Australian Open: 10 ವರ್ಷಗಳ ಬಳಿಕ ಸೆಮೀಸ್‌ಗೆ ಲಗ್ಗೆಯಿಟ್ಟ ವಿಕ್ಟೋರಿಯಾ ಅಜರೆಂಕಾ..!

By Kannadaprabha News  |  First Published Jan 25, 2023, 9:24 AM IST

ಆಸ್ಪ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ವಿಕ್ಟೋರಿಯಾ ಅಜರೆಂಕಾ ಸೆಮೀಸ್ ಪ್ರವೇಶ
10 ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ ಸೆಮೀಸ್ ಪ್ರವೇಶಿಸಿದ ಬೆಲಾರುಸ್ ಆಟಗಾರ್ತಿ
2012, 2013ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಅಜರೆಂಕಾ


ಮೆಲ್ಬರ್ನ್‌(ಜ.25): 2012, 2013ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿದ್ದ ಬೆಲಾರುಸ್‌ನ ವಿಕ್ಟೋರಿಯಾ ಅಜರೆಂಕಾ 10 ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದು, ವೃತ್ತಿಬದುಕಿನ 3ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2013ರ ಯುಎಸ್‌ ಓಪನ್‌ ಬಳಿಕ ಮತ್ತೊಮ್ಮೆ ಗ್ರ್ಯಾನ್‌ ಸ್ಲಾಂ ಸೆಮೀಸ್‌ಗೇರಲು ಅಜರೆಂಕಾಗೆ 7 ವರ್ಷ ಬೇಕಾಗಿತ್ತು. 2020ರ ಯುಎಸ್‌ ಓಪನ್‌ ಸೆಮೀಸ್‌ ಪ್ರವೇಶಿಸಿದ್ದ ಮಾಜಿ ವಿಶ್ವ ನಂ.1 ಆಟಗಾರ್ತಿ, ಈ ಬಾರಿ ಪ್ರಶಸ್ತಿ ಫೇವರಿಟ್‌ ಎನಿಸಿದ್ದಾರೆ.

ಮಂಗಳವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 6-4, 6-1 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಕಜಸಕಸ್ತಾನದ ಎಲೈನಾ ರಬೈಕೆನಾ 2017ರ ಫ್ರೆಂಚ್‌ ಓಪನ್‌ ಚಾಂಪಿಯನ್‌, ಲಾತ್ವಿಯಾದ ಯೆಲೆನಾ ಓಸ್ಟಪೆಂಕೊ ವಿರುದ್ಧ 6-2, 6-4ರಲ್ಲಿ ಜಯಿಸಿದರು. ಸೆಮೀಸ್‌ನಲ್ಲಿ ಅಜರೆಂಕಾ ಹಾಗೂ ರಬೈಕೆನಾ ಮುಖಾಮುಖಿಯಾಗಲಿದ್ದಾರೆ.

Tap to resize

Latest Videos

ಇನ್ನು ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾದ ಕರೆನ್‌ ಖಚನೊವ್‌, 1998ರ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ವಿಜೇತ ಪೀಟರ್‌ ಕೋರ್ಡಾರ ಪುತ್ರ ಅಮೆರಿಕದ ಸೆಬಾಸ್ಟಿಯನ್‌ ಕೋರ್ಡಾ ವಿರುದ್ಧ ವಾಕ್‌ ಓವರ್‌ ಪಡೆದು ಸೆಮೀಸ್‌ಗೇರಿದರು. ಮೊದಲೆರಡು ಸೆಟ್‌ ಸೋತಿದ್ದ ಕೋರ್ಡಾ 3ನೇ ಸೆಟ್‌ನಲ್ಲಿ ಬಲಗೈ ಮಣಿಕಟ್ಟಿಗೆ ಗಾಯಗೊಂಡು ಆಟ ನಿಲ್ಲಿಸಿದರು. ಕಳೆದ ವರ್ಷ ಯುಎಸ್‌ ಓಪನ್‌ ಸೆಮೀಸ್‌ನಲ್ಲಿ ಸೋತಿದ್ದ ಖಚನೋವ್‌ ಚೊಚ್ಚಲ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದು ಕ್ವಾರ್ಟರ್‌ನಲ್ಲಿ ಚೆಕ್‌ ಗಣರಾಜ್ಯದ ಇಜಿ ಲೆಹೆಚ್ಕಾ ವಿರುದ್ಧ 6-3, 6-6(7/2), 6-4ರಿಂದ ಗೆದ್ದು ಗ್ರೀಸ್‌ನ ಸ್ಟೆಫಾನೋ ಸಿಟ್ಸಿಪಾಸ್‌ ಸತತ 3ನೇ ಬಾರಿ ಟೂರ್ನಿಯಲ್ಲಿ ಸೆಮೀಸ್‌ ಪ್ರವೇಶಿಸಿದರು.

