ನಾವು ಪ್ರಧಾನಿ ಭೇಟಿ ಮಾಡ್ತೇವೆ: ಮುಂದಿನ ನಡೆ ಬಿಚ್ಚಿಟ್ಟ WFI ನೂತನ ಅಧ್ಯಕ್ಷ ಸಂಜಯ್ ಸಿಂಗ್

By Naveen KodaseFirst Published Dec 27, 2023, 1:26 PM IST
Highlights

ಭಾರೀ ಸಂಘರ್ಷ, ಜಟಾಪಟಿ ಬಳಿಕ ಭಾರತೀಯ ಕುಸ್ತಿ ಫೆಡರೇಷನ್‌ನ ಚುಕ್ಕಾಣಿ ಹಿಡಿದಿದ್ದ ನೂತನ ಸಮಿತಿಯು ಕೇವಲ ನಾಲ್ಕೇ ದಿನದಲ್ಲಿ ಅಧಿಕಾರ ಕಳೆದುಕೊಂಡಿದೆ. ಈ ಮೂಲಕ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರ ಹೊಸ ಸಮಿತಿ ವಿರುದ್ದ ಸಮರ ಸಾರಿದ್ದ ಕುಸ್ತಿಪಟುಗಳಿಗೆ ಜಯ ಸಿಕ್ಕಂತೆ ಆಗಿದೆ. 

ನವದೆಹಲಿ(ಡಿ.27): ಭಾರತೀಯ ಕುಸ್ತಿ ಫೆಡರೇಷನ್‌ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಜಯ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಇದೀಗ ಈ ವಿಚಾರವಾಗಿ ತಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. 

ಭಾರೀ ಸಂಘರ್ಷ, ಜಟಾಪಟಿ ಬಳಿಕ ಭಾರತೀಯ ಕುಸ್ತಿ ಫೆಡರೇಷನ್‌ನ ಚುಕ್ಕಾಣಿ ಹಿಡಿದಿದ್ದ ನೂತನ ಸಮಿತಿಯು ಕೇವಲ ನಾಲ್ಕೇ ದಿನದಲ್ಲಿ ಅಧಿಕಾರ ಕಳೆದುಕೊಂಡಿದೆ. ಈ ಮೂಲಕ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರ ಹೊಸ ಸಮಿತಿ ವಿರುದ್ದ ಸಮರ ಸಾರಿದ್ದ ಕುಸ್ತಿಪಟುಗಳಿಗೆ ಜಯ ಸಿಕ್ಕಂತೆ ಆಗಿದೆ. 

ಹೊಸ ಸಮಿತಿಯು ನಿಯಮ ಪಾಲಿಸಿಲ್ಲ ಮತ್ತು ಸಂಪೂರ್ಣವಾಗಿ ಹಿಂದಿನ ಸಮಿತಿಯ ಪದಾಧಿಕಾರಿಗಳ ನಿಯಂತ್ರಣದಲ್ಲಿದೆ ಎಂದು ಭಾನುವಾರ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದೆ. ಇದರ ಜತೆಗೆ ಕುಸ್ತಿ ಸಂಸ್ಥೆಯ ಮೇಲೆ ನಿಗಾ ವಹಿಸಲು ಹಾಗೂ ಆಡಳಿತ ನಡೆಸಲು ಸ್ವತಂತ್ರ ಸಮಿತಿಯೊಂದನ್ನು ನೇಮಿಸುವಂತೆ ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸೂಚನೆ ನೀಡಿದೆ. ಕ್ರೀಡಾ ನಿಯಮಗಳ ಬಗ್ಗೆ ನೂತನ ಸಮಿತಿಯು ನಿರ್ಲಕ್ಷ್ಯ ತೋರಿದ್ದಕ್ಕೆ  ಹಾಗೂ ಚಾಂಪಿಯನ್‌ಶಿಪ್ ಆಯೋಜನೆ ಬಗ್ಗೆ ಆತುರದ ನಿರ್ಧಾರ ಕೈಗೊಂಡಿದ್ದಕ್ಕೆ ಅಮಾನತು ಮಾಡಲಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ಇನ್ನು ಕೇಂದ್ರ ಕ್ರೀಡಾಸಚಿವಾಲಯದ ವಿರುದ್ದ ತಿರುಗಿ ಬಿದ್ದಿರುವ ಸಂಜಯ್ ಸಿಂಗ್, ಭವಿಷ್ಯದ ಮಕ್ಕಳಿಗೆ ಇದರಿಂದ ಸಾಕಷ್ಟು ತೊಂದರೆಯಾಗಲಿದ ಎಂದು ಎಎನ್‌ಐ ಜತೆ ಮಾತನಾಡುವಾಗ ಹೇಳಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದ ಜತೆಗೂ ತಮ್ಮ ಕಮಿಟಿಯು ಮಾತುಕತೆ ನಡೆಸಲಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಸಂಜಯ್ ಸಿಂಗ್ ಅವರು ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರ ಸಹಚರರಾಗಿ ಗುರುತಿಸಿಕೊಂಡಿದ್ದರು. ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ಅವರು ಕೆಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಹೀಗಿರುವಾಗ ಸಂಜಯ್ ಸಿಂಗ್ ನೂತನ WFI ಅಧ್ಯಕ್ಷರಾಗಿರುವುದು ಹಲವು ಕುಸ್ತಿಪಟುಗಳನ್ನು ಕೆರಳಿಸಿತ್ತು. ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ ಅವರು ತಮಗೆ ಸಿಕ್ಕ ಪದ್ಮ ಅವಾರ್ಡ್‌ಗಳನ್ನು ವಾಪಾಸ್ ನೀಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.
 

click me!