲರಿವಾನ್, ಮೆಹುಲಿ ಘೋಷ್ ಹಾಗೂ ರಮಿತಾ ಅವರನ್ನೊಳಗೊಂಡ ತಂಡ ಕೊರಿಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. 10 ಮೀ. ಏರ್ ಪಿಸ್ತೂಲ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡ ವಿಭಾಗದಲ್ಲೂ ಭಾರತ ಬೆಳ್ಳಿ ತನ್ನದಾಗಿಸಿಕೊಂಡಿತು. ಭಾರತ ಒಟ್ಟಾರೆ 3 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕ ಬಾಚಿದೆ.
ಸಿಂಗಾಪುರ ಓಪನ್: ಸಿಂಧು, ಸೈನಾ, ಪ್ರಣಯ್ ಕ್ವಾರ್ಟರ್‌ಗೆ
ಸಿಂಗಾಪುರ: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಎಚ್.ಎಸ್.ಪ್ರಣಯ್ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ಮಹಿಳಾ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು ವಿಯೆಟ್ನಾಂನ ತುಯ್ ಲಿನ್ ವಿರುದ್ಧ 19-21, 21-19, 21-18 ಗೇಮ್‌ಗಳಿಂದ ಗೆದ್ದರೆ, ಸೈನಾ ಚೀನಾದ ಹೆ ಬಿಂಗ್ ಜಿಯಾವೋರನ್ನು 21-19, 11-21, 21-17 ಗೇಮ್‌ಗಳಿಂದ ಮಣಿಸಿದರು. ಆದರೆ ಅಶ್ಮಿತಾ ಚಲಿಹಾ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನ.19 ಪ್ರಣಯ್ ಚೈನೀಸ್ ತೈಪೆಯ ಚೊವು ಚೆನ್ ವಿರುದ್ಧ ಜಯಗಳಿಸಿದರು. ಆದರೆ ಬೆಂಗಳೂರಿನ ಮಿಥುನ್ ಮಂಜುನಾಥ್ ಸೋಲನುಭವಿಸಿದರು.