ಎದುರಾಳಿ ವಾಕ್‌ ಓವರ್‌: ಸಾನಿಯಾ-ಬೋಪಣ್ಣ ಸೆಮಿಗೆ

ವೃತ್ತಿ ಬದುಕಿನ ಕೊನೆ ಗ್ರ್ಯಾನ್‌ಸ್ಲಾಂನಲ್ಲಿ ಭಾರತದ ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಸಾನಿಯಾ ಹಾಗೂ ರೋಹನ್‌ ಬೋಪಣ್ಣಗೆ ಕ್ವಾರ್ಟರ್‌ ಫೈನಲ್‌ನಲ್ಲಿ ವಾಕ್‌ ಓವರ್‌ ದೊರೆಯಿತು. ಲಾತ್ವಿಯಾದ ಓಸ್ಟಪೆಂಕೊ- ಸ್ಪೇನ್‌ನ ಡೇವಿಡ್‌ ಹೆರ್ನಾಂಡೆಜ್‌ ಕಣಕ್ಕಿಳಿದ ಕಾರಣ ಭಾರತೀಯ ಜೋಡಿ ಸೆಮೀಸ್‌ಗೇರಿತು.

ಮೇರಿ ನೇತೃತ್ವದ ಸಮಿತಿ ಬಗ್ಗೆ ಕುಸ್ತಿಪಟುಗಳ ಬೇಸರ!

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ತನಿಖೆಯ ಮೇಲ್ವಿಚಾರಣೆ ನಡೆಸಲು ಸಮಿತಿಯನ್ನು ನೇಮಿಸುವ ಮುನ್ನ ಕ್ರೀಡಾ ಸಚಿವಾಲಯ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ವಿರುದ್ಧದ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಆರೋಪಗಳ ತನಿಖೆ ನಡೆಸಲು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) 7 ಜನರ ಸಮಿತಿ ರಚಿಸಿದ್ದು, ಇದರ ಮೇಲ್ವಿಚಾರಣೆಗೆ ಸೋಮವಾರ ಕ್ರೀಡಾ ಸಚಿವಾಲಯ ಮೇರಿ ಕೋಮ್‌ ನೇತೃತ್ವದ 5 ಸದಸ್ಯರ ಸಮಿತಿಯನ್ನು ರಚಿಸಿತ್ತು.

Hockey World Cup: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಜರ್ಮನಿ, ಕೊರಿಯಾ..!

ಮಹಿಳಾ ಹಾಕಿ: ಡಚ್‌ ವಿರುದ್ಧ ಸೋತ ಭಾರತ

ಕೇಪ್‌ಟೌನ್‌: ದ.ಆಫ್ರಿಕಾ ವಿರುದ್ಧ 4 ಪಂದ್ಯಗಳ ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದು ತುಂಬು ಉತ್ಸಾಹದಲ್ಲಿದ್ದ ಭಾರತ ಮಹಿಳಾ ತಂಡ ಸೋಮವಾರ ವಿಶ್ವ ನಂ.1 ನೆದರ್‌ಲೆಂಡ್‌್ಸ ವಿರುದ್ಧದ 3 ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ 1-3 ಗೋಲುಗಳಿಂದ ಪರಾಭಗೊಂಡಿದೆ. 2ನೇ ಪಂದ್ಯ ಗುರುವಾರ ನಡೆಯಲಿದೆ.

ಕಿರಿಯರ ಬಾಸ್ಕೆಟ್‌ಬಾಲ್‌: ರಾಜ್ಯ ಬಾಲಕರಿಗೆ ಗೆಲುವು

ಬೆಂಗಳೂರು: 72ನೇ ರಾಷ್ಟ್ರೀಯ ಕಿರಿಯರ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡ ಲೀಗ್‌ ಹಂತದ 2ನೇ ಸುತ್ತಿನಲ್ಲಿ ಸತತ 2ನೇ ಗೆಲುವು ಸಾಧಿಸಿದೆ. ಮಂಗಳವಾರ ರಾಜ್ಯ ತಂಡ ಮಧ್ಯಪ್ರದೇಶ ವಿರುದ್ಧ 71-68 ಅಂಕಗಳಿಂದ ಜಯಗಳಿಸಿತು. ವಿಷ್ಣು ಎನ್‌.ಎಂ. (25 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಲಕಿಯರ ವಿಭಾಗದ 9-16ರ ಸ್ಥಾನದ ಪಂದ್ಯದಲ್ಲಿ ರಾಜ್ಯ ತಂಡ ಮೇಘಾಲಯ ವಿರುದ್ಧ 111-49 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿತು.

click me